ಕನ್ನಡ ಸುದ್ದಿ  /  Lifestyle  /  Summer And Fabric: Clothes That Fit The Body In Summer Are; This Is The Best For Style And Skin

summer and fabric: ಬೇಸಿಗೆಯಲ್ಲಿ ದೇಹಕ್ಕೆ ಒಗ್ಗುವ ಬಟ್ಟೆಗಳಿವು; ಸ್ಟೈಲ್‌ಗೂ ಸ್ಕಿನ್‌ಗೂ ಇದೇ ಬೆಸ್ಟ್‌

summer and fabric: ಬೇಸಿಗೆಯಲ್ಲಿ ಸೆಖೆ ಹಾಗೂ ದೇಹಕ್ಕೆ ಹೊಂದಿಕೊಳ್ಳುವ ಉಡುಪುಗಳನ್ನು ಧರಿಸುವುದು ಬಹಳ ಅಗತ್ಯ. ಕಾಟನ್‌, ಲೆನಿನ್‌ನಂತಹ ಹುಗುರ ಹಾಗೂ ತೆಳು ಬಟ್ಟೆಗಳು ಬೇಸಿಗೆಗೆ ಹೆಚ್ಚು ಸೂಕ್ತ ಎನ್ನಿಸುತ್ತವೆ.

ಬೇಸಿಗೆ ಉಡುಪುಗಳು
ಬೇಸಿಗೆ ಉಡುಪುಗಳು

ಬೇಸಿಗೆಕಾಲದಲ್ಲಿ ಮಳೆಗಾಲದಂತೆ ಮಳೆಯ ಕಿರಿಕಿರಿ ಇಲ್ಲ, ಚಳಿಗಾಲದಂತೆ ದಿನವೆಲ್ಲಾ ಮಂಕಾಗಿರಬೇಕು ಎಂಬುದೂ ಇಲ್ಲ. ಆದರೆ ದೇಹ ಮಾತ್ರ ಬಿಸಿಲಿನ ತಾಪವನ್ನು ತಡೆಯಲು ಹಿಂದೇಟು ಹಾಕುತ್ತದೆ. ಬೇಸಿಗೆಯಲ್ಲಿ ಸದಾ ಬೆವರು ಹರಿಯುತ್ತಿರುವುದು ಸಾಮಾನ್ಯ. ಹಾಗಾಗಿ ಬೇಸಿಗೆಯಲ್ಲಿ ಅಂದವನ್ನು ಹೆಚ್ಚಿಸಿಕೊಂಡು, ದೇಹಕ್ಕೆ ಹೊಂದುವಂತಹ ಉಡುಪುಗಳನ್ನು ತೊಡುವುದು ನಿಜಕ್ಕೂ ಕಷ್ಟ. ಅದರಲ್ಲೂ ಕೆಲವೊಂದು ಫ್ಯಾಬ್ರಿಕ್‌ಗಳು ದೇಹಕ್ಕೆ ವಿಪರೀತ ಸೆಖೆ ಎನ್ನಿಸಬಹುದು. ಆ ಕಾರಣಕ್ಕೆ ಸೆಖೆ ಹಾಗೂ ದೇಹಕ್ಕೆ ಹೊಂದಿಕೊಳ್ಳುವ ಉಡುಪುಗಳನ್ನು ಧರಿಸುವುದು ಬಹಳ ಅಗತ್ಯ. ಕಾಟನ್‌, ಲೆನಿನ್‌ನಂತಹ ಬಟ್ಟೆಗಳು, ಹುಗುರ ಹಾಗೂ ತೆಳು ಬಟ್ಟೆಗಳು ಬೇಸಿಗೆಗೆ ಹೆಚ್ಚು ಸೂಕ್ತ ಎನ್ನಿಸುತ್ತವೆ. ಬೇಸಿಗೆಯಲ್ಲಿ ಸಿಂಥೆಟಿಕ್‌ ಬಟ್ಟೆಗಳನ್ನು ತೊಡುವುದು ಒಳ್ಳೆಯದಲ್ಲ. ಇವು ಬೆವರನ್ನು ಹೀರಿಕೊಳ್ಳುವುದಿಲ್ಲ, ಮಾತ್ರವಲ್ಲ ಚರ್ಮ ಕಿರಿಕಿರಿಯನ್ನೂ ಉಂಟು ಮಾಡಬಹುದು. ಚರ್ಮದ ಆರೋಗ್ಯಕ್ಕೂ ಉತ್ತಮ, ದೇಹಕ್ಕೂ ಹಿತ ಎನ್ನಿಸುವ ಬಟ್ಟೆಗಳ ನಿಮ್ಮ ಬೇಸಿಗೆಯನ್ನು ಸುಂದರವಾಗಿಸಬಹುದು. ಈಗ ಫ್ಯಾಷನ್‌ ಮಾರುಕಟ್ಟೆಯು ವಿಸ್ತಾರಗೊಂಡಿದ್ದು, ಕಾಟನ್‌, ಲೆನಿನ್‌ನಲ್ಲಿ ಸ್ಟೈಲ್‌ ಬಟ್ಟೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಹಾಗಾದರೆ ಬೇಸಿಗೆಯಲ್ಲಿ ಯಾವ ರೀತಿ ಫ್ಯಾಬ್ರಿಕ್‌ ತೊಡುವುದು ಉತ್ತಮ, ಇದರಿಂದ ಉಪಯೋಗವೇನು?

ಕಾಟನ್‌

ಬಿಸಿಲು, ಬೇಸಿಗೆ ಎಂದಾಕ್ಷಣ ನೆನಪಾಗುವುದು ಕಾಟನ್‌. ಧರಿಸಲು ಆರಾಮದಾಯಕ ಎನ್ನಿಸುವ, ದೇಹಕ್ಕೆ ಹಗುರ ಎನ್ನಿಸುವ ಈ ಬಟ್ಟೆಗಳು ಸ್ಟೈಲಿಶ್‌ ನೋಟ ನೀಡುವುದರಲ್ಲೂ ಅನುಮಾನವಿಲ್ಲ. ಹತ್ತಿ ಗಿಡದಲ್ಲಿನ ನಾರಿನ ಚೆಂಡುಗಳಿಂದ ಈ ಬಟ್ಟೆಯನ್ನು ತಯಾರಿಸಲಾಗುತ್ತದೆ. ಇದನ್ನು ಪ್ರಪಂಚದಾದ್ಯಂತ ವ್ಯಾಪಕವಾಗಿ ಬಳಸಲಾಗುತ್ತದೆ. ಅಲ್ಲದೆ ಇದು ಅಧಿಕ ಬಾಳಿಕೆ ಇರುವ ಬಟ್ಟೆಯೂ ಆಗಿದೆ. ಕಾಟನ್‌ ಬಟ್ಟೆಗೆ ಬೆಲೆಯೂ ಅಗ್ಗವಾಗಿರುತ್ತದೆ. ಮೃದು, ಹಗುರ, ಸಡಿಲವಾಗಿ ಇರುವುದಲ್ಲದೆ ಇದು ಬೆವರನ್ನು ಹೀರಿಕೊಳ್ಳುತ್ತದೆ. ಅಲ್ಲದೇ ಶಾಖವನ್ನು ಹೀರಿಕೊಂಡು ದೇಹವನ್ನು ತಂಪಾಗಿರಿಸುತ್ತದೆ.

ಲೆನಿನ್‌ ಬಟ್ಟೆ

ಬೇಸಿಗೆ ಅಥವಾ ತಾಪಮಾನ ಹೆಚ್ಚಿರುವ ಸಂದರ್ಭದಲ್ಲಿ ಧರಿಸಲು ಸೂಕ್ತ ಎನ್ನಿಸುವ ಇನ್ನೊಂದು ಬಟ್ಟೆ ಎಂದರೆ ಲೆನಿನ್‌. ಇದು ಕೂಡ ಹಗುರವಾಗಿದ್ದು, ದೇಹಕ್ಕೆ ಆರಾಮ ಎನ್ನಿಸುತ್ತದೆ. ಅಲ್ಲದೆ ಬೆವರನ್ನು ಹೀರಿಕೊಳ್ಳುವ ಗುಣವನ್ನೂ ಹೊಂದಿದೆ. ಇದು ತೇವಾಂಶವನ್ನು ಹೀರಿಕೊಳ್ಳುವುದು ಮಾತ್ರವಲ್ಲ ತಕ್ಷಣಕ್ಕೆ ಒಣಗುತ್ತದೆ. ಆ ಮೂಲಕ ದೇಹವನ್ನು ತಂಪಾಗಿಡುತ್ತದೆ. ಇದು ದೇಹಕ್ಕೆ ಅಂಟಿಕೊಳ್ಳುವುದಿಲ್ಲ. ಇದನ್ನು ಧರಿಸಿದಾಗ ಸ್ಟೈಲಿಶ್‌ ನೋಟ ಸಿಗುವುದು ಸುಳ್ಳಲ್ಲ.

