ಐಜಿ ಟ್ಯಾಗ್‌ ಪಡೆದಿರುವ, ಭಾರತದ ವಿವಿಧ ರಾಜ್ಯಗಳ 9 ವಿಶೇಷ ಮಾವಿನ ತಳಿಗಳಿವು; ಒಮ್ಮೆಯಾದ್ರೂ ಈ ಹಣ್ಣುಗಳ ರುಚಿ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಐಜಿ ಟ್ಯಾಗ್‌ ಪಡೆದಿರುವ, ಭಾರತದ ವಿವಿಧ ರಾಜ್ಯಗಳ 9 ವಿಶೇಷ ಮಾವಿನ ತಳಿಗಳಿವು; ಒಮ್ಮೆಯಾದ್ರೂ ಈ ಹಣ್ಣುಗಳ ರುಚಿ ನೋಡಿ

ಐಜಿ ಟ್ಯಾಗ್‌ ಪಡೆದಿರುವ, ಭಾರತದ ವಿವಿಧ ರಾಜ್ಯಗಳ 9 ವಿಶೇಷ ಮಾವಿನ ತಳಿಗಳಿವು; ಒಮ್ಮೆಯಾದ್ರೂ ಈ ಹಣ್ಣುಗಳ ರುಚಿ ನೋಡಿ

ಭಾರತದ ವಿವಿಧ ರಾಜ್ಯಗಳಲ್ಲಿ ಬೆಳೆಯುವ ಐಜಿ ಟ್ಯಾಗ್‌ ಪಡೆದಿರುವ 9 ವಿವಿಧ ತಳಿ ಮಾವಿನ ಹಣ್ಣುಗಳ ಬಗ್ಗೆ ಇಲ್ಲಿದೆ ಮಾಹಿತಿ. ಮಾವಿನ ಸೀಸನ್‌ನಲ್ಲಿ ನೀವು ಒಮ್ಮೆಯಾದ್ರೂ ಈ ಹಣ್ಣುಗಳ ರುಚಿ ನೋಡಬೇಕು.

ಐಜಿ ಟ್ಯಾಗ್‌ ಪಡೆದಿರುವ ಭಾರತದ ವಿವಿಧ ರಾಜ್ಯಗಳ 9 ವಿಶೇಷ ಮಾವಿನ ತಳಿಗಳಿವು
ಐಜಿ ಟ್ಯಾಗ್‌ ಪಡೆದಿರುವ ಭಾರತದ ವಿವಿಧ ರಾಜ್ಯಗಳ 9 ವಿಶೇಷ ಮಾವಿನ ತಳಿಗಳಿವು

ಬೇಸಿಗೆ ಎಂದರೆ ಬಿರು ಬಿಸಿಲಿನ ತಾಪ ಮಾತ್ರವಲ್ಲ, ಮಾವಿನ ಘಮವೂ ಹರಡುವ ಕಾಲ. ಬೇಸಿಗೆ ಎಂದರೆ ಹಣ್ಣುಗಳ ರಾಜ ಮಾವಿನ ಆಗಮನವೂ ಹೌದು. ಮಾವಿನ ಹಣ್ಣು ಅದ್ಭುತ ಪರಿಮಳ, ರುಚಿಯ ಕಾರಣದಿಂದ ಹಲವರಿಗೆ ಫೇವರಿಟ್‌. ಮಾವಿನ ಸ್ವಾದಕ್ಕೆ ಮರುಳಾಗದವರಿಲ್ಲ. ಮಾವಿನ ಹಣ್ಣಿನಲ್ಲಿ ಸಾಕಷ್ಟು ವಿಧಗಳಿವೆ. ಅಂತಹ ವಿಧಗಳಲ್ಲಿ ಕೆಲವು ಐಟಿ ಟ್ಯಾಗ್‌ ಪಡೆದಿವೆ. ಐಜಿ ಟ್ಯಾಗ್‌ ಪಡೆದಿರುವ, ಭಾರತದ ವಿವಿಧ ಜಿಲ್ಲೆಗಳ 9 ಮಾವಿನ ತಳಿಗಳ ಬಗ್ಗೆ ಇಲ್ಲಿದೆ ಮಾಹಿತಿ. ಈ ತಳಿಗಳನ್ನು ನೀವು ಒಮ್ಮೆಯಾದ್ರೂ ರುಚಿ ನೋಡಬೇಕು.

ಕುಟ್ಟಿಯತ್ತೂರು

ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಮಾವಿನ ಸೀಸನ್‌ ಶುರುವಾಗುವುದು ವಿಚಿತ್ರ. ಯಾಕೆಂದರೆ ಈ ಜಿಲ್ಲೆಗಳಲ್ಲಿ ಬೆಳೆಯುವ ಕುಟ್ಟಿಯತ್ತೂರು ತಳಿ ನವೆಂಬರ್‌ ಮಧ್ಯಭಾಗದ ವೇಳೆಗೆ ಮರಗಳಲ್ಲಿ ಹೂ ಬಿಡಲು ಆರಂಭಿಸುತ್ತದೆ. ನಯವಾದ ಹೆಚ್ಚು ದಪ್ಪವಿಲ್ಲದ ಸಿಪ್ಪೆ ಹೊಂದಿರುವ ಕೆನೆಭರಿತ ಸ್ವಲ್ಪ ಸಿಹಿಗುಣ ಹೊಂದಿರುವ ಮಾವಿನ ತಳಿ ಇದು. ಸಾಮಾನ್ಯವಾಗಿ ಇಲ್ಲಿನ ತೋಟ, ಹಿತ್ತಲಿನಲ್ಲಿ ಬೆಳೆಯುವ ಈ ಮಾವಿನ ಪ್ರಬೇಧಕ್ಕೆ ಹೆಚ್ಚಿನ ಆರೈಕೆಯ ಅಗತ್ಯವಿಲ್ಲ.

ಬೈಗಂಪಲ್ಲಿ

ಏಪ್ರಿಲ್‌ ಅಂತ್ಯ ಮೇ ತಿಂಗಳ ಆರಂಭದಲ್ಲಿ ಎಲ್ಲಿ ನೋಡಿದರೂ ಬೈಂಗಪಲ್ಲಿ ಮಾವಿನ ಹಣ್ಣು ಕಾಣ ಸಿಗುತ್ತದೆ. ಆಂಧ್ರಪ್ರದೇಶ ಮೂಲದ ಈ ಮಾವಿನ ತಳಿ ಅದ್ಭುತ ರುಚಿ ಹಾಗೂ ಸ್ವಾದವನ್ನು ಹೊಂದಿರುತ್ತದೆ. ಕರ್ನೂಲ್ ಪ್ರದೇಶದಲ್ಲಿ ವ್ಯಾಪಕವಾಗಿ ಬೆಳೆಯುವ ಈ ಮಾವಿನ ಹಣ್ಣುಗಳನ್ನು ಪ್ರಪಂಚದಾದ್ಯಂತ ರಫ್ತು ಮಾಡಲಾಗುತ್ತದೆ. ಸಾಮಾನ್ಯವಾಗಿ ಬೈಗಂಪಲ್ಲಿ ಮಾವಿನಹಣ್ಣಿನ ರುಚಿಯನ್ನು ಎಲ್ಲರೂ ನೋಡಿರುತ್ತಾರೆ.

ಮಲಿಹಬಾದಿ ದಶೇಹರಿ

ಉತ್ತರ ಪ್ರದೇಶದ ಮಲಿಹಾಬಾದ್‌ನಲ್ಲಿ ಬೆಳೆಯುವ ಮಾವಿನ ತಳ ಇದಾಗಿದೆ. 18ನೇ ಶತಮಾನದಿಂದಲೂ ಈ ಮಾವಿನ ತಳಿಯನ್ನು ಇಲ್ಲಿ ಬೆಳೆಯಲಾಗುತ್ತಿದೆ. ಸಾಮಾನ್ಯವಾಗಿ ಉತ್ತರ ಭಾರತೀಯರು ಈ ಮಾವಿನ ಹಣ್ಣಿನ ರುಚಿ ನೋಡಿರುತ್ತಾರೆ. ಹಿಂದೆಲ್ಲಾ ಈ ಮಾವಿನಹಣ್ಣನ್ನು ರಾಜಮನೆತನದ ತೋಟಗಳಲ್ಲಿ ಬೆಳೆಯಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಇಂದು, ಇದು ಮಾವು ಬೆಳೆಗಾರರಿಗೆ ತಲೆಮಾರುಗಳ ಹೆಮ್ಮೆಯ ಮತ್ತು ಜೀವನೋಪಾಯದ ಮೂಲವಾಗಿ ಉಳಿದಿದೆ.

