ಕನ್ನಡ ಸುದ್ದಿ  /  Lifestyle  /  Summer And Gardening: Are The Plants Dying From The Heat Of The Sun? Follow These Tips And Make A Beautiful Garden Yours

Summer and gardening: ಬಿಸಿಲಿನ ತಾಪಕ್ಕೆ ಗಿಡಗಳು ಬಾಡಿವೆಯೇ? ಈ ಟಿಪ್ಸ್‌ಗಳನ್ನು ಅನುಸರಿಸಿ, ಅಂದದ ಗಾರ್ಡನ್‌ ನಿಮ್ಮದಾಗಿಸಿ

ಸೂರ್ಯನ ಅತಿಯಾದ ತಾಪ ತಾಳಲಾರದೆ ಗಿಡಗಳು ಸೊರಗುತ್ತವೆ. ಎಳೆಗಳು ಉದುರಲು ಆರಂಭಿಸಿ ಗಾರ್ಡನ್‌ ಬೋಳಾದಂತೆ ಕಾಣಿಸುತ್ತದೆ. ಆದರೆ ಕೆಲವೊಂದು ಬೇಸಿಗೆಯ ಸೂತ್ರಗಳನ್ನು ಅನುಸರಿಸುವ ಮೂಲಕ ಬಿಸಿಲಿನ ತಾಪದಲ್ಲೂ ಗಾರ್ಡನ್‌ ಅಂದ ಕೆಡದಂತೆ ಕಾಪಾಡಿಕೊಳ್ಳಬಹುದು.

ಗಾರ್ಡನಿಂಗ್‌
ಗಾರ್ಡನಿಂಗ್‌

ಮನೆ ಮುಂದೆ ಚೆಂದನೆಯ ಗಾರ್ಡನ್‌ ಇದ್ದರೆ ಎಷ್ಟು ಚೆನ್ನ. ಹಸಿರು ಗಿಡಗಳು, ಬಣ್ಣ ಬಣ್ಣದ ಹೂಗಳು, ವಿವಿಧ ಬಣ್ಣಗಳ ಅಲಂಕಾರಿಕ ಗಿಡಗಳು ವಾವ್‌ ಈ ಕಲ್ಪನೆಯೇ ಎಷ್ಟು ಖುಷಿ ಕೊಡುತ್ತದೆ.

ಆದರೆ ಬೇಸಿಗೆ ಬಂತೆಂದರೆ ನಮ್ಮ ಮನೆಯ ಎದುರಿನ ಅಂದನೆಯ ಗಾರ್ಡನ್‌ ಒಣಗಲು ಆರಂಭಿಸುತ್ತದೆ. ಸೂರ್ಯನ ಅತಿಯಾದ ತಾಪ ತಾಳಲಾರದೆ ಗಿಡಗಳು ಸೊರಗುತ್ತವೆ. ಎಳೆಗಳು ಉದುರಲು ಆರಂಭಿಸಿ ಗಾರ್ಡನ್‌ ಬೋಳಾದಂತೆ ಕಾಣಿಸುತ್ತದೆ. ಆದರೆ ಕೆಲವೊಂದು ಬೇಸಿಗೆಯ ಸೂತ್ರಗಳನ್ನು ಅನುಸರಿಸುವ ಮೂಲಕ ಬಿಸಿಲಿನ ತಾಪದಲ್ಲೂ ಗಾರ್ಡನ್‌ ಅಂದ ಕೆಡದಂತೆ ಕಾಪಾಡಿಕೊಳ್ಳಬಹುದು. ಹಾಗಾದರೆ ಆ ಸೂತ್ರಗಳು ಯಾವುದು?

