Kannada News  /  Lifestyle  /  Summer And Eye Protection: Thunderstorms Can Cause Eye Damage, So Be Careful When Going Outside
ಫೇಸ್‌ಶೀಲ್ಡ್‌
ಫೇಸ್‌ಶೀಲ್ಡ್‌

summer and eye protection: ಬಿರುಬಿಸಿಲಿನಿಂದ ಕಣ್ಣಿಗೆ ಹಾನಿ ಉಂಟಾಗಬಹುದು, ಹೊರ ಹೊರಡುವ ಮುನ್ನ ಇರಲಿ ಮುನ್ನೆಚ್ಚರಿಕೆ

19 March 2023, 15:49 ISTHT Kannada Desk
19 March 2023, 15:49 IST

summer and eye protection: ಬಿಸಿಲಿನ ತಾಪದಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳುವುದು ಕಷ್ಟ ನಿಜ. ಆದರೆ ಅತಿಯಾದ ಸೂರ್ಯನ ಕಿರಣಗಳು ನೇರವಾಗಿ ಕಣ್ಣಿನ ಪಾಪೆಗೆ ತಾಕುವುದರಿಂದ ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದು ಶಾಶ್ವತ ತೊಂದರೆಗಳಿಗೂ ಕಾರಣವಾಗಬಹುದು.

ಕಣ್ಣು ಮನುಷ್ಯ ದೇಹದ ಬಹುಮುಖ್ಯ ಅಂಗ. ಕಣ್ಣುಗಳಲ್ಲಿದ ಮನುಷ್ಯರ ಸ್ಥಿತಿಯನ್ನು ನೆನೆದಾಗ ಮನಸ್ಸಿಗೆ ಪಿಚ್ಚೆನ್ನಿಸುವುದು ಸುಳ್ಳಲ್ಲ. ಈ ಬಿರು ಬೇಸಿಗೆಯಲ್ಲಿ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲೆನ್ನಿಸುತ್ತದೆ. ಹೊರಗಡೆ ಹೋದಾಗ ಸೂರ್ಯನ ಅತಿಯಾದ ಶಾಖಕ್ಕೆ ಕಣ್ಣು ಗುಡ್ಡೆಗಳು ನಲುಗುತ್ತವೆ. ಅತಿಯಾದ ಬಿಸಿಲಿನ ಶಾಖ ನೇರವಾಗಿ ಕಣ್ಣಿಗೆ ತಾಕುವುದರಿಂದ ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗಬಹುದು.

ಟ್ರೆಂಡಿಂಗ್​ ಸುದ್ದಿ

ಕಾರ್ನಿಯಾ ಬರ್ನ್‌, ಒಣಗುವುದು, ನೀರು ಸೋರುವುದು, ದಣಿವು, ನೋವು ಹಾಗೂ ಅಲರ್ಜಿಯಂತಹ ಸಮಸ್ಯೆಗಳು ಬೇಸಿಗೆಯಲ್ಲಿ ಸಾಮಾನ್ಯವಾಗಿರುತ್ತವೆ.

ಸೂರ್ಯನ ಅತಿನೇರಳೆ ಕಿರಣಗಳು ಕೇವಲ ಚರ್ಮದ ಸನ್‌ಬರ್ನ್‌ಗೆ ಮಾತ್ರವಲ್ಲ, ಕಣ್ಣಿನ ಕಾರ್ನಿಯಾದ ಬರ್ನ್‌ಗೂ ಕಾರಣವಾಗುತ್ತದೆ. ಬಿಸಿಲಿಗೆ ನೇರವಾಗಿ ಕಣ್ಣನ್ನು ಒಡ್ಡುವುದರಿಂದ ಅಸ್ಪಷ್ಟ ದೃಷ್ಟಿ, ಕಣ್ಣು ಒಣಗುವುದು ಹಾಗೂ ಕಿರಿಕಿರಿಯಂತಹ ಸಮಸ್ಯೆಗಳು ಉಂಟಾಗಬಹುದು. ಆ ಕಾರಣಕ್ಕೆ ಬೇಸಿಗೆಯಲ್ಲಿ ಕಣ್ಣಿನ ಆರೈಕೆಯ ಕ್ರಮಗಳನ್ನು ಅನುಸರಿಸುವುದು ಬಹಳ ಮುಖ್ಯ. ಹಾಗಾದರೆ ಕಣ್ಣನ್ನು ಬಿಸಿಲಿನಿಂದ ರಕ್ಷಿಸಿಕೊಳ್ಳುವುದು ಹೇಗೆ?

