ಕನ್ನಡ ಸುದ್ದಿ  /  ಜೀವನಶೈಲಿ  /  Yoga For Summer: ಆಹಾರಗಳಿಂದ ಮಾತ್ರವಲ್ಲ ಈ ಯೋಗಾಸನಗಳಿಂದ ಕೂಡಾ ಬೇಸಿಗೆಯಲ್ಲಿ ಶರೀರದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಬಹುದು

Yoga for Summer: ಆಹಾರಗಳಿಂದ ಮಾತ್ರವಲ್ಲ ಈ ಯೋಗಾಸನಗಳಿಂದ ಕೂಡಾ ಬೇಸಿಗೆಯಲ್ಲಿ ಶರೀರದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಬಹುದು

Summer Tips: ಬೇಸಿಗೆ ಕಾಲದಲ್ಲಿ ಹೆಚ್ಚುವ ದೇಹದ ಉಷ್ಣತೆಯನ್ನು ನಿವಾರಿಸುವುದು ಹೇಗೆ ? ಜನಸಾಮಾನ್ಯರ ಈ ಗೊಂದಲಕ್ಕೆ ಯೋಗದಿಂದ ಉತ್ತರ ಕಂಡುಕೊಳ್ಳಬಹುದು. ಹೌದು ಸೂಕ್ತವಾದ ಕೆಲವು ಯೋಗಾಸನಗಳನ್ನು ಅನುಸರಿಸುವ ಮೂಲಕ ದೇಹವನ್ನು ತಂಪಾಗಿಸಿಕೊಳ್ಳಬಹುದು. ಈ ಕುರಿತು ಒಂದಿಷ್ಟು ಮಾಹಿತಿ.

ಬೇಸಿಗೆಯಲ್ಲಿ ಶರೀರದ ಉಷ್ಣತೆಯನ್ನು ಕಡಿಮೆ ಮಾಡುವ ಯೋಗಾಸನಗಳು
ಬೇಸಿಗೆಯಲ್ಲಿ ಶರೀರದ ಉಷ್ಣತೆಯನ್ನು ಕಡಿಮೆ ಮಾಡುವ ಯೋಗಾಸನಗಳು (PC: Freepik)

Summer Tips: ದೇಹ ಮತ್ತು ಮನಸ್ಸು ಆರೋಗ್ಯಕರವಾಗಿರಬೇಕೆಂದು ಬಯಸದವರೇ ಇಲ್ಲ. ಆದರೆ ಇದಕ್ಕಾಗಿ ಮುಖ್ಯವಾಗಿ ನಮ್ಮ ಜೀವನ ಶೈಲಿ ಸರಿಯಾಗಿರಬೇಕು. ಬೆಳಗ್ಗೆ ಬೇಗನೆ ಏಳುವುದರಿಂದ ತೊಡಗಿ, ನಮ್ಮ ಆಹಾರ ಕ್ರಮ, ನಿತ್ಯದ ಚಟುವಟಿಕೆಗಳು, ವ್ಯಾಯಾಮ, ಯೋಗ ಇಲ್ಲವೇ ಪ್ರಾಣಾಯಾಮ ಇವೆಲ್ಲವೂ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ನಿಯಮಿತವಾಗಿ ಯೋಗಾಭ್ಯಾಸವನ್ನು ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅದರಲ್ಲೂ ಬೇಸಿಗೆ ಧಗೆಯಲ್ಲಿ ದೇಹದ ಉಷ್ಣತೆ ಹೆಚ್ಚಾದಾಗಲಂತೂ ಸೂಕ್ತವಾದ ಯೋಗಾಸನಗಳ ಮೂಲಕವೇ ಶರೀರವನ್ನು ತಂಪು ಮಾಡಿಕೊಳ್ಳಬಹುದು.

