ಕನ್ನಡ ಸುದ್ದಿ  /  ಜೀವನಶೈಲಿ  /  ಭಾರತದ ಮಾರುಕಟ್ಟೆಗಳಲ್ಲಿ ಯಾವೆಲ್ಲಾ ಮಾವಿನ ಹಣ್ಣುಗಳು ಲಭ್ಯವಿದೆ; ವಿವಿಧ ರಾಜ್ಯಗಳಲ್ಲಿ ಪ್ರಸಿದ್ಧ ಬೆಳೆ ಯಾವುವು? ಇಲ್ಲಿದೆ ಉತ್ತರ

ಭಾರತದ ಮಾರುಕಟ್ಟೆಗಳಲ್ಲಿ ಯಾವೆಲ್ಲಾ ಮಾವಿನ ಹಣ್ಣುಗಳು ಲಭ್ಯವಿದೆ; ವಿವಿಧ ರಾಜ್ಯಗಳಲ್ಲಿ ಪ್ರಸಿದ್ಧ ಬೆಳೆ ಯಾವುವು? ಇಲ್ಲಿದೆ ಉತ್ತರ

ಎಲ್ಲ ಹಣ್ಣುಗಳನ್ನೂ ಮೆಚ್ಚಿಕೊಳ್ಳುವವರಿಲ್ಲ. ಆದರೆ ಹಣ್ಣುಗಳ ರಾಜ ಮಾವಿನ ಹಣ್ಣನ್ನು ದೂರ ತಳ್ಳುವವರೇ ಇಲ್ಲ. ಅಂತಹ ವಿಶೇಷ ರುಚಿಯ ಮಾವಿನ ಹಣ್ಣುಗಳ ತಳಿಗಳ ಬಗ್ಗೆ ನಿಮಗೆ ಗೊತ್ತಾ? ಭಾರತದ ಯಾವ್ಯಾವ ರಾಜ್ಯಗಳು ಮಾವಿನ ಯಾವ ಪ್ರಬೇಧಗಳಿಗೆ ಹೆಸರು ಮಾಡಿವೆ ಎಂಬ ಮಾಹಿತಿ ಇಲ್ಲಿದೆ.

ಭಾರತದ ಮಾರುಕಟ್ಟೆಗಳಲ್ಲಿ ಯಾವೆಲ್ಲಾ ಮಾವಿನ ಹಣ್ಣುಗಳು ಲಭ್ಯವಿದೆ
ಭಾರತದ ಮಾರುಕಟ್ಟೆಗಳಲ್ಲಿ ಯಾವೆಲ್ಲಾ ಮಾವಿನ ಹಣ್ಣುಗಳು ಲಭ್ಯವಿದೆ

ನಮ್ಮ ದೇಶ ಮಾವಿನ ನಾಡು ಎಂಬ ಖ್ಯಾತಿ ಗಳಿಸಿದೆ. ಹಣ್ಣುಗಳ ರಾಜ ಎಂದು ಕರೆಯಲ್ಪಡುವ ರಸಭರಿತ ಮಾವಿನಹಣ್ಣಿನ ಸುಮಾರು 1500 ಪ್ರಬೇಧಗಳು ಭಾರತದಲ್ಲಿವೆ. ಪ್ರತಿಯೊಂದು ಪ್ರಬೇಧವೂ ವಿಭಿನ್ನ ರುಚಿ, ಆಕಾರ ಮತ್ತು ಬಣ್ಣವನ್ನು ಹೊಂದಿರುತ್ತದೆ. ಗುಲಾಬಿ-ಕೆಂಪು, ಗುಲಾಬ್ ಖಾಸ್ ಅಥವಾ ಸಿಂಧೂರದಿಂದ ಗಿಳಿ ಕೊಕ್ಕಿನ ಆಕಾರದ ತೋತಾಪುರಿ, ರಸಪೂರಿ, ಅಲ್ಫೋನ್ಸೋ ಸೇರಿದಂತೆ ವಿಶಿಷ್ಟ ಮಾವಿನ ತಳಿಗಳು ಭಾರತೀಯ ಮಾರುಕಟ್ಟೆಗಳನ್ನು ಆಳುತ್ತಿವೆ. ಏಪ್ರಿಲ್ ಮಧ್ಯಭಾಗದಿಂದ ಆಗಸ್ಟ್‌ವರೆಗೆ ಮಾರುಕಟ್ಟೆಗಳಲ್ಲಿ ಮಾವಿನ ಹಣ್ಣುಗಳದ್ದೇ ದರ್ಬಾರ್.