ಹೊರಗಡೆ ಹೋಗುವಾಗ ಸನ್‌ಗ್ಲಾಸ್‌ ಧರಿಸಿ

ಬೇಸಿಗೆಯಲ್ಲಿ ಚರ್ಮಕ್ಕೆ ಸನ್‌ಸ್ಕ್ರೀಮ್‌ ಬಳಕೆ ಎಷ್ಟು ಮುಖ್ಯವೋ ಹಾಗೆಯೇ ಕಣ್ಣಿಗೆ ಸನ್‌ಗ್ಲಾಸ್‌ ಬಳಕೆಯೂ ಅಷ್ಟೇ ಮುಖ್ಯ. ಮನೆಯಿಂದ ಹೊರಗಡೆ ಹೆಜ್ಜೆ ಇಡುವಾಗ ಸನ್‌ಗ್ಲಾಸ್‌ ಧರಿಸಲು ಮರೆಯಬೇಡಿ. ಅದರಲ್ಲೂ ಪೂರ್ತಿ ಕಣ್ಣನ್ನು ಮುಚ್ಚುವಂತಹ ದೊಡ್ಡ ಗಾತ್ರ ಗ್ಲಾಸ್‌ ಬಳಸುವುದು ಉತ್ತಮ, ಇದರಿಂದ ಸಂಪೂರ್ಣ ಕಣ್ಣಿನ ರಕ್ಷಣೆ ಸಾಧ್ಯವಾಗುತ್ತದೆ. ಇದರಿಂದ ಯುವಿ ಕಿರಣಗಳಿಂದ ಕಾರ್ನಿಯಾಕ್ಕೆ ಹಾನಿ ಉಂಟಾಗುವುದನ್ನೂ ತಪ್ಪಿಸಬಹುದು. ಕಾರ್ನಿಯಾ ಬರ್ನ್‌ನಿಂದ ಕಣ್ಣು ಒಣಗಿದಂತಾಗುವುದು, ಕಿರಿಕಿರಿ ಹಾಗೂ ನೀರು ಸೋರುವುದು ಇಂತಹ ಸಮಸ್ಯೆಗಳು ಉಂಟಾಗಬಹುದು.

ದೇಹದಲ್ಲಿ ಸಾಕಷ್ಟು ನೀರಿನಂಶ ಇರುವಂತೆ ನೋಡಿಕೊಳ್ಳಿ

ಬೇಸಿಗೆಯಲ್ಲಿ ಸಾಕಷ್ಟು ನೀರು ಅಥವಾ ನೀರಿನಂಶ ಇರುವ ಆಹಾರ ಪದಾರ್ಥಗಳ ಸೇವನೆಯಿಂದ ಕಣ್ಣಿನ ಆರೋಗ್ಯಕ್ಕೂ ಉತ್ತಮ. ಬೇಸಿಗೆಯಲ್ಲಿ ಕಣ್ಣೀರಿನ ಪದರವು ಆವಿಯಾಗುತ್ತದೆ. ಹೆಚ್ಚು ಹೆಚ್ಚು ನೀರು ಕುಡಿಯುವುದರಿಂದ ದೇಹವು ಆರೋಗ್ಯಕರ ಪ್ರಮಾಣದ ಕಣ್ಣೀರು ಉತ್ಪಾದನೆಗೆ ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಆಲ್ಕೋಹಾಲ್‌ ಹಾಗೂ ಕೆಫೀನ್‌ ಸೇವನೆಯಿಂದ ದೂರವಿರಬೇಕು, ಇದು ನಿರ್ಜಲೀಕರಣಕ್ಕೆ ಕಾರಣವಾಗಬಹುದು.

ಆಗಾಗ ಐ ಡ್ರಾಪ್‌ ಬಳಸಿ

ಕೆಲವೊಮ್ಮೆ ದೇಹಕ್ಕೆ ಸಾಕಷ್ಟು ನೀರು ಸಿಗುವಂತೆ ಮಾಡುವುದರಿಂದ ಮಾತ್ರ ಕಣ್ಣಿನ ಆರೋಗ್ಯ ಕಾಪಾಡಲು ಸಾಧ್ಯವಾಗುವುದಿಲ್ಲ. ಬೇಸಿಗೆಯಲ್ಲಿ ಐ ಡ್ರಾಪ್‌ ಅನ್ನು ಕೈಯಲ್ಲೇ ಹಿಡಿದಿರಬೇಕು. ಏಕೆಂದರೆ ಬೇಸಿಗೆಯಲ್ಲಿ ಕಣ್ಣಿನ ಶುಷ್ಕತೆ ಹಾಗೂ ಕಿರಿಕಿರಿ ಹೆಚ್ಚು. ಇದರಿಂದ ಕಣ್ಣುಗಳಲ್ಲಿ ನೋವು ಹಾಗೂ ಊತಕ್ಕೂ ಕಾರಣವಾಗಬಹುದು. ಇದನ್ನು ನಿವಾರಿಸಲು ತಜ್ಞ ಸಲಹೆ ಪಡೆದು ಐಡ್ರಾಪ್‌ ಬಳಸುವುದು ಸೂಕ್ತ. ಇದು ಕಣ್ಣುಗಳನ್ನು ನಯಗೊಳಿಸುತ್ತದೆ ಹಾಗೂ ಶುಷ್ಕತೆಯನ್ನು ನಿವಾರಿಸುತ್ತದೆ.