ಟ್ರೆಂಡಿಂಗ್​ ಸುದ್ದಿ

ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ನಾವು ಸೇವಿಸುವ ಆಹಾರ ಎಷ್ಟು ಪೂರಕವಾಗಿರಬೇಕೋ ಅದರಷ್ಟೇ ಮಹತ್ವ ನಾವು ಮಾಡುವ ಯೋಗಾನಗಳಿಗಿವೆ. ಯೋಗದಲ್ಲಿನ ಒಂದೊಂದು ಭಂಗಿಯೂ ದೇಹದೊಳಗಿನ ಉಷ್ಣತೆಯನ್ನು ಹೊರ ಹಾಕಲು ಇಲ್ಲವೇ ಶಮನಗೊಳಿಸಲು ಸಹಾಯಕವಾಗಿದೆ. ಹೌದು, ಬೇಸಿಗೆ ಕಾಲಕ್ಕೆ ಒಪ್ಪುವಂತಹ ಈ ಯೋಗಾಸನಗಳನ್ನು ನೀವು ತಿಳಿದುಕೊಳ್ಳಲೇಬೇಕು.

ತಾಡಾಸನ

ತಾಡಾಸನವನ್ನು ಪರ್ವತ ಭಂಗಿ ಎಂಬುದಾಗಿಯೂ ಕರೆಯಲಾಗುತ್ತದೆ. ಈ ಆಸನವನ್ನು ಮಾಡುವುದರಿಂದ ದೇಹದಲ್ಲಿನ ರಕ್ತ ಸಂಚಾರವನ್ನು ಸುಧಾರಿಸಲು ಮತ್ತು ದೇಹವು ಬೇರೆ ಯೋಗಾಸನಗಳಿಗೆ ತಯಾರಾಗಲು ಇದು ನೆರವಾಗುತ್ತದೆ. ಬೆಳೆಯುವ ಮಕ್ಕಳು ಎತ್ತರ ಹೆಚ್ಚಿಸಿಕೊಳ್ಳಲು ಈ ಆಸನ ನೆರವಾಗುತ್ತದೆ. ಇವೆಲ್ಲದಕ್ಕೂ ಮುಖ್ಯವಾಗಿ ಈ ಆಸನ ಮಾಡುವುದರಿಂದ ದೇಹದೊಳಗಿನ ಉಷ್ಣತೆ ಕಡಿಮೆಯಾಗುತ್ತದೆ. ಆದರೆ ತಲೆನೋವು, ನಿದ್ರಾಹೀನತೆ ಮತ್ತು ಕಡಿಮೆ ರಕ್ತದೊತ್ತಡ ಇರುವವರು ಈ ಆಸನವನ್ನು ಮಾಡದಿರುವುದು ಉತ್ತಮ.

ಬದ್ಧ ಕೋನಾಸನ

ಬದ್ಧ ಕೋನಾಸನವನ್ನು ಬಟರ್‌ ಫ್ರೈ ಪೋಸ್‌ ಎಂಬುದಾಗಿಯೂ ಹೇಳುತ್ತಾರೆ. ಒತ್ತಡ, ಆತಂಕ, ಭಯದಂತಹ ಮಾನಸಿಕ ತಲ್ಲಣಗಳಿಂದ ಮುಕ್ತಿ ಪಡೆಯಲು, ಮನಸ್ಸನ್ನು ಹಗುರಾಗಿಸಲು ಈ ಯೋಗ ಭಂಗಿ ಸಹಾಯಕ. ಮುಟ್ಟಿನ ದೋಷಗಳ ನಿವಾರಣೆಯಾಗಬೇಕಾದರೆ ಈ ಆಸನದ ನಿತ್ಯವೂ ಮಾಡುವುದು ಒಳ್ಳೆಯದು. ಇವೆಲ್ಲದಕ್ಕೂ ಮಿಗಿಲಾಗಿ ಬೇಸಿಗೆಯ ಸುಡು ಬಿಸಿಲಿನಿಂದ ದೇಹದ ಉಷ್ಣತೆ ಹೆಚ್ಚಾಗಿದ್ದರೆ ಈ ಸರಳ ಆಸನವನ್ನು ಮಾಡುವ ಮೂಲಕ ದೇಹವನ್ನು ಹಗುರವಾಗಿಸಿಕೊಳ್ಳಬಹುದು.

