ಬೇಸಿಗೆಯಲ್ಲಿ ನಿರ್ಜಲಿಕರಣದಿಂದ ನಿಮ್ಮನ್ನು ಕಾಪಾಡಿಕೊಳ್ಳಬೇಕಾ? ಹಾಗಾದ್ರೆ ಸೌತೆಕಾಯಿಯ ಈ ಹೊಸ ರೆಸಿಪಿಗಳನ್ನು ಮಾಡಿ ಸವಿಯಿರಿ
ಬೇಸಿಗೆಯಲ್ಲಿ ಬಳಸಲು ಸೌತೆಕಾಯಿಯು ಅತ್ಯುತ್ತಮ ತರಕಾರಿ. ಸೌತೆಕಾಯಿಯಿಂದ ಸಲಾಡ್, ರೈತಾ ಮಾಡಿ ಸವಿದರೆ, ಕೆಲವೇ ದಿನಗಳಲ್ಲಿ ಬೇಸರ ಬರಬಹುದು. ಅದಕ್ಕಾಗಿ ಸೌತೆಕಾಯಿಯಿಂದ ತಯಾರಿಸಬಹುದಾದ ವಿಶೇಷ ಅಡುಗೆಗಳನ್ನು ಇಲ್ಲಿ ನೀಡಲಾಗಿದೆ. ಈ ಬೇಸಿಗೆಯಲ್ಲಿ ಇವುಗಳನ್ನು ತಯಾರಿಸಿ ಖಂಡಿತ ಸವಿಯಿರಿ. (ಬರಹ: ಅರ್ಚನಾ ವಿ. ಭಟ್)

ಬೇಸಿಗೆ ಬಂತೆಂದರೆ ನಮ್ಮ ಆಹಾರ ಪದ್ಧತಿಗಳೆಲ್ಲವೂ ಬದಲಾಗುತ್ತದೆ. ಈ ದಿನಗಳಲ್ಲಿ ಹೈಡ್ರೇಟ್ ಆಗಿರುವುದೊಂದೇ ಸೂರ್ಯನ ಶಾಖದಿಂದ ತಪ್ಪಿಸಿಕೊಳ್ಳಲು ಇರುವ ಪ್ರಮುಖ ಮಾರ್ಗವಾಗಿದೆ. ಈ ದಿನಗಳಲ್ಲಿ ಶಾಖದಿಂದ ತಪ್ಪಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಅದಕ್ಕೆ ನೀರು ಕುಡಿದರೆ ಸಾಲುವುದಿಲ್ಲ. ದೇಹವನ್ನು ಸದಾ ಚುರುಕಾಗಿಡುವ ಮತ್ತು ಆರೋಗ್ಯವನ್ನು ಕಾಪಾಡುವ ಪೂರಕ ಆಹಾರಗಳು, ಎಲೆಕ್ಟ್ರೋಲೈಟ್ಗಳು ಮತ್ತು ಅಗತ್ಯ ಪೋಷಕಾಂಶಗಳು ಬೇಕು. ಅಷ್ಟೇ ಅಲ್ಲದೇ ದೇಹವನ್ನು ತಂಪಾಗಿರಿಸುವ ಹಾಗೂ ರಕ್ಷಿಸಿಕೊಳ್ಳುವ ಆಹಾರಗಳು ಅವಶ್ಯವಾಗಿ ಬೇಕು.
