ನಾವು ಬಾಯಿ ಚಪ್ಪರಿಸಿಕೊಂಡು ತಿನ್ನುವ ಅಲ್ಫೋನ್ಸೊ ಮಾವಿನ ಹಣ್ಣಿಗಿದೆ 400 ವರ್ಷಗಳ ಇತಿಹಾಸ, ಇಲ್ಲಿದೆ ಇದರ ಇಂಟರೆಸ್ಟಿಂಗ್‌ ಕಹಾನಿ
ಕನ್ನಡ ಸುದ್ದಿ  /  ಜೀವನಶೈಲಿ  /  ನಾವು ಬಾಯಿ ಚಪ್ಪರಿಸಿಕೊಂಡು ತಿನ್ನುವ ಅಲ್ಫೋನ್ಸೊ ಮಾವಿನ ಹಣ್ಣಿಗಿದೆ 400 ವರ್ಷಗಳ ಇತಿಹಾಸ, ಇಲ್ಲಿದೆ ಇದರ ಇಂಟರೆಸ್ಟಿಂಗ್‌ ಕಹಾನಿ

ನಾವು ಬಾಯಿ ಚಪ್ಪರಿಸಿಕೊಂಡು ತಿನ್ನುವ ಅಲ್ಫೋನ್ಸೊ ಮಾವಿನ ಹಣ್ಣಿಗಿದೆ 400 ವರ್ಷಗಳ ಇತಿಹಾಸ, ಇಲ್ಲಿದೆ ಇದರ ಇಂಟರೆಸ್ಟಿಂಗ್‌ ಕಹಾನಿ

ಪ್ರತಿ ವರ್ಷ ಭಾರತದ ಮಾವು ಪ್ರಿಯರು ಅಲ್ಫೋನ್ಸೊ ಮಾವಿನಹಣ್ಣಿನ ರುಚಿ ಸವಿಯಲು ಕಾಯುತ್ತಿರುತ್ತಾರೆ. ಅದರ ಪರಿಮಳ, ಸ್ವಾದಕ್ಕೆ ಮನಸೋಲದವರಿಲ್ಲ. ನೀವು ಅಲ್ಫೋನ್ಸೊ ಮಾವು ಪ್ರಿಯರಾದರೆ ಈ ಹಣ್ಣಿನ ಇತಿಹಾಸವನ್ನು ತಿಳಿದುಕೊಂಡಿರಿ.

ಅಲ್ಫೋನ್ಸೊ ಮಾವಿನ ಹಣ್ಣಿಗಿದೆ 400 ವರ್ಷಗಳ ಇತಿಹಾಸ, ಇಲ್ಲಿದೆ ಇದರ ಇಂಟರೆಸ್ಟಿಂಗ್‌ ಕಹಾನಿ
ಅಲ್ಫೋನ್ಸೊ ಮಾವಿನ ಹಣ್ಣಿಗಿದೆ 400 ವರ್ಷಗಳ ಇತಿಹಾಸ, ಇಲ್ಲಿದೆ ಇದರ ಇಂಟರೆಸ್ಟಿಂಗ್‌ ಕಹಾನಿ

ಮಾವಿನ ಸೀಸನ್‌ ಶುರುವಾಗಲಿ ಎಂದು ವರ್ಷಪೂರ್ತಿ ಕಾಯುವವರು ನಮ್ಮ ನಡುವೆ ಇದ್ದಾರೆ. ಹಣ್ಣುಗಳ ರಾಜ ಎಂದೇ ಕರೆಸಿಕೊಳ್ಳುವ ಮಾವಿನ ಹಣ್ಣಿಗೆ ವಿಶೇಷ ಅಭಿಮಾನಿಗಳಿದ್ದಾರೆ. ಭಾರತದಲ್ಲಿ ಸಾಕಷ್ಟು ವಿಧದ ಮಾವಿನ ಹಣ್ಣುಗಳು ಸಿಗುತ್ತವೆ. ಈ ಎಲ್ಲವೂ ಒಂದಕ್ಕಿಂತ ಒಂದು ರುಚಿ, ಸಿಹಿಯನ್ನು ಹೊಂದಿರುತ್ತವೆ. ಈ ಮಾವಿನ ವಿಧಗಳಲ್ಲಿ ಒಂದು ಅಲ್ಫೋನ್ಸೊ. ಬಹಳ ವಿಶಿಷ್ಟವಾದ ರುಚಿಯನ್ನು ಹೊಂದಿರುವ ಅಲ್ಫೋನ್ಸೊ ಮಾವಿನ ಹಣ್ಣಿನ ಸವಿ ತಿಂದವರಿಗಷ್ಟೇ ಗೊತ್ತು.

ನೀವು ಅಲ್ಫೋನ್ಸೊ ಮಾವಿನ ಪ್ರೇಮಿಯಾಗಿದ್ದರೆ ಅದರ ಇತಿಹಾಸದ ಬಗ್ಗೆಯೂ ತಿಳಿಯಲೇಬೇಕು. ಇದು 400 ವರ್ಷಗಳ ಹಿಂದೆ ಪೋರ್ಚುಗೀಸರು ನಮಗಾಗಿ ಕೊಟ್ಟ ಅದ್ಭುತ ಉಡುಗೊರೆ ಇದು ಎಂದರೂ ತಪ್ಪಾಗಲಿಕ್ಕಿಲ್ಲ.

ರಾಜನಿಗೆ ಸೂಕ್ತವಾದ ಮಾವು

ಮಾವಿನ ಹಣ್ಣುಗಳು ನಮ್ಮಂತಹ ಸಾಮಾನ್ಯ ಜನರಿಗೆ ಮಾತ್ರವಲ್ಲ, ರಾಜರಿಗೂ ತುಂಬಾನೇ ಇಷ್ಟವಾಗುತ್ತಿತ್ತು. ಆದರೆ ಎಲ್ಲಾ ರೀತಿಯ ಮಾವಿನ ಹಣ್ಣುಗಳನ್ನು ಎಚ್ಚರಿಕೆಯಿಂದ ಕತ್ತರಿಸಲು ಸಾಧ್ಯವಾಗುವುದಿಲ್ಲ. ಕೆಲವು ಮಾವಿನ ಹಣ್ಣುಗಳು ನಾರಿನಿಂದ ಕೂಡಿರುತ್ತವೆ. ಅವುಗಳನ್ನು ಕತ್ತರಿಸಿ ಹೋಳು ಮಾಡಿ ತಿನ್ನುವುದಕ್ಕಿಂತ ಹಾಗೆ ಬಾಯಿಂದ ಕಚ್ಚಿ, ರಸ ಹೀರಿ ತಿಂದರೆ ಅದರ ನಿಜವಾದ ಸ್ವಾದ ಸವಿಯಲು ಸಾಧ್ಯವಾಗೋದು. ಮಾವಿನ ರಸವನ್ನು ಗಲ್ಲದ ಮೇಲೆ ಹರಿಬಿಟ್ಟುಕೊಂಡು, ಕೈತುಂಬಾ ಮಾವಿನ ಸಿಹಿ ಅಂಟಿಸಿಕೊಂಡು ತಿನ್ನೋದರ ಮಜವೇ ಬೇರೆ. ಭಾರತೀಯರಿಗೆ ಈ ರೀತಿ ತಿನ್ನೋದು ಇಷ್ಟವಾದ್ರೂ ಆದರೆ ಕಾಲದಲ್ಲಿ ಭಾರತವನ್ನು ಆಳುತ್ತಿದ್ದ ಪೋರ್ಚುಗೀಸ್‌ ರಾಜರುಗಳು ಮಾವಿನಹಣ್ಣನ್ನು ನೀಟಾಗಿ ಕತ್ತರಿಸಿದ ಹೋಳುಗಳನ್ನು ತಿನ್ನಲು ಇಷ್ಟಪಡುತ್ತಿದ್ದರು. ಅವರಿಗೆ ನಾರಿನಿಂದ ಕೂಡಿದ ಮಾವಿನ ಹಣ್ಣುಗಳು ಇಷ್ಟವಾಗುತ್ತಿರಲಿಲ್ಲ.

ಆ ಸಮಯದಲ್ಲಿ ಒಂದು ವಿಶಿಷ್ಟ ಮಾವಿನ ತಳಿ ಅಭಿವೃದ್ಧಿ ಪಡಿಸುವ ನಿರ್ಧಾರಕ್ಕೆ ಬರಲಾಯಿತು, ಪೋರ್ಚುಗೀಸ್ ಜನರಲ್ ಮತ್ತು ವೈಸ್‌ರಾಯ್ ಆಗಿದ್ದ ಅಫೊನ್ಸೊ ಡಿ ಅಲ್ಬುಕರ್ಕ್ ಮುಂದೆ ಬರುತ್ತಾರೆ. ಇವರು ಕಸಿ ಮಾಡುವ ತಂತ್ರವನ್ನು ಜನರಿಗೆ ಪರಿಚಯಿಸುತ್ತಾರೆ. ಅಂದರೆ ವಿವಿಧ ಮಾವಿನ ಮರಗಳ ಅತ್ಯುತ್ತಮ ಗುಣಲಕ್ಷಣಗಳನ್ನು ಸಂಯೋಜಿಸುವ ವಿಧಾನವಿದು. ಹೀಗೆ ಮಾವಿನ ಕಸಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದ ಅವರು ಕಾಲಾ ನಂತರದಲ್ಲಿ ಅತ್ಯಂತ ಸಿಹಿಯಾದ, ರೇಷ್ಮೆಯಂತೆ ಕತ್ತರಿಸಲು ಸುಲಭವಾದ ಮಾವಿನಹಣ್ಣನ್ನು ಬೆಳೆಯುತ್ತಾರೆ. ಅಫೊನ್ಸೊ ಅವರಿಗೆ ಗೌರವಾರ್ಥವಾಗಿ ಈ ಮಾವಿನ ಹಣ್ಣಿಗೆ ಅಲ್ಫೋನ್ಸೊ ಎಂದು ಹೆಸರು ಇಡಲಾಗುತ್ತದೆ.

ಭಾರತೀಯರ ಪ್ರೀತಿಯ ಹಣ್ಣು

ಪೋರ್ಚುಗೀಸರ ಕಾಲದಲ್ಲಿ ಬೆಳೆಯಲಾದ ಅಲ್ಫೋನ್ಸೊ ಮಾವಿನ ಹಣ್ಣಿಗೆ ಭಾರತದಲ್ಲಿ ಎಲ್ಲಿ ಹೋದರೂ ಬೇಡಿಕೆ ಕಡಿಮೆ ಇಲ್ಲ. ಈ ಹಣ್ಣನ್ನು ಬೇರೆ ಬೇರೆ ಹೆಸರಿನಲ್ಲಿ ಕರೆಯಲಾಗುತ್ತದೆ ಆದರೂ ಇದರ ರುಚಿ ಮಾತ್ರ ಬದಲಾಗುವುದಿಲ್ಲ.

ಮಹಾರಾಷ್ಟ್ರದಲ್ಲಿ ಈ ಮಾವಿನ ತಳಿಗೆ ಹ್ಯಾಪಸ್ ಎಂದು ಕರೆಯಲಾಗುತ್ತದೆ. ಗುಜರಾತ್‌ನಲ್ಲಿ ಇದನ್ನು ಹಫಸ್ ಎಂದು ಕರೆಯಲಾಗುತ್ತದೆ, ಆದರೆ ಕರ್ನಾಟಕ ಮತ್ತು ಗೋವಾದ ಕೆಲವು ಭಾಗಗಳಲ್ಲಿ ಜನರು ಇದನ್ನು ಅಫೂಸ್ ಎಂದು ಕರೆಯುತ್ತಾರೆ.

ರತ್ನಗಿರಿ ಮತ್ತು ದೇವಗಡದ ಅಲ್ಫೋನ್ಸೊ ರುಚಿ ಅದ್ಭುತ

ರತ್ನಗಿರಿ, ದೇವಗಡ್, ಸಿಂಧುದುರ್ಗ ಮತ್ತು ಮಹಾರಾಷ್ಟ್ರದ ಕೊಂಕಣ ಪ್ರದೇಶದ ಇತರ ಕೆಲವು ಸ್ಥಳಗಳಲ್ಲಿ ಬೆಳೆಯುವ ಅಲ್ಫೋನ್ಸೊ ಮಾವಿನ ಹಣ್ಣಿಗೆ ಅದ್ಭುತ ರುಚಿ ಇದೆ. ಬೇರೆ ಕಡೆಗಳಲ್ಲಿ ಈ ಮಾವು ಬೆಳೆಯಲಾಗುತ್ತದೆಯಾದರೂ ಇಲ್ಲಿ ಬೆಳೆಯುವ ಹಣ್ಣಿನಷ್ಟು ರುಚಿ ಇರುವುದಿಲ್ಲ ಎನ್ನುವುದು ಮಾವು ಪ್ರಿಯರ ಮಾತು. ರತ್ನಗಿರಿ ಭಾಗದಲ್ಲಿ ವಿಶಿಷ್ಟವಾದ ಕೆಂಪು ಮಣ್ಣು, ಉಪ್ಪು ಸಮುದ್ರದ ತಂಗಾಳಿ ಸರಿಯಾದ ಪ್ರಮಾಣದ ಸೂರ್ಯನ ಬೆಳಕು. ಈ ಸಂಯೋಜನೆಯು ಆಲ್ಫೋನ್ಸೋ ಮಾವಿನ ಹಣ್ಣುಗಳಿಗೆ ಅವುಗಳ ವಿಶಿಷ್ಟವಾದ ಕೇಸರಿ-ಹಳದಿ ಬಣ್ಣ ಹಾಗೂ ಅದ್ಭುತ ಸಿಹಿಯನ್ನು ನೀಡುತ್ತದೆ. ಆಲ್ಫೋನ್ಸೋ ಮಾವಿನ ಹಣ್ಣು ಐಜಿ ಟ್ಯಾಗ್‌ ಕೂಡ ಪಡೆದಿದೆ. ಮಾತ್ರವಲ್ಲ ರತ್ನಗಿರಿ ಮತ್ತು ದೇವಗಢ ಭಾಗದಲ್ಲಿ ಬೆಳೆಯಲಾಗುವ ಮಾವಿನಹಣ್ಣಿಗೆ ಭಾರಿ ಬೇಡಿಕೆಯೂ ಇದೆ.

ವಿದೇಶಗಳಲ್ಲೂ ಪ್ರಸಿದ್ಧಿ ಪಡೆದ ಮಾವಿನ ತಳಿ

ಆಲ್ಫೋನ್ಸೊ ಭಾರತದಲ್ಲಿ ಜನಪ್ರಿಯತೆ ಪಡೆದಿದ್ದು ಮಾತ್ರವಲ್ಲ ಜಾಗತಿಕ ಮಟ್ಟದಲ್ಲೂ ಜನರ ಮೆಚ್ಚುಗೆ ಗಳಿಸಿದೆ. ಯುಎಸ್‌, ಯೂರೋಪ್‌ನಲ್ಲಿರುವವರು ಕೂಡ ಆಲ್ಫೋನ್ಸೊ ರುಚಿಗೆ ಹಾತೊರೆಯುತ್ತಾರೆ. 1989ರಲ್ಲಿ ಕೀಟಗಳ ಭಯದಿಂದಾಗಿ ಅಮೆರಿಕವು ಭಾರತದ ಮಾವಿನ ಆಮದನ್ನು ನಿಷೇದಿಸಿತ್ತು. ಆದರೆ 2007 ರಲ್ಲಿ, ಹೆಚ್ಚಿನ ಮಾತುಕತೆಯ ನಂತರ ನಿಷೇಧವನ್ನು ತೆಗೆದುಹಾಕಲಾಯಿತು. ಆ ನಂತರ ಮತ್ತೆ ಆಲ್ಫೋನ್ಸೊ ಪ್ರಪಂಚದಾದ್ಯಂತ ಜನರ ಜಿಹ್ವ ಚಾಪಲ್ಯ ತಣಿಸುವ ಕೆಲಸ ಮಾಡುತ್ತಿದೆ. ಸದ್ಯ ಈ ಮಾವಿನ ತಳಿಯನ್ನು ದುಬೈ, ಯುಕೆ, ಸಿಂಗಾಪುರ ಮತ್ತು ಜಪಾನ್‌ಗೆ ರಫ್ತು ಮಾಡಲಾಗುತ್ತಿದೆ.

2018 ರಲ್ಲಿ ರತ್ನಗಿರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ಆಲ್ಫೋನ್ಸೊ ಮಾವಿನಹಣ್ಣಿಗೆ ಐಜಿ ಟ್ಯಾಗ್ ನೀಡಲಾಯಿತು. ಅಂದರೆ ಇಲ್ಲಿ ಬೆಳೆದ ಮಾವಿನಹಣ್ಣನ್ನು ಮಾತ್ರ ಅಧಿಕೃತವಾಗಿ 'ಆಲ್ಫೋನ್ಸೊ' ಎಂದು ಕರೆಯಬಹುದು.

ನೋಡಿದ್ರಲ್ಲ ಪೋರ್ಚುಗೀಸರು ನಮಗೆ ನೀಡಿದ ಬೆಸ್ಟ್‌ ಉಡುಗೊರೆಗಳಲ್ಲಿ ಆಲ್ಫೋನ್ಸೊ ಮಾವಿನ ಹಣ್ಣು ಕೂಡ ಒಂದು ಅನ್ನೋದರಲ್ಲಿ ಡೌಟೇ ಇಲ್ಲ ಅಲ್ವಾ. ಈ ಲೇಖನದ ಪೂರಕ ಮಾಹಿತಿ ದಿ ಬೆಟರ್‌ ಇಂಡಿಯಾದ್ದು.

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.