Dehydration Problem: ದೇಹದಲ್ಲಿನ ಈ ಲಕ್ಷಣಗಳು ನಿರ್ಜಲೀಕರಣವನ್ನು ಸೂಚಿಸಬಹುದು; ಸಾಕಷ್ಟು ನೀರು ಕುಡಿಯುವುದೇ ಇದಕ್ಕೆ ಪರಿಹಾರ
ಕನ್ನಡ ಸುದ್ದಿ  /  ಜೀವನಶೈಲಿ  /  Dehydration Problem: ದೇಹದಲ್ಲಿನ ಈ ಲಕ್ಷಣಗಳು ನಿರ್ಜಲೀಕರಣವನ್ನು ಸೂಚಿಸಬಹುದು; ಸಾಕಷ್ಟು ನೀರು ಕುಡಿಯುವುದೇ ಇದಕ್ಕೆ ಪರಿಹಾರ

Dehydration Problem: ದೇಹದಲ್ಲಿನ ಈ ಲಕ್ಷಣಗಳು ನಿರ್ಜಲೀಕರಣವನ್ನು ಸೂಚಿಸಬಹುದು; ಸಾಕಷ್ಟು ನೀರು ಕುಡಿಯುವುದೇ ಇದಕ್ಕೆ ಪರಿಹಾರ

Dehydration Problem: ಬೇಸಿಗೆಯಲ್ಲಿ ಅತಿಯಾದ ಬಾಯಾರಿಕೆ, ಮಲಬದ್ಧತೆ, ತಲೆಸುತ್ತು ಬರುವುದು ಇವು ನಿರ್ಜಲೀಕರಣ ಸಮಸ್ಯೆಯ ಲಕ್ಷಣಗಳಾಗಿರಬಹುದು. ಈ ಸಮಸ್ಯೆಗಳ ನಿವಾರಣೆಗೆ ಸಾಕಷ್ಟು ನೀರು ಕುಡಿಯುವುದೇ ಪರಿಹಾರ.

ಸಾಕಷ್ಟು ನೀರು ಕುಡಿಯುವುದರಿಂದ ನಿರ್ಜಲೀಕರಣ ಸಮಸ್ಯೆಯನ್ನು ತಪ್ಪಿಸಬಹುದು
ಸಾಕಷ್ಟು ನೀರು ಕುಡಿಯುವುದರಿಂದ ನಿರ್ಜಲೀಕರಣ ಸಮಸ್ಯೆಯನ್ನು ತಪ್ಪಿಸಬಹುದು (pexels)

ಬೇಸಿಗೆಯ ತಾಪ ದಿನೇ ದಿನೇ ಏರುತ್ತಲೇ ಇದೆ. ಇದರೊಂದಿಗೆ ಇಲ್ಲದ ಆರೋಗ್ಯ ಸಮಸ್ಯೆಗಳು ಬಾಧಿಸುತ್ತಿವೆ. ಬೇಸಿಗೆಯಲ್ಲಿ ನಿರ್ಜಲೀಕರಣ, ಶಾಖಾಘಾತದಂತಹ ಆರೋಗ್ಯ ಸಮಸ್ಯೆಗಳು ಎದುರಾಗುವುದು ಸಾಮಾನ್ಯ. ಕೆಲವೊಮ್ಮೆ ಈ ಸಮಸ್ಯೆಗಳು ಜೀವಕ್ಕೂ ಅಪಾಯ ತರಬಹುದು.

ಬಿರು ಬೇಸಿಗೆಯಲ್ಲಿ ದೇಹಕ್ಕೆ ಅಗತ್ಯವಿರುವಷ್ಟು ಸಾಕಷ್ಟು ನೀರು ಕುಡಿಯುವುದು ಅವಶ್ಯವಾಗುತ್ತದೆ. ಆದರೆ ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ನೀರು ಕುಡಿಯಲು ಸಾಧ್ಯವಾಗದೇ ಇರಬಹುದು. ಇದರಿಂದ ನಿರ್ಜಲೀಕರಣ ಉಂಟಾಗುತ್ತದೆ. ಬೇಸಿಗೆಯಲ್ಲಿ ಕಾಣಿಸುವ ಕೆಲವ ರೋಗಲಕ್ಷಣಗಳು ನಿರ್ಜಲೀಕರಣದ ಲಕ್ಷಣಗಳಾಗಿರಬಹುದು. ಅತಿಯಾದ ಬಾಯಾರಿಕೆ, ತಲೆಸುತ್ತು, ಮೂತ್ರದ ಬಣ್ಣದಲ್ಲಿ ಬದಲಾವಣೆ ಇಂತಹ ಲಕ್ಷಣಗಳು ದೇಹದಲ್ಲಿನ ನಿರ್ಜಲೀಕರಣವನ್ನು ಸೂಚಿಸಬಹುದು.