ಖಾದಿ

ಖಾದಿ ಬಟ್ಟೆಗಳ ಬಗ್ಗೆ ಎಲ್ಲರಿಗೂ ಗೊತ್ತು, ಭಾರತೀಯರು ಖಾದಿ ಬಟ್ಟೆಯನ್ನು ಹೆಚ್ಚು ಧರಿಸುತ್ತಾರೆ. ಕಾಟನ್‌ ಮೂಲದ ಖಾದಿ ಬಟ್ಟೆ ಕೈಮಗ್ಗದಲ್ಲಿ ತಯಾರಿಸಲಾಗುತ್ತದೆ. ಸ್ವದೇಶಿ ಚಳುವಳಿಯ ಸಂದರ್ಭದಲ್ಲಿ ಖಾದಿ ಬಟ್ಟೆ ಹೆಚ್ಚು ಖ್ಯಾತಿ ಪಡೆಯಿತು. ಈಗ ಪ್ರಪಂಚದಾದ್ಯಂತ ಖಾದಿ ಬಟ್ಟೆಗೆ ಬೇಡಿಕೆ ಹೆಚ್ಚಾಗಿದೆ. ಇದು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುತ್ತದೆ. ಖಾದಿ ಫ್ಯಾಷನ್‌ ಇತ್ತೀಚೆಗೆ ಫೇಮಸ್ಸ್‌ ಆಗಿರುವುದೂ ಸುಳ್ಳಲ್ಲ. ಇದು ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವುದು ಸುಳ್ಳಲ್ಲ.

ರೆಯಾನ್‌

ರೆಯಾನ್‌ ಬಟ್ಟೆಯನ್ನು ಕಾಟನ್‌ ಫ್ಯಾಬ್ರಿಕ್‌ನೊಂದಿಗೆ ಮಿಶ್ರಣ ಮಾಡಿ ತಯಾರಿಸಲಾಗುತ್ತದೆ. ಇದನ್ನು ತಯಾರಿಸುವಾಗ ಮರದ ತಿರುಳು ಹಾಗೂ ನೈಸರ್ಗಿಕ ನಾರುಗಳನ್ನು ಬಳಸಲಾಗುತ್ತದೆ. ಅಲ್ಲದೆ ಇದು ಕೂಡ ಕೈಮಗ್ಗದಲ್ಲಿ ತಯಾರಾಗುತ್ತದೆ. ರೇಷ್ಮೆ ಬಟ್ಟೆಗಳಿಗೆ ಅಗ್ಗದ ಪರ್ಯಾಯವಾಗಿ ಇದನ್ನು ಕಂಡುಹಿಡಿಯಲಾಯಿತು. ಇದು ತೆಳುವಾದ ನಾರಿನಂತಿದ್ದು, ದೇಹಕ್ಕೆ ಉಸಿರಾಡಲು ಅನುವು ಮಾಡಿಕೊಡುತ್ತದೆ. ದೇಹಕ್ಕೆ ಅಂಟಿಕೊಳ್ಳದೆ ಧರಿಸಿದಾಗ ಆರಾಮ ಎನ್ನಿಸುತ್ತದೆ. ಆರಾಮದಾಯಕ ಮತ್ತು ಧರಿಸಲು ತಂಪಾಗಿರುವುದರಿಂದ, ವಿಶೇಷವಾಗಿ ಕ್ರೀಡಾ ಉಡುಪುಗಳು ಮತ್ತು ಬೇಸಿಗೆ ಉಡುಪುಗಳಿಗೆ ಉತ್ತಮವಾದ ಬಟ್ಟೆಯಾಗಿದೆ.

ಸಿಲ್ಕ್‌

ರೇಷ್ಮೆ ಹುಳುಗಳಿಂದ ಕೋಕೂನ್‌ಗಳಿಂದ ಕೊಯ್ಲು ಮಾಡಿದ ನೈಸರ್ಗಿಕ ನಾರುಗಳಿಂದ ರೇಷ್ಮೆಯನ್ನು ನೇಯಲಾಗುತ್ತದೆ. ಇದು ಅತ್ಯಂತ ಮೃದುವಾದ, ಐಷಾರಾಮಿ ಬಟ್ಟೆ ಆಗಿದೆ. ಇದರ ತಯಾರಿಕಾ ಪ್ರಕ್ರಿಯೆಯು ದುಬಾರಿಯಾಗಿದೆ. ಅದು ಹೆಚ್ಚಿನ ಉತ್ಪಾದನಾ ವೆಚ್ಚವನ್ನು ಹೊಂದಿದ್ದು, ಅದ್ಧೂರಿಯಾಗಿರುತ್ತದೆ. ಸೂಕ್ಷ್ಮವಾದ ಹಾಗೂ ಉಸಿರಾಡುವಂತಿರುವ ಈ ಬಟ್ಟೆ ಬೇಸಿಗೆಯ ಹವಾಮಾನಕ್ಕೆ ಉತ್ತಮವಾಗಿದೆ. ಇದನ್ನು ಧರಿಸಿದಾಗ ಚರ್ಮದ ಕಿರಿಕಿರಿ ಉಂಟಾಗುವುದಿಲ್ಲ.

ವಿಭಾಗ