Summer drinks: ಬೇಸಿಗೆಯಲ್ಲಿ ದೇಹ ತಣಿಸುವ ಹಣ್ಣುಗಳ ಸ್ಪೆಷಲ್ ಜ್ಯೂಸ್ ರೆಸಿಪಿ ಇಲ್ಲಿದೆ; ನೀವೂ ಇದನ್ನು ಮನೆಯಲ್ಲಿ ತಯಾರಿಸಿ, ಸವಿಯಿರಿ
Summer drinks: ಬೇಸಿಗೆಯ ಹಣ್ಣುಗಳಲ್ಲಿ ಆಂಟಿಆಕ್ಸಿಡೆಂಟ್ ಅಂಶ ಅಧಿಕವಾಗಿರುತ್ತದೆ. ಇವು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೆ ನೈಸರ್ಗಿಕವಾಗಿ ದೇಹದಲ್ಲಿ ನೀರಿನಂಶ ಸಂಗ್ರಹವಾಗುವಂತೆ ನೋಡಿಕೊಳ್ಳುತ್ತವೆ. ಮಾವು, ದ್ರಾಕ್ಷಿ, ನೇರಳೆ ಇಂತಹ ಹಣ್ಣುಗಳಿಂದ ತಯಾರಿಸಿದ ಪಾನೀಯ ದೇಹದ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ದೈಹಿಕ ಚಟುವಟಿಕೆಯನ್ನೂ ಹೆಚ್ಚಿಸುತ್ತವೆ.
ಬಿಸಿಲಿನ ತಾಪ ಹೆಚ್ಚಿದಂತೆ ದೇಹವು ತಣ್ಣನೆಯ ಪಾನೀಯಗಳನ್ನು ಬಯಸುವುದು ಸಹಜ. ಬೇಸಿಗೆಯಲ್ಲಿ ಘನ ಆಹಾರಕ್ಕಿಂತ ದ್ರವಾಹಾರವೇ ಹೊಟ್ಟೆ ಹಾಗೂ ಮನಸ್ಸನ್ನು ತಣಿಸುತ್ತದೆ. ಅಂಗಡಿಯಲ್ಲಿ ಸಿಗುವ ರೆಡಿ ಜ್ಯೂಸ್‌ಗಳಲ್ಲಿ ಸಕ್ಕರೆ ಹಾಗೂ ಕಾರ್ಬೋನೇಟೆಡ್ ಅಂಶ ಅಧಿಕವಾಗಿರುತ್ತದೆ. ಆ ಕಾರಣಕ್ಕೆ ಅದರ ಬದಲು ಮನೆಯಲ್ಲೇ ತಾಜಾ ಪಾನೀಯಗಳನ್ನು ತಯಾರಿಸಿ ದೇಹ ತಣ್ಣಗೆ ಮಾಡಿಕೊಳ್ಳಬಹುದು. ಬೇಸಿಗೆಯಲ್ಲಿ ಸಿಗುವ ಹಣ್ಣುಗಳಲ್ಲಿ ಆಂಟಿಆಕ್ಸಿಡೆಂಟ್ ಅಂಶ ಅಧಿಕವಾಗಿರುತ್ತದೆ. ಇವು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೆ ನೈಸರ್ಗಿಕವಾಗಿ ದೇಹದಲ್ಲಿ ನೀರಿನಂಶ ಸಂಗ್ರಹವಾಗುವಂತೆ ನೋಡಿಕೊಳ್ಳುತ್ತವೆ. ಮಾವು, ದ್ರಾಕ್ಷಿ, ನೇರಳೆ ಇಂತಹ ಹಣ್ಣುಗಳಿಂದ ತಯಾರಿಸಿದ ಪಾನೀಯ ದೇಹದ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ದೈಹಿಕ ಚಟುವಟಿಕೆಯೂ ಹೆಚ್ಚುವಂತೆ ಮಾಡುತ್ತದೆ. ಇದಕ್ಕೆ ಗಿಡಮೂಲಿಕೆಗಳು ಹಾಗೂ ಮಸಾಲೆಗಳನ್ನು ಸೇರಿಸಿಕೊಳ್ಳುವುದರಿಂದ ಇನ್ನಷ್ಟು ಪೋಷಕಾಂಶ ದೊರೆಯುತ್ತದೆ. ಆದರೆ ಸಕ್ಕರೆ ಪ್ರಮಾಣ ಕಡಿಮೆ ಬಳಸಲು ಮರೆಯದಿರಿ. ಸಕ್ಕರೆ ಬದಲು ಜೀರಿಗೆ ಅಥವಾ ಕಪ್ಪು ಉಪ್ಪು ಬಳಸಬಹುದು.