ಬಿಸಿಲಿಗೆಯಲ್ಲಿ ಉಂಟಾಗುವ ಸಾಮಾನ್ಯ ಸಮಸ್ಯೆ ನಿರ್ಜಲೀಕರಣದ ಲಕ್ಷಣಗಳು; ಇವುಗಳ ಬಗ್ಗೆ ನಿರ್ಲಕ್ಷ್ಯ ಬೇಡ.

ಅತಿಯಾದ ಬಾಯಾರಿಕೆ

ದೇಹಕ್ಕೆ ಹೆಚ್ಚು ನೀರು ಅವಶ್ಯವಿದ್ದಾಗ ಬಾಯಾರಿಕೆಯನ್ನು ಸೂಚಿಸುವುದು ನೈಸರ್ಗಿಕ ಲಕ್ಷಣವಾಗಿದೆ. ನಿರ್ಜಲೀಕರಣ ಉಂಟಾದಾಗ ದೇಹದಲ್ಲಿ ನೀರಿನಾಂಶ ಕಡಿಮೆಯಾಗುತ್ತದೆ ಮತ್ತು ರಕ್ತದಲ್ಲಿನ ಎಲೆಕ್ಟ್ರೋಲೈಟ್‌ಗಳ ಸಾಂಧ್ರತೆಯು ಹೆಚ್ಚಾಗುತ್ತದೆ. ಇದು ಮೆದುಳಿನ ಭಾಗವಾದ ಹೈಪೋಥಾಲಮಸ್, ವಾಸೊಪ್ರೆಸಿನ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡಲು ಕಾರಣವಾಗುತ್ತದೆ. ಈ ಹಾರ್ಮೋನುಗಳು ಮೂತ್ರಪಿಂಡಗಳಿಗೆ ನೀರನ್ನು ಸಂರಕ್ಷಿಸಲು ಸೂಚಿಸುತ್ತದೆ. ಆ ಸಮಯದಲ್ಲಿ, ನಿಮ್ಮ ಬಾಯಿ ಮತ್ತು ಗಂಟಲು ಒಣಗಬಹುದು ಮತ್ತು ನೀವು ನೀರು ಕುಡಿಯಲು ಪ್ರಚೋದನೆ ಸಿಗಬಹುದು.

ತಲೆಸುತ್ತು

ನಿರ್ಜಲೀಕರಣವು ರಕ್ತದೊತ್ತಡದ ಪ್ರಮಾಣವನ್ನು ಕಡಿಮೆ ಮಾಡಬಹುದು. ಇದರಿಂದ ತಲೆಸುತ್ತು ಅಥವಾ ತಲೆ ತಿರುಗುವುದು ಇಂತಹ ಸಮಸ್ಯೆಗಳು ಕಾಣಿಸಬಹುದು. ದೇಹದಲ್ಲಿ ನೀರಿನಾಂಶ ಕಡಿಮೆಯಾದ ಕೂಡಲೇ ಮೆದುಳು ಹಾಗೂ ದೇಹದ ಇತರ ಭಾಗಗಳಿಗೆ ರಕ್ತಪರಿಚಲನೆಗೆ ದ್ರವಾಂಶ ಕೊರತೆ ಉಂಟಾಗುತ್ತದೆ. ಇದರಿಂದ ತಲೆಸುತ್ತು ಕಾಣಿಸುತ್ತದೆ.

ಸ್ನಾಯು ಸೆಳೆತ

ನಿರ್ಜಲೀಕರಣವು ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ ಕಾರಣವಾಗಬಹುದು, ಇದು ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು.ಸೋಡಿಯಂ ಮತ್ತು ಪೊಟ್ಯಾಸಿಯಮ್‌ನಂತಹ ಎಲೆಕ್ಟ್ರೋಲೈಟ್‌ಗಳು ಸ್ನಾಯುವಿನ ಕಾರ್ಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನೀವು ನಿರ್ಜಲೀಕರಣಗೊಂಡಾಗ, ಈ ಎಲೆಕ್ಟ್ರೋಲೈಟ್‌ಗಳ ಮಟ್ಟವು ಅಸಮತೋಲನವಾಗುತ್ತದೆ, ಇದರಿಂದ ಸೆಳೆತ ಉಂಟಾಗುತ್ತದೆ.

