ಕನ್ನಡ ಸುದ್ದಿ  /  ಜೀವನಶೈಲಿ  /  ಬೇಸಿಗೆಗೆ ಲಘು ಭೋಜನದ ಮೊರೆ ಹೋಗಿದ್ದೀರಾ; ಇಲ್ಲಿವೆ ಅವಲಕ್ಕಿಯಿಂದ ತಯಾರಿಸಬಹುದಾದ 8 ಬಗೆಯ ಭಕ್ಷ್ಯಗಳು

ಬೇಸಿಗೆಗೆ ಲಘು ಭೋಜನದ ಮೊರೆ ಹೋಗಿದ್ದೀರಾ; ಇಲ್ಲಿವೆ ಅವಲಕ್ಕಿಯಿಂದ ತಯಾರಿಸಬಹುದಾದ 8 ಬಗೆಯ ಭಕ್ಷ್ಯಗಳು

ಈ ಬೇಸಿಗೆಯಲ್ಲಿ ನೀರು ಕುಡಿದು-ಕುಡಿದು ಹೊಟ್ಟೆ ತುಂಬಿರುತ್ತದೆ. ಬಹುತೇಕರಿಗೆ ಊಟದ ವೇಳೆ ಬಿಸಿ-ಬಿಸಿ ಅನ್ನ-ಸಾಂಬಾರ್ ಬೇಡ, ಏನಾದರೂ ಲಘು ಆಹಾರವಿದ್ದರೆ ಸಾಕು ಎಂದೆನಿಸಿರಬಹುದು. ಹಾಗಿದ್ದರೆ, ನಿಮಗಾಗಿ ಇಲ್ಲಿದೆ ಸರಳವಾಗಿ ಮಾಡಬಹುದಾದ ಹಾಗೂ ರುಚಿಕರವಾದ ವಿವಿಧ ಬಗೆಯ ಅವಲಕ್ಕಿ ರೆಸಿಪಿ.

 ಇಲ್ಲಿವೆ ಅವಲಕ್ಕಿಯಿಂದ ತಯಾರಿಸಬಹುದಾದ 8 ಬಗೆಯ ಭಕ್ಷ್ಯಗಳು
ಇಲ್ಲಿವೆ ಅವಲಕ್ಕಿಯಿಂದ ತಯಾರಿಸಬಹುದಾದ 8 ಬಗೆಯ ಭಕ್ಷ್ಯಗಳು

ಬಹುತೇಕರಿಗೆ ಈ ಬೇಸಿಗೆ ಕಾಲ ಯಾವಾಗ ಮುಗಿಯುತ್ತೋ ಎಂದೆನಿಸಿರಬಹುದು. ಯಾಕೆಂದರೆ ದಾಹ ತೀರಿಸಲು ನೀರು ಕುಡಿದು ಹೊಟ್ಟೆ ತುಂಬಿದಂತಾಗಿರುತ್ತದೆ. ಮಧ್ಯಾಹ್ನ ಆದ್ರೆ ಅಯ್ಯೋ, ಬಿಸಿಬಿಸಿ ಅನ್ನ-ಸಾಂಬಾರ್ ಯಾರು ಊಟ ಮಾಡುತ್ತಾರೆ ಎಂದೆನಿಸುತ್ತದೆ. ಈ ಬಿಸಿಲಿನ ತಾಪಮಾನಕ್ಕೆ ಅನ್ನ-ಸಾಂಬಾರ್ ಊಟ ಮಾಡಿ ಹಲವರಿಗೆ ಬೋರ್ ಬಂದಿರಬಹುದು. ಬಹುತೇಕ ಮಂದಿ ಲಘು ಆಹಾರದತ್ತ ಮೊರೆ ಹೋಗುತ್ತಿದ್ದಾರೆ. ಲಘು ಭೋಜನಕ್ಕೆ ನೀವು ಪೋಹಾ ಅಥವಾ ಅವಲಕ್ಕಿಯನ್ನು ನೀವು ಆಯ್ಕೆ ಮಾಡಬಹುದು. ಇದು ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ.

