ಬಂದೇ ಬಿಟ್ಟಿದೆ ಮಾವು ಸೀಸನ್; ಭಾರತದಲ್ಲಿ ಪ್ರಮುಖವಾಗಿ ಬೆಳೆಯುವ 15 ವಿಧದ ಮಾವಿನ ಹಣ್ಣುಗಳಿವು
ಹಣ್ಣುಗಳ ರಾಜ ಎಂದು ಕರೆಯಲ್ಪಡುವ ಮಾವಿನಹಣ್ಣಿನ ಸುಮಾರು 1500 ಪ್ರಭೇದಗಳು ಭಾರತದಲ್ಲಿದ್ದು, ಎಲ್ಲಾ ಪ್ರಭೇದವು ವಿಭಿನ್ನ ರುಚಿ, ಆಕಾರ ಮತ್ತು ಬಣ್ಣವನ್ನು ಹೊಂದಿದೆ. ಇಲ್ಲಿ 15 ವಿಧದ ಮಾವಿನ ಹಣ್ಣಿನ ಪ್ರಭೇದಗಳು ಮತ್ತು ಅವುಗಳ ವೈಶಿಷ್ಟ್ಯ ಬಗ್ಗೆ ವಿವರಿಸಲಾಗಿದೆ. (ಬರಹ: ಪ್ರೀತಿ)

ಹಣ್ಣುಗಳ ರಾಜ ಎಂದು ಕರೆಯಲ್ಪಡುವ ಮಾವಿನಹಣ್ಣಿನ ಸುಮಾರು 1500 ಪ್ರಭೇದಗಳು ಭಾರತದಲ್ಲಿದ್ದು, ಎಲ್ಲಾ ಪ್ರಭೇದವು ವಿಭಿನ್ನ ರುಚಿ, ಆಕಾರ ಮತ್ತು ಬಣ್ಣವನ್ನು ಹೊಂದಿದೆ. ಇದರಿಂದಲೇ ನಮ್ಮ ದೇಶ ಮಾವಿನನಾಡು ಎಂಬ ಹೆಗ್ಗಳಿಕೆ ಗಳಿಸಿದೆ. ಗುಲಾಬಿ ಕೆಂಪಿನ ಗುಲಾಬ್ ಖಾಸ್ ಅಥವಾ ಸಿಂಧೂರ, ಗಿಳಿ ಕೊಕ್ಕಿನ ಆಕಾರದ ತೋತಾಪುರಿ ಹೀಗೆ ವಿಶಿಷ್ಟ ಪ್ರಭೇದದ ಮಾವಿನಹಣ್ಣುಗಳು ಭಾರತೀಯ ಮಾರುಕಟ್ಟೆಗಳನ್ನು ಆಳುತ್ತಿವೆ.
ಅಲ್ಲದೆ, ಏಪ್ರಿಲ್ ಮಧ್ಯಭಾಗದಿಂದ ಆಗಸ್ಟ್‌ವರೆಗೆ ಸುಮಾರು 300 ಗ್ರಾಂನ ರತ್ನಗಿರಿ ಅಲ್ಫೋನ್ಸೊ ಮತ್ತು ವಿಶಿಷ್ಟ ಪರಿಮಳ ಹೊಂದಿರುವ ಬಿಹಾರದ ಮಾಲ್ಡಾ ಪ್ರಭೇದದ ಮಾವಿನ ಹಣ್ಣುಗಳು ಸೇರಿದಂತೆ ವಿವಿಧ ಮಾವಿನ ಹಣ್ಣುಗಳದ್ದೇ ದರ್ಬಾರ್. ಇಲ್ಲಿ 15 ವಿಧದ ಮಾವಿನ ಹಣ್ಣಿನ ಪ್ರಭೇದಗಳು ಮತ್ತು ಅವುಗಳ ವೈಶಿಷ್ಟ್ಯ ಬಗ್ಗೆ ವಿವರಿಸಲಾಗಿದೆ.
ಭಾರತದಲ್ಲಿ ಪ್ರಮುಖವಾಗಿ ಬೆಳೆಯುವ 15 ವಿಧದ ಮಾವಿನ ಹಣ್ಣುಗಳ ಬಗ್ಗೆ ಇಲ್ಲಿದೆ ಮಾಹಿತಿ
ತೋತಾಪುರಿ: ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಬಂದ ಈ ತಳಿಯು ಬೇರೆ ಮಾವಿನ ಹಣ್ಣಿನಂತೆ ಸಿಹಿಯಾಗಿಲ್ಲದಿದ್ದರೂ, ಇದನ್ನು ಸಲಾಡ್ ಮತ್ತು ಉಪ್ಪಿನಕಾಯಿ ಹಾಕಲು ಹೆಚ್ಚಾಗಿ ಬಳಸಲಾಗುತ್ತದೆ. ಈ ಮಾವು ಹಸಿರು ಬಣ್ಣ, ಹುಳಿ-ಸಿಹಿ ಮಿಶ್ರಣವುಳ್ಳ ಗಿಳಿಯ ಕೊಕ್ಕಿನಂತೆ ಕಾಣುವ ವಿಶಿಷ್ಟ ಮಾವಿನ ತಳಿಯಾಗಿದೆ.
ಹಪ್ಪುಸ್: ಕೇಸರಿ ಬಣ್ಣದಿಂದ ಕೂಡಿದ ನಾರಿನಂಶವಿಲ್ಲದ, ಸುವಾಸನೆಭರಿತ ಈ ಪ್ರಭೇದದ ಮೂಲ ಮಹಾರಾಷ್ಟ್ರದಾಗಿದ್ದರೂ, ಇದೀಗ ಗುಜರಾತ್ ಮತ್ತು ಕರ್ನಾಟಕದಲ್ಲಿ ಬೆಳೆಯಲಾಗುತ್ತಿದೆ. ವಿಶ್ವದ ಇತರ ಭಾಗಗಳಿಗೆ ರಫ್ತು ಮಾಡಲಾಗುವ ದುಬಾರಿ ಮಾವಿನ ಹಣ್ಣುಗಳ ಪೈಕಿ ಪ್ರಮುಖವಾಗಿದೆ.
ಸಿಂಧೂರ: ಈ ತಳಿಯು ಕೆಂಪು ಬಣ್ಣದ ಹಳದಿ ಸಿಹಿ ತಿರುಳನ್ನು ಹೊಂದಿದ್ದು, ಸಿಹಿ-ಕಹಿ ಮಿಶ್ರಣದ ರುಚಿಯುಳ್ಳದ್ದಾಗಿದೆ. ಹಣ್ಣಿನ ಒಳಭಾಗವು ಹಳದಿ ಬಣ್ಣದಿಂದ ಕೂಡಿರುವುದರಿಂದ ರುಚಿಯಾದ ಮಿಲ್ಕ್ ಶೇಕ್ ಮಾಡಬಹುದು. ಸುವಾಸನೆ ಮತ್ತು ರುಚಿಯು ಬಾಯಿ ಚಪ್ಪರಿಸುವಂತೆ ಮಾಡುತ್ತದೆ.
ಬಂಗನಪಲ್ಲಿ: ಅಲ್ಫನ್ಸೋ ಹಣ್ಣಿನಂತೆ ಕಾಣುವ ಇದು ಆಂಧ್ರಪ್ರದೇಶದ ಕುರ್ನುಲ್ ಜಿಲ್ಲೆಯ ಬನಗಾನಪಲ್ಲಿ ಗ್ರಾಮದಲ್ಲಿ ಅತೀ ಹೆಚ್ಚು ಬೆಳೆಯುತ್ತಾರೆ. ಸುಮಾರು 14 ಸೆ.ಮೀ ಉದ್ದದ ಮೊಟ್ಟೆಯಾಕಾರದಲ್ಲಿ ಕಾಣುವ ಈ ಹಣ್ಣು ಹಳದಿ ಬಣ್ಣದಲ್ಲಿದ್ದು, ಸವಿಯಲು ತುಂಬಾ ರುಚಿಯಾಗಿರುತ್ತದೆ.
ರತ್ನಗಿರಿ: ಮಹಾರಾಷ್ಟ್ರದ ರತ್ನಗಿರಿ, ದೇವಗರ್, ರಾಯಗಡ ಮತ್ತು ಕೊಂಕಣ್ ಜಿಲ್ಲೆಗಳಲ್ಲಿ ರತ್ನಗಿರಿ ಮಾವಿನ ತಳಿಗೆ ಹೆಸರುವಾಸಿಯಾಗಿದೆ. ಪ್ರತಿ ಹಣ್ಣು 150 ರಿಂದ 300 ಗ್ರಾಂ ತೂಕವಿರುತ್ತದೆ. ಈ ಮಾವಿನ ಹಣ್ಣು ಭಾರತದಲ್ಲಿ ಬೆಳೆಯುವ ಅತ್ಯಂತ ದುಬಾರಿ ಮಾವಿನಹಣ್ಣುಗಳ ಪೈಕಿ ಒಂದಾಗಿದೆ.