ಹಾಗಾದರೆ ಈ ಎಲ್ಲಾ ಅಂಶಗಳನ್ನು ತಲೆಯಲ್ಲಿ ಇರಿಸಿಕೊಂಡು ಮನೆಯಲ್ಲೇ ತಯಾರಿಸಿಬಹುದಾದ ಕೆಲವು ಹಣ್ಣಿನ ಪಾನೀಯದ ರೆಸಿಪಿ ಇಲ್ಲಿದೆ.
ದ್ರಾಕ್ಷಿ ನಿಂಬೆ ಪಾನಕ
ಬೇಕಾಗುವ ಸಾಮಗ್ರಿಗಳು: ಕಪ್ಪು ದ್ರಾಕ್ಷಿ - 20, ಸಕ್ಕರೆ ಪುಡಿ - 2 ಚಮಮ, ಕಪ್ಪು ಉಪ್ಪು - ಅರ್ಧ ಚಮಚ, ಹುರಿದ ಜೀರಿಗೆ ಪುಡಿ - ಅರ್ಧ ಚಮಚ, ಕಾಳುಮೆಣಸಿನ ಪುಡಿ - ಅರ್ಧ ಚಮಚ, ನಿಂಬೆರಸ - 3 ಚಮಚ, ಐಸ್ ಕ್ಯೂಬ್ - ಬೇಕಿದ್ದಷ್ಟು. ಸೋಡಾ ವಾಟರ್ - 200 ಮಿಲಿ ಲೀಟರ್
ತಯಾರಿಸುವ ವಿಧಾನ: ಮಿಕ್ಸಿ ಜಾರಿಗೆ ಚೆನ್ನಾಗಿ ತೊಳೆದುಕೊಂಡ ಕಪ್ಪು ದ್ರಾಕ್ಷಿ, ಸಕ್ಕರೆ ಪುಡಿ, ಕಪ್ಪು ಉಪ್ಪು, ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ ಹಾಗೂ ನಿಂಬೆರಸ ಹಾಕಿ ಚೆನ್ನಾಗಿ ರುಬ್ಬಿ. ಒಂದು ಲೋಟಕ್ಕೆ ಐಸ್‌ಕ್ಯೂಬ್‌ಗಳನ್ನು ಹಾಕಿ. ಅದರೊಂದಿಗೆ ಕತ್ತರಿಸಿದ ನಿಂಬೆಹಣ್ಣಿನ ತುಂಡುಗಳನ್ನು ಸೇರಿಸಿ. ನಂತರ ರುಬ್ಬಿಕೊಂಡ ಮಿಶ್ರಣ ಹಾಕಿ. ಅದಕ್ಕೆ ಕೋಲ್ಡ್ ಇರುವ ಸೋಡಾ ವಾಟರ್ ಹಾಕಿ ಮಿಶ್ರಣ ಮಾಡಿ. ದ್ರಾಕ್ಷಿ ನಿಂಬೆಪಾನಕ ಸವಿಯಲು ಸಿದ್ಧ
ರೆಸಿಪಿ ಕೃಪೆ: ಶೆಫ್ ಕುನಾಲ್ ಕಪೂರ್
ಮಾವಿನಕಾಯಿ ಜಲ್‌ಜೀರಾ
ಬೇಕಾಗುವ ಸಾಮಗ್ರಿಗಳು: ಒಂದು ದೊಡ್ಡ ಮಾವಿನಕಾಯಿ, ಜಲ್‌ಜೀರಾ- 2 ಚಮಚ, ಕಪ್ಪು ಉಪ್ಪು- ಅರ್ಧ ಚಮಚ, ಜೀರಿಗೆ ಪುಡಿ - ಅರ್ಧ ಚಮಚ, ಹಸಿಮೆಣಸು - ಅರ್ಧ, ಬೆಲ್ಲ 3 ಚಮಚದಷ್ಟು, ಪುದಿನಾ ಎಲೆ - 6
ತಯಾರಿಸುವ ವಿಧಾನ: ಮಾವಿನಕಾಯಿಯನ್ನು ಕುಕ್ಕರ್‌ಗೆ ಹಾಕಿ 3 ವಿಶಲ್ ಕೂಗಿಸಿ. ಮಾವಿನ ಕಾಯಿಯ ತಿರುಳನ್ನು ಮಿಕ್ಸಿ ಜಾರಿಗೆ ಹಾಕಿ. ಅದಕ್ಕೆ 2 ಚಮಚ ಜಲ್‌ಜೀರಾ, ಕಪ್ಪು ಉಪ್ಪು, ಹುರಿದುಕೊಂಡ ಜೀರಿಗೆ ಪುಡಿ ಹಾಗೂ ಅರ್ಧ ಹಸಿಮೆಣಸು ಸೇರಿಸಿ, 5 ರಿಂದ 6 ಪುದಿನಾ ಸೊಪ್ಪು ಹಾಕಿ, ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿ ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಗ್ಲಾಸ್‌ಗೆ ಹಾಕಿ ಬೇಕಿದ್ದಷ್ಟು ನೀರು ಸೇರಿಸಿ, ನಂತರ ಐಸ್‌ಕ್ಯೂಬ್ ಸೇರಿಸಿ ಕುಡಿಯಲು ಕೊಡಿ.
