Summer 2023: ಏರ್ ಕೂಲರ್ ಖರೀದಿಸುವ ಯೋಚನೆ ಇದೆಯೇ? ಇಲ್ಲಿವೆ ಒಂದಿಷ್ಟು ಟಿಪ್ಸ್
Summer 2023: ಬೇಸಿಗೆಯ ತಾಪ ದಿನಕ್ಕೂ ಏರಿಕೆಯಾಗುತ್ತಿದ್ದು, ಮನೆಯೊಳಗೆ ಕುಳಿತುಕೊಳ್ಳುವುದೂ ಅಸಾಧ್ಯವಾಗಿದೆ. ಈ ಸಮಯದಲ್ಲಿ ಏರ್ ಕೂಲರ್ ಆಯ್ಕೆ ಬೆಸ್ಟ್. ಆದರೆ ಏರ್ ಕೂಲರ್ ಖರೀದಿಗೂ ಮುನ್ನ ಕೆಲವೊಂದು ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಹಾಗಾದರೆ ಏರ್ ಕೂಲರ್ ಆಯ್ಕೆ ಹೇಗಿರಬೇಕು? ಇಲ್ಲಿದೆ ಕೆಲವು ಸಲಹೆ.
ಬಿಸಿಲಿನ ತಾಪ ದಿನ ದಿನಕ್ಕೂ ಏರಿಕೆಯಾಗುತ್ತಲೇ ಇದೆ. ಅತಿಯಾದ ಸೆಖೆಯಿಂದ ಮನೆಯ ಒಳಗೆ ಕುಳಿತುಕೊಳ್ಳುವುದೂ ಹಿಂಸೆಯಾಗಿದೆ. ಫ್ಯಾನ್ ಹಾಕಿ ಮನೆಯೊಳಗೆ ಕುಳಿತರೆ ಒಂದಿಷ್ಟು ಹೊತ್ತು ತಣ್ಣಗಿದ್ದು, ನಂತರ ಬಿಸಿಗಾಳಿ ಬರಲು ಆರಂಭವಾಗುತ್ತದೆ. ಇದರಿಂದ ಜನರು ಬೇಸತ್ತು ಹೋಗಿದ್ದಾರೆ.
ಏರ್ ಕಂಡೀಷನರ್ (ಏಸಿ) ಹಾಕಿಸುವುದು ಎಲ್ಲಾ ವರ್ಗದ ಜನರಿಂದಲೂ ಸಾಧ್ಯವಿಲ್ಲ. ದುಬಾರಿ ಆಗಿರುವ ಕಾರಣ ಕೆಳ ಹಾಗೂ ಮಧ್ಯಮ ವರ್ಗದವರಿಗೆ ಏಸಿ ಕನಸಾಗಿಯೇ ಇರಬಹುದು. ಆ ಕಾರಣಕ್ಕೆ ನೀವು ಏರ್ ಕೂಲರ್ ಆಯ್ಕೆ ಮಾಡಬಹುದು. ಇದು ಬೇಸಿಗೆಯ ತಾಪ ನೀಗಿಸುವ ಜೊತೆಗೆ ಬಜೆಟ್ ಫ್ರೆಂಡ್ಲಿ ಕೂಡ ಹೌದು.
ಈ ಬೇಸಿಗೆಯ ಬಿಸಿ ಹಾಗೂ ಆರ್ದ್ರ ತಾಪಮಾನಕ್ಕೆ ಮನೆಗೆ ಏರ್ ಕೂಲರ್ ಬೆಸ್ಟ್ ಆಯ್ಕೆ ಎನ್ನಬಹುದು. ಇದನ್ನು ಮನೆಯ ಒಳಗೂ ಹಾಗೂ ಹೊರಗೂ ಇರಿಸಬಹುದು. ಇದರ ನಿರ್ವಹಣೆ ಕೂಡ ಸುಲಭ. ನೀರಿನ ಸಹಾಯದಿಂದ ತಾಪ ತಣಿಸುವ ಕೂಲರ್‌ಗಳು ತಾಜಾ, ತಂಪಾದ ಗಾಳಿ ಬೀಸುವ ಜೊತೆಗೆ ಪರಿಸರ ಸ್ನೇಹಿ ಕೂಡ ಆಗಿರುತ್ತವೆ. ಹಾಗಾದರೆ ಏರ್ ಕೂಲರ್ ಆಯ್ಕೆ ಹೇಗಿರಬೇಕು? ಇಲ್ಲಿದೆ ನೋಡಿ ಒಂದಿಷ್ಟು ಸಲಹೆ.
