ಚರ್ಮದ ಆರೋಗ್ಯದಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದವರೆಗೆ; ಸೌತೆಕಾಯಿಯ ಪ್ರಯೋಜನ ಹಲವು
ಸೌತೆಕಾಯಿ ಬೇಸಿಗೆಯ ಸೂಪರ್ ಫುಡ್ ಅನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಕೇವಲ ಬೇಸಿಗೆಯ ಬಿಸಿಲಿನ ದಾಹವನ್ನು ನೀಗಿಸುವುದಷ್ಟೇ ಅಲ್ಲ, ಇದು ಚರ್ಮದ ಆರೋಗ್ಯದಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದವರೆಗೆ ಹಲವು ಪ್ರಯೋಜನ ಒದಗಿಸುತ್ತದೆ.

ಬೇಸಿಗೆಯ ಬಿಸಿಲಿನ ತಾಪಮಾನ ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಿದೆ. ಜನರು ಸೂರ್ಯನ ಶಾಖದಿಂದ ಬಳಲುವಂತಾಗಿದೆ. ಇಂತಹ ಸಮಯದಲ್ಲಿ ಪ್ರತಿಯೊಬ್ಬರೂ ದೇಹಕ್ಕೆ ತಂಪು ನೀಡುವ, ಆರೋಗ್ಯ ಕಾಪಾಡುವ ಆಹಾರಗಳ ಮೊರೆ ಹೋಗುವುದು ಸಹಜ. ಭಾರತದಲ್ಲಿ ವರ್ಷಪೂರ್ತಿ ಸಿಗುವ ತರಕಾರಿ ಎಂದರೆ ಅದು ಸೌತೆಕಾಯಿ. ಯಾವುದೇ ಋತುಮಾನವಿರಲಿ ದೇಹವನ್ನು ಹೈಡ್ರೇಟ್ ಆಗಿಡಬೇಕೆಂದರೆ ಆಹಾರದಲ್ಲಿ ಸೌತೆಕಾಯಿಯನ್ನು ಸೇರಿಸಿಕೊಳ್ಳಲೇಬೇಕು. ಅದರಲ್ಲೂ ಬೇಸಿಗೆಯ ದಿನಗಳಲ್ಲಂತೂ ಸೌತೆಕಾಯಿ ದೇಹವನ್ನು ತಂಪಾಗಿಡುವ ಆಹಾರದ ಸಾಲಿಗೆ ಸೇರಿದೆ. ಆದರೆ ಸೌತೆಕಾಯಿ ಕೇವಲ ನಿರ್ಜಲೀಕರಣವನ್ನಷ್ಟೇ ದೂರ ಮಾಡುತ್ತದೆಯಾ? ಇಲ್ಲ, ಇದು ದೇಹದ ಒಟ್ಟಾರೆ ಆರೋಗ್ಯವನ್ನು ಸುಧಾರಿಸುವ ಕೆಲಸವನ್ನು ಸಹ ಮಾಡುತ್ತದೆ. ಏಕೆಂದರೆ ಸೌತೆಕಾಯಿ ಪೋಷಕಾಂಶಗಳ ಆಗರವಾಗಿದೆ. ಕೆಲವು ಅಧ್ಯಯನಗಳ ಪ್ರಕಾರ, ಪ್ರತಿದಿನ ಸೌತೆಕಾಯಿ ತಿನ್ನುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದಾಗಿದೆ. ದಿನನಿತ್ಯದ ಸೌತೆಕಾಯಿ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಸೌತೆಕಾಯಿ ತಿನ್ನುವುದರ ಪ್ರಯೋಜನಗಳು
ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ: ಸೌತೆಕಾಯಿಯಲ್ಲಿ ನಾರಿನಾಂಶವು ಸಮೃದ್ಧವಾಗಿದೆ. ಇದು ಮಲಬದ್ಧತೆ ಹಾಗೂ ಅಜೀರ್ಣದಿಂದ ಬಳಲುತ್ತಿರುವವರಿಗೆ ಉತ್ತಮ ಆಹಾರವಾಗಿದೆ. ಆರೋಗ್ಯಕರ ಜೀವನಶೈಲಿ ಅನುಸರಿಸಲು ಪ್ರಯತ್ನಿಸುತ್ತಿರುವವರಿಗೆ, ತೂಕ ನಿಯಂತ್ರಣ ಮಾಡಿಕೊಳ್ಳಲು ಬಯಸುತ್ತಿರುವವರಿಗೆ ಮತ್ತು ಪಿಸಿಒಡಿ ಅಥವಾ ಪಿಸಿಒಎಸ್ ಅನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತಿರುವ ಮಹಿಳೆಯರಿಗೆ ಇದು ಬಹಳ ಪ್ರಯೋಜನಕಾರಿಯಾಗಿದೆ. ಸೌತೆಕಾಯಿಯಲ್ಲಿರುವ ನೀರು ಮತ್ತು ನಾರು ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಜೊತೆಗೆ ಆರೋಗ್ಯಕರ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ.
