ಕೊಲೆಸ್ಟ್ರಾಲ್ ನಿಯಂತ್ರಣದಿಂದ ಜೀರ್ಣಕ್ರಿಯೆ ಸುಧಾರಿಸುವವರೆಗೆ; ಬಾಯಿಚಪ್ಪರಿಸಿಕೊಂಡು ಸವಿಯುವ ಮಾವಿನಹಣ್ಣಿನಿಂದ ಇದೆ ಇಷ್ಟೆಲ್ಲಾ ಪ್ರಯೋಜನ
ಹಣ್ಣುಗಳ ರಾಜ ಎಂದು ಖ್ಯಾತಿ ಪಡೆದ ಮಾವಿನ ಹಣ್ಣು ರುಚಿಗಷ್ಟೇ ಅಲ್ಲ ಆರೋಗ್ಯಕ್ಕೂ ಉತ್ತಮವಾಗಿದೆ. ಕೂದಲಿನ ಆರೋಗ್ಯ ಹೆಚ್ಚಿಸುವುದರಿಂದ ಹಿಡಿದು ಜೀರ್ಣಕ್ರಿಯೆವರೆಗೆ ಮಾವು ಏನೆಲ್ಲಾ ಪ್ರಯೋಜನ ನೀಡುತ್ತದೆ ಎನ್ನುವ ವಿವರ ಇಲ್ಲಿದೆ. (ಬರಹ: ಅರ್ಚನಾ ವಿ. ಭಟ್)

ಭಾರತದಲ್ಲಿ ಬೇಸಿಗೆ ಎಂದ ತಕ್ಷಣ ಥಟ್ ಅಂತ ನೆನಪಾಗುವುದು ಮಾವು. ಹಸಿರು, ಹಳದಿ ಬಣ್ಣಗಳಿಂದ ಕೂಡಿದ ಮಾವು ಮಾರುಕಟ್ಟೆಗಳಿಗೆ ಬರುತ್ತಿದ್ದಂತೆ ಇದು ಬೇಸಿಗೆ ಕಾಲವೇ ಹೌದು ಎಂದು ಖಚಿತವಾಗಿಬಿಡುತ್ತದೆ. ಭಾರತದ ಬೇಸಿಗೆಗೂ, ಹಣ್ಣುಗಳ ರಾಜ ಮಾವಿಗೂ ಅವಿನಾಭಾವ ಸಂಬಂಧವಿದೆ. ಭಾರತ ದೇಶ ಪ್ರತಿ ವರ್ಷ 100 ಕ್ಕೂ ಹೆಚ್ಚು ಪ್ರಬೇಧದ ಮಾವಿನ ಹಣ್ಣುಗಳನ್ನು ಉತ್ಪಾದಿಸುತ್ತದೆ. ಗಾಢ ಸಿಹಿ, ಸ್ವಲ್ಪ ಹುಳಿ ರುಚಿ ಹೊಂದಿರುವ ಮಾವು ನಮ್ಮ ಸಂಸ್ಕೃತಿಯ ಭಾಗವಾಗಿ ಹೆಸರುವಾಸಿಯಾಗಿದೆ. ರುಚಿಯಾದ ಮಾವಿನ ಹಣ್ಣನ್ನು ‘ಸಾಕಪ್ಪ ಎಂಥ ಬಿಸಿಲು’ ಅನ್ನುತ್ತಲೇ ಊಟದ ನಂತರ ಸವಿಯದೇ ಇದ್ದರೆ ಬೇಸಿಗೆಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ.
ವಾಸ್ತವವೇನೆಂದರೆ ಬೇಸಿಗೆಯ ಬೆಳಗಿನ ದಿನಗಳು ಪ್ರಾರಂಭವಾಗುವುದೇ ಮಾವಿನ ಹಣ್ಣಿನ ಮಿಲ್ಕ್ ಶೇಕ್ನೊಂದಿಗೆ. ಮಾವಿನ ಹಣ್ಣಿಗೆ ಸ್ವಲ್ಪ ಸಕ್ಕರೆ ಮತ್ತು ಹಾಲು ಸೇರಿಸಿ ತಯಾರಿಸುವ ರುಚಿಯಾದ ಪಾನೀಯ ಇದಾಗಿದೆ. ಇದಷ್ಟೇ ಅಲ್ಲದೇ ಈ ಸಮಯದಲ್ಲಿ ಮಾವಿನ ಹಣ್ಣು ಪ್ರೀತಿ, ಸ್ನೇಹದ ದ್ಯೋತಕವಾಗಿಯೂ ಹೆಸರುಗಳಿಸಿದೆ. ಬೇಸಿಗೆಯಲ್ಲಿ ಪ್ರೀತಿಪಾತ್ರರ ಮನೆಗೆ ಭೇಟಿ ನೀಡುವುದಿದ್ದರೆ ಕೈಯಲ್ಲಿ ಮಾವಿನ ಹಣ್ಣಿನ ಚೀಲ ಹಿಡಿದೇ ಸಾಗುತ್ತಾರೆ. ಅಷ್ಟೊಂದು ಪ್ರೀತಿ ಮಾವಿನ ಹಣ್ಣಿನ ಮೇಲಿದೆ. ಬೇಸಿಗೆಯಲ್ಲಿ ಮಾತ್ರ ಸಿಗುವ ಈ ಮಾವಿನ ಹಣ್ಣಿನಿಂದ ಅನೇಕ ಆರೋಗ್ಯ ಪ್ರಯೋಜನಗಳೂ ಇವೆ. ನಿಮ್ಮ ದೇಹದ ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸುವ ಕ್ಷಮತೆ ಈ ಹಣ್ಣಿಗಿದೆ. ಬೇಸಿಗೆಯಲ್ಲಿ ಬಾಯಿಚಪ್ಪರಿಸಿಕೊಂಡು ಸವಿಯುವ ಮಾವಿನ ಹಣ್ಣಿನಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ನೋಡೋಣ.