ಟ್ರೆಂಡಿಂಗ್​ ಸುದ್ದಿ

ಆದರೆ ಭಾರತದ ಯಾವ ರಾಜ್ಯಗಳಲ್ಲಿ ಯಾವ್ಯಾವ ಮಾವಿನ ತಳಿಗಳನ್ನು ಬೆಳೆಯುತ್ತಾರೆ? ಅದರ ವಿಶೇಷತೆಗಳೇನು ಎಂಬುದರ ಮಾಹಿತಿ ಇಲ್ಲಿದೆ.

ಅಲ್ಫೋನ್ಸೋ- ದೇವಗಡ, ರತ್ನಗಿರಿ, ಮಹಾರಾಷ್ಟ್ರ

ಪೋರ್ಚುಗೀಸ್ ಜನರಲ್ ಮತ್ತು ಮಿಲಿಟರಿ ಪರಿಣತರಾದ ಅಫೊನ್ಸೊ ಡಿ ಅಲ್ಬುಕರ್ಕ ರ ನಂತರ ಈ ತಳಿಯ ಮಾವಿನ ಹಣ್ಣುಗಳಿಗೆ ಅಲ್ಫೋನ್ಸೋ ಎಂದು ಹೆಸರಿಡಲಾಯಿತು. ಮಹಾರಾಷ್ಟ್ರದ ದೇವಗಡ, ಸಿಂಧುದುರ್ಗ, ರಾಯಗಡ ಮತ್ತು ರತ್ನಗಿರಿ ಜಿಲ್ಲೆಗಳು ಸೇರಿದಂತೆ ಭಾರತದ ಪಶ್ಚಿಮ ಭಾಗವು ಕಲಬೆರಕೆಯಿಲ್ಲದ ಅಲ್ಫೋನ್ಸೋ ಮಾವಿನ ಕೃಷಿಗೆ ಹೆಸರುವಾಸಿಯಾಗಿದೆ. ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಅಲ್ಫೊನ್ಸೋಗಳನ್ನು ಸಾಮಾನ್ಯವಾಗಿ ʻಹಪುಸ್' ಎಂದು ಕರೆಯಲಾಗುತ್ತಿದ್ದು, ಇದು ಅತ್ಯಂತ ದುಬಾರಿ ಮಾವಿನಹಣ್ಣಿಗಳ ಪೈಕಿ ಪ್ರಮುಖವಾದುದು.

ದಶೇರಿ ಮಾವು - ಲಕ್ನೋ ಮತ್ತು ಮಲಿಯಾಬಾದ್, ಉತ್ತರ ಪ್ರದೇಶ

ದಶೇರಿ ಎಂಬುದು ರಸಭರಿತವಾದ ಮಾವಿನ ಹಣ್ಣಾಗಿದ್ದು, ಇದನ್ನು ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಮತ್ತು ನೇಪಾಳ ಮತ್ತು ಪಾಕಿಸ್ತಾನ ದೇಶಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಮಾವು ಮೊದಲು 18ನೇ ಶತಮಾನದಲ್ಲಿ ಲಕ್ನೋ ನವಾಬನ ತೋಟಗಳಲ್ಲಿ ಕಾಣಿಸಿಕೊಂಡಿತು. ದಶೇರಿ ಮಾವಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಇ, ಕಬ್ಬಿಣ ಕ್ಯಾಲ್ಸಿಯಂ ಇದರಲ್ಲಿ ಹೆಚ್ಚಾಗಿದ್ದು, ಪೊಟಾಷಿಯಂ ಗುಣವನ್ನೂ ಹೊಂದಿದೆ. ಈ ಹಣ್ಣಗಳು ಅನೇಕ ಆರೋಗ್ಯ ಪ್ರಯೋಜನ ಹೊಂದಿವೆ.