ವಿವಿಧ ಬಗೆಯ ಏರ್ ಕೂಲರ್‌ಗಳು
ಒಟ್ಟು ನಾಲ್ಕು ಬಗೆಯ ಏರ್ ಕೂಲರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವು ಬಜೆಟ್ ಫ್ರೆಂಡ್ಲಿ ಹಾಗೂ ವಿದ್ಯುತ್ ಅನ್ನು ಕೂಡ ಕಡಿಮೆ ಪ್ರಮಾಣದಲ್ಲಿ ಬಳಸಿಕೊಳ್ಳುವ ಕಾರಣ ವಿದ್ಯುತ್ ಬಿಲ್ ಹೆಚ್ಚುತ್ತದೆ ಎನ್ನುವ ಚಿಂತೆಯೂ ಇರುವುದಿಲ್ಲ. ಈ ನಾಲ್ಕರಲ್ಲಿ ನಿಮ್ಮ ಆಯ್ಕೆ ಯಾವುದು ಎಂಬುದನ್ನು ನೋಡಿಕೊಂಡು ಕೂಲರ್ ಖರೀದಿಸಬಹುದು.
ವೈಯಕ್ತಿಕ ಕೂಲರ್
ಸಾಮಾನ್ಯವಾಗಿ ಇದನ್ನು ಎಲ್ಲರೂ ಖರೀದಿ ಮಾಡಬಹುದಾಗಿದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಆರಾಮವಾಗಿ ಸಾಗಿಸಬಹುದು. ಇದು ತಾಜಾ ಹಾಗೂ ತಂಪಾದ ಗಾಳಿ ಸಿಗುವಂತೆ ಮಾಡಿ ಸೆಖೆ ಹಾಗೂ ಆರ್ದ್ರತೆಯನ್ನು ನೀಗಿಸುತ್ತದೆ. ಇದು ಸಣ್ಣ ಕೋಣೆಗೆ ಒಬ್ಬರೇ ಇದ್ದಾಗ ಬಳಸಲು ಹೇಳಿ ಮಾಡಿಸಿದಂತಿರುತ್ತದೆ.
ಟವರ್ ಕೂಲರ್
ಹಾಲ್‌ನಂತಹ ವಿಶಾಲವಾದ ಜಾಗಕ್ಕೆ ಕೂಲರ್ ಕೊಳ್ಳಲು ಬಯಸಿದರೆ ಟವರ್ ಕೂಲರ್ ಬೆಸ್ಟ್ ಆಯ್ಕೆ ಎನ್ನಬಹುದು. ಇದು ಕಡಿಮೆ ಸಮಯದಲ್ಲಿ ವಿಶಾಲವಾದ ಜಾಗವನ್ನು ತಂಪು ಮಾಡುತ್ತದೆ. ಮಧ್ಯಮ ಗಾತ್ರದ ಕೋಣೆಗೂ ಕೂಡ ಇದು ಹೇಳಿ ಮಾಡಿಸಿದ್ದು.
ವಿಂಡೋ ಕೂಲರ್
ಇದು ಸಾಮಾನ್ಯವಾಗಿ ಮನೆ, ಕಚೇರಿಗಳಲ್ಲಿ ನೋಡಿರಬಹುದು. ಕಿಟಕಿಯ ಬಳಿ ಇದನ್ನು ಇರಿಸಲಾಗುವ ಕಾರಣ ವಿಂಡೋ ಕೂಲರ್ ಎಂದು ಕರೆಯುತ್ತಾರೆ. ಇದು ಸ್ವಲ್ಪ ದುಬಾರಿಯಾದರೂ ಕೂಡ ನಿರ್ವಹಣೆ ಸುಲಭ. ಇದರ ಇನ್ನೊಂದು ಪ್ಲಸ್ ಪಾಯಿಂಟ್ ಎಂದರೆ ಇದು ವಿದ್ಯುತ್ ಉಳಿಸುತ್ತದೆ.
ಡಸರ್ಟ್ ಕೂಲರ್
ಇದು ಹೆಚ್ಚಾಗಿ ಉಷ್ಣಾಂಶ ಹೆಚ್ಚಿರುವ ಹಾಗೂ ತೇವಾಂಶ ಕಡಿಮೆ ಇರುವ ಸ್ಥಳಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಈ ಏರ್ ಕೂಲರ್‌ಗಳು ನೀರಿನಿಂದ ಶಾಖವನ್ನು ಆವಿಯಾಗಿಸಿ ತಂಪಾದ ಗಾಳಿಯನ್ನು ಹೊರ ಹಾಕುತ್ತವೆ. ಇದು ವಿಶಾಲವಾದ ಜಾಗವನ್ನು ಸುಲಭವಾಗಿ ತಂಪಾಗಿಸುತ್ತದೆ.