ಮಲಬದ್ಧತೆ

ದೇಹದಲ್ಲಿ ನೀರಿನಾಂಶ ಕಡಿಮೆಯಾದ ಕೂಡಲೇ ಮಲಬದ್ಧತೆಯ ಸಮಸ್ಯೆ ಕಾಣಿಸಬಹುದು. ನಿರ್ಜಲೀಕರಣ ಉಂಟಾದಾಗ ದೇಹವು ನೀರನ್ನು ನಿಮ್ಮ ಕೊಲೊನ್‌ನಿಂದ ಪುನಃ ಹೀರಿಕೊಳ್ಳುವ ಮೂಲಕ ಸಂರಕ್ಷಿಸಲು ಪ್ರಯತ್ನಿಸುತ್ತದೆ, ಆಗ ಮಲಬದ್ಧತೆ ಉಂಟಾಗುತ್ತದೆ. ಜೀರ್ಣಕ್ರಿಯೆಯ ಪ್ರಕ್ರಿಯೆಗೆ ನೀರು ಅತ್ಯಗತ್ಯ. ಇದು ಸರಾಗ ಮಲವಿಸರ್ಜನೆಯ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳ ಮೂಲಕ ನಿಮ್ಮ ಫೈಬರ್ ಸೇವನೆಯನ್ನು ಹೆಚ್ಚಿಸುವುದು ಕರುಳಿನ ಚಲನೆಯನ್ನು ಉತ್ತೇಜಿಸಲು ಮತ್ತು ಮಲಬದ್ಧತೆಯನ್ನು ನಿವಾರಿಸಲು ಸಾಧ್ಯ.

ಮೂತ್ರದ ಬಣ್ಣ ಬದಲಾಗುವುದು

ನಿರ್ಜಲೀಕರಣ ಸಮಸ್ಯೆ ಕಾಣಿಸಿಕೊಂಡಾಗ ಮೂತ್ರದ ಬಣ್ಣವು ಬದಲಾಗುತ್ತದೆ. ಮೂತ್ರವು ಗಾಢ ಬಣ್ಣಕ್ಕೆ ತಿರುಗಬಹುದು ಮತ್ತು ವಾಸನೆಯಿಂದ ಕೂಡಿರಬಹುದು. ಏಕೆಂದರೆ ನಿರ್ಜಲೀಕರಣವಾದಾಗ ಮೂತ್ರಪಿಂಡಗಳು ಕಡಿಮೆ ಮೂತ್ರವನ್ನು ಉತ್ಪಾದಿಸುವ ಮೂಲಕ ನೀರನ್ನು ಸಂರಕ್ಷಿಸಲು ಪ್ರಯತ್ನಿಸುತ್ತದೆ.

ಒಣಚರ್ಮ

ದೇಹದಲ್ಲಿ ನೀರಿನ ಕೊರತೆ ಉಂಟಾದಾಗ ಚರ್ಮ ಶುಷ್ಕವಾಗುತ್ತದೆ. ಬೇಸಿಗೆಯಲ್ಲಿನ ಒಣ ಚರ್ಮದ ಸಮಸ್ಯೆಯೂ ನಿರ್ಜಲೀಕರಣವನ್ನು ಸೂಚಿಸಬಹುದು.

ಏಕಾಗ್ರತೆಯ ಕೊರತೆ

ದೇಹದಲ್ಲಿನ ನೀರಿನಾಂಶ ಅಥವಾ ನೀರಿನ ಕೊರತೆಯಿಂದ ಏಕಾಗ್ರತೆ ಮಟ್ಟ ಕಡಿಮೆಯಾಗಬಹುದು. ಯಾವುದೇ ಕೆಲಸವನ್ನೂ ಗಮನ ಹರಿಸಿ ಮಾಡಲು ಸಾಧ್ಯವಾಗದೇ ಇರಬಹುದು. ನೆನಪಿನ ಶಕ್ತಿಯ ಕುಂಠಿತಕ್ಕೂ ಇದು ಕಾರಣವಾಗಬಹುದು.

Whats_app_banner