ಹಿಮ್ಸಾಗರ್ ಮತ್ತು ಕಿಶನ್ ಭೋಗ್ ಮಾವಿನಹಣ್ಣುಗಳು - ಮುರ್ಷಿದಾಬಾದ್, ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಗರವು ಹಿಮ್ಸಾಗರ್ ಮಾವಿನಹಣ್ಣುಗಳಿಗೆ ಹೆಸರು ಮಾಡಿದೆ. ಕೋಲ್ಕತ್ತಾದಿಂದ ಸುಮಾರು 230 ಕಿ.ಮೀ ದೂರದಲ್ಲಿರುವ ಮುರ್ಷಿದಾಬಾದ್ ಭಾರತದ ಪ್ರಮುಖ ಮಾವು ಉತ್ಪಾದಕ ಮತ್ತು ರಫ್ತುದಾರ ಪ್ರದೇಶವಾಗಿದೆ. ಇಲ್ಲಿ ಬೆಳೆಯುವ ಮಾವಿನ ಹಣ್ಣಿನ ರುಚಿ ಮತ್ತು ಪರಿಮಳವು ಪ್ರಪಂಚದಾದ್ಯಂತ ಹೆಸರು ಮಾಡಿದ್ದು, ಪ್ರತಿ ಮಾವಿನ ಹಣ್ಣಿನಲ್ಲಿ ನಾಲ್ಕನೇ ಮೂರು ಭಾಗವು ತಿರುಳಿದೆ.

ಸಫೇದಾ, ಬಂಗನಪಲ್ಲಿ - ಆಂಧ್ರ ಪ್ರದೇಶ

ಸಫೇದ ಮಾವಿನ ಇನ್ನೊಂದು ಜನಪ್ರಿಯ ಹೆಸರು ಬಂಗನಪಲ್ಲಿ. ಆಂಧ್ರಪ್ರದೇಶದ ಬನಗಾನಪಲ್ಲಿ ಗ್ರಾಮ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಬೆಳೆಯುವ ಈ ಮಾವು ತಳಿಗೆ ಬಂಗನಪಲ್ಲಿ ಎಂಬ ಹೆಸರು ಬಂದಿದೆ. ದಕ್ಷಿಣ ಭಾರತದಲ್ಲಿ, ಈ ಹಣ್ಣನ್ನು ಮಾವಿನಕಾಯಿಯ ರಾಜ ಎಂದು ಕರೆಯಲಾಗುತ್ತದೆ. ಗಾತ್ರದಲ್ಲಿ ದೊಡ್ಡದಾಗಿರುವ ಸಫೇಡಾ ಮಾವು ವಿಟಮಿನ್ ಎ ಮತ್ತು ಸಿ ಯಲ್ಲಿ ಸಮೃದ್ಧವಾಗಿದೆ.

ಇದನ್ನೂ ಓದಿ | ಕಲ್ಲಂಗಡಿ ಅಥವಾ ಕರ್ಬೂಜ; ಹೆಚ್ಚು ನೀರಿನಂಶ ಇರುವ ಹಣ್ಣು ಯಾವುದು, ಬೇಸಿಗೆಗೆ ಯಾವುದು ಉತ್ತಮ?

ಅಮ್ರಪಾಲಿ ಮಾವಿನಹಣ್ಣುಗಳು - ಭಾರತದಾದ್ಯಂತ

ʻಅಮ್ರಪಾಲಿʼ ಎಂಬವಳು ಬುದ್ಧನ ಅನುಯಾಯಿಗಿದ್ದು, ಬುದ್ಧನಿಗೆ ಕೊನೆಯ ದಿನಗಳಲ್ಲಿ ಮಾವನ್ನು ಕೊಟ್ಟು ಸೇವೆ ಮಾಡಿದ್ದಳು ಎಂಬುದು ಪ್ರತೀತಿ. “ಅಮ್ರಪಾಲಿ” ಮತ್ತವಳ ಮಾವಿನ ತೋಟದ ಸ್ಮರಣೆಗಾಗಿ ನವದೆಹಲಿಯ ಕೃಷಿ ಸಂಶೋಧನಾ ಸಂಸ್ಥೆಯಿಂದ 1971ರಲ್ಲಿ ಡಾ ಪಿಜಶ್ ಮೊಜುಂದಾರ್ ಎಂಬ ವಿಜ್ಞಾನಿಯಿಂದ ಬಿಡುಗಡೆಗೊಂಡ ಹೈಬ್ರಿಡ್ ತಳಿ “ಅಮ್ರಪಾಲಿ”. “ಅಮ್ರ” ಎಂದರೆ ಮಾವು ಎಂದರ್ಥ. ಪಾಲಿ ಪದವು ಎಲೆ ಅಥವಾ ಮೊಳೆಕೆ ಎನ್ನುವ ಅರ್ಥವನ್ನು ಹೊಂದಿದೆ. ಈ ಮಾವಿನ ತಳಿಯು “ದಶೆರಿ” ಮತ್ತು “ನೀಲಂ” ತಳಿಗಳ ನಡುವಿನ ಅಡ್ಡ ತಳಿ. ಇದರ ವಿಶೇಷತೆಯೆಂದರೆ ಮರ ಗಿಡ್ಡವಾಗಿದ್ದು, ಹಣ್ಣುಗಳೂ ಚಿಕ್ಕದಾಗಿದ್ದು, ಗೊಂಚಲು-ಗೊಂಚಲಾಗಿ ಬಿಡುತ್ತವೆ.

ಇಮಾಮ್ ಪಸಂದ್ ಮಾವಿನಹಣ್ಣುಗಳು - ಆಂಧ್ರ ಪ್ರದೇಶ / ತೆಲಂಗಾಣ / ತಮಿಳುನಾಡು

ʻಇಮಾಂಪಸಂದ್ʼ ತಳಿಯನ್ನೂ ಮಾವಿನ ರಾಜ ಎಂದೇ ಕರೆಯಲಾಗುತ್ತದೆ. ಆಂಧ್ರ ಪ್ರದೇಶ ಹಾಗೂ ರಾಜ್ಯದ ಆಂಧ್ರ ಗಡಿಯ ಭಾಗಗಳಲ್ಲಿ ಅತ್ಯಂತ ಪ್ರಸಿದ್ಧವಾದ ಈ ತಳಿಯು ಮೂಲ ಆಲ್ಫನ್ಸೊ ಬಗೆಯದ್ದು ಎನ್ನಲಾಗುತ್ತದೆ. ಇದನ್ನು ಮೂಲದಲ್ಲಿ ಕೇರಳ ರಾಜ್ಯದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು ಮೊಘಲ್ ಚಕ್ರವರ್ತಿ ಹುಮಾಯೂನ್ ಸ್ಮರಣೆಯಲ್ಲಿ ಹೆಸರಿಸಿದ್ದೆಂದು ಹೇಳಲಾಗುತ್ತದೆ. ಹಿಮಾಯತ್ ಪಸಂದ್, ಹುಮಾಯೂನ್ ಪಸಂದ್ ಎಂಬ ಹೆಸರುಗಳಿಂದಲೂ ಇದು ಪ್ರಸಿದ್ಧವಾಗಿದೆ. ಇದು ರುಚಿಯಲ್ಲಿ ಸಾಕಷ್ಟು ಹೆಸರು ಮಾಡಿದ ತಳಿ.

ತೋತಾಪುರಿ ಮಾವಿನಹಣ್ಣು - ಕರ್ನಾಟಕ

ಉದ್ದ ಆಕೃತಿಯಲ್ಲಿರುವ ಈ ಮಾವು ಹುಳಿ-ಸಿಹಿಯ ಮಿಶ್ರಣ. ಕರ್ನಾಟಕ, ಆಂಧ್ರ ಪದೇಶದ ಹಲವೆಡೆ ಹೆಚ್ಚಾಗಿ ಬೆಳೆಯಲಾಗುತ್ತದೆ. ಹಣ್ಣಿಗಿಂತ ಕಾಯಿ ಇರುವಾಗಲೇ ಇದು ಬಾಯಿ ರುಚಿ ಮೂಡಿಸುತ್ತದೆ. ಇದು ದೊಡ್ಡ ಗಾತ್ರದ ಮತ್ತು ಗಿಳಿಯಂತೆ ಕಾಣುವ ವಿಶಿಷ್ಟ ಮಾವಿನ ತಳಿಯಾಗಿದೆ. ಇದು ಮೊನಚಾದ ತುದಿ ಮತ್ತು ದಪ್ಪ ಸಿಪ್ಪೆಯನ್ನು ಹೊಂದಿದೆ.