ಟ್ರೆಂಡಿಂಗ್​ ಸುದ್ದಿ

ಚಪ್ಪಟೆ ಅಕ್ಕಿಯಂತಿರುವ ದಪ್ಪ ಅವಲಕ್ಕಿಯಿಂದ ವಿವಿಧ ಭಕ್ಷ್ಯಗಳನ್ನು ನೀವು ತಯಾರಿಸಬಹುದು. ಬೆಳಗಿನ ಉಪಾಹಾರಕ್ಕಾಗಿ ಇದನ್ನು ಸೇವಿಸಿದರೂ, ನಿಮ್ಮ ಊಟದ ಮೆನುವಿನಲ್ಲಿ ಅವಲಕ್ಕಿಯನ್ನು ಸೇರಿಸಿದರೆ ತಪ್ಪೇನಿಲ್ಲ. ಅವಲಕ್ಕಿಯು ಕಡಿಮೆ ಕ್ಯಾಲರಿಗಳು ಮತ್ತು ಹೆಚ್ಚಿನ ಕಾರ್ಬೋಹೈಡ್ರೇಟ್ ಅಂಶವನ್ನು ಹೊಂದಿದೆ. ಅಗತ್ಯವಾದ ಪೋಷಕಾಂಶಗಳಿಂದ ತುಂಬಿರುವ ಈ ಅವಲಕ್ಕಿ ಭಕ್ಷ್ಯ ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಬೇಸಿಗೆಯ ಈ ದಿನಗಳಲ್ಲಿ ಲಘು ಭೋಜನ ಬಯಸುವವರು ಅವಲಕ್ಕಿಯ ಖಾದ್ಯ ಸವಿಯಬಹುದು.

ಅವಲಕ್ಕಿಯ ವಿವಿಧ ಪಾಕವಿಧಾನಗಳು ಏನೇನಿವೆ? ಇಲ್ಲಿದೆ ನೋಡಿ

1. ಚೂಡಾ ಸಂತುಲಾ ಅಥವಾ ತರಕಾರಿ ಅವಲಕ್ಕಿ

ಈ ವಿಶೇಷ ಭಕ್ಷ್ಯದ ಮೂಲ ಒಡಿಶಾದ ಪೂರ್ವ ರಾಜ್ಯ. ಈ ಖಾದ್ಯವನ್ನು ತಯಾರಿಸಲು, ದಪ್ಪ ಅವಲಕ್ಕಿವನ್ನು ಲಘುವಾಗಿ ನೆನೆಸಿ ನಂತರ ಸಾಸಿವೆ, ಕರಿಬೇವು, ಹಸಿರು ಮೆಣಸಿನಕಾಯಿಗಳು ಮತ್ತು ಆಲೂಗಡ್ಡೆ, ಕ್ಯಾರೆಟ್ ಮತ್ತು ಬಟಾಣಿ ಕಾಳು ಮುಂತಾದ ತರಕಾರಿಗಳೊಂದಿಗೆ ಹುರಿಯಿರಿ. ಈ ಭಕ್ಷ್ಯವನ್ನು ಸಾಮಾನ್ಯವಾಗಿ ಚಟ್ನಿ ಅಥವಾ ಉಪ್ಪಿನಕಾಯಿಗಳೊಂದಿಗೆ ಬಡಿಸಲಾಗುತ್ತದೆ.

2. ಚೂಡಾ ಮಟರ್ ಅವಲಕ್ಕಿ/ಬನಾರಸಿ ಅವಲಕ್ಕಿ

ಉತ್ತರ ಪ್ರದೇಶಗಳಲ್ಲಿ ಹೆಚ್ಚಾಗಿ ತಯಾರಿಸಲಾಗುವ ಈ ಖಾದ್ಯವು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಮೊದಲು, ಅವಲಕ್ಕಿಯನ್ನು ನೆನೆಸಿ ಅದಕ್ಕೆ ಸಾಸಿವೆ, ಜೀರಿಗೆ, ಈರುಳ್ಳಿ ಮತ್ತು ಹಸಿರು ಬಟಾಣಿಗಳೊಂದಿಗೆ ಹುರಿಯಬೇಕು. ಬಳಿಕ ಇದಕ್ಕೆ ಅರಿಶಿನ, ಮೆಣಸಿನ ಪುಡಿ ಮತ್ತು ಕೊತ್ತಂಬರಿ ಪುಡಿ ಹಾಕಿ, ಅವಲಕ್ಕಿಯನ್ನು ಚೆನ್ನಾಗಿ ಮಿಶ್ರಣ ಮಾಡಬೇಕು. ಇದು ಮೊಸರು ಅಥವಾ ಉಪ್ಪಿನಕಾಯಿಯೊಂದಿಗೆ ಸವಿಯಲು ತುಂಬಾ ರುಚಿಕರವಾಗಿರುತ್ತದೆ.