ಚೌಸಾ: 16 ನೇ ಶತಮಾನದಲ್ಲಿ ಶೇರ್ ಶಾ ಸೂರಿ ಎಂಬಾತ ಈ ತಳಿಯನ್ನು ಪರಿಚಯಿಸಿದ್ದು, ಉತ್ತರ ಭಾರತ ಮತ್ತು ಬಿಹಾರ್ ರಾಜ್ಯದಲ್ಲಿ ಹೆಚ್ಚು ಪ್ರಾಮುಖ್ಯತೆ ಹೊಂದಿದೆ. ಬಿಹಾರದ ಒಂದು ಪ್ರದೇಶದಿಂದ ಈ ತಳಿಗೆ ಚೌಸಾ ಎಂದು ಹೆಸರಿಸಲಾಗಿದೆ. ಸಿಹಿ ತಿರುಳು ಮತ್ತು ಹಳದಿ ಮತ್ತು ಚಿನ್ನ ಲೇಪಿತ ಬಣ್ಣದಿಂದ ಕೂಡಿದೆ.
ರಸಪುರಿ: ರಾಜ್ಯದ ಹಳೆ ಮೈಸೂರು ಭಾಗದಲ್ಲಿ ಪ್ರಮುಖವಾಗಿ ಬೆಳೆಯುತ್ತಿದ್ದು, ಇದನ್ನು ಮಾವುಗಳ ರಾಣಿ ಎಂದು ಕರೆಯಲ್ಪಡುತ್ತದೆ. ಮೇ ತಿಂಗಳಲ್ಲಿ ಮಾರುಕಟ್ಟೆಗೆ ಬಂದ ಈ ಹಣ್ಣು ಜೂನ್ ತಿಂಗಳವರೆಗೆ ಲಭ್ಯವಿರುತ್ತದೆ. ಐಸ್‌ಕ್ರೀಂ, ಮೊಸರು, ಜ್ಯೂಸ್, ಜಾಮ್ ಮತ್ತು ಜೆಲ್ಲಿಗಳ ತಯಾರಿಕೆಯಲ್ಲಿ ಹೆಚ್ಚು ಬಳಸಲಾಗುತ್ತದೆ.
ಪೈರಿ: ಸಫೇದ ರೀತಿಯಲ್ಲೇ, ಮಾರುಕಟ್ಟೆಗೆ ಬರುವ ಮೊದಲ ಮಾವಿನಹಣ್ಣುಗಳಲ್ಲಿ ಒಂದಾಗಿದೆ. ಕೆಂಪಾಗಿ ಕಾಣುವ ಈ ಹಣ್ಣು ರಸಭರಿತವಾಗಿರುತ್ತದೆ ಮತ್ತು ತಿನ್ನಲು ಕಹಿಯಾಗಿರುತ್ತದೆ. ಗುಜರಾತ್ ಭಾಗದಲ್ಲಿ ಇದನ್ನು ಆಮ್ ರಸ್ ಮಾಡಲು ಬಳಸುತ್ತಾರೆ.
ಹಿಮಸಾಗರ್: ಪಶ್ಚಿಮ ಬಂಗಾಳ ಮತ್ತು ಒರಿಸ್ಸಾ ರಾಜ್ಯದಲ್ಲಿ ಅತೀ ಹೆಚ್ಚು ಬೆಳೆಯಲಾಗುತ್ತದೆ. 250 ರಿಂದ 350 ಗ್ರಾಂ ಉಳ್ಳ ಈ ಹಣ್ಣಿನ ರುಚಿ ಮತ್ತು ಪರಿಮಳಭರಿತವಾಗಿದೆ. ಇದನ್ನು ಹೆಚ್ಚಾಗಿ ಡೆಸರ್ಟ್ ಮತ್ತು ಶೇಕ್‌ಗಳನ್ನು ತಯಾರಿಸಲು ಉಪಯೋಗಿಸಲಾಗುತ್ತದೆ.
ನೀಲಂ: ದೇಶದ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆಯಾದರು, ಜೂನ್ ತಿಂಗಳಿನಲ್ಲಿ ಹೆಚ್ಚಾಗಿ ಸಿಗುತ್ತದೆ. ಕೇಸರಿ ಬಣ್ಣದಿಂದ ಕೂಡಿದ ಈ ಹಣ್ಣು ಇತರೆ ಮಾವಿನ ಹಣ್ಣುಗಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿರುತ್ತದೆ.