ನೀಲಂ ಮಾವಿನ ಹಣ್ಣುಗಳು - ಆಂಧ್ರ ಪ್ರದೇಶ

ನೀಲಂ ಮಾವಿನ ತಳಿಯನ್ನು ಭಾರತದ ಬಹುತೇಕ ಎಲ್ಲಾ ಭಾಗಗಳಲ್ಲಿ ಬೆಳೆಸಲಾಗುತ್ತದೆಯಾದರೂ ಆಂಧ್ರಪ್ರದೇಶದಲ್ಲಿ ಬೆಳೆಯುವ ನೀಲಂ ಹಣ್ಣುಗಳು ಸಾಕಷ್ಟು ಹೆಸರು ಮಾಡಿದೆ. ಭಾರತದ ಮಾರುಕಟ್ಟೆಗಳಲ್ಲಿ ತಡವಾಗಿ ಬರುವ ಹಣ್ಣಿನ ತಳಿ ಇದಾಗಿದ್ದರೂ ಬಹು ಬೇಡಿಕೆಯನ್ನು ಹೊಂದಿದೆ.

ರಸಪುರಿ ಮಾವಿನಹಣ್ಣು - ಕರ್ನಾಟಕ

ಕರ್ನಾಟಕದ ಜನಪ್ರಿಯ ಮಾವಿನ ತಳಿ “ರಸಪುರಿ”. ಅವುಗಳನ್ನು ಸಿಹಿ ಮಾವು ಅಥವಾ ಪೈರಿ ಮಾವು ಎಂದೂ ಕರೆಯುತ್ತಾರೆ. ರಸಪುರಿ ಮಾವುಗಳನ್ನು ಮುಖ್ಯವಾಗಿ ಕರ್ನಾಟಕ, ಭಾರತದಲ್ಲಿ, ವಿಶೇಷವಾಗಿ ಮೈಸೂರು ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಐಸ್‌ಕ್ರೀಮ್, ಮೊಸರು, ಸ್ಮೂಥಿಗಳು, ಜ್ಯೂಸ್, ಜಾಮ್ ಮತ್ತು ಜೆಲ್ಲಿಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಕೇಸರ್ ಮಾವು - ಜುನಾಗಢ್, ಗುಜರಾತ್

ಕೇಸರ್ ಮಾವಿನ ಹಣ್ಣುಗಳನ್ನು ʻಮಾವಿನ ರಾಣಿ' ಎಂದು ಕರೆಯಲಾಗುತ್ತದೆ. ಗುಜರಾತ್‌ನ ಜುನಾಗಢ್‌ನ ಗಿರ್ನಾರ್ ಬೆಟ್ಟಗಳು ಕೇಸರ್ ಮಾವಿನ ಹಣ್ಣುಗಳಿಗೆ ಖ್ಯಾತಿ ಪಡೆದಿದೆ.

ಬಾದಾಮಿ ಮಾವು - ಉತ್ತರ ಕರ್ನಾಟಕ

ಕರ್ನಾಟಕ ರಾಜ್ಯದ ಅತ್ಯಂತ ಜನಪ್ರಿಯ ಮಾವಿನ ತಳಿಗಳ ಪೈಕಿ ಬಾದಾಮಿ ಪ್ರಮುಖವಾದುದು. ಇದನ್ನು ಹೆಚ್ಚಾಗಿ ರಾಜ್ಯದ ಸ್ವಂತ ಅಲ್ಫೋನ್ಸೋ ಎಂದು ಕರೆಯಲಾಗುತ್ತದೆ. ಈ ಮಾವಿನ ತಳಿಯ ರುಚಿ ಮತ್ತು ವಿನ್ಯಾಸವು ಅಲ್ಫೋನ್ಸೋಗೆ ಹೋಲುತ್ತದೆ.

ಚೌಸಾ ಮಾವಿನಹಣ್ಣು - ಹರ್ದೋಯ್‌, ಉತ್ತರ ಪ್ರದೇಶ

ಉತ್ತರ ಪ್ರದೇಶದ ಹರ್ದೋಯ್‌ ಭಾಗದಲ್ಲಿ ಚೌಸಾ ಮಾವಿನಹಣ್ಣುಗಳನ್ನು ಹೆಚ್ಚು ಬೆಳೆಯಲಾಗುತ್ತದೆ. 16ನೇ ಶತಮಾನದಲ್ಲಿ ಶೇರ್ ಶಾ ಸೂರಿ ಎಂಬಾಂತ ಇದನ್ನು ಇಲ್ಲಿ ಪರಿಚಯಿಸಿದ್ದನಂತೆ.