ರೆಸಿಪಿ ಕೃಪೆ: ಮೇಘನಾಸ್ ಫುಡ್ ಮ್ಯಾಜಿಕ್
ನೇರಳೆಹಣ್ಣಿನ ಜ್ಯೂಸ್
ಬೇಕಾಗುವ ಪದಾರ್ಥಗಳು: ನೇರಳೆಹಣ್ಣು, ನೀರು - 2ಲೀಟರ್, ಸಕ್ಕರೆ - ಅರ್ಧ ಕಪ್, ಉಪ್ಪು- ರುಚಿಗೆ, ಕಾಳುಮೆಣಸಿನ ಪುಡಿ - ಚಿಟಿಕೆ, ಕಪ್ಪು ಉಪ್ಪು - ಅರ್ಧ ಚಮಚ, ಜೀರಿಗೆ ಪುಡಿ - ಒಂದೂವರೆ ಚಮಚ, ನಿಂಬೆರಸ - ಕಾಲು ಕಪ್, ಐಸ್‌ಕ್ಯೂಬ್ - ಅಗತ್ಯವಿದ್ದಷ್ಟು. ಪುದಿನಾ - ಒಂದು ಮುಷ್ಟಿ.
ತಯಾರಿಸುವ ವಿಧಾನ: ನೇರಳೆಹಣ್ಣನ್ನು ತೊಳೆದು, ನೀರಿನಲ್ಲಿ ಬೇಯಿಸಿಕೊಳ್ಳಿ. ಸ್ಟೌ ಉರಿ ಸಣ್ಣ ಮಾಡಿದ ಆ ನೀರಿಗೆ ಉಪ್ಪು, ಕಪ್ಪು ಉಪ್ಪು, ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ ಹಾಗೂ ಸಕ್ಕರೆ ಸೇರಿಸಿ. ಪುನಃ ಸಣ್ಣ ಉರಿಯಲ್ಲಿ 15ನಿಮಿಷ ಕುದಿಸಿ. ಬೀಜದಿಂದ ತಿರುಳು ಬೇರಾಗುವವರೆಗೂ ಬೇಯಿಸಿಕೊಂಡು ಸ್ಟೌ ಆಫ್ ಮಾಡಿ. ನಂತರ ಮ್ಯಾಷರ್‌ನಿಂದ ಕಿವುಚಿ. ಅದರಿಂದ ರಸವನ್ನು ಹಿಂಡಿ ಸೋಸಿಕೊಳ್ಳಿ. ಆದರೆ ಬೀಜ ಜಜ್ಜದಂತೆ ನೋಡಿಕೊಳ್ಳಿ. ಈ ರಸವನ್ನು ನಿಂಬೆರಸದೊಂದಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸಕ್ಕರೆ ಹಾಗೂ ಉಪ್ಪಿನ ರುಚಿ ನೋಡಿಕೊಂಡು ಐಸ್‌ಕ್ಯೂಬ್ ಸೇರಿಸಿ. ಈ ನಿಮ್ಮ ಮುಂದೆ ನೇರಳೆಹಣ್ಣಿನ ಜ್ಯೂಸ್ ಕುಡಿಯಲು ಸಿದ್ಧ
ರೆಸಿಪಿ ಕೃಪೆ: ಕುನಾಲ್ ಕಪೂರ್
ವಿಭಾಗ