ಇದನ್ನೂ ಓದಿ | ಇಡ್ಲಿ ಸಾಂಬಾರ್, ಉಪ್ಮಾ, ಆಲೂ ಪರಾಠ: ಭಾರತದ ವಿವಿಧ ರಾಜ್ಯಗಳ 7 ಜನಪ್ರಿಯ ಉಪಾಹಾರಗಳಿವು; ಬಾಯಲ್ಲಿ ನೀರೂರುವುದು ಪಕ್ಕಾ

3. ಕಾಂದ ಅವಲಕ್ಕಿ

ಕಾಂದ ಅವಲಕ್ಕಿಯು ಮಹಾರಾಷ್ಟ್ರದ ಜನಪ್ರಿಯ ಭಕ್ಷ್ಯವಾಗಿದೆ. ಒಗ್ಗರಣೆಗೆ ಸಾಸಿವೆ, ಕರಿಬೇವು, ಹಸಿರು ಮೆಣಸಿನಕಾಯಿ, ಈರುಳ್ಳಿ ಮತ್ತು ಅರಿಶಿನವನ್ನು ಹಾಕಿದ ಬಳಿಕ ಅವಲಕ್ಕಿ ಸೇರಿಸಿ ಈ ಭಕ್ಷ್ಯವನ್ನು ತಯಾರಿಸಲಾಗುತ್ತದೆ. ಬಳಿಕ ಇದಕ್ಕೆ ತಾಜಾ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಹಾಕಲಾಗುತ್ತದೆ. ಇದೊಂದು ಪೌಷ್ಟಿಕ ಮತ್ತು ಲಘು ಭೋಜನದ ಆಯ್ಕೆಯಲ್ಲೊಂದು.

4. ಮೊಸರವಲಕ್ಕಿ

ಈ ಖಾದ್ಯವನ್ನು ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತದೆ. ಇದೊಂದು ಲಘು ಭೋಜನಕ್ಕೆ ಪರಿಪೂರ್ಣವಾದ ಸರಳ ಮತ್ತು ಆರೋಗ್ಯಕರ ಭಕ್ಷ್ಯವಾಗಿದೆ. ಅವಲಕ್ಕಿಯನ್ನು ಉಪ್ಪು ಹಾಕಿದ ಮೊಸರಿನಲ್ಲಿ ನೆನೆಸಬೇಕು. ಕತ್ತರಿಸಿದ ಸೌತೆಕಾಯಿ, ಟೊಮೆಟೊ ಮತ್ತು ಈರುಳ್ಳಿ ಮುಂತಾದ ತರಕಾರಿಗಳನ್ನು ಅದಕ್ಕೆ ಸೇರಿಸಬೇಕು. ಮೊಸರವಲಕ್ಕಿಯು ಪೌಷ್ಠಿಕ ಆಹಾರವಾಗಿದ್ದು, ಬಿಸಿಲಿನ ತಾಪಮಾನದಿಂದ ಬಳಲಿದವರು ಇದನ್ನು ಸೇವಿಸಿದಾಗ ಹೊಟ್ಟೆ ತಂಪೆನಿಸುತ್ತದೆ.

5. ಅವಲಕ್ಕಿ ಉಪ್ಪಿಟ್ಟು (ಕೇರಳ ಅವಿಲ್ ಉಪ್ಮಾ)

ಕೇರಳದಲ್ಲಿ ಈ ಖಾದ್ಯ ಹುಟ್ಟಿಕೊಂಡಿದ್ದು, ಅಲ್ಲಿನ ಜನಪ್ರಿಯ ಆಹಾರಗಳಲ್ಲೊಂದು. ಈ ಖಾದ್ಯ ತಯಾರಿಸಲು, ಸಾಸಿವೆ, ಕರಿಬೇವು, ಒಣಗಿದ ಕೆಂಪು ಮೆಣಸಿನಕಾಯಿ ಮತ್ತು ಕಡಲೆಕಾಯಿ ಹಾಕಿ ಒಗ್ಗರಣೆ ಮಾಡಿ, ಅದಕ್ಕೆ ಅವಲಕ್ಕಿಯನ್ನು ಸೇರಿಸಬೇಕು. ನಂತರ ತುರಿದ ತೆಂಗಿನಕಾಯಿ, ಉಪ್ಪು ಮತ್ತು ಒಂದು ನಿಂಬೆ ರಸವನ್ನು ಇದಕ್ಕೆ ಮಿಶ್ರಣ ಮಾಡಿದರೆ ಸವಿಯಲು ವಿಶೇಷ ಅವಲಕ್ಕಿ ಉಪ್ಪಿಟ್ಟು ರೆಡಿ. ಇದು ಲಘು ಭೋಜನಕ್ಕೆ ಸೂಕ್ತ ಭಕ್ಷ್ಯವಾಗಿದೆ.