ಮಾಲ್ಗೋವಾ: ಮಾಲ್ಗೋವಾ ಅಥವಾ ಮಲ್ಗೊವ ಎಂದು ಕರೆಯಲ್ಪಡುವ ಈ ಹಣ್ಣು ಹಸಿರು ಮತ್ತು ಹಳದಿ ಬಣ್ಣದಿಂದ ಕೂಡಿರುತ್ತದೆ. ಮೇ ಮತ್ತು ಜೂನ್ ತಿಂಗಳಿನಲ್ಲಿ ಸಿಗುವ ಇದು ವೃತ್ತಾಕಾರದಲ್ಲಿದ್ದು, 300 ರಿಂದ 500 ಗ್ರಾಂ ಮತ್ತು ಹಳದಿ ಬಣ್ಣದ ತಿರುಳನ್ನು ಹೊಂದಿರುತ್ತದೆ.
ಮಲ್ಡಾ: ಮಾವಿನ ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ಮಲ್ಡಾ ತಳಿಯನ್ನು ಬಿಹಾರದಲ್ಲಿ ಹೆಚ್ಚು ಬೆಳೆಯುತ್ತಾರೆ. ನಾರಿನಂಶವಿಲ್ಲದ ನಿಟ್ಟಿನಲ್ಲಿ ಈ ಹಣ್ಣನು ಚಟ್ನಿ ಮಾಡಲು ಉಪಯೋಗಿಸುತ್ತಾರೆ. ಸಿಹಿ-ಹುಳಿಯಿಂದ ಕೂಡಿದ್ದ ಈ ಹಣ್ಣನ್ನು ಸೇವಿಸಲು ಅಷ್ಟೇ ರುಚಿಯಾಗಿರುತ್ತದೆ.
ಲಾಂಗ್ರಾ: ಉತ್ತರ ಪ್ರದೇಶದ ಲಾಂಗ್ರ ಎಂಬಲ್ಲಿ ಹೆಚ್ಚು ಸಿಗುತ್ತದೆ. ಕಾಲುಗಳಿಲ್ಲದ ಮನುಷ್ಯನು ಈ ತಳಿಯನ್ನು ಬೆಳೆದ್ದರಿಂದ ಇದಕ್ಕೆ ಲಾಂಗ್ರಾ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ. ಮೊಟ್ಟೆಯಾಕಾರದ ಈ ಹಣ್ಣು ಹಸಿರು ಬಣ್ಣದಿಂದ ಕೂಡಿದ್ದು, ಜುಲೈನಿಂದ ಆಗಸ್ಟ್ ತಿಂಗಳವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ.
ಕೇಸರ್: ಮಸಾಲೆ ಕೇಸರಿಯನ್ನು ಹೋಲುವ ಈ ಹಣ್ಣನ್ನು ಕೇಸರ್ ಎಂದೇ ಕರೆಯಲ್ಪಡುತ್ತದೆ. ಅಹಮದಾಬಾದ್ ಮತ್ತು ಗುಜರಾತ್ ಸುತ್ತಮುತ್ತ ಪ್ರದೇಶಗಳಲ್ಲಿ ಈ ಹಣ್ಣನ್ನು ಹೆಚ್ಚಾಗಿ ಬೆಳೆಯುತ್ತಾರೆ. 1931ರಲ್ಲಿ ಜುನಾಗಢದ ನವಾಬರು ಮೊದಲು ಈ ಹಣ್ಣನ್ನು ಬೆಳೆದರು ಮತ್ತು 1934 ರಲ್ಲಿ ಈ ಹಣ್ಣಿಗೆ ಕೇಸರ್ ಎಂದು ಹೆಸರಿಸಲಾಯಿತು.
ಬಾದಾಮಿ: ಕರ್ನಾಟಕ ರಾಜ್ಯದ ಅತ್ಯಂತ ಜನಪ್ರಿಯ ಮಾವಿನ ತಳಿಗಳ ಪೈಕಿ ಇದು ಪ್ರಮುಖವಾಗಿದ್ದು, ಏಪ್ರಿಲ್‍ನಿಂದ ಜೂನ್ ತಿಂಗಳವರೆಗೆ ಹೆಚ್ಚಾಗಿ ಸಿಗುತ್ತದೆ. ರಾಜ್ಯದ ಅಲ್ಫೋನ್ಸೋ ಎಂದು ಕರೆಯಲ್ಪಡುವ ಇದು ರುಚಿ ಮತ್ತು ವಿನ್ಯಾಸದಲ್ಲಿ ಅಲ್ಪೋನ್ಸೋ ತಳಿಗೆ ಹೋಲುತ್ತದೆ.
ವಿಭಾಗ