ನಿರ್ಜಲೀಕರಣ ಸಮಸ್ಯೆಯಿಂದ ಮೂತ್ರಪಿಂಡದ ಮೇಲೆ ಬೀಳಬಹುದು ಪರಿಣಾಮ; ಬೇಸಿಗೆಯಲ್ಲಿ ಹೀಗಿರಲಿ ನಿಮ್ಮ ಜೀವನಶೈಲಿ
ಕನ್ನಡ ಸುದ್ದಿ  /  ಜೀವನಶೈಲಿ  /  ನಿರ್ಜಲೀಕರಣ ಸಮಸ್ಯೆಯಿಂದ ಮೂತ್ರಪಿಂಡದ ಮೇಲೆ ಬೀಳಬಹುದು ಪರಿಣಾಮ; ಬೇಸಿಗೆಯಲ್ಲಿ ಹೀಗಿರಲಿ ನಿಮ್ಮ ಜೀವನಶೈಲಿ

ನಿರ್ಜಲೀಕರಣ ಸಮಸ್ಯೆಯಿಂದ ಮೂತ್ರಪಿಂಡದ ಮೇಲೆ ಬೀಳಬಹುದು ಪರಿಣಾಮ; ಬೇಸಿಗೆಯಲ್ಲಿ ಹೀಗಿರಲಿ ನಿಮ್ಮ ಜೀವನಶೈಲಿ

Kidney Health: ಬೇಸಿಗೆಯಲ್ಲಿ ನಿಮ್ಮ ಮೂತ್ರಪಿಂಡಗಳ ಆರೈಕೆ ಮಾಡುವುದು ಮುಖ್ಯ ಏಕೆಂದರೆ ವಿಪರೀತ ಶಾಖವು ಮೂತ್ರಪಿಂಡದ ಕಾರ್ಯದ ಮೇಲೆ ಹಾನಿಯನ್ನುಂಟು ಮಾಡುತ್ತದೆ. ಸೂಕ್ತ ಜೀವನಶೈಲಿ ಬದಲಾವಣೆಗಳ ಬಗ್ಗೆ ತಜ್ಞರು.

ನಿರ್ಜಲೀಕರಣ ಸಮಸ್ಯೆಯಿಂದ ಮೂತ್ರಪಿಂಡದ ಮೇಲೆ ಬೀಳಬಹುದು ಪರಿಣಾಮ
ನಿರ್ಜಲೀಕರಣ ಸಮಸ್ಯೆಯಿಂದ ಮೂತ್ರಪಿಂಡದ ಮೇಲೆ ಬೀಳಬಹುದು ಪರಿಣಾಮ (Shutterstock)

ಈ ಬೇಸಿಗೆ ಕಾಲದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರೆ ಸರಿಯಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ತಾಪಮಾನ ಹೆಚ್ಚಿರುವುದರಿಂದ ದೇಹವು ನಿರ್ಜಲೀಕರಣ ಸಮಸ್ಯೆಯನ್ನು ಎದುರಿಸಬಹುದು. ಹೀಗಾಗಿ ಕಾಳಜಿ ಅತ್ಯಗತ್ಯ. ನಿರ್ಜಲೀಕರಣ ಸಮಸ್ಯೆಯುಂಟಾದರೆ ಇದು ಮೂತ್ರಪಿಂಡದ ತೊಂದರೆಗೆ ಕಾರಣವಾಗಬಹುದು. ನಿರ್ಜಲೀಕರಣ ಹಾಗೂ ಮೂತ್ರಪಿಂಡದ ಸಮಸ್ಯೆಯಿಂದ ಪಾರಾಗಲು ಹೆಚ್ಚೆಚ್ಚು ನೀರು ಕುಡಿಯುವುದು, ದ್ರವಾಹಾರ ಸೇವಿಸುವುದು ಮುಖ್ಯ. ಅಲ್ಲದೆ, ಆರೋಗ್ಯಕರ ಹಾಗೂ ಸಮತೋಲಿತ ಆಹಾರ ತಿನ್ನಬೇಕು. ನಿಯಮಿತವಾಗಿ ವ್ಯಾಯಾಮ ಮಾಡುವುದು, ರಕ್ತದಲ್ಲಿನ ಸಕ್ಕರೆಯ ಮಟ್ಟ ಮತ್ತು ರಕ್ತದೊತ್ತಡವನ್ನು ನಿರ್ವಹಿಸಿದರೆ ನಿಮ್ಮ ಮೂತ್ರಪಿಂಡಗಳನ್ನು ರಕ್ಷಿಸಿಕೊಳ್ಳಬಹುದು. ತೆಂಗಿನ ನೀರು, ನಿಂಬೆ ರಸ ಮತ್ತು ಮಜ್ಜಿಗೆಯನ್ನು ದೈನಂದಿನ ಆಹಾರದಲ್ಲಿ ಸೇರಿಸಬೇಕು. ಇದೇ ವೇಳೆ ಚಹಾ ಮತ್ತು ಕಾಫಿಯನ್ನು ತ್ಯಜಿಸಬೇಕು.