6. ಉಗ್ಗಾನಿ (ಅವಲಕ್ಕಿ ಒಗ್ಗರಣೆ)

ಇದು ಕರ್ನಾಟಕದ ಅಚ್ಚುಮೆಚ್ಚಿನ ಭಕ್ಷ್ಯವಾಗಿದೆ. ಮೊದಲು ಅವಲಕ್ಕಿಯನ್ನು ನೀರಿನಲ್ಲಿ ನೆನೆಸಿ ಮೃದುಗೊಳಿಸಲಾಗುತ್ತದೆ. ನಂತರ ಸಾಸಿವೆ ಕಾಳು, ಕರಿಬೇವಿನ ಎಲೆಗಳು, ಉದ್ದಿನಬೇಳೆ ಮತ್ತು ಕಡಲೆಕಾಯಿಗಳ ಒಗ್ಗರಣೆ ಹಾಕಬೇಕು. ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಮತ್ತು ಮೆಣಸಿನ ಪುಡಿಯನ್ನು ಹಾಕಬೇಕು. ನಂತರ ಕತ್ತರಿಸಿದ ಈರುಳ್ಳಿ ಮತ್ತು ಟೊಮೆಟೊಗಳನ್ನು ಸೇರಿಸಿ ಚೆನ್ನಾಗಿ ಫ್ರೈ ಮಾಡಬೇಕು. ಮೇಲೆ ಕೊತ್ತಂಬರಿ ಸೊಪ್ಪು ಹಾಕಿದರೆ ಸಾಕು, ಸವಿಯಲು ರುಚಿಕರವಾದ ಅವಲಕ್ಕಿ ಒಗ್ಗರಣೆ ರೆಡಿ.

7. ಚಿರೆರ್ ಪೊಲಾವ್ (ಬಂಗಾಳಿ ಶೈಲಿಯ ಅವಲಕ್ಕಿ ಖಾದ್ಯ)

ಈ ಖಾದ್ಯವನ್ನು ಪ್ರತಿ ಬಂಗಾಳಿ ಮನೆಯಲ್ಲೂ ಪ್ರಧಾನವಾಗಿ ತಯಾರಿಸಲಾಗುತ್ತದೆ. ಅವಲಕ್ಕಿಯನ್ನು ಮೊದಲು ತುಪ್ಪ, ಬಿರಿಯಾನಿ ಎಲೆ, ದಾಲ್ಚಿನ್ನಿ, ಏಲಕ್ಕಿ, ಲವಂಗ ಮತ್ತು ಗೋಡಂಬಿಗಳೊಂದಿಗೆ ಹುರಿಯಬೇಕು. ಇದಕ್ಕೆ ಬೇಯಿಸಿದ ಆಲೂಗಡ್ಡೆ, ಬಟಾಣಿ, ಕ್ಯಾರೆಟ್ ಮತ್ತು ಒಣದ್ರಾಕ್ಷಿಗಳನ್ನು ಸೇರಿಸಬೇಕು. ಈ ಖಾದ್ಯ ತಯಾರಿಸುವಾಗ ಬರುವ ಸುವಾಸನೆಯು ನಿಮ್ಮ ಹೊಟ್ಟೆ ಹಸಿವನ್ನು ಇಮ್ಮಡಿಗೊಳಿಸುತ್ತದೆ. ಇದನ್ನು ಮೊಸರು ಅಥವಾ ಚಟ್ನಿಯೊಂದಿಗೆ ಸವಿಯಬಹುದು.

8. ದಾಡ್ಪೆ ಪೋಹ ಅಥವಾ ಕಲಸಿದ ಅವಲಕ್ಕಿ

ಈ ಖಾದ್ಯ ಮಹಾರಾಷ್ಟ್ರದಲ್ಲಿ ಹುಟ್ಟಿಕೊಂಡಿದೆ. ಇದು ಸಾಂಪ್ರದಾಯಿಕ ಭಾರತೀಯ ಪಾಕಪದ್ಧತಿಯ ಸೊಬಗನ್ನು ಪ್ರತಿಬಿಂಬಿಸುತ್ತದೆ. ಅವಲಕ್ಕಿಯನ್ನು ತುರಿದ ತೆಂಗಿನಕಾಯಿ, ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಸ್ವಲ್ಪ ನಿಂಬೆ ರಸದೊಂದಿಗೆ ಮಿಶ್ರಣ ಮಾಡಿದರೆ ರುಚಿಕರವಾದ ಖಾದ್ಯ ಸವಿಯಲು ಸಿದ್ಧ.

ಸೂರ್ಯನ ಪ್ರಖರ ದಿನೇ ದಿನೇ ಹೆಚ್ಚುತ್ತಿದ್ದು, ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಮೂರು ಹೊತ್ತು ಕೂಡ ಹಲವರು ಲಘು ಭೋಜನದತ್ತ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ತುಂಬಾ ಸರಳವಾಗಿ, ಅಷ್ಟೇ ರುಚಿಕರವಾದ ಯಾವೆಲ್ಲಾ ಅವಲಕ್ಕಿ ಖಾದ್ಯವನ್ನು ತಯಾರಿಸಬಹುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಇನ್ಯಾಕೆ ತಡ, ಮೇಲೆ ತಿಳಿಸಿರುವ ಖಾದ್ಯಗಳನ್ನು ಮನೆಯಲ್ಲೇ ತಯಾರಿಸಿ, ಆನಂದಿಸಿ.