ನೋಡಲು ಆಕರ್ಷಕವಾಗಿರುವ ಜನರು ನಿಜಕ್ಕೂ ಒಳ್ಳೆಯವರಾ? ಸಮಾಜ ಮುಖ ನೋಡಿ ಮಣೆ ಹಾಕುತ್ತೆ ಅಂತಿದೆ ಈ ಸಂಶೋಧನೆ
ಕನ್ನಡ ಸುದ್ದಿ  /  ಜೀವನಶೈಲಿ  /  ನೋಡಲು ಆಕರ್ಷಕವಾಗಿರುವ ಜನರು ನಿಜಕ್ಕೂ ಒಳ್ಳೆಯವರಾ? ಸಮಾಜ ಮುಖ ನೋಡಿ ಮಣೆ ಹಾಕುತ್ತೆ ಅಂತಿದೆ ಈ ಸಂಶೋಧನೆ

ನೋಡಲು ಆಕರ್ಷಕವಾಗಿರುವ ಜನರು ನಿಜಕ್ಕೂ ಒಳ್ಳೆಯವರಾ? ಸಮಾಜ ಮುಖ ನೋಡಿ ಮಣೆ ಹಾಕುತ್ತೆ ಅಂತಿದೆ ಈ ಸಂಶೋಧನೆ

ನೋಡಲು ಆಕರ್ಷಕವಾಗಿರುವ ವ್ಯಕ್ತಿಗಳು ಹೆಚ್ಚು ಆತ್ಮವಿಶ್ವಾಸದಿಂದ ಇರುತ್ತಾರೆ ಎಂಬುದನ್ನು ಕೇಳಿದ್ದೇವೆ. ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದು, ಸಮಾಜ ಪರ ಗುಣಗಳು ಮತ್ತು ಬಾಹ್ಯ ಸೌಂದರ್ಯದ ನಡುವಿನ ಸಂಬಂಧವನ್ನು ವಿವರಿಸಿದೆ. ಆ ಪ್ರಕಾರ, ಸುಂದರವಾಗಿದ್ದ ಜನರ ಬಗ್ಗೆ ಸಮಾಜದಲ್ಲಿ ಪಾಸಿಟಿವ್‌ ಅಭಿಪ್ರಾಯವಿರುತ್ತಂತೆ.

ನೋಡಲು ಆಕರ್ಷಕವಾಗಿರುವವರು ನಿಜಕ್ಕೂ ಒಳ್ಳೆಯವರಾ? ಸಮಾಜ ಮುಖ ನೋಡಿ ಮಣೆ ಹಾಕುತ್ತಂತೆ
ನೋಡಲು ಆಕರ್ಷಕವಾಗಿರುವವರು ನಿಜಕ್ಕೂ ಒಳ್ಳೆಯವರಾ? ಸಮಾಜ ಮುಖ ನೋಡಿ ಮಣೆ ಹಾಕುತ್ತಂತೆ (Pixabay)

ಯಾವುದೇ ಪುಸ್ತಕವನ್ನು ಅದರ ಮುಖಪುಟ ನೋಡಿ ಅಳೆಯಬಾರದು ಎಂಬ ಮಾತಿದೆ. ಅಂದರೆ, ಮುಖ ನೋಡಿ ಮಣೆ ಹಾಕುವುದು ಸರಿಯಲ್ಲ ಎಂಬುದು ಈ ಮಾತಿನ ಅರ್ಥ. ಒಬ್ಬರ ಬಾಹ್ಯ ನೋಟದ ಆಧಾರದ ಮೇಲೆ ಅವರ ಬಗ್ಗೆ ನಿರ್ಣಯಿಸುವುದು ಅಥವಾ ಅಭಿಪ್ರಾಯಕ್ಕೆ ಬರುವುದರ ಮಹತ್ವವನ್ನು ಈ ಗಾದೆ ಮಾತು ಒತ್ತಿಹೇಳುತ್ತದೆ. ಯಾವುದೇ ವ್ಯಕ್ತಿಗಳ ಅಥವಾ ವ್ಯಕ್ತಿತ್ವದ ಕುರಿತು ತ್ವರಿತ ಮೌಲ್ಯಮಾಪನ ಮಾಡುವಾಗ, ತಿಳಿದೋ ತಿಳಿಯದೆಯೋ ಮೊದಲಿಗೆ ಅವರ ಸೌಂದರ್ಯ ಅಥವಾ ದೈಹಿಕ ಲಕ್ಷಣಗಳೇ ಮುಂಚೂಣಿಗೆ ಬರುತ್ತದೆ ಎಂಬುದು ವಾಸ್ತವದಲ್ಲಿರುವ ಸತ್ಯ. ಜನರು ಸೌಂದರ್ಯಕ್ಕೆ ಆದ್ಯತೆ ಕೊಡುತ್ತಾರೆ ಎಂಬುದನ್ನು ಒಂದು ಸಂಶೋಧನೆ ಕೂಡಾ ಸಾಬೀತುಪಡಿಸಿದೆ.