ಯಾವ ರೀತಿ ಏರ್ ಕೂಲರ್ ಆಯ್ಕೆ ಉತ್ತಮ?
ನಿಮ್ಮ ಮನೆ ಅಥವಾ ಕಚೇರಿಗೆ ಏರ್ ಕೂಲರ್ ಆಯ್ಕೆ ಮಾಡುವ ಮುನ್ನ ಈ ಕೆಲವು ಪ್ರಮುಖ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಕೋಣೆಯ ಅಗಲ, ಕೋಣೆಯ ಎತ್ತರ, ಕೋಣೆಯ ಆರ್ದ್ರತೆ, ನೀರಿನ ಸಾಮರ್ಥ್ಯ, ಆರ್ದ್ರತೆ ಇದೆಲ್ಲದರೊಂದಿಗೆ ಕೂಲರ್ ಅನ್ನು ಯಾವ ಸ್ಥಳದಲ್ಲಿ ಇರಿಸಬೇಕು ಎಂಬುದು ಮುಖ್ಯವಾಗುತ್ತದೆ. ಈ ಎಲ್ಲವನ್ನೂ ಗಮನಿಸಿ ನಿಮ್ಮ ಅಗತ್ಯಕ್ಕೆ ಹೊಂದುವ ಕೂಲರ್ ಆಯ್ಕೆ ಮಾಡಿ.
ನೀರಿನ ಸಾಮರ್ಥ್ಯ ಹೇಗಿರಬೇಕು?
ಏರ್ ಕೂಲರ್ ಆಯ್ಕೆಗೂ ಮುನ್ನ ನೀವು ನೀವು ಗಮನಿಸಬೇಕಾದ ಬಹಳ ಪ್ರಮುಖ ಅಂಶವೆಂದರೆ ನೀರಿನ ಸಾಮರ್ಥ್ಯ. ವಿಶಾಲವಾದ ಕೋಣೆಯಲ್ಲಿ ಇರಿಸುವ ಉದ್ದೇಶದಿಂದ ಕೂಲರ್ ಖರೀದಿಸುವುದಾದರೆ 30 ರಿಂದ 40 ಲೀಟರ್ ಸಾಮರ್ಥ್ಯದ ಆಯ್ಕೆ ಉತ್ತಮ. ಕೋಣೆಯ ವಿಸ್ತಾರ ಚಿಕ್ಕದಾದರೆ 20 ಲೀಟರ್ ಆಯ್ಕೆ ಉತ್ತಮ.
ಏರ್ ಕೂಲರ್‌ನಲ್ಲಿ ಏನೇನಿರಬೇಕು?
ಕೆಲವು ಸಾಮಾನ್ಯ ಸಂಗತಿಗಳೆಂದರೆ ಕಡಿಮೆ ವಿದ್ಯುತ್ ಬಳಕೆ, ಉತ್ತಮ ಗುಣಮಟ್ಟದ ಕೂಲಿಂಗ್ ಪ್ಯಾಡ್ಸ್, ನಾಯ್ಸ್ ಫಿಲ್ಟರ್, ಇನ್ವರ್ಟರ್ ಹೊಂದಾಣಿಕೆ ಇದರೊಂದಿಗೆ ರಿಮೋಟ್ ಕಂಟ್ರೋಲ್, ಸ್ವಯಂ ಭರ್ತಿಯಾಗುವುದು ಅಥವಾ ಆಟೊ ಫಿಲ್ ಕ್ರಿಯೆ, ಸೊಳ್ಳೆ ವಿರೋಧಿ, ಡಸ್ಟ್ ಫಿಲ್ಟರ್, ಏಕ್ಸ್ಟ್ರಾ ಐಸ್ ಛೇಂಬರ್ ಹೊಂದಿರುವುದು ಮುಖ್ಯವಾಗುತ್ತದೆ. ವಿವಿಧ ಆಯ್ಕೆಗೆ ಅನುಗುಣವಾಗಿ ದರ ನಿಗದಿ ಮಾಡಲಾಗಿದ್ದು, 3000 ರಿಂದ 5000ದ ವರೆಗೆ ಇರುತ್ತದೆ.
ವಿಭಾಗ