ಬಿಸಿಲಿನ ದಾಹ ತಣಿಯಲು ಮನೆಯಲ್ಲೇ ಮಾಡಿ ತಿನ್ನಿ ಸಖತ್‌ ಟೇಸ್ಟಿ ಮ್ಯಾಂಗೋ ಕುಲ್ಫಿ, ಮಕ್ಕಳಿಗೂ ಇದು ಫೇವರಿಟ್‌ ಆಗೋದು ಪಕ್ಕಾ
ಕನ್ನಡ ಸುದ್ದಿ  /  ಜೀವನಶೈಲಿ  /  ಬಿಸಿಲಿನ ದಾಹ ತಣಿಯಲು ಮನೆಯಲ್ಲೇ ಮಾಡಿ ತಿನ್ನಿ ಸಖತ್‌ ಟೇಸ್ಟಿ ಮ್ಯಾಂಗೋ ಕುಲ್ಫಿ, ಮಕ್ಕಳಿಗೂ ಇದು ಫೇವರಿಟ್‌ ಆಗೋದು ಪಕ್ಕಾ

ಬಿಸಿಲಿನ ದಾಹ ತಣಿಯಲು ಮನೆಯಲ್ಲೇ ಮಾಡಿ ತಿನ್ನಿ ಸಖತ್‌ ಟೇಸ್ಟಿ ಮ್ಯಾಂಗೋ ಕುಲ್ಫಿ, ಮಕ್ಕಳಿಗೂ ಇದು ಫೇವರಿಟ್‌ ಆಗೋದು ಪಕ್ಕಾ

ಬಿಸಿಲಿನ ದಾಹ ತಣಿಸುವ ಜೊತೆಗೆ ಮಕ್ಕಳಿಗೂ ಇಷ್ಟವಾಗುವ ಸ್ಪೆಷಲ್‌ ರೆಸಿಪಿ ಮಾಡಬೇಕು ಅಂತಿದ್ರೆ ಗಮನಿಸಿ. ಇದು ಮಾವಿನ ಹಣ್ಣಿನ ಸೀಸನ್‌. ಮನೆಯಲ್ಲೇ ಸುಲಭವಾಗಿ ಮಾಡಬಹುದು ಮ್ಯಾಂಗೋ ಕುಲ್ಫಿ, ಇಲ್ಲಿದೆ ರೆಸಿಪಿ.

ಮ್ಯಾಂಗೋ ಕುಲ್ಫಿ
ಮ್ಯಾಂಗೋ ಕುಲ್ಫಿ

ಮಕ್ಕಳಿಗೆ ಬೇಸಿಗೆ ರಜೆ, ಹೊರಗಡೆ ಜೋರು ಬಿಸಿಲಿನ ತಾಪ, ಮಾವಿನ ಹಣ್ಣಿನ ಸೀಸನ್‌ ಬೇರೆ... ಇಂತಹ ಸಮಯದಲ್ಲಿ ನಾಲಿಗೆಗೆ ಹಿತ ಎನ್ನಿಸುವ ಕೂಲ್‌ ಕೂಲ್‌ ಆಗಿರುವ ತಿನಿಸನ್ನು ಮನಸ್ಸು ಬಯಸೋದು ಸಹಜ. ಹಾಗಂತ ಪ್ರತಿ ಬಾರಿ ಹೊರಗಡೆಯಿಂದ ಐಸ್‌ಕ್ರೀಮ್‌, ಜ್ಯೂಸ್‌ ತಂದು ತಿನ್ನೋದು, ಕುಡಿಯೋದು ಆಗದ ಮಾತು. ಅಲ್ಲದೇ ಮಕ್ಕಳಿಗೆ ಎಲ್ಲಾ ರೀತಿ ತಿನಿಸುಗಳು ಇಷ್ಟವಾಗೋದು ಇಲ್ಲ. ಹಾಗಂತ ಚಿಂತಿಸುವ ಅಗತ್ಯವಿಲ್ಲ.

ನಿಮ್ಮ ಮನೆಯಲ್ಲಿ ಮಾವಿನ ಹಣ್ಣು ಇದ್ರೆ ಸಾಕು, ಮಕ್ಕಳು ಸೇರಿ ಮನೆ ಮಂದಿಗೆಲ್ಲಾ ಇಷ್ಟವಾಗುವ ರೆಸಿಪಿ ತಯಾರಿಸಬಹುದು. ಮಾತ್ರವಲ್ಲ ಇದು ಬೇಸಿಗೆಗೆ ಹೇಳಿ ಮಾಡಿಸಿದಂತಿರುತ್ತದೆ. ಹೌದು ನಾವೀಗ ಹೇಳ್ತಾ ಇರೋದು ಮಾವಿನಹಣ್ಣಿನ ಕುಲ್ಫಿ ಬಗ್ಗೆ. ಮಾವಿನ ಹಣ್ಣಿನ ಕುಲ್ಫಿ ನೀವು ಹೊರಗಡೆ ತಿಂದಿರಬಹುದು, ಆದರೆ ಮನೆಯಲ್ಲೂ ಅಷ್ಟೇ ರುಚಿಯ ಕುಲ್ಫಿಯನ್ನು ಮಾಡಿ ತಿನ್ನಬಹುದು. ಇದಕ್ಕೆ ಹೆಚ್ಚಿನ ಸಾಮಗ್ರಿಗಳ ಅಗತ್ಯವೂ ಇಲ್ಲ, ಮಾಡೋದು ಕಷ್ಟ ಏನಲ್ಲ. ನೀವು ಮನೆಯಲ್ಲಿ ಒಮ್ಮೆ ಮಾಡಿ ತಿನ್ನಿ, ಖಂಡಿತ ಇದರ ರುಚಿಗೆ ಕಳೆದುಹೋಗ್ತೀರಾ.

