Heat headaches: ಬಿರುಬಿಸಿಲಿನ ಶಾಖದಿಂದ ಕಾಡುವ ತಲೆನೋವಿನ ಲಕ್ಷಣಗಳೇನು, ಇದರಿಂದ ಪಾರಾಗುವುದು ಹೇಗೆ?
ಕನ್ನಡ ಸುದ್ದಿ  /  ಜೀವನಶೈಲಿ  /  Heat Headaches: ಬಿರುಬಿಸಿಲಿನ ಶಾಖದಿಂದ ಕಾಡುವ ತಲೆನೋವಿನ ಲಕ್ಷಣಗಳೇನು, ಇದರಿಂದ ಪಾರಾಗುವುದು ಹೇಗೆ?

Heat headaches: ಬಿರುಬಿಸಿಲಿನ ಶಾಖದಿಂದ ಕಾಡುವ ತಲೆನೋವಿನ ಲಕ್ಷಣಗಳೇನು, ಇದರಿಂದ ಪಾರಾಗುವುದು ಹೇಗೆ?

ಬೇಸಿಗೆ ಕಾಲದಲ್ಲಿ ತಲೆ ಮೇಲೆ ನಿಗಿ ನಿಗಿ ಕೆಂಡಕಾರುವ ಸೂರ್ಯನ ಶಾಖದಿಂದ ತಪ್ಪಿಸಿಕೊಳ್ಳುವುದು ಎಂದರೆ ಯುದ್ಧ ಗೆದ್ದಂತೆಯೇ ಸರಿ. ಸೂರ್ಯನ ಶಾಖದಿಂದ ಉಂಟಾಗುವ ಸಾಕಷ್ಟು ಆರೋಗ್ಯ ಸಮಸ್ಯೆಗಳಲ್ಲಿ ಅತಿಯಾದ ಶಾಖಕ್ಕೆ ಕಾಣಿಸಿಕೊಳ್ಳುವ ತಲೆನೋವು ಕೂಡ ಒಂದು. ಏನಿದರ ಲಕ್ಷಣ, ಇದರಿಂದ ಪಾರಾಗುವುದು ಹೇಗೆ? ಇಲ್ಲಿದೆ ಮಾಹಿತಿ

ಬಿರುಬಿಸಿಲಿನ ಶಾಖದಿಂದ ಕಾಡುವ ತಲೆನೋವಿನ ಲಕ್ಷಣಗಳೇನು
ಬಿರುಬಿಸಿಲಿನ ಶಾಖದಿಂದ ಕಾಡುವ ತಲೆನೋವಿನ ಲಕ್ಷಣಗಳೇನು (Pixabay)

ಈ ಬಾರಿಯ ಬೇಸಿಗೆಯ ಧಗೆಯನ್ನು ವಿವರಿಸುವಂತೆಯೇ ಇಲ್ಲ. ಬಿಸಿಲಿನ ಧಗೆ ಹಾಗೂ ಸುಡುವ ಶಾಖವು ಜನರನ್ನು ಹೈರಾಣಾಗಿಸಿದೆ. ಅನೇಕರಿಗೆ ಅತಿಯಾದ ಬಿಸಿಲಿನ ಧಗೆಯು ತಲೆನೋವಿಗೆ ಕಾರಣವಾಗುತ್ತಿದೆ. ತಲೆನೋವು ಒಂದು ಸಾಮಾನ್ಯ ಸಮಸ್ಯೆಯಾಗಿದ್ದರೂ, ಬೇಸಿಗೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನಿರ್ಜಲೀಕರಣ, ಶಾಖದಿಂದ ಉಂಟಾಗುವ ಬಳಲಿಕೆ ಇದೆಲ್ಲವೂ ತಲೆನೋವಿಗೆ ಕಾರಣವಾಗುವ ಪ್ರಮುಖ ಅಂಶಗಳು. ತಾಪಮಾನ ಹೆಚ್ಚಾಗುತ್ತಿದ್ದಂತೆಯೇ ನಿಮಗೆ ತಲೆನೋವು ಕೂಡ ಹೆಚ್ಚಾಗಿದ್ದರೆ, ನೀವು ಗಮನಹರಿಸಬೇಕಾದ ವಿಷಯಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಏನಿದು ಬೇಸಿಗೆಯ ಶಾಖದ ತಲೆನೋವು?

ನಿಮ್ಮ ದೇಹವು ಹೆಚ್ಚಿನ ತಾಪಮಾನಕ್ಕೆ ಅಥವಾ ಶಾಖಕ್ಕೆ ಒಡ್ಡಿಕೊಂಡಾಗದ ತಲೆನೋವು ಕಾಣಿಸಿಕೊಳ್ಳುತ್ತದೆ. ದೇಹವು ಹೆಚ್ಚು ಬಿಸಿಯಾದಂತೆ ದೇಹಕ್ಕೆ ತಾಪಮಾನಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಈ ತಲೆನೋವು ಉಂಟಾಗುತ್ತದೆ. ಬೇಸಿಗೆಕಾಲದಲ್ಲಿ ಶ್ರಮದಾಯಕ ದೈಹಿಕ ಚಟುವಟಿಕೆಗಳನ್ನು ಮಾಡುವವರು ಹೆಚ್ಚಾಗಿ ಈ ರೀತಿಯ ತಲೆನೋವಿನಿಂದ ಬಳಲುತ್ತಾರೆ.

ಅತಿಯಾದ ಬೇಸಿಗೆಯ ಧಗೆಯಿಂದ ತಲೆನೋವು ಬರಬಹುದೇ?

ಹೌದು, ಅತಿಯಾದ ಶಾಖದಿಂದಾಗಿ ತಲೆನೋವು ಉಂಟಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಸೂರ್ಯನ ಅತಿಯಾದ ಪ್ರಖರತೆ, ಪ್ರಕಾಶಮಾನವಾದ ಬೆಳಕು ಸೇರಿದಂತೆ ಹವಾಮಾನದಲ್ಲಿ ಉಂಟಾಗುವ ವಿಪರೀತ ಏರಿಳಿತದಿಂದಾಗಿ ಶಾಖ ಪ್ರೇರಿತ ತಲೆನೋವು ಉಂಟಾಗುತ್ತದೆ . ನಿರ್ಜಲೀಕರಣವು ನಿಮ್ಮ ಸಿರೋಟೊನಿನ್ ಮಟ್ಟದ ಮೇಲೂ ಸಹ ಪರಿಣಾಮ ಬೀರಬಲ್ಲದು. ಇದು ಕೂಡ ತಲೆನೋವಿಗೆ ಕಾರಣವಾಗುತ್ತದೆ.

ಶಾಖದಿಂದ ಆಗುವ ತಲೆನೋವಿನ ಲಕ್ಷಣಗಳೇನು?

ಬೇಸಿಗೆಯ ಶಾಖಕ್ಕೆ ಕಾಣಿಸಿಕೊಳ್ಳುವ ತಲೆನೋವಿನ ಲಕ್ಷಣಗಳು ಒಬ್ಬ ವ್ಯಕ್ತಿಯಿಂದ ಇನ್ನೊಂದು ವ್ಯಕ್ತಿಗೆ ಬದಲಾಗಬಹುದು. ಆದರೆ ಸಾಮಾನ್ಯವಾಗಿ ಇದರ ಕೆಲವೊಂದು ಸಾಮಾನ್ಯ ಲಕ್ಷಣಗಳು ಹೀಗಿವೆ.

  • ವಾಕರಿಕೆ
  • ತಲೆತಿರುಗುವಿಕೆ
  • ಸ್ನಾಯು ಸೆಳೆತ
  • ಮೂರ್ಚೆ ಹೋಗುವಿಕೆ
  • ಅತಿಯಾದ ಬಾಯಾರಿಕೆ
  • ನಾಡಿ ಮಿಡಿತದಲ್ಲಿ ವಿಪರೀತ ಏರಿಳಿತ

ಇದನ್ನೂ ಓದಿ | ಬೇಸಿಗೆ ರಜೆ ಅಂತ ಮಕ್ಕಳನ್ನು ಹೊರಗಡೆ ಆಟವಾಡಲು ಕಳುಹಿಸುವ ಮುನ್ನ ಈ ಮುನ್ನೆಚ್ಚರಿಕೆಗಳನ್ನು ಮರೆಯದೇ ಪಾಲಿಸಿ, ಪೋಷಕರಿಗೆ ಸಲಹೆ

ವಿಪರೀತ ತಲೆನೋವಿನಿಂದ ಪಾರಾಗುವುದು ಹೇಗೆ?