ಜರ್ನಲ್ ಆಫ್ ಎಕನಾಮಿಕ್ ಬಿಹೇವಿಯರ್ ಅಂಡ್ ಆರ್ಗನೈಸೇಶನ್‌ನಲ್ಲಿ ಪ್ರಕಟವಾದ ಒಂದು ಅಧ್ಯಯನವು, ನೋಡಲು ಆಕರ್ಷಕವಾಗಿ ಕಾಣುವ ಜನರನ್ನು ಹೆಚ್ಚಾಗಿ ಹೆಚ್ಚು ಸಮಾಜಪರವೆಂದು ಗ್ರಹಿಸಲಾಗುತ್ತದೆ ಎಂದು ಸೂಚಿಸಿದೆ.

ಅಧ್ಯಯನದ ಫಲಿತಾಂಶಗಳ ಪ್ರಕಾರ; ಸುಂದರವಾಗಿರುವ ಜನರನ್ನು ಹೆಚ್ಚು ಸಹಾಯ ಮಾಡುವ ಗುಣವಿರುವ, ನಿಸ್ವಾರ್ಥ, ದಯೆ ಮತ್ತು ಕಾಳಜಿ ಇರುವವರು ಎಂದು ಪರಿಗಣಿಸಲಾಗುತ್ತದೆ. ಈ ದೃಷ್ಟಿಕೋನದಲ್ಲಿ ಎರಡು ವಿಧಗಳಿವೆ. ನೋಡಲು ಆಕರ್ಷಕವಾಗಿರುವ ಜನರು ಉತ್ತಮ ಗುಣದವರು ಎಂಬುದು ಒಂದು ವಿಧದ ಅಭಿಪ್ರಾಯವಾದರೆ, ಸಮಾಜಪರ ಗುಣಗಳನ್ನು ಹೊಂದಿರುವವರು ಸ್ವಯಂಚಾಲಿತವಾಗಿ ಆಕರ್ಷಕ ವ್ಯಕ್ತಿಗಳು ಎಂದು ಪರಿಗಣಿಸುವುದು ಎರಡನೇ ರೀತೀಯ ದೃಷ್ಟಿಕೋನವಾಗಿದೆ.