ಏಕಪಾದ ಪ್ರಸರಣಾಸನ

ಏಕ ಪಾದವೆಂದರೆ ಒಂದು ಕಾಲು, ಪ್ರಸರಣ ಎಂದರೆ ಚಾಚುವುದು ಒಂದು ಕಾಲನ್ನು ಹಿಂದೆ ಚಾಚುವ ಭಂಗಿಯನ್ನು ಏಕಪಾದ ಪ್ರಸರಣಾಸನವೆನ್ನಲಾಗುತ್ತದೆ. ಈ ಆಸನವನ್ನು ನಿತ್ಯವೂ ಮಾಡುವುದರಿಂದ ಕಾಲುಗಳು ಬಲಗೊಳ್ಳುವವು, ಬೆನ್ನಿನ ಭಾಗ ಹಿಗ್ಗಲ್ಪಡುವುದು, ತೊಡೆ, ಮೀನಖಂಡದ ಮಾಂಸಖಂಡಗಳು ಬಲಿಷ್ಠಗೊಳ್ಳುವವು. ಕ್ರೀಡಾಪಟುಗಳಿಗೆ ಇದು ಉತ್ತಮ ಆಸನ. ಮಲ ಬದ್ಧತೆ, ಮಧುಮೇಹ ಮತ್ತು ಋುತುಚಕ್ರ ಸಮಸ್ಯೆ ಇರುವ ಸ್ತ್ರೀಯರಿಗೆ ಉತ್ತಮ ಆಸನ. ಇದಷ್ಟೇ ಅಲ್ಲದೆ ದೇಹವನ್ನು ತಂಪಾಗಿಸುವಲ್ಲಿ ಈ ಆಸನ ಪಾತ್ರ ಬಹಳ ಪ್ರಮುಖವಾಗಿದೆ.

ಸಿಂಹ ಭಂಗಿ ಅಥವಾ ಸಿಂಹಾಸನ

ಸಿಂಹಾಸನವು ಕುಳಿತುಕೊಂಡು ಮಾಡುವ ಯೋಗಾಸನವಾಗಿದ್ದು, ಸಿಂಹವು ಕೂರುವ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಈ ಆಸನ ಮಾಡುವುದರಿಂದ ಮನಸ್ಸನ್ನು ಶಾಂತಗೊಳಿಸಲು ಮತ್ತು ದೇಹವನ್ನು ಸಜ್ಜುಗೊಳಿಸಲು ಸಹಾಯ ಮಾಡುತ್ತದೆ. ದವಡೆಗಳಲ್ಲಿ ಅಸ್ವಸ್ಥತೆ ಅನುಭವಿಸುತ್ತಿದ್ದವರಿಗೆ ಸಿಂಹಾಸನವು ಪ್ರಮುಖ ಆಸನ. ಕಣ್ಣುಗಳಲ್ಲಿ ಉರಿ ಇದ್ದವರಿಗೆ ಕೂಡಾ ಇದು ಪ್ರಯೋಜನಕಾರಿ. ಈ ಯೋಗ ಭಂಗಿಯು ದೇಹವನ್ನು ತಂಪಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಉಷ್ಟ್ರಾಸನ

ಉಷ್ಟ್ರ ಎಂದರೆ ಒಂಟೆ ಎಂದರ್ಥ ಒಂಟೆಯ ಭುಜದ ಆಕೃತಿಯನ್ನು ಹೋಲುವುದರಿಂದ ಈ ಆಸನಕ್ಕೆ ಉಷ್ಟ್ರಾಸನ ಎಂದು ಕರೆಯುತ್ತಾರೆ. ಈ ಯೋಗಾಸನ ಮಾಡುವುದರಿಂದ ಬೆನ್ನೆಲುಬು ಬಲಿಷ್ಠಗೊಳ್ಳುತ್ತದೆ. ಎದೆಯನ್ನು ವಿಸ್ತರಿಸುತ್ತದೆ. ಉಸಿರಾಟದ ಕಾರ್ಯವನ್ನು ಸುಧಾರಿಸುತ್ತದೆ. ಅಸ್ತಮಾ ಸಮಸ್ಯೆಯುಳ್ಳವರಿಗೂ ಸಹಕಾರಿಯಾಗಿದೆ. ಜೀರ್ಣಕ್ರಿಯೆಯನ್ನು ಸರಾಗವಾಗಿಸುವ ಸಾಮರ್ಥ್ಯವಿರುವ ಈ ಭಂಗಿಯು ಮಿದುಳಿಗೆ ರಕ್ತಪರಿಚಲನೆಯನ್ನು ಹೆಚ್ಚಿಸಿ, ಏಕಾಗ್ರತೆಯನ್ನು ಸುಧಾರಿಸುತ್ತದೆ. ಅಲ್ಲದೆ ಬೇಸಿಗೆಯಿಂದಾಗಿ ಅಧಿಕ ಉಷ್ಣತೆಯ ಸಮಸ್ಯೆಯುಂಟಾದರೆ ಅದನ್ನೂ ಪರಿಹರಿಸುತ್ತದೆ.