ಮುಖಕ್ಕೆ ಸನ್‌ಸ್ಕ್ರೀನ್‌ ಕ್ರೀಮ್‌ ಬಳಸುವಾಗ ಎಚ್ಚರವಿರಲಿ

ಬೇಸಿಗೆಯಲ್ಲಿ ಸೂರ್ಯನ ಶಾಖದಿಂದ ಅಂದ ಹಾಳಾಗದಂತೆ ತ್ವಚೆಯನ್ನು ಕಾಪಾಡಿಕೊಳ್ಳಲು ಸನ್‌ಸ್ಕ್ರೀನ್‌ ಕ್ರೀಮ್‌ ಬಳಸುತ್ತೇವೆ. ಆದರೆ ಅದನ್ನು ಹಚ್ಚುವಾಗ ಕಣ್ಣು ಹಾಗೂ ಕಣ್ಣಿನ ಸುತ್ತಲಿನ ಜಾಗಗಳ ಬಗ್ಗೆ ಎಚ್ಚರವಹಿಸಬೇಕು. ಅಧಿಕ ಎಸ್‌ಪಿಎಫ್‌ ಅಂಶ ಇರುವ ಸನ್‌ಸ್ಕ್ರೀನ್‌ ಕ್ರೀಮ್‌ ಕಣ್ಣಿಗೆ ತಾಕುವುದರಿಂದ ಕಿರಿಕಿರಿ ಉಂಟಾಗಬಹುದು. ಇದು ಶಾಶ್ವತ ಹಾನಿಗೂ ಕಾರಣವಾಗಬಹುದು. ಅಲ್ಲದೆ ಕಣ್ಣಿನ ಸುತ್ತಲಿನ ಜಾಗವೂ ರಾಸಾಯನಿಕಗಳಿಂದ ಸುಟ್ಟಂತಾಗಬಹುದು.

ಮಧ್ಯಾಹ್ನದ ಬಿಸಿಲಿನಲ್ಲಿ ಹೊರ ಹೋಗುವುದನ್ನು ತಪ್ಪಿಸಿ

ಮಧ್ಯಾಹ್ನದ ಬಿರು ಬಿಸಿಲಿನಲ್ಲಿ ಮನೆಯಿಂದ ಹೊರ ಹೋಗುವುದಕ್ಕೆ ಆದಷ್ಟು ಕಡಿವಾಣ ಹಾಕಿ. ಈ ಸಮಯದಲ್ಲಿ ಸೂರ್ಯನ ಕಿರಣಗಳು ಪ್ರಖರವಾಗಿರುತ್ತವೆ ಅಲ್ಲದೆ ಯುವಿ ಕಿರಣ ಪ್ರಸಾರಣವೂ ಹೆಚ್ಚಿರುತ್ತದೆ. ಅಪಾಯಕಾರಿ ಯುವಿ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸಲು ಹಾಗೂ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಇದು ಅವಶ್ಯ ಮಾರ್ಗ.

ಹೊರಾಂಗಣ ಚಟುವಟಿಕೆಗಳಲ್ಲಿ ಭಾಗವಹಿಸುವ ಮುನ್ನ ಸಂರಕ್ಷಕಗಳನ್ನು ಬಳಸಿ

ಬೇಸಿಗೆಯಲ್ಲಿ ಯುವಿ ಕಿರಣಗಳಿಂದ ಕಣ್ಣನ್ನು ರಕ್ಷಿಸಿಕೊಳ್ಳುವ ಜೊತೆಗೆ ಈಜುವುದು, ಕೈತೋಟದ ಕೆಲಸ ಹಾಗೂ ಮರ, ಬೆಂಕಿಯ ಕೆಲಸ ಮಾಡುವುದು ಅಥವಾ ಮಾಡುವುದನ್ನು ನೋಡಲು ಹೋಗುವುದು ಇಂತಹ ಸಮಯದಲ್ಲಿ ಕನ್ನಡಕ, ಗಾಗಲ್ಸ್‌, ಹೆಲ್ಮೇಟ್‌ ಧರಿಸುವುದು ಉತ್ತಮ. ಫೇಸ್‌ ಶೀಲ್ಡ್‌ಗಳನ್ನೂ ಬಳಸಬಹುದು. ಇದರಿಂದ ಕಣ್ಣು ಹಾಗೂ ಮುಖ ಎರಡನ್ನೂ ರಕ್ಷಿಸಿಕೊಳ್ಳಬಹುದು.

ಬೇಸಿಗೆಯಲ್ಲಿ ಯಾವುದೇ ರೀತಿಯ ಕಣ್ಣಿನ ಸಮಸ್ಯೆಗಳು ಎದುರಾದರೂ ತಕ್ಷಣಕ್ಕೆ ತಜ್ಞ ವೈದ್ಯರ ಸಲಹೆ ಪಡೆಯುವುದು ಉತ್ತಮ. ಕಣ್ಣು ಸೂಕ್ಷ್ಮವಾಗಿರುವ ಕಾರಣ ನಮಗೆ ತಿಳಿದ ಹಾಗೆ ಪ್ರಯೋಗ ಮಾಡುವುದು ಅಪಾಯಕ್ಕೆ ಕಾರಣವಾಗಬಹುದು.

ವಿಭಾಗ