ಸೂರ್ಯನ ಶಾಖದಿಂದ ಬಳಲುವ ದೇಹವನ್ನು ತಂಪಾಗಿಸುವ ಆಹಾರಗಳಲ್ಲಿ ಸೌತೆಕಾಯಿ ಬಹಳ ಪ್ರಮುಖವಾದುದು. ಇದು ನಾರಿನಂಶ ಮತ್ತು ನೀರಿನ ಅಂಶದಿಂದ ಸಮೃದ್ಧವಾಗಿದೆ. ಹಾಗಾಗಿ ಬೇಸಿಗೆಯ ಸೂಪರ್ ಆಹಾರವಾಗಿ ಸೌತೆಕಾಯಿಗೆ ಹೆಚ್ಚಿನ ಮಹತ್ವ ಇದೆ. ಸಲಾಡ್, ಸ್ಮೂಥಿ, ಡಿಪ್, ರೈತಾ ಮುಂತಾದವುಗಳಿಗೆ ಸೌತೆಕಾಯಿ ಸೇರಿಸಬಹುದು. ಇದು ರಿಫ್ರೆಶ್ಮೆಂಟ್ ತರಕಾರಿಗಳಲ್ಲಿಯೂ ಒಂದಾಗಿದೆ. ಬೇಸಿಗೆಯಲ್ಲಿ ಬಿಸಿಲಿನ ತಾಪವನ್ನು ಕಡಿಮೆ ಮಾಡಿಕೊಳ್ಳಲು ನಿಮ್ಮ ನಿತ್ಯದ ಅಡುಗೆಯಲ್ಲಿ ಸೌತೆಕಾಯಿ ಬಳಸುವುದು ಅಗತ್ಯ. ಸೌತೆಕಾಯಿಯಿಂದ ಯಾವೆಲ್ಲಾ ಹೊಸ ಅಡುಗೆಗಳನ್ನು ತಯಾರಿಸಬಹುದು ಎನ್ನುವ ವಿವರ ಇಲ್ಲಿದೆ.
ಸೌತೆಕಾಯಿ ಅವಕಾಡೊ ಸಲಾಡ್
ಸೌತೆಕಾಯಿಯಲ್ಲಿ ಮೆಗ್ನೀಸಿಯಮ್ ಮತ್ತು ತಾಮ್ರ ಸಮೃದ್ಧವಾಗಿದೆ. ಅವಕಾಡೊದಲ್ಲಿ (ಬೆಣ್ಣೆಹಣ್ಣು) ಫೋಲೇಟ್, ಆರೋಗ್ಯಕರ ಕೊಬ್ಬುಗಳು ಮತ್ತು ನಾರಿನಾಂಶವಿದೆ. ಈ ಸಲಾಡ್ ತೂಕ ನಿರ್ವಹಣೆಯ ಪ್ರಯತ್ನದಲ್ಲಿರುವವರಿಗೂ ಉಪಯುಕ್ತವಾಗಿದೆ. ಮೃದುವಾದ ಅವಕಾಡೊ ಮತ್ತು ತಾಜಾ ಸೌತೆಕಾಯಿಯಿಂದ ತಯಾರಿಸಿದ ಸಲಾಡ್ ರುಚಿಯಾಗಿರುತ್ತದೆ. ಕೊತ್ತಂಬರಿ ಸೊಪ್ಪು, ನಿಂಬೆ ರಸ, ಉಪ್ಪು, ಕೆಂಪು ಮೆಣಸಿನ ಪುಡಿ ಮತ್ತು ಜೇನುತುಪ್ಪ ಸೇರಿಸಿ ರುಚಿಕರವಾದ ಸೌತೆಕಾಯಿ ಅವಕಾಡೊ ಸಲಾಡ್ ತಯಾರಿಸಬಹುದು. ಇದು ದೇಹಕ್ಕೆ ಶಕ್ತಿ ಒದಗಿಸುತ್ತದೆ. ಅಷ್ಟೇ ಅಲ್ಲದೆ, ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಸೌತೆಕಾಯಿ ರೈತಾ
ನೀವು ದೇಸಿ ಆಹಾರಗಳನ್ನು ತುಂಬಾ ಇಷ್ಟ ಪಡುತ್ತಿದ್ದರೆ ಅದಕ್ಕೆ ಸೌತೆಕಾಯಿ ರೈತಾ ಉತ್ತಮವಾಗಿದೆ. ಭಾರತದಲ್ಲಿ ಸೈಡ್ ಡಿಶ್ ಆಗಿ ಇದನ್ನು ಬಡಿಸಲಾಗುತ್ತದೆ. ಮೊಸರಿಗೆ ತುರಿದ ಸೌತೆಕಾಯಿ, ಜೀರಿಗೆ ಬೆರೆಸಿ ತಯಾರಿಸುವ ಮಸಾಲೆಯುಕ್ತ ರೈತಾ ದೇಹಕ್ಕೆ ತಂಪು ನೀಡುವುದರ ಜೊತೆಗೆ ನಾಲಿಗೆಯ ರುಚಿಮೊಗ್ಗುಗಳನ್ನು ಚುರುಕುಗೊಳಿಸುತ್ತದೆ. ನೋಡಲು ಆಕರ್ಷಕವಾದ ಈ ಅಡುಗೆಗೆ ಸ್ವಲ್ಪ ಕೆಂಪು ಮೆಣಸಿನ ಪುಡಿ ಜೊತೆಗೆ ಒಗ್ಗರಣೆ ಮಾಡುವುದರ ಮೂಲಕ ರುಚಿಯನ್ನು ದುಪ್ಪಟ್ಟಾಗಿಸಬಹುದು. ಸೌತೆಕಾಯಿ ರೈತಾವನ್ನು ಕೊತ್ತಂಬರಿ ಸೊಪ್ಪು ಮತ್ತು ಪುದೀನ ಎಲೆಗಳಿಂದ ಅಲಂಕರಿಸಬಹುದು.
ಸೌತೆಕಾಯಿ ಮತ್ತು ಕಲ್ಲಂಗಡಿ ಸಲಾಡ್
ತಾಪಮಾನವು 40°C (40 ಡಿಗ್ರಿ ಸೆಂಟಿಗ್ರೇಡ್) ದಾಟಿದಾಗ ಅನೇಕ ಜನರಿಗೆ ಹಸಿವು ಕಡಿಮೆಯಾಗುತ್ತದೆ. ಇದು ನೈಸರ್ಗಿಕವಾಗಿ ಸಹಜ ಪ್ರಕ್ರಿಯೆ. ಏಕೆಂದರೆ ದೇಹವು ಆಂತರಿಕ ತಾಪಮಾನವನ್ನು ಕಾಪಾಡಿಕೊಳ್ಳಲು ಈ ವಾತಾವರಣದಲ್ಲಿ ಹೆಚ್ಚಿನ ಶಕ್ತಿಯ ಅಗತ್ಯ ಇರುವುದಿಲ್ಲ. ಜೀರ್ಣಕ್ರಿಯೆಯು ಶಾಖವನ್ನು ಉತ್ಪಾದಿಸುತ್ತದೆ. ಆದರೆ ದೇಹಕ್ಕೆ ಪೋಷಣೆ ಮತ್ತು ಜಲಸಂಚಯನವನ್ನು ಕಾಪಾಡಿಕೊಳ್ಳಲು ನಿಮಗೆ ಇನ್ನೂ ಆಹಾರ ಬೇಕು. ಕಲ್ಲಂಗಡಿ ಹಣ್ಣು ಮತ್ತು ಸೌತೆಕಾಯಿಯನ್ನು ಸೇರಿಸಿ ತ್ವರಿತವಾಗಿ ಸಲಾಡ್ ತಯಾರಿಸಬಹುದು. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ತೇವಾಂಶ ಕಾಪಾಡುವ ಗುಣಗಳಿಂದ ತುಂಬಿದೆ.
ಸೌತೆಕಾಯಿ ಸಿಗಡಿ ಸಿವಿಚೆ (ಮೀನಿನ ಆಹಾರ)
ಸೆವಿಚೆ ಎಂಬುದು ತೆಳುವಾಗಿ ಕತ್ತರಿಸಿದ ಮೀನುಗಳನ್ನು ಮ್ಯಾರಿನೇಟ್ ಮಾಡಿದ ಕೋಲ್ಡ್ ಸಲಾಡ್ ಆಗಿದೆ. ಈ ಪಾಕವಿಧಾನದ ಆಸಕ್ತಿದಾಯಕ ಅಂಶವೆಂದರೆ ಇಲ್ಲಿ ಪದಾರ್ಥಗಳನ್ನು ಬೇಯಿಸುವುವುದಿಲ್ಲ. ಮಾಂಸದ ಚೂರುಗಳು ಆಮ್ಲೀಯ ಮ್ಯಾರಿನೇಡ್ನಲ್ಲಿ ಬೇಯಿಸುವಷ್ಟು ತೆಳ್ಳಗಿರುತ್ತವೆ. ಇದು ಮಾಂಸದಲ್ಲಿರುವ ಪರಾವಲಂಬಿಗಳು ಸೇರಿದಂತೆ ರೋಗಕಾರಕಗಳನ್ನು ಸಹ ಕೊಲ್ಲುತ್ತದೆ. ಸೀಗಡಿಯನ್ನು ನಿಂಬೆ ರಸದೊಂದಿಗೆ ಮ್ಯಾರಿನೇಟ್ ಮಾಡುವಾಗಲೂ ನೀವು ಅದೇ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. ಸೌತೆಕಾಯಿ, ಕೆಂಪು ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪಿನೊಂದಿಗೆ ಇದನ್ನು ಬಡಿಸಿ.
ಸೌತೆಕಾಯಿ ಗಾಜ್ಪಾಚೊ
ಸ್ಪೇನ್ನಲ್ಲಿ ತಯಾರಿಸುವ ಒಂದು ವಿಶೇಷವಾದ ಆಹಾರ ಬಗೆ ಇದಾಗಿದೆ. ಇದು ಒಂದು ರೀತಿಯಲ್ಲಿ ಸೌತೆಕಾಯಿಯ ಸೂಪ್ನಂತೆ ಕಂಡರೂ ಕೂಡಾ ಬಹಳ ವಿಶೇಷವಾಗಿ ತಯಾರಿಸಲಾಗುತ್ತದೆ. ಟೊಮೆಟೊ, ಕಾಳುಮೆಣಸು ಮತ್ತು ಸೌತೆಕಾಯಿಗಳನ್ನು ಒಟ್ಟಿಗೆ ಹಾಕಿ ಈ ಮಿಶ್ರಣ ತಯಾರಿಸಲಾಗುತ್ತದೆ. ಅದಕ್ಕೆ ತಾಜಾ ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ಬಳಸಿ ಅದರ ಪರಿಮಳವನ್ನು ಹೆಚ್ಚಿಸಲಾಗುತ್ತದೆ. ಇದನ್ನು ಹಾಗೆಯೇ ಸವಿಯಬಹುದು ಅಥವಾ ಬ್ರೆಡ್ನೊಂದಿಗೂ ತಿನ್ನಬಹುದು.
ಸೌತೆಕಾಯಿ ಜಟ್ಜಿಕಿ
ಗ್ರೀಸ್ ದೇಶದ ವಿಶೇಷ ಅಡುಗೆ ಇದಾಗಿದೆ. ಇದರಲ್ಲಿ ಮೊಸರು ಮತ್ತು ಸೌತೆಕಾಯಿ ಸೇರಿಸಿ ಜಟ್ಜಿಕಿ ತಯಾರಿಸಿ ಬಡಿಸಲಾಗುತ್ತದೆ. ಇದರಲ್ಲಿರುವ ಕೆನೆಭರಿತ ಮೊಸರು, ತಂಪಾಗಿಸುವ ಮತ್ತು ಶಾಂತಗೊಳಿಸುವ ರುಚಿಯನ್ನು ಹೊಂದಿರುತ್ತದೆ. ಇದನ್ನು ಗ್ರಿಲ್ ಮಾಡಿದ ಮಾಂಸ ಮತ್ತು ಡೀಪ್-ಫ್ರೈಡ್ ತಿಂಡಿಗಳೊಂದಿಗೂ ಸೇರಿಸಿಕೊಳ್ಳಬಹುದು. ಬೆಳ್ಳುಳ್ಳಿ ಪುಡಿ, ಕತ್ತರಿಸಿದ ಸಬ್ಬಸಿಗೆ ಸೊಪ್ಪು ಮತ್ತು ಮೆಣಸಿನಕಾಯಿಯನ್ನು ಸೇರಿಸುವುದರಿಂದ ಇದರ ರುಚಿ ದುಪ್ಪಟ್ಟಾಗಿರುತ್ತದೆ. ಅಲ್ಲಿನ ಅನೇಕ ರೆಸ್ಟೋರೆಂಟ್ಗಳಲ್ಲಿ, ಇದನ್ನು ಬ್ರೆಡ್ನೊಂದಿಗೂ ಸೇವಿಸಬಹುದು. ಮನೆಯಲ್ಲಿ ಚಪಾತಿ, ರೊಟ್ಟಿ ಮಾಡಿದ್ದರೆ ಅದರೊಂದಿಗೂ ಸೌತೆಕಾಯಿ ಜಟ್ಜಿಕಿ ತಿನ್ನಬಹುದು.