ಸುಂದರ ಜನರ ಬಗ್ಗೆ ಪಕ್ಷಪಾತ

ನೋಡಲು ಸುಂದರವಾಗಿರುವ ಜನರ ಬಗ್ಗೆ ಅಂತರ್ಗತ ಅರಿವಿನ ಪಕ್ಷಪಾತವಿದೆ. ಒಬ್ಬರ ಬಗ್ಗೆ ನಿರ್ಧಾರಕ್ಕೆ ಬರುವಾಗ ಆ ಅಭಿಪ್ರಾಯವು ನಂಬಲಾಗದಷ್ಟು ವೇಗವಾಗಿರುತ್ತದೆ. ಕೆಲವೇ ಸೆಕೆಂಡುಗಳಲ್ಲಿ ನಿರ್ಧಾರ ಬಂದುಬಿಡುತ್ತದೆ. ಇವೆಲ್ಲವೂ ಆ ವ್ಯಕ್ತಿಯ ದೈಹಿಕ ನೋಟವನ್ನು ಮಾತ್ರ ಆಧರಿಸಿರುತ್ತದೆ. ಈ ಬಗ್ಗೆ ಸಂಶೋಧನೆ ನಡೆಸಿದ ಸಂಶೋಧಕರು ಈ ಪಕ್ಷಪಾತವನ್ನು 'ಸೌಂದರ್ಯ ಪ್ರೀಮಿಯಂ' ಎಂದು ವ್ಯಾಖ್ಯಾನಿಸಿದ್ದಾರೆ. ಅಂದರೆ, ಸುಂದರವಾಗಿರುವ ಜನರನ್ನು ತಮಗೆ ಬೇಕಾದಂತೆ ನಡೆಸಿಕೊಳ್ಳುವಲ್ಲಿನ ಒಂದು ರೀತಿಯ ಪಕ್ಷಪಾತ. ಅಂಥಾ ಜನರು ವಿಶ್ವಾಸಾರ್ಹರು, ಆತ್ಮವಿಶ್ವಾಸವುಳ್ಳವರು ಮತ್ತು ಉತ್ತಮ ಸಾಮಾಜಿಕ ಕೌಶಲ್ಯಗಳನ್ನು ಹೊಂದಿದ್ದಾರೆ ಎಂದೇ ನಂಬಲಾಗುತ್ತದೆ.

ಸಮಾಜಪರ ನಡವಳಿಕೆ ಮತ್ತು ದೈಹಿಕ ಆಕರ್ಷಣೆಯ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳುವುದು ಕೂಡಾ ಈ ಅಧ್ಯಯನದ ಉದ್ದೇಶವಾಗಿತ್ತು. ಇದಕ್ಕಾಗಿ ಸಂಶೋಧಕರು ಆಸಕ್ತಿದಾಯಕ ಪರೀಕ್ಷೆಯನ್ನು ನಡೆಸಿದರು. ಅದರಲ್ಲೂ ಆಕರ್ಷಕ ವ್ಯಕ್ತಿಗಳ ಕಡೆಗೆ ಫಲಿತಾಂಶಗಳು ಬಂದಿವೆ.

ಜನರ ಗ್ರಹಿಕೆಯೇ ಹೀಗೆ

ಯಾರಾದರೂ ಸಮಾಜ ಪರ ಚಟುವಟಿಕೆಯಯಲ್ಲಿ ತೊಡಗಿದರೆ, ಅವರು ನೋಡಲು ಆಕರ್ಷಕವಾಗಿದ್ದಾರೆ ಎಂದು ಜನರು ಹೆಚ್ಚಾಗಿ ಗ್ರಹಿಸುತ್ತಾರೆ ಎಂದು ಅಧ್ಯಯನವು ಪ್ರಯೋಗಗಳ ಮೂಲಕ ಕಂಡುಕೊಂಡಿದೆ. ಇದು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಒಂದು ಮೌಲ್ಯಮಾಪನವು, ಜನರ ಮೇಲ್ನೋಟದ, ಚರ್ಮದ ಸೌಂದರ್ಯವನ್ನು ಆಧರಿಸಿದೆ. ಅಂದರೆ, ನೋಡಲು ಸುಂದರವಾಗಿರುವ ಜನರಲ್ಲಿ ದಯೆ ಹೆಚ್ಚು, ಅವರು ಉದಾರ ವ್ಯಕ್ತಿಗಳು ಎಂಬ ಅಭಿಪ್ರಾಯವಿರುತ್ತದೆ. ಅವರ ಸೌಂದರ್ಯ ಬೇಗ ಜನರನ್ನು ಸೆಳೆಯುತ್ತದೆ ಎಂದು ಅಧ್ಯಯನ ಹೇಳಿದೆ.

Whats_app_banner