ಮ್ಯಾಂಗೋ ಕುಲ್ಫಿ ಮಾಡಲು ಬೇಕಾಗುವ ಸಾಮಗ್ರಿಗಳು

ಮಾವಿನ ತಿರುಳು - ಒಂದೂವರೆ ಕಪ್‌, ಸಿಹಿಯಾಗಿರುವ ಕಂಡೆನ್ಸ್ಡ್‌ ಮಿಲ್ಕ್‌ - ಅರ್ಧ ಟಿನ್‌, ಕ್ರೀಮ್‌ ಅಥವಾ ಕೆನೆ - 1 ಕಪ್‌, ಏಲಕ್ಕಿ ಪುಡಿ - ಚಿಟಿಕೆ, ಕೇಸರಿ - ಚಿಟಿಕೆ, ಪಿಸ್ತಾ - ಎರಡು ಟೇಬಲ್‌ ಚಮಚ.

ಮ್ಯಾಂಗೋ ಕುಲ್ಫಿ ಮಾಡುವ ವಿಧಾನ

ಕೇಸರಿ ದಳಗಳನ್ನು ಒಂದೆರಡು ಚಮಚ ಬಿಸಿ ನೀರಿಗೆ ಹಾಕಿ, ಬದಿಗಿಡಿ. ಮಾವಿನ ಹಣ್ಣನ್ನು ಚೆನ್ನಾಗಿ ತೊಳೆದು ಸಿಪ್ಪೆ ಬಿಡಿಸಿ ತಿರುಳನ್ನು ಕತ್ತರಿಸಿ ತೆಗೆಯಿರಿ. ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮಾವಿನಹಣ್ಣಿನ ತಿರುಳಿಗೆ ಕ್ರೀಮ್‌, ಕೇಸರಿದಳ, ಕಂಡೆನ್ಡ್‌ ಮಿಲ್ಕ್‌, ಏಲಕ್ಕಿ ಪುಡಿ ಸೇರಿಸಿ. ಇದನ್ನು ಮಿಕ್ಸಿಯಲ್ಲಿ ಇನ್ನೊಂದು ಸುತ್ತು ತಿರುಗಿಸಿಕೊಳ್ಳಿ. ನಂತರ ಈ ಮಿಶ್ರಣಕ್ಕೆ ಪಿಸ್ತಾವನ್ನು ಉದುರಿಸಿ. ಈ ಮಿಶ್ರಣವನ್ನು ಚಿಕ್ಕ ಚಿಕ್ಕ ಲೋಟಕ್ಕೆ ಸುರಿಯಿರಿ ಅಥವಾ ನಿಮ್ಮ ಮನೆಯಲ್ಲಿ ಕುಲ್ಫಿ ಮೌಲ್ಡ್‌ ಇದ್ದರೆ ಅದಕ್ಕೆ ಸುರಿದು ಮಧ್ಯದಲ್ಲಿ ಕಡ್ಡಿ ಇರಿಸಿ. ನಂತರ ಇದನ್ನು ಆರರಿಂದ ಎಂಟು ಗಂಟೆಗಳ ಕಾಲ ಫ್ರಿಜರ್‌ನಲ್ಲಿಡಿ. ಈಗ ನಿಮ್ಮ ಮ್ಯಾಂಗೋ ಕುಲ್ಫಿ ತಿನ್ನಲು ರೆಡಿ. ತಿನ್ನುವ ಮೊದಲ ಒಮ್ಮೆ ಲೋಟವನ್ನು ತಣ್ಣೀರಿನಲ್ಲಿ ಮುಳುಗಿಸಿ, ಆಗ ಕುಲ್ಫಿ ಸುಲಭವಾಗಿ ಲೋಟದಿಂದ ತೆಗೆಯಲು ಬರುತ್ತದೆ. ನಂತರ ಮತ್ತೊಮ್ಮೆ ಚಿಕ್ಕದಾಗಿ ಹೆಚ್ಚಿಟ್ಟುಕೊಂಡ ಪಿಸ್ತಾ ಉದುರಿಸಿ ತಿನ್ನಲು ಕೊಡಿ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.