  • ಆದಷ್ಟು ಹೊರಾಂಗಣ ಚಟುವಟಿಕೆಗಳಿಂದ ದೂರವಿರಿ

ಸೂರ್ಯನು ಅತ್ಯಂತ ಪ್ರಕಾಶಮಾನವಾಗಿ ಹೊಳೆಯುತ್ತಿರುವ ಸಂದರ್ಭದಲ್ಲಿ ಹೊರಗೆ ಓಡಾಡುವುದನ್ನು ತಪ್ಪಿಸಬೇಕು. ಒಂದು ವೇಳೆ ನೀವು ಸೂರ್ಯನ ಶಾಖ ಅತಿಯಾದರೆ ಆದಷ್ಟು ನೆರಳು ಇರುವ ಸ್ಥಳವನ್ನು ಹುಡುಕಿಕೊಳ್ಳುವುದು ಒಳ್ಳೆಯದು.

ನಿರ್ಜಲೀಕರಣಕ್ಕೆ ಒಳಗಾಗಬೇಡಿ

ನಿರ್ಜಲೀಕರಣ ಕೂಡ ಶಾಖದ ತಲೆನೋವು ಬರಲು ಪ್ರಮುಖ ಕಾರಣವಾಗಿದೆ. ಹೀಗಾಗಿ ಬೇಸಿಗೆ ಕಾಲದಲ್ಲಿ ಹೆಚ್ಚೆಚ್ಚು ನೀರು ಕುಡಿಯುವುದು ಒಳ್ಳೆಯದು. ಅದರಲ್ಲೂ ಹೊರಗಡೆ ಇದ್ದಾಗಂತೂ ನೀರು ಕುಡಿಯುವುದನ್ನು ಮರೆಯುವಂತಿಲ್ಲ.

ನೀವೇನು ಧರಿಸುತ್ತೀರಿ ಎಂಬುದು ಗಮನದಲ್ಲಿರಲಿ

ತಾಪಮಾನ ಹೆಚ್ಚುತ್ತಿರುವ ಸಂದರ್ಭದಲ್ಲಿ ನೀವು ಆದಷ್ಟು ತಿಳಿಯಾದ ಹಾಗೂ ಹತ್ತಿ ಬಟ್ಟೆಯನ್ನೇ ಧರಿಸುವುದು ಉತ್ತಮ. ಗಾಢ ಬಣ್ಣದ ಬಟ್ಟೆ ಧರಿಸಿದೆ ಬಿಳಿ ಅಥವಾ ತಿಳಿ ಬಣ್ಣದ ಉಡುಪು ಧರಿಸಿ. ಅಲ್ಲದೆ ಹೊರಗೆ ಹೋಗುವಾಗ ನೆನಪಿನಿಂದ ಸನ್‌ಗ್ಲಾಸ್‌ ಧರಿಸಿ.

ಆರೋಗ್ಯಕರ ಆಹಾರ ಸೇವನೆ ಮಾಡಿ

ಪೌಷ್ಠಿಕಾಂಶಯುಕ್ತ ಆಹಾರ ತುಂಬಾ ಮುಖ್ಯ. ಅದರಲ್ಲೂ ಬೇಸಿಗೆಯಲ್ಲಿ ನೀವು ಹೆಚ್ಚಿನ ನೀರಿನಂಶ ಇರುವ ಆಹಾರವನ್ನು ಸೇವನೆ ಮಾಡಬೇಕು. ಆದಷ್ಟು ಜಂಕ್‌ ಫುಡ್‌ಗಳಿಂದ ದೂರವಿರುವುದು ಉತ್ತಮ.

ಸನ್‌ಸ್ಕ್ರೀನ್‌ ಬಳಕೆ

ಬೇಸಿಗೆಯಲ್ಲಿ ಮನೆಯಿಂದ ಹೊರ ಹೋಗುವ ಮುನ್ನ ಸನ್‌ಸ್ಕ್ರೀನ್‌ ಲೋಷನ್ ಬಳಕೆ ಮಾಡುವುದನ್ನು ಮರೆಯಬೇಡಿ. ಇದು ಕೂಡ ಶಾಖದಿಂದ ಕಾಣಿಸಿಕೊಳ್ಳುವ ಅತಿಯಾದ ತಲೆನೋವಿನಿಂದ ಪಾರು ಮಾಡುತ್ತದೆ.

Whats_app_banner