ಚರ್ಮದ ಆರೋಗ್ಯ ಕಾಪಾಡುತ್ತದೆ: ಸೌತೆಕಾಯಿಯನ್ನು ಕತ್ತರಿಸಿ ಕಣ್ಣುಗಳ ಮೇಲೆ ಇರಿಸುವುದರಿಂದ ಪಿಗ್ಮೆಂಟೇಷನ್ ಅನ್ನು ತೊಡೆದುಹಾಕಬಹುದಾಗಿದೆ. ಇದು ಕಣ್ಣಿಗೆ ಆರೋಗ್ಯಕರ ಹೊಳಪನ್ನು ನೀಡುವುದರಿಂದ ಸ್ಪಾಗಳಲ್ಲಿ ಇದನ್ನು ಬಳಸಲಾಗುತ್ತದೆ. ಸೌತೆಕಾಯಿಯು ಸೌಂದರ್ಯ ಚಿಕಿತ್ಸೆಗಳಲ್ಲಿ ಬಳಸುತ್ತಿದ್ದರೂ, ಅದನ್ನು ಸೇವಿಸುವುದರಿಂದ ನಿಮ್ಮ ಎಪಿಡರ್ಮಲ್ ಪದರದ ನೈಸರ್ಗಿಕ ಹೊಳಪನ್ನು ಮರಳಿ ತರಲು ಸಹಾಯ ಮಾಡುತ್ತದೆ. ವರದಿಯೊಂದರ ಪ್ರಕಾರ, ಇದು ಕುಕುರ್ಬಿಟಾಸಿನ್, ಓರಿಯೆಂಟಿನ್, ಕುಕುಮೆಗಾಸ್ಪಿಗೇನ್ಸ್ 1 ಮತ್ತು 2 ಮತ್ತು ಇನ್ನೂ ಹೆಚ್ಚಿನವುಗಳ ಉತ್ತಮ ಮೂಲವಾಗಿರುವುದರಿಂದ ಇದು ದೇಹವನ್ನು ತಂಪಾಗಿಸುವ ಪರಿಣಾಮವನ್ನು ಹೊಂದಿವೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.
ತೂಕ ನಿರ್ವಹಣೆಗೆ ಸಹಕಾರಿ: ನಾರಿನಂಶವಿರುವ ಹಾಗೂ ತೇವಾಂಶ ಪೂರೈಸುವ ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನುವುದರಿಂದ ತೂಕ ನಿರ್ವಹಣೆಯನ್ನು ಸುಲಭವಾಗಿ ಮಾಡಬಹುದಾಗಿದೆ. ಸೌತೆಕಾಯಿಯು ಈ ಎರಡೂ ಅಂಶವನ್ನು ಹೊಂದಿರುತ್ತದೆ. ಅಷ್ಟೇ ಅಲ್ಲದೇ ಇದು ಕಡಿಮೆ ಪ್ರಮಾಣದ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಹೀಗಾಗಿ, ಕ್ಯಾಲೊರಿ ಸೇವನೆಯನ್ನು ಹೆಚ್ಚಿಸದೆಯೇ, ನೀವು ಆರೋಗ್ಯಕರ ಆಹಾರವನ್ನು ಸೇವಿಸಲು ಬಯಸಿದರೆ ಇದು ಉತ್ತಮ ಆಯ್ಕೆಯಾಗಿದೆ. ಸೌತೆಕಾಯಿ ಕಡುಬಯಕೆಗಳನ್ನು ಕಡಿಮೆ ಮಾಡುವ ಮೂಲಕ ಪದೇ ಪದೇ ತಿನ್ನುವುದನ್ನು ತಪ್ಪಿಸುತ್ತದೆ. ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದರಿಂದ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಅನಾರೋಗ್ಯಕರ ತಿಂಡಿಗಳು ಮತ್ತು ಫಾಸ್ಟ್ ಫುಡ್‌ಗಳ ಸೇವನೆಯನ್ನು ಕ್ರಮೇಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪೋಷಕಾಂಶಗಳ ಆಗರ: ಹೆಚ್ಚಿನ ಪ್ರಮಾಣದ ನೀರಿನಂಶ ಹೊಂದಿರುವುದರ ಜೊತೆಗೆ ಸೌತೆಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿವೆ. ಇದು ಉತ್ಕರ್ಷಣ ನಿರೋಧಕಗಳ ಮೂಲವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಸೋಂಕು ಮತ್ತು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಪೊಟ್ಯಾಸಿಯಮ್, ವಿಟಮಿನ್ ಬಿ, ಮ್ಯಾಂಗನೀಸ್ ಮತ್ತು ಮೆಗ್ನಿಸಿಯಮ್‍ಗಳಂತಹ ಪೋಷಕಾಂಶಗಳನ್ನು ಹೊಂದಿರುವುದರಿಂದ ಯಕೃತ್ತು, ಹೃದಯ ಮತ್ತು ಮೂತ್ರಪಿಂಡಗಳ ಆರೋಗ್ಯಕರ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ.
ಹೃದಯದ ಆರೋಗ್ಯವನ್ನು ಹೆಚ್ಚಿಸಲು ಸಹಕಾರಿ: ಸೌತೆಕಾಯಿಯನ್ನು ತಿನ್ನುವುದರಿಂದ ಕರುಳಿನ ಆರೋಗ್ಯ ಮತ್ತು ಹೃದಯದ ಆರೋಗ್ಯವನ್ನು ಹೆಚ್ಚಿಸಬಹುದು ಎಂದು ಕೆಲವು ಅಧ್ಯಯನಗಳಿಂದ ತಿಳಿದು ಬಂದಿದೆ. ಇದನ್ನು ಆಹಾರದಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಸೇರಿಸಿ ತಿನ್ನುವುದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಆಹಾರದಲ್ಲಿ ವಿವಿಧ ಪದಾರ್ಥಗಳ ಸಮತೋಲನವನ್ನು ಸಾಧಿಸಲು ದ್ರಾಕ್ಷಿ, ಕಿತ್ತಳೆ ಮತ್ತು ಇತರ ಸಿಟ್ರಸ್ ಹಣ್ಣುಗಳು ಮತ್ತು ಸೊಪ್ಪು ತರಕಾರಿಗಳೊಂದಿಗೆ ಇದನ್ನು ಸೇವಿಸಬಹುದು.
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ: ಹಲವಾರು ಅಧ್ಯಯನಗಳು ಮತ್ತು ಪ್ರಯೋಗಗಳಿಂದ ತಿಳಿದು ಬಂದ ಅಂಶವೆಂದರೆ ಫೈಬರ್-ಭರಿತ ಪದಾರ್ಥಗಳು ರಕ್ತದಲ್ಲಿನ ಸಕ್ಕರೆ ಮಟ್ಟದ ತೀವ್ರ ಏರಿಕೆಯನ್ನು ತಡೆಯುತ್ತದೆ. ಮಧುಮೇಹಿಗಳಿಗೆ ಸೌತೆಕಾಯಿ ರಕ್ಷಾಕವಚದಂತೆ ಕಾರ್ಯನಿರ್ವಹಿಸುತ್ತದೆ. ಇತರ ತಿರುಳಿನ ಹಣ್ಣುಗಳಿಗಿಂತ ಭಿನ್ನವಾಗಿರುವ, ಇದು ಹೆಚ್ಚಿನ ಪ್ರಮಾಣದ ಫ್ರಕ್ಟೋಸ್ ಅನ್ನು ಹೊಂದಿರುವುದಿಲ್ಲ. ಇದರಲ್ಲಿ ಕಂಡುಬರುವ ಕೆಲವು ಸಂಯುಕ್ತಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ.