Mango Lassi: ಬೇಸಿಗೆ ಧಗೆಯಿಂದ ಪಾರಾಗಲು ಮನೆಯಲ್ಲೇ ತಯಾರಿಸಿ ಆರೋಗ್ಯಕರ ಲಸ್ಸಿ; 4 ರೀತಿಯ ಮಾವಿನಹಣ್ಣಿನ ಲಸ್ಸಿ ರೆಸಿಪಿಗಳು
Mango Lassi Recipe: ಮಾವಿನ ಹಣ್ಣಿನ ಸೀಸನ್ ಆರಂಭಗೊಂಡಿದೆ. ಬೇಸಿಗೆಯ ಧಗೆಯನ್ನು ತಣಿಸಿಕೊಳ್ಳಲು ಮಾವಿನ ಹಣ್ಣುಗಳನ್ನು ಬಳಸಿ ಮನೆಯಲ್ಲೇ ತಯಾರಿಸಬಹುದಾದ ಆರೋಗ್ಯಕರ ಲಸ್ಸಿಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. 4 ರೀತಿಯ ಮಾವಿನ ಹಣ್ಣಿನ ಲಸ್ಸಿ ಇಲ್ಲಿದೆ. ಒಮ್ಮೆ ಮಾಡಿ ರುಚಿ ಸವಿಯಿರಿ.
ಮಾವಿನಹಣ್ಣಿನ ಲಸ್ಸಿ ರೆಸಿಪಿ: ಬೇಸಿಗೆ ಆರಂಭಗೊಂಡಿದೆ. ಸೆಕೆ ಜೋರಾಗ್ತಿದೆ ಅದರ ಜೊತೆಯಲ್ಲೇ ಮಾವಿನ ಹಣ್ಣಿನ ಸೀಸನ್ ಕೂಡ ಆರಂಭಗೊಂಡಿದೆ. ಬಿಸಿಲಿನ ಬೇಗೆಯಿಂದ ಪಾರಾಗಲು ನಿಮಗೆ ಸಹಾಯ ಮಾಡುವ ಜ್ಯೂಸ್‌ಗಳಲ್ಲಿ ರುಚಿಕರವಾದ ಮ್ಯಾಂಗೋ ಲಸ್ಸಿ ಕೂಡಾ ಒಂದು. ಮ್ಯಾಂಗೋ ಲಸ್ಸಿ ಎಷ್ಟು ಜನಪ್ರಿಯತೆಯನ್ನು ಹೊಂದಿದೆ ಎಂದರೆ 2023-24ನೇ ಸಾಲಿನ ವಿಶ್ವದ ಟಾಪ್ 16 ಡೈರಿ ಪಾನೀಯಗಳ ಪಟ್ಟಿಯಲ್ಲಿ ಮ್ಯಾಂಗೋ ಲಸ್ಸಿ ಮೊದಲನೇ ಸ್ಥಾನ ಪಡೆದುಕೊಂಡಿದೆ.
ನೀವು ತೂಕ ಇಳಿಕೆಯ ಪ್ರಯತ್ನದಲ್ಲಿದ್ದು ಮಾವಿನ ಹಣ್ಣಿನ ಲಸ್ಸಿ ಸೇವಿಸಬೇಕು ಎಂದುಕೊಂಡಿದ್ದರೆ ಅಥವಾ ನೀವು ಮಧುಮೇಹಿಗಳಾಗಿದ್ದಲ್ಲಿ ನೀವು ಸಕ್ಕರೆಯನ್ನು ಬಳಕೆ ಮಾಡದೆ ಕೂಡಾ ಲಸ್ಸಿಯನ್ನು ತಯಾರಿಸಬಹುದಾಗಿದೆ. ಮಾವಿನ ಹಣ್ಣಿನ ಲಸ್ಸಿಯನ್ನು ಇನ್ನಷ್ಟು ರುಚಿಕರವಾಗಿಸಲು ನೀವು ಬಾದಾಮಿ, ಚಿಯಾದಂತಹ ಆರೋಗ್ಯಕರ ಪದಾರ್ಥಗಳನ್ನು ಸೇರಿಸಬಹುದಾಗಿದೆ. ಮನೆಯಲ್ಲಿಯೇ ಆರೋಗ್ಯಕರ ರೀತಿಯಲ್ಲಿ ಮಾವಿನ ಹಣ್ಣಿನ ಲಸ್ಸಿಯನ್ನು ಹೇಗೆಲ್ಲ ತಯಾರಿಸಬಹುದು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ ನೋಡಿ.