ಬಿಸಿಲಿನ ತಾಪವು ಮೂತ್ರಪಿಂಡಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ವಿಷಕಾರಿ ಅಂಶಗಳನ್ನು ತೆಗೆದುಹಾಕುವುದರ ಜೊತೆಗೆ ದೇಹದಲ್ಲಿ ಉಪ್ಪು ಮತ್ತು ನೀರಿನ ಸಮತೋಲನವನ್ನು ಕಾಪಾಡುವಲ್ಲಿ ಮೂತ್ರಪಿಂಡವು ನಿರ್ಣಾಯಕ ಪಾತ್ರ ವಹಿಸುತ್ತದೆ. ಇದನ್ನು ನಿರ್ವಹಿಸಲು ಮೂತ್ರಪಿಂಡಕ್ಕೆ 1 ಲೀಟರ್ ರಕ್ತ ಪೂರೈಕೆಯ ಅಗತ್ಯವಿರುತ್ತದೆ. ಒಂದು ವೇಳೆ ದೇಹಕ್ಕೆ ನಿರ್ಜಲೀಕರಣವಾದರೆ ರಕ್ತ ಪೂರೈಕೆ ಕಡಿಮೆಯಾಗುತ್ತದೆ. ಹೀಗಾಗಿ ಮೂತ್ರಪಿಂಡದ ಕಾರ್ಯವು ಹದಗೆಡುತ್ತದೆ.

ನಿರ್ಜಲೀಕರಣಗೊಂಡಾಗ, ದೇಹದಲ್ಲಿ ದ್ರವಗಳು ಮತ್ತು ಎಲೆಕ್ಟ್ರೋಲೈಟ್‌ಗಳ ಸರಿಯಾದ ಸಮತೋಲನವನ್ನು ಕಾಪಾಡಿಕೊಳ್ಳಲು ಮೂತ್ರಪಿಂಡಗಳು ಹೆಚ್ಚು ಶ್ರಮಿಸುತ್ತವೆ. ನಿರ್ಜಲೀಕರಣ ಸಮಸ್ಯೆ ಹೆಚ್ಚಿದ್ದರೆ, ಅದು ಮೂತ್ರಪಿಂಡದ ಹಾನಿಗೆ ಕಾರಣವಾಗಬಹುದು. ಹೀಗಾಗಿ ದೇಹವನ್ನು ಹೈಡ್ರೀಕರಿಸುವುದು ಬಹಳ ಮುಖ್ಯ. ಈ ಬೇಸಿಗೆಯಲ್ಲಿ ಸಕ್ಕರೆ ಪಾನೀಯಗಳು ಮತ್ತು ಕೆಫೀನ್ ಕುಡಿಯುವುದು ಆದಷ್ಟು ಕಡಿಮೆ ಮಾಡಬೇಕು. ಅಥವಾ ಕುಡಿಯದೇ ಇರುವುದು ಒಳಿತು. ಇದನ್ನು ಕುಡಿಯುವುದರಿಂದ ನಿರ್ಜಲೀಕರಣದ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ಉಡುಪು ಧರಿಸುವಾಗಲೂ ಜಾಗರೂಕರಾಗಿರಬೇಕು. ಯಾವಾಗಲೂ ತಿಳಿ ಬಣ್ಣದ, ಸಡಿಲವಾದ ಬಟ್ಟೆಗಳನ್ನು ಧರಿಸಬೇಕು.

ಇದನ್ನೂ ಓದಿ | ವೇಗವಾಗಿ ತಿಂದು ಮುಗಿಸುವ ಅಭ್ಯಾಸ ನಿಮಗೂ ಇದೆಯಾ? ಆರೋಗ್ಯಕ್ಕೆ ಹಾನಿಯಾದೀತು ಜೋಕೆ, ನಿಧಾನವಾಗಿ ತಿನ್ನಲು ಇಲ್ಲಿವೆ ಸಲಹೆ

ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಇದು ಮೂತ್ರಪಿಂಡದ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು ಎಂದು ತಜ್ಞರು ತಮ್ಮ ಸಂಶೋಧನಾ ವರದಿಯಲ್ಲಿ ತಿಳಿಸಿದ್ದಾರೆ. ಬಿಸಿಲಿನ ತಾಪಮಾನವು ಮೂತ್ರಪಿಂಡದ ಮೇಲೆ ನೇರವಾಗಿ ಪರಿಣಾಮ ಬೀರುವ ಮೊದಲ ಹಂತವೆಂದರೆ ಅದು ನಿರ್ಜಲೀಕರಣ. ದೇಹವು ವಿಪರೀತ ಬೆವರುವುದರಿಂದ ದ್ರವವನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಮೂತ್ರಪಿಂಡವು ತ್ಯಾಜ್ಯ ಮತ್ತು ವಿಷಕಾರಿ ಅಂಶಗಳನ್ನು ಫಿಲ್ಟರ್ ಮಾಡಲು ಹೆಚ್ಚು ಶ್ರಮಿಸಬೇಕಾಗುತ್ತದೆ. ಒತ್ತಡ ಹೆಚ್ಚಾದಾಗ ಮೂತ್ರಪಿಂಡದ ಹಾನಿಗೆ ಕಾರಣವಾಗಬಹುದು. ಅಲ್ಲದೆ, ದೇಹದಲ್ಲಿ ಎಲೆಕ್ಟ್ರೋಲೈಟ್‌ಗಳ ಅಸಮತೋಲನವನ್ನು ಉಂಟುಮಾಡಬಹುದು. ಇದು ಮೂತ್ರಪಿಂಡದ ತ್ಯಾಜ್ಯ ಮತ್ತು ವಿಷಕಾರಿ ಅಂಶವನ್ನು ಫಿಲ್ಟರ್ ಮಾಡುವ ಸಾಮರ್ಥ್ಯಕ್ಕೆ ಅಡ್ಡಿಪಡಿಸುತ್ತದೆ. ಇದು ಮೂತ್ರಪಿಂಡದ ಹಾನಿಗೆ ಕಾರಣವಾಗುತ್ತದೆ.

ಬೇಸಿಗೆಯಲ್ಲಿ ಮೂತ್ರಪಿಂಡದ ಆರೋಗ್ಯವನ್ನು ಹೆಚ್ಚಿಸಲು ಜೀವನಶೈಲಿಯನ್ನು ಬದಲಾಯಿಸುವುದು ಉತ್ತಮ

ಸಾಕಷ್ಟು ನೀರು ಕುಡಿಯುವುದರಿಂದ ಮೂತ್ರಪಿಂಡಗಳನ್ನು ಆರೋಗ್ಯವಾಗಿರಿಸಿಕೊಳ್ಳಬಹುದು. ದಿನಕ್ಕೆ 2ರಿಂದ 3 ಲೀಟರ್ ನೀರು ಕುಡಿಯಬೇಕು. ಇದರಿಂದ ದೇಹವು ನಿರ್ಜಲೀಕರಣ ಸಮಸ್ಯೆಯಿಂದ ಪಾರಾಗುತ್ತದೆ. ಬೇಸಿಗೆಯಲ್ಲಿ ತೀವ್ರವಾದ ಅತಿಸಾರ ರೋಗಗಳ ಅಪಾಯವು ಹೆಚ್ಚಾಗಿರುತ್ತದೆ. ಹೀಗಾಗಿ ಶುದ್ಧ ನೀರು, ಶುದ್ಧ ಆಹಾರ ಸೇವನೆ ಸೇರಿದಂತೆ ನೈರ್ಮಲ್ಯ ಕಾಪಾಡಬೇಕು. ಕ್ರೀಡಾಪಟುಗಳು ಮತ್ತು ಮ್ಯಾರಥಾನ್ ಓಟಗಾರರು ಬೇಸಿಗೆಯಲ್ಲಿ ಹೆಚ್ಚು ಜಾಗರೂಕರಾಗಿರಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ಮೂತ್ರಪಿಂಡಗಳನ್ನು ಆರೋಗ್ಯವಾಗಿರಿಸಲು ಡಾ. ನಿಪುನ್ ಅವರು ಜೀವನಶೈಲಿ ಹೇಗಿರಬೇಕು ಎಂದು ತಿಳಿಸಿದ್ದಾರೆ. ಇಲ್ಲಿದೆ ಮಾಹಿತಿ.

1. ಆರೋಗ್ಯಕರ ಆಹಾರ ಅನುಸರಿಸಿ

ಉಪ್ಪು, ಕೊಬ್ಬು ಮತ್ತು ಸಕ್ಕರೆ ಕಡಿಮೆ ಇರುವ ಸಮತೋಲಿತ ಆಹಾರವನ್ನು ಸೇವಿಸುವುದರಿಂದ ಮೂತ್ರಪಿಂಡದ ಕಾಯಿಲೆಯನ್ನು ತಡೆಯಲು ಸಹಾಯ ಮಾಡುತ್ತದೆ. ಹಣ್ಣುಗಳು ಮತ್ತು ತರಕಾರಿಗಳಂಥ ಆಂಟಿಆಕ್ಸಿಡೆಂಟ್‌ಗಳಿರುವ ಆಹಾರಗಳು ಮೂತ್ರಪಿಂಡವನ್ನು ಹಾನಿಯಿಂದ ರಕ್ಷಿಸುತ್ತದೆ.

2. ಸಾಕಷ್ಟು ದ್ರವಾಹಾರ ಸೇವಿಸಿ

ನಿರ್ಜಲೀಕರಣವು ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗಲು ಕಾರಣವಾಗುತ್ತದೆ. ಮೂತ್ರದಲ್ಲಿ ದ್ರವಗಳು, ಖನಿಜಗಳು ಮತ್ತು ತ್ಯಾಜ್ಯ ಉತ್ಪನ್ನಗಳ ಅಸಮತೋಲನ ಉಂಟಾದಾಗ ಕಲ್ಲುಗಳು ರೂಪುಗೊಳ್ಳಲು ಕಾರಣವಾಗುತ್ತದೆ. ಹೀಗಾಗಿ ಸಾಕಷ್ಟು ನೀರು, ಮಜ್ಜಿಗೆ ಮುಂತಾದವುಗಳನ್ನು ಕುಡಿಯಬೇಕು. ನೀರಿನ ಅಂಶ ಹೆಚ್ಚಿರುವ ತರಕಾರಿ, ಹಣ್ಣುಗಳನ್ನು ಸೇವಿಸುವುದು ಕೂಡ ಉತ್ತಮ.

3. ನಿಯಮಿತ ವ್ಯಾಯಾಮ

ನಿಯಮಿತ ವ್ಯಾಯಾಮವು ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುತ್ತದೆ. ಅಲ್ಲದೆ, ಇದು ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.

4. ಧೂಮಪಾನ ಮತ್ತು ಮದ್ಯಪಾನವನ್ನು ಮಿತಿಗೊಳಿಸಿ

ಅತಿಯಾದ ಧೂಮಪಾನ ಮತ್ತು ಮದ್ಯಪಾನವು ಮೂತ್ರಪಿಂಡಗಳನ್ನು ಹಾನಿಗೊಳಿಸುತ್ತದೆ. ಇದು ಮೂತ್ರಪಿಂಡದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

5. ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ

ಅಧಿಕ ರಕ್ತದೊತ್ತಡ ಮತ್ತು ಮಧುಮೇಹವು ಮೂತ್ರಪಿಂಡದ ಕಾಯಿಲೆಗೆ ಎರಡು ಪ್ರಮುಖ ಕಾರಣಗಳಾಗಿವೆ. ಈ ಮಟ್ಟವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವುದರಿಂದ ಮೂತ್ರಪಿಂಡದ ಹಾನಿಯನ್ನು ತಡೆಯಬಹುದು.

6. ನಿಯಮಿತ ತಪಾಸಣೆಗಳು ಮಾಡುತ್ತಿರಿ

ಯಾವುದೇ ಸಮಸ್ಯೆಗಳಿದ್ದಲ್ಲಿ ಆರಂಭಿಕ ಹಂತದಲ್ಲಿ ಪತ್ತೆಹಚ್ಚಲು ನಿಯಮಿತವಾಗಿ ಮೂತ್ರಪಿಂಡದ ತಪಾಸಣೆ ಮಾಡುತ್ತಿರಬೇಕು. ಇದರಿಂದ ಯಾವುದೇ ದೀರ್ಘಕಾಲದ ಸಮಸ್ಯೆ ಉಂಟಾಗುವುದಿಲ್ಲ. ಅಲ್ಲದೆ, ನೋವು ನಿವಾರಕಗಳನ್ನು (ಪೇನ್‌ ಕಿಲ್ಲರ್) ಹಾಗೂ ವೈದ್ಯರ ಸಲಹೆ ಇಲ್ಲದೆ ಔಷಧಿಗಳನ್ನು ಸೇವಿಸದಿರುವುದು ಒಳಿತು.

ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಮೂತ್ರಪಿಂಡದ ಆರೋಗ್ಯವನ್ನು ನಿರ್ವಹಿಸಲು ಸಾಕಷ್ಟು ನೀರು ಸೇವಿಸುವ ಮೂಲಕ ದೇಹವನ್ನು ಹೈಡ್ರೀಕರಿಸುವುದು ಬಹಳ ಮುಖ್ಯ. ಸಮತೋಲಿತ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಬೇಕು. ನಿಯಮಿತವಾಗಿ ವ್ಯಾಯಾಮ ಮಾಡುವುದು, ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವುದು ಬಹಳ ಮುಖ್ಯ.

Whats_app_banner