ಭುಜಂಗಾಸನ

ಹೆಡೆ ಎತ್ತಿದ ಸರ್ಪವನ್ನು ಭುಜಂಗ ಎನ್ನಲಾಗುತ್ತದೆ. ಇಂತಹ ಸರ್ಪದ ಮಾದರಿಯಲ್ಲಿ ಶರೀರದ ಭಂಗಿಯನ್ನು ಮಾಡುವುದನ್ನು ಭುಜಂಗಾಸನವೆನ್ನುತ್ತಾರೆ. ಭುಜಗಳನ್ನು ಬಲ ಪಡಿಸುವುದು, ಸೊಂಟ ನೋವಿಗಿದು ರಾಮಬಾಣ. ಅನಿಯಮಿತ ಮುಟ್ಟಿನ ಸಮಸ್ಯೆಯಿರುವವರು ನಿಯಮಿತವಾಗಿ ಈ ಭಂಗಿಯನ್ನು ಮಾಡುವುದು ಒಳ್ಳೆಯದು. ಉಸಿರಾಟದ ಸಮಸ್ಯೆ ಇರುವವರು ಇದನ್ನು ಅಭ್ಯಾಸ ಮಾಡುವುದರಿಂದ ಶ್ವಾಸಕೋಶಗಳು ಹಾಗೂ ಹೃದಯ ಚೈತನ್ಯಗೊಳ್ಳುವುದು, ಉಸಿರಾಟದ ಕ್ರಿಯೆ ಸರಾಗವಾಗಿ ನಡೆಯುವುದು. ಭುಜಂಗಾಸನ ಮಾಡುವುದರಿಂದ ಇನ್ನೊಂದು ಪ್ರಮುಖ ಲಾಭವೆಂದರೆ, ದೇಹದ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ಉಷ್ಣತೆಯನ್ನು ನಿವಾರಿಸುತ್ತದೆ.

ಶವಾಸನ

ಯೋಗಾಸನದ ಕೊನೆಯಲ್ಲಿ ಮಾಡುವ ಆಸನ ಇದಾಗಿದ್ದು, ದೇಹಕ್ಕೆ ನಿರಾಳತೆಯನ್ನು ನೀಡುತ್ತದೆ. ಗಮನ ಮತ್ತು ಸ್ಮರಣಶಕ್ತಿಯನ್ನು ಹೆಚ್ಚಿಸುವ ಈ ಆಸನ, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಕಾರಿ. ಆತಂಕ ಹಾಗೂ ಒತ್ತಡವನ್ನು ನಿವಾರಿಸಿ ಮನಸ್ಸಿಗೆ ಶಾಂತಿ ಸಿಗುವಂತೆ ಮಾಡುತ್ತದೆ. ದೇಹವು ಉಷ್ಣತೆಯಿಂದ ಕೂಡಿದ್ದಾಗ ಶವಾಸನವನ್ನು ಮಾಡುವುದರಿಂದ, ದೇಹ ತಂಪಾಗಲು ಹಾಗೂ ಉಷ್ಣತೆ ನಿವಾರಣೆಯಾಗಲು ಸಹಕಾರಿಯಾಗುತ್ತದೆ.

ಗಮನಿಸಿ: ಯೋಗಾಸನದ ಬಗ್ಗೆ ಸ್ವಲ್ಪವೂ ಮಾಹಿತಿ ಇಲ್ಲದವರು ತರಬೇತುದಾರರ ಸಲಹೆ ಪಡೆಯುವುದು ಉತ್ತಮ.