1. ಮ್ಯಾಂಗೋ ಬಾದಾಮಿ ಲಸ್ಸಿ
ಬೇಕಾಗುವ ಸಾಮಗ್ರಿಗಳು
- ಮಾಗಿದ ಮಾವಿನ ಹಣ್ಣು- 1
- ಮೊಸರು - 1 ಕಪ್
- ರಾತ್ರಿ ನೆನೆಸಿಟ್ಟ ಬಾದಾಮಿ - 1/4 ಕಪ್
- ಜೇನುತುಪ್ಪ - 1 ಟೇಬಲ್ ಚಮಚ
- ನೀರು -1/2 ಕಪ್
ಇದನ್ನೂ ಓದಿ: ಸೇಬು, ಸಪೋಟಾ ಬಳಸಿ ಮನೆಯಲ್ಲೇ ತಯಾರಿಸಿ ಬಾಯಲ್ಲಿ ನೀರೂರಿಸುವ ರುಚಿ ರುಚಿಯಾದ ಐಸ್‌ಕ್ರೀಮ್
ತಯಾರಿಸುವ ವಿಧಾನ
ಮಾವಿನ ಹಣ್ಣು, ಮೊಸರು, ನೆನೆಸಿಟ್ಟ ಬಾದಾಮಿ, ಜೇನುತುಪ್ಪ ಹಾಗೂ ನೀರನ್ನು ಜ್ಯೂಸರ್‌ಗೆ ಹಾಕಿ.
ಇದು ಕ್ರೀಂನ ಹದಕ್ಕೆ ಬರುವವರೆಗೂ ಬ್ಲೆಂಡ್ ಮಾಡುತ್ತಲೇ ಹೋಗಿ
ಬಳಿಕ ಇದನ್ನು ಲೋಟದಲ್ಲಿ ಹಾಕಿ ಬಾದಾಮಿಯ ತುಂಡುಗಳಿಂದ ಅಲಂಕರಿಸಿ ಸವಿಯಲು ನೀಡಿ
ಈ ಮ್ಯಾಂಗೋ ಬಾದಾಮಿ ಲಸ್ಸಿಯು ರಕ್ತದೊತ್ತಡ ನಿಯಂತ್ರಿಸುವುದರ ಜೊತೆಯಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.
2. ಮ್ಯಾಂಗೋ ಚಿಯಾ ಲಸ್ಸಿ
ಬೇಕಾಗುವ ಸಾಮಗ್ರಿಗಳು
- ಮಾಗಿದ ಮಾವಿನಹಣ್ಣು - 1
- ಮೊಸರು - 1 ಕಪ್
- ಚಿಯಾ ಬೀಜ - 2 ದೊಡ್ಡ ಚಮಚ
- ಜೇನುತುಪ್ಪ - 1 ದೊಡ್ಡ ಚಮಚ
- ನೀರು - 1/2 ಕಪ್
ತಯಾರಿಸುವ ವಿಧಾನ
ಮಾವಿನ ಹಣ್ಣು, ಮೊಸರು, ಚೀಯಾ ಬೀಜಗಳು, ಜೇನುತುಪ್ಪ ಹಾಗೂ ನೀರನ್ನು ಸೇರಿಸಿಕೊಂಡು ಗ್ರೈಂಡ್ ಮಾಡಿಕೊಳ್ಳಿ
ಮಿಕ್ಸಿಯಲ್ಲಿ 5-10 ನಿಮಿಷಗಳ ಕಾಲ ಚೆನ್ನಾಗಿ ಗ್ರೈಂಡ್ ಮಾಡಿ
ಇದಾದ ಬಳಿಕ ಲೋಟಕ್ಕೆ ಈ ಮಿಶ್ರಣವನ್ನು ಹಾಕಿ ಮೇಲಿನಿಂದ ನೆನೆಸಿಟ್ಟ ಚಿಯಾ ಬೀಜಗಳು ಹಾಗೂ ಬಾದಾಮಿ ತುಂಡುಗಳಿಂದ ಅಲಂಕರಿಸಿ ಸವಿಯಲು ನೀಡಿ.