ಬೇಸಿಗೆಗೆ ಸೂಕ್ತ ಗಿಡಗಳೂ ಇರಲಿ

ಗಾರ್ಡನಿಂಗ್‌ ಮಾಡುವುದು ಎಂದರೆ ಒಂದು ದಿನದ ಕೆಲಸವಲ್ಲ. ಗಿಡಗಳು ಮಕ್ಕಳಂತೆ. ಪ್ರತಿದಿನ ಅವುಗಳೊಂದಿಗೆ ಸಮಯ ಕಳೆಯಬೇಕು, ಅವುಗಳ ಬೇಕು, ಬೇಡಗಳನ್ನು ಗಮನಿಸಬೇಕು. ಸಸ್ಯಗಳು ಕಾಲೋಚಿತ ಜೀವಿಗಳು. ಕೆಲವು ಬೇಸಿಗೆಯಲ್ಲಿ ಚೆನ್ನಾಗಿ ಬೆಳೆದರೆ, ಇನ್ನೂ ಕೆಲವು ಚಳಿಗಾಲಕ್ಕೆ ಚೆನ್ನಾಗಿ ಬೆಳೆಯುತ್ತವೆ. ಹಾಗಾಗಿ ಬೇಸಿಗೆ ಸೂಕ್ತ ಎನ್ನಿಸುವ ಗಿಡಗಳನ್ನು ಬೆಳೆಸುವುದಕ್ಕೆ ಹೆಚ್ಚು ಆದ್ಯತೆ ಕೊಡಿ. ಬೇಸಿಗೆಯಲ್ಲಿ ಮೆಣಸಿನಕಾಯಿ, ಸೌತೆಕಾಯಿ, ಬದನೆ, ಸೊಪ್ಪು ಹಾಗೂ ಕಲ್ಲಂಗಡಿಯಂತಹ ಗಿಡಗಳು ಚೆನ್ನಾಗಿ ಬೆಳೆಯುತ್ತವೆ.

ಹೊದಿಕೆ ಅಳವಡಿಸಿ

ಸೂರ್ಯನ ಬಿಸಿಲು ನೇರವಾಗಿ ಗಿಡಗಳ ಮೇಲೆ ಬೀಳುವುದರಿಂದ ಅವುಗಳಿಗೆ ಹಾನಿಯಾಗಬಹುದು, ಜೊತೆಗೆ ಅವು ಬೇಗನೆ ಬಾಡುತ್ತವೆ. ಆ ಕಾರಣಕ್ಕೆ ಮೇಲಿಂದ ಹೊದಿಕೆ ಹೊದಿಸಿ. ಟಾರ್ಪಲ್‌, ಸೀರೆ ಅಥವಾ ಆನ್‌ಲೈನ್‌ನಲ್ಲಿ ಸಿಗುವ ಶೇಡ್‌ ಬಟ್ಟೆಯನ್ನು ಬಳಸಬಹುದು. ಸಾಧ್ಯವಾದಷ್ಟು ಗಿಡಗಳ ತುದಿಗೆ ತಾಕದಂತೆ ಕಟ್ಟಿ. ಚಪ್ಪರ ರೀತಿ ನಾಲ್ಕು ಕಡೆಯಿಂದ ಹೊದಿಕೆಯಾಗುವ ರೀತಿ ಕಟ್ಟುವುದರಿಂದ ಸೂರ್ಯನ ಬೆಳಕು ನೇರವಾಗಿ ಬೀಳುವುದನ್ನು ತಪ್ಪಿಸಬಹುದು.

ಸಮಯಕ್ಕೆ ಸರಿಯಾಗಿ ನೀರು ಹಾಯಿಸಿ

ಗಿಡಗಳ ಆರೈಕೆಯಲ್ಲಿ ನೀರು ಹನಿಸುವುದು ಅಥವಾ ಹಾಯಿಸುವುದು ಪ್ರಮುಖ ಹಂತ. ಬೇಸಿಗೆಯಲ್ಲಿ ಗಿಡಗಳಿಗೆ ಸೂಕ್ತ ಸಮಯಕ್ಕೆ ನೀರು ಹಾಕುವುದು ಬಹಳ ಮುಖ್ಯ. ಬೆಳಿಗ್ಗೆ ಹಾಗೂ ಸಂಜೆ ವೇಳೆ ದಿನಕ್ಕೆರಡು ಬಾರಿ ನೀರು ಹಾಯಿಸಿ. ಉರಿ ಬಿಸಿಲಿನಲ್ಲಿ ನೀರು ಹಾಕುವ ಅಭ್ಯಾಸ ಬೇಡ. ಗಿಡಗಳ ಮೇಲಿಂದ, ಬುಡಕ್ಕೆ ರಭಸದಿಂದ ನೀರು ಹಾಯಿಸುವುದು ಸರಿಯಲ್ಲ.