ಉತ್ಕರ್ಷಣ ನಿರೋಧಕ
ಮಾವಿನ ಹಣ್ಣಿನಲ್ಲಿ ಅಧಿಕ ಉತ್ಕರ್ಷಣ ನಿರೋಧಕಗಳಿವೆ ಎಂದು 2001ರಲ್ಲಿ ನ್ಯೂಟ್ರಿಯೆಂಟ್ಸ್ ನಲ್ಲಿ ಪ್ರಕಟವಾದ ಮತ್ತು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ನಲ್ಲಿ ಉಲ್ಲೇಖಿಸಲಾದ ಅಧ್ಯಯನದಿಂದ ಸಾಬೀತಾಗಿದೆ. ಮಾವಿನಹಣ್ಣುಗಳು ಮ್ಯಾಂಗಿಫೆರಿನ್ ನಂತಹ ಉತ್ಕರ್ಷಣ ನಿರೋಧಕಗಳಿಂದ ತುಂಬಿವೆ. ಇದು ಸ್ವತಂತ್ರ ರಾಡಿಕಲ್ ಗಳಿಂದಾಗುವ ಹಾನಿಯನ್ನು ತಡೆಯುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ದೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಮೆದುಳು, ಹೃದಯ, ಯಕೃತ್ತು ಮತ್ತು ಕಣ್ಣುಗಳಂತಹ ಅಂಗಗಳನ್ನು ಆರೋಗ್ಯವಾಗಿಡಲು ನಮ್ಮ ದೇಹಕ್ಕೆ ಉತ್ಕರ್ಷಣ ನಿರೋಧಕಗಳು ಬೇಕಾಗುತ್ತವೆ. ಮಾವಿನ ಹಣ್ಣು ಚರ್ಮದ ಆರೋಗ್ಯ ಸುಧಾರಿಸುತ್ತದೆ. ವಯಸ್ಸಾಗುವಿಕೆಯನ್ನು ತಡೆಯುವ ಗುಣಲಕ್ಷಣಗಳನ್ನು ಸಹ ಹೊಂದಿದೆ.
ಪೋಷಕಾಂಶಗಳ ಆಗರ
ಈ ಹಿಂದೆ ನಡೆದಿರುವ ಅಧ್ಯಯನಗಳಿಂದ ಸ್ಪಷ್ಟವಾದ ಅಂಶವೆಂದರೆ ಹಣ್ಣುಗಳ ರಾಜ ಮಾವು ಕೇವಲ ಸಿಹಿಯಾದ ಹಣ್ಣು ಮಾತ್ರ ಅಲ್ಲ, ಬೇಸಿಗೆಯ ಆಹಾರದಲ್ಲಿ ಸೇರಿಸಲೇಬೇಕಾದ ಅಗತ್ಯ ಪೋಷಕಾಂಶಗಳನ್ನು ಸಹ ಹೊಂದಿದೆ. ಜೀವಸತ್ವಗಳನ್ನು ಹೊಂದಿರುವುದರ ಜೊತೆಗೆ ಇದು ಫೋಲೇಟ್, ಪೊಟ್ಯಾಸಿಯಮ್, ಫೈಬರ್, ವಿಟಮಿನ್ ಕೆ, ವಿಟಮಿನ್ ಬಿ 6, ತಾಮ್ರ, ಮೆಗ್ನೇಸಿಯಂ ಮತ್ತು ಫೈಟೊಕೆಮಿಕಲ್ಗಳಿಂದ ಸಮೃದ್ಧವಾಗಿದೆ. ಆದ್ದರಿಂದ ಮಾವಿನ ಹಣ್ಣು ಒಟ್ಟಾರೆ ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತದೆ. ಆದರೆ ಮಾವಿನ ಹಣ್ಣನ್ನು ಅತಿಯಾಗಿ ಸೇವಿಸಬಾರದು. ಏಕೆಂದರೆ ಅದರ ಅಧಿಕ ಸೇವನೆಯಿಂದ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವು ಅನಾನುಕೂಲಗಳೂ ಇವೆ.
ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಉತ್ತೇಜನ
ಮಾವಿನಹಣ್ಣು ತಿನ್ನುವುದರಿಂದ ನಿಮ್ಮ ಕೂದಲು ಬಲಗೊಳ್ಳುತ್ತದೆ ಹಾಗೂ ಚರ್ಮದ ಆರೋಗ್ಯ ಹೆಚ್ಚಾಗುತ್ತದೆ. 2020 ರಲ್ಲಿ ಪ್ರಕಟವಾದ ಅಧ್ಯಯನವು ಮಾವಿನಹಣ್ಣುಗಳು ವಿಟಮಿನ್ ಸಿ, ಇ ಮತ್ತು ಎ ಗಳಿಂದ ತುಂಬಿವೆ ಎಂದು ಹೇಳುತ್ತದೆ. ಇದು ಕೂದಲುಗಳಿಗೆ ಹೊಳಪನ್ನು ನೀಡುತ್ತದೆ. ಎಪಿಡರ್ಮಲ್ ಪದರಕ್ಕೆ ನೈಸರ್ಗಿಕ ಹೊಳಪನ್ನು ಮರಳಿ ತರುತ್ತದೆ. ಇದರಲ್ಲಿರುವ ಜೀವಸತ್ವಗಳು ಕಾಲೊಜನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ದುಬಾರಿ ಉತ್ಪನ್ನಗಳನ್ನು ಖರೀದಿಸಿ ಹಣ ವ್ಯಯ ಮಾಡುವು ಬದಲಿಗೆ ಈ ಹಣ್ಣನ್ನು ಸೇವಿಸುವುದರಿಂದ ಚರ್ಮದ ಟೋನ್ ಸುಧಾರಿಸುತ್ತದೆ ಮತ್ತು ವಯಸ್ಸಾಗುವಿಕೆಯನ್ನು ತಡೆಯುತ್ತದೆ.
ಕೊಲೆಸ್ಟ್ರಾಲ್ ಮಟ್ಟಕ್ಕೆ ಕಡಿವಾಣ
ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸಲು ನೀವು ಕಷ್ಟಪಡುತ್ತಿದ್ದರೆ ಇದಕ್ಕೆ ಪರಿಹಾರ ಮಾವಿನ ಹಣ್ಣಿನಲ್ಲಿದೆ. ನಿಮ್ಮ ಆಹಾರದಲ್ಲಿ ಮಾವಿನಹಣ್ಣನ್ನು ಮಿತವಾಗಿ ಬಳಸುವುದರಿಂದ ಕೊಲೆಸ್ಟ್ರಾಲ್ ಮಟ್ಟ ಸುಧಾರಿಸುತ್ತದೆ. 2021ರಲ್ಲಿ ನ್ಯೂಟ್ರಿಯೆಂಟ್ಸ್ ಇನ್ ಎನ್ಐಎಚ್ ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ ಮಾವಿನ ಹಣ್ಣನ್ನು ಸೇವಿಸುವವರಲ್ಲಿ ಕಡಿಮೆ ಕೊಲೆಸ್ಟ್ರಾಲ್ ಮಟ್ಟವಿರುವುದನ್ನು ಬಹಿರಂಗಪಡಿದೆ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಾವಿನ ಸಲಾಡ್, ಸ್ಮೂಥಿ, ಮನೆಯಲ್ಲಿ ತಯಾರಿಸಿದ ಐಸ್ ಕ್ರೀಮ್ ಮತ್ತು ಕೆಲವು ಇತರ ಹಣ್ಣಿನ ಸಿಹಿತಿಂಡಿಗಳನ್ನು ಪ್ರಯತ್ನಿಸಬಹುದಾಗಿದೆ.
ಅಜೀರ್ಣ ತಡೆಗಟ್ಟಲು ಸಹಕಾರಿ
ಫುಡ್ ಆಂಡ್ ನ್ಯೂಟ್ರಿಷಿಯನ್ 2023 ರಲ್ಲಿ ನಡೆದ ಅಧ್ಯಯನವು ಮಾವಿನಹಣ್ಣನ್ನು ಸೇವಿಸುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಬಹಿರಂಗಪಡಿಸಿದೆ. ಇದು ಕರುಳಿನ ಸೂಕ್ಷ್ಮಜೀವಿಯನ್ನು ಸುಧಾರಿಸುತ್ತದೆ. ಇದು ಆರೋಗ್ಯಕರ ರೋಗನಿರೋಧಕ ವ್ಯವಸ್ಥೆ ಬಲಪಡಿಸುತ್ತದೆ. ದೀರ್ಘಕಾಲದ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ. ಮಾವಿನಹಣ್ಣು ಮತ್ತು ಇತರ ಕಾಲೋಚಿತ ಹಣ್ಣುಗಳನ್ನು ತಿನ್ನುವ ಮೂಲಕ ಕರುಳಿನ ಚಲನೆಯನ್ನು ಹೆಚ್ಚಿಸಬಹುದು. ಇದರಿಂದ ಆರೋಗ್ಯಕರ ಜೀವನವನ್ನು ನಡೆಸಬಹುದು.