ಬಾಂಬೆ ಗ್ರೀನ್ ಮಾವು - ಪಂಜಾಬ್

ಮಾವು-ಪ್ರೇಮಿಗಳಿಗೆ ನೆಚ್ಚಿನ ತಾಣ ಪಂಜಾಬ್. ಇಲ್ಲಿ ಬೆಳೆಯುವ ಬಾಂಬೆ ಗ್ರೀನ್ ಮಾವು ಹಸಿರು ಬಣ್ಣದ ಸಿಪ್ಪೆಯಾದರೂ ಕಿತ್ತಳೆ ಬಣ್ಣದ ರುಚಿಕರ ತಿರುಳಿನ ಕಾರಣಕ್ಕೆ ಎಲ್ಲರ ಮನಗೆದ್ದಿದೆ. ಈ ಮಾವಿನ ತಳಿಯನ್ನು ಮಾಲ್ಡಾ, ಪೈರಿ, ರಸಪುರಿ ಮತ್ತು ಪೀಟರ್ಸ್ ಮಾವು ಎಂದೂ ಕರೆಯುತ್ತಾರೆ.

ಲಾಂಗ್ರಾ ಮಾವು - ವಾರಣಾಸಿ, ಉತ್ತರ ಪ್ರದೇಶ

ಉತ್ತರ ಪ್ರದೇಶದ ವಾರಣಾಸಿ ಮತ್ತು ಬಿಹಾರದ ಹಲವೆಡೆಗಳಲ್ಲಿ ಬೆಳೆಯುವ ಲಾಂಗ್ರಾ ಮಾವಿನ ತಳಿಯನ್ನು ಬಂಗಾಳದಲ್ಲಿ ಮಾಲ್ದಾ ಎಂದು ಕರೆಯುತ್ತಾರೆ. ಜುಲೈನಿಂದ ಆಗಸ್ಟ್ವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಹಣ್ಣುಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಮತ್ತು ಮಲಬದ್ದತೆ ನಿವಾರಣೆ ಮಾಡುವ ಗುಣವನ್ನು ಹೊಂದಿದೆ.

ಮಾಲ್ಗೋವಾ/ಮುಲ್ಗೋಬಾ ಮಾವಿನ ಹಣ್ಣುಗಳು - ಸೇಲಂ, ತಮಿಳುನಾಡು

ಮಾಲ್ಗೋವಾ ಅಥವಾ ಮುಲ್ಗೋಬ ಮಾವಿನಹಣ್ಣುಗಳು ಮೂಲತಃ ತಮಿಳುನಾಡಿನ ಹಣ್ಣು. ಬಹುಶಃ ಇತರೇ ಎಲ್ಲಾ ತಳಿಗಳಿಗಿಂತಾ ದೊಡ್ಡ ಹಣ್ಣು ಮಲಗೊವಾ. ಪರಿಮಳ ಮತ್ತು ಸ್ವಾದಕ್ಕೆ ಹೆಸರು ಮಾಡಿದೆ. ಇದನ್ನು ಸಾಮಾನ್ಯವಾಗಿ ವಿಶ್ವದ ಅತ್ಯುತ್ತಮ ಮಾವಿನ ತಳಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಲಕ್ಷ್ಮಣಭೋಗ್ ಮಾವು - ಮಾಲ್ಡಾ, ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಬೆಳೆಯುವ ಲಕ್ಷ್ಮಣಭೋಗ್ ಮಾವು ಸಾಮಾನ್ಯವಾಗಿ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಲಭ್ಯವಿರುತ್ತದೆ. ಇದು ಸಿಹಿ, ಪರಿಮಳಯುಕ್ತ ಸುವಾಸನೆ ಮತ್ತು ರಸಭರಿತವಾದ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. ಮಾವಿನಹಣ್ಣುಗಳು ಸಾಮಾನ್ಯವಾಗಿ ಮಧ್ಯಮ ಗಾತ್ರದ ಮತ್ತು ಅಂಡಾಕಾರದಲ್ಲಿ ಲಭ್ಯವಿದೆ.

ಫಜ್ಲಿ ಮಾವಿನ ಹಣ್ಣುಗಳು - ಪಶ್ಚಿಮ ಬಂಗಾಳ

ಬಾಂಗ್ಲಾದೇಶ ಹಾಗೂ ಪಶ್ಚಿಮ ಬಂಗಾಳದ ಮಾಲ್ಡಾ ನಗರದಲ್ಲಿ ಫಾಜ್ಲಿ ಮಾವುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಉಳಿದ ಮಾವುಗಳಿಗಿಂತ ತಡವಾಗಿ ಮಾರುಕಟ್ಟೆಗೆ ಬರುವ ಮಾವಿನ ಹಣ್ಣಿದು.

ಮಂಕುರಾದ್ ಮಾವಿನಹಣ್ಣು - ಗೋವಾ

ಮಾಲ್ಕೊರಾಡೊ, ಕುರಾಡ್ ಅಥವಾ ಕೊರಾಡೊ ಮಾವಿನಹಣ್ಣು ಎಂದೂ ಕರೆಯಲ್ಪಡುವ ಮಂಕುರಾಡ್ ಮಾವಿನಹಣ್ಣುಗಳು ಭಾರತದ ಗೋವಾದಲ್ಲಿ ಜನಪ್ರಿಯ ವಿಧವಾಗಿದೆ. ನಾರಿನ ಅಂಶ ಕಡಿಮೆ ಇರುವ ಈ ಹಣ್ಣುಗಳ ತಿರುಳು ರಸಭರಿತವಾಗಿರುತ್ತದೆ.

ಪಹೇರಿ/ಪೈರಿ ಮಾವಿನಹಣ್ಣು - ಗುಜರಾತ್

ಪೈರಿ ಮಾವನ್ನು ಪಯಾರಿ ಮಾವು ಎಂದೂ ಕರೆಯುತ್ತಾರೆ. ಇದು ಮಹಾರಾಷ್ಟ್ರದ ಕೊಂಕಣದಿಂದ ಬಂದ ಮಾವಿನ ವೈವಿಧ್ಯವಾಗಿದ್ದು, ರಸಭರಿತವಾದ, ನವಿರಾದ ರುಚಿಗೆ ಹೆಸರುವಾಸಿಯಾಗಿದೆ. ಪೈರಿ ಮಾವುಗಳು ಋತುವಿನ ಆರಂಭದಲ್ಲಿ ಮಾರುಕಟ್ಟೆಗೆ ಬರುವ ಮೊದಲ ಮಾವಿನಹಣ್ಣುಗಳಲ್ಲಿ ಒಂದಾಗಿದೆ ಮತ್ತು ಭಾರತದ ಪಶ್ಚಿಮ ರಾಜ್ಯಗಳಲ್ಲಿ ಆಮ್ ರಸ್‌ಗೆ ಜನಪ್ರಿಯವಾಗಿದೆ.

ಮಲ್ಲಿಕಾ ಮಾವಿನ ಹಣ್ಣುಗಳು - ಭಾರತದಾದ್ಯಂತ

ಮಲ್ಲಿಕಾ ಮಾವಿನಹಣ್ಣುಗಳು ನೀಲಂ ಮತ್ತು ದಶೇರಿ ಮಾವಿನಹಣ್ಣಿನ ಹೈಬ್ರಿಡ್ ಆಗಿದೆ. ಆರಂಭದಲ್ಲಿ ತುಂಬಾ ಜನಪ್ರಿಯವಾಗಿ ಹೊರ ಬಂದ ಈ ತಳಿ ರುಚಿಯಿಂದಲೇ ಎಲ್ಲರ ಮನಗೆದ್ದಿತ್ತು. ಅತ್ಯಂತ ಸಿಹಿಯಾದ ಇದನ್ನು ಜೇನುತುಪ್ಪದ ಸಿಹಿಗೆ ಹೋಲಿಸುವುದುಂಟು. ಈಗಲೂ ರುಚಿ ಮತ್ತು ಪರಿಮಳವನ್ನು ಹೊಂದಿದ್ದರೂ ಮಾರುಕಟ್ಟೆ ಹಾಗೂ ರೈತರನ್ನು ಹೆಚ್ಚು ಆಕರ್ಷಿಸಿಲ್ಲ.

ಗುಲಾಬ್ ಖಾಸ್ ಮಾವಿನ ಹಣ್ಣುಗಳು - ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ

ಹೆಸರೇ ಸೂಚಿಸುವಂತೆ, ಗುಲಾಬ್ ಖಾಸ್ ಮಾವು ಒಂದು ರುಚಿಕರವಾದ ಹಣ್ಣಾಗಿದ್ದು, ಇದು ಗುಲಾಬಿಯ ಕಂಪನ್ನು ಬೀರುತ್ತದೆ. ಈ ಹಣ್ಣು ಕೆಂಪು ಅಥವಾ ನಸು ಕೆಂಪು ಬಣ್ಣದ ಸಿಪ್ಪೆಯನ್ನು ಹೊಂದಿದ್ದು, ನಾರು ರಹಿತ ತಿರುಳನ್ನು ಹೊಂದಿದೆ.

ವನರಾಜ್ ಮಾವಿನಹಣ್ಣು - ಗುಜರಾತ್

ವನರಾಜ್ ಮಾವಿನಹಣ್ಣುಗಳು ಅಪರೂಪದ ಮಾವಿನ ತಳಿಯಾಗಿದ್ದು, ಗುಜರಾತ್‌ನ ವಡೋದರಾ ನಗರದಲ್ಲಿ ಹೆಚ್ಚಾಗಿ ಲಭ್ಯವಿದೆ. ಹೆಚ್ಚಿನ ಬೇಡಿಕೆಯಿಂದಾಗಿ ಈ ಹಣ್ಣಿನ ಬೆಲೆ ಸಾಮಾನ್ಯವಾಗಿ ಸರಾಸರಿಗಿಂತ ಸ್ವಲ್ಪ ಹೆಚ್ಚಾಗಿದೆ. ಮೊಟ್ಟೆಯ ಆಕೃತಿಯನ್ನು ಹೋಲುವ ವನರಾಜ್‌ ಮಾವಿನ ಹಣ್ಣುಗಳು ಸಿಹಿ ಹಾಗೂ ಹುಳಿ ರುಚಿಯಿಂದ ಕೂಡಿರುತ್ತದೆ.

ಕಿಳಿಚುಂಡನ್ ಮಾವು - ಕೇರಳ

ಕಿಳಿಚುಂಡನ್ ಮಾವಿನಹಣ್ಣುಗಳು ಗಾತ್ರದಲ್ಲಿ ತುಲನಾತ್ಮಕವಾಗಿ ದೊಡ್ಡದಾಗಿದೆ ಮತ್ತು ಕೇರಳದ ವಿವಿಧ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಾಟವಾಗುತ್ತವೆ. ಕಿಳಿಚುಂಡನ್‌ ಎಂದರೆ ಮಲಯಾಳಂ ಭಾಷೆಯಲ್ಲಿ ಗಿಳಿಯ ಕೊಕ್ಕನ್ನು ಹೋಲುವುದು ಎಂದರ್ಥವಿದ್ದು, ಈ ಮಾವಿನ ತಳಿಗೆ ಅದೇ ಹೆಸರು ಬಂದಿದೆ.

ರುಮಾನಿ ಮಾವಿನಹಣ್ಣು - ಚೆನ್ನೈ

ತಮಿಳುನಾಡು ಮತ್ತು ರಾಜಧಾನಿ ಚೆನ್ನೈನ ಕೆಲವು ಪ್ರದೇಶಗಳಲ್ಲಿ ಹೇರಳವಾಗಿ ಲಭ್ಯವಾಗುವ ರುಮಾನಿ ಮಾವಿನ ಹಣ್ಣಿನಲ್ಲಿ ಕ್ಯಾರೊಟಿನಾಯ್ಡ್‌ಗಳು ಸಮೃದ್ಧವಾಗಿದೆ. ಇದು ವಿಟಮಿನ್ ಎ ಮತ್ತು ವಿಟಮಿನ್ ಇ ಯಿಂದ ತುಂಬಿಕೊಂಡಿದ್ದು ಆರೋಗ್ಯಕ್ಕೆ ಉತ್ತಮವಾದುದು.

ಒಟ್ಟಿನಲ್ಲಿ ಭಾರತವು ಮಾವು ಬೆಳೆಯಲು ಉತ್ತಮ ಹವಾಮಾನವನ್ನು ಹೊಂದಿದ್ದು, ಹೊಸ ಪ್ರಬೇಧಗಳ ಹುಟ್ಟಿಗೆ ಕಾರಣವಾಗುತ್ತಲೇ ಬಂದಿದೆ. ವಿಭಿನ್ನ ತಳಿಯ, ವಿಭಿನ್ನ ರುಚಿಯ ಮಾವಿನ ಹಣ್ಣುಗಳನ್ನು ತಿಳಿದುಕೊಂಡ ಮೇಲೆ, ಇದನ್ನು ನೀವೂ ಒಮ್ಮೆ ರುಚಿ ನೋಡದಿದ್ದರೆ ಹೇಗೇ?