ಹನಿ ನೀರು ಹಾಯಿಸುವುದು ಉತ್ತಮ

ಬೇಸಿಗೆಯಲ್ಲಿ ಗಿಡಗಳಿಗೆ ನೀರು ಹಾಕಬೇಕು ಎಂದುಕೊಂಡು ರಭಸವಾಗಿ ಪೈಪ್‌ನಲ್ಲಿ ನೀರು ಬಿಡುವುದು ಸರಿಯಲ್ಲ. ರಭಸವಾಗಿ ನೀರು ಬಿಡುವುದರಿಂದ ಗಿಡಗಳ ಬೇರು, ಕಾಂಡಕ್ಕೆ ತೊಂದರೆಯಾಗಬಹುದು. ಮಗ್‌ ಅಥವಾ ಸ್ಪಿಂಕ್ಲರ್‌ ಸಹಾಯದಿಂದ ಹನಿಯಾಗಿ ನೀರು ಹಾಯಿಸಿ.

ಅತಿಯಾಗಿ ನೀರು ಹಾಕುವುದು ಒಳೆಯದಲ್ಲ

ನಿಮ್ಮ ಗಾರ್ಡನ್‌ ಸದಾ ಹಸಿರಾಗಿರಬೇಕು ಎಂದುಕೊಂಡು ಪದೇ ಪದೇ ನೀರು ಹಾಯಿಸುವುದು ಸರಿಯಲ್ಲ. ಇದರಿಂದ ಗಿಡಗಳ ಬುಡದಿಂದಲೇ ಕೊಳೆಯಬಹುದು. ಮಣ್ಣಿನ ತೇವಾಂಶ ನೋಡಿಕೊಂಡು ನೀರು ಹಾಯಿಸಿ.

ಪಾತಿ ಮಾಡುವುದು ಅವಶ್ಯ

ಬೇಸಿಗೆಯಲ್ಲೂ ಗಿಡಕ್ಕೆ ಪಾತಿ ಮಾಡಬೇಕು, ಆದರೆ ಪಾತಿ ಮಾಡುವ ಮುನ್ನ ಗಿಡದ ಬೇರು, ಕಾಂಡಕ್ಕೆ ಹಾನಿಯಾಗದಂತೆ ನೋಡಿಕೊಳ್ಳಿ. ಬಿಸಿಲಿನ ತಾಪ ಹೆಚ್ಚಿರುವ ಸಮಯದಲ್ಲಿ ಪಾತಿ ಕಾರ್ಯ ಮಾಡಬೇಡಿ. ಸಂಜೆ ಅಥವಾ ಬೆಳಿಗ್ಗೆ 9ಗಂಟೆಯ ಮೊದಲು ಮಾಡಿ.

ರೂಫ್‌ಟಾಪ್‌ ಅಳವಡಿಕೆ

ಗಾರ್ಡನ್‌ ಮಾಡುವ ಮುಂಚೆ ರೂಫ್‌ಟಾಪ್‌ ಅಳವಡಿಸುವುದು ಉತ್ತಮ. ಇದರಿಂದ ಗಿಡಗಳಿಗೆ ಸೂರ್ಯ ಕಿರಣಗಳು ನೇರವಾಗಿ ತಾಕುವುದರಿಂದ ರಕ್ಷಣೆ ಪಡೆಯಬಹುದು. ಅಲ್ಲದೆ ಇದು ಮನೆಯನ್ನು ತಂಪಾಗಿಡುತ್ತದೆ. ಬಿರುಸಾಗಿ ಸುರಿಯುವ ಮಳೆಯಿಂದಲೂ ಗಿಡಗಳನ್ನು ರಕ್ಷಿಸಲು ರೂಫ್‌ಟಾಪ್‌ ಸಹಕಾರಿ.

ವಿಭಾಗ