3. ಮ್ಯಾಂಗೋ ಅರಿಶಿಣ ಲಸ್ಸಿ
ಬೇಕಾಗುವ ಸಾಮಗ್ರಿಗಳು
- ಮಾಗಿದ ಮಾವಿನ ಹಣ್ಣು - 1
- ಮೊಸರು -1 ಕಪ್
- ಅರಿಶಿಣ - 1 ಚಮಚ
- ಶುಂಠಿ ಪುಡಿ - 1/2 ಚಮಚ
- ಕಾಳು ಮೆಣಸು - 1/2 ಚಮಚ
- ಜೇನುತುಪ್ಪ - 1 ಚಮಚ
- ನೀರು - 1/2 ಕಪ್
ತಯಾರಿಸುವ ವಿಧಾನ
ಮಾವಿನ ಹಣ್ಣು, ಮೊಸರು, ಅರಿಶಿಣ, ಶುಂಠಿ, ಕಾಳು ಮೆಣಸು, ಜೇನುತುಪ್ಪ ಹಾಗೂ ನೀರನ್ನು ಸೇರಿಸಿ ಚೆನ್ನಾಗಿ ಗ್ರೈಂಡ್ ಮಾಡಿ.
ಈ ಬಗೆಯ ಮಾವಿನ ಹಣ್ಣಿನ ಲಸ್ಸಿಯು ನಾಲಗೆಗೆ ರುಚಿಯನ್ನು ನೀಡುವುದರ ಜೊತೆಯಲ್ಲಿ ಆರೋಗ್ಯಕ್ಕೂ ಸಾಕಷ್ಟು ಉಪಯೋಗವಾಗಲಿದೆ.
4. ಮ್ಯಾಂಗೋ ತೆಂಗಿನ ಹಾಲಿನ ಲಸ್ಸಿ
ಬೇಕಾಗುವ ಸಾಮಗ್ರಿಗಳು
- ಮಾವಿನ ಹಣ್ಣು - 1
- ಮೊಸರು - 1 ಕಪ್
- ತೆಂಗಿನ ಹಾಲು - 1/2 ಕಪ್
- ತುರಿದ ತೆಂಗಿನಕಾಯಿ - 2 ಚಮಚ
- ಜೇನುತುಪ್ಪ - 1 ಚಮಚ
- ನೀರು 1/2 ಚಮಚ
ಇದನ್ನೂ ಓದಿ: ಹಲಸಿನ ಐಸ್‌ಕ್ರೀಮ್, ಬರ್ಗರ್, ಕೇಕ್.. ನಾಲಿಗೆಯ ರುಚಿ ಮೊಗ್ಗು ಅರಳಿಸುವ ಬಗೆ ಬಗೆ ಹಲಸಿನ ಖಾದ್ಯಗಳ ಫೋಟೊಸ್ ಇಲ್ಲಿವೆ
ತಯಾರಿಸುವ ವಿಧಾನ
ಮಾವಿನ ಹಣ್ಣು, ಮೊಸರು, ತೆಂಗಿನಕಾಯಿ ಹಾಲು, ತುರಿದ ತೆಂಗಿನಕಾಯಿ, ಜೇನುತುಪ್ಪ ಹಾಗೂ ನೀರನ್ನು ಸೇರಿಸಿ ಚೆನ್ನಾಗಿ ಗ್ರೈಂಡ್ ಮಾಡಿಕೊಳ್ಳಿ
ಈ ಲಸ್ಸಿ ಕೂಡ ಸಖತ್ ರುಚಿಕರವಾಗಿರುವುದರ ಜೊತೆಯಲ್ಲಿ ಆರೋಗ್ಯಕ್ಕೂ ಒಳ್ಳೆಯದು.