ಕರಿ ಇಷಾಡದ

ಕರ್ನಾಟಕದ ಕರಾವಳಿ ಭಾಗ ವಿಶೇಷವಾಗಿ ಅಂಕೋಲಾ ಮತ್ತು ಕಾರವಾರ ಭಾಗದಲ್ಲಿ ಬೆಳೆಯುವ ಈ ಮಾವಿನ ಹಣ್ಣು ಅದ್ಭುತ ರುಚಿಯನ್ನು ಹೊಂದಿರುತ್ತದೆ. ಈ ಮಾವಿನಹಣ್ಣನ್ನು ತಿರುಳು, ಬೀಜದ ಸಮೇತ ತಿನ್ನಬಹುದು. ಇದು ಪಶ್ಚಿಮ ಘಟ್ಟ ಭಾಗದಲ್ಲೂ ಸಿಗುವ ಅಪರೂಪದ ಮಾವಿನ ತಳಿ.

ಗಿರ್‌ ಕೇಸರ್‌

ಇದು ಗುಜರಾತ್‌ನಲ್ಲಿ ಬೆಳೆಯುವ ಐಜಿ ಟ್ಯಾಗ್‌ ಪಡೆದಿರುವ ಮಾವಿನಹಣ್ಣು. ಗಿರ್ ಕಾಡಿನ ಬಳಿ ಬೆಳೆಸಲಾದ ಇದಕ್ಕೆ ಕೇಸರಿ ಬಣ್ಣದ ತಿರುಳು ಇರುವ ಕಾರಣಕ್ಕೆ ಇದಕ್ಕೆ ಗಿರ್‌ ಕೇಸರ್‌ ಎನ್ನುವ ಹೆಸರು ಬಂದಿದೆ. ಕೊಕ್ಕಿನಂತಹ ತುದಿ, ಕೋಣೆಯ ತುಂಬ ಹರಡುವ ಘಮ, ಈ ಮಾವಿನ ಹಣ್ಣನ್ನು ರೈತರು ಚಿನ್ನ ಎಂದೇ ಭಾವಿಸುತ್ತಾರೆ.

ಮನ್ಕುರಾಡ್

ಇದು ಗೋವಾದಲ್ಲಿ ಸಿಗುವ ವಿಶಿಷ್ಠ ಮಾವಿನ ತಳಿ. ಚಿಕ್ಕದಾದ, ಕೆಂಪು-ಬಣ್ಣದ, ತುಂಬಾನೇ ಪರಿಮಳ ಹೊಂದಿರುವ ಈ ಹಣ್ಣು ಹುಳಿ-ಸಿಹಿ ಮಿಶ್ರಿತ ರುಚಿಯನ್ನು ಹೊಂದಿರುತ್ತದೆ. ಇದರ ಹೆಸರು ಪೋರ್ಚುಗೀಸ್ ಪದ 'ಮಾಲ್ಕೊರಾಡೊ' ದಿಂದ ಬಂದಿದೆ ಎಂದು ಹೇಳಲಾಗುತ್ತದೆ. ಗೋವಾದ ಮನ್ಕುರಾಡ್ ಮಾವಿನ ತಳಿ ಸ್ಥಳೀಯರಿಗೆ ರಾಜ್ಯಕ್ಕೆ ಹೆಮ್ಮೆ ತರುವ ವಿಷಯವಾಗಿದೆ.

ಬನಾರಸಿ ಲ್ಯಾಂಗ್ಡಾ

ಉತ್ತರ ಪ್ರದೇಶ ಮೂಲದ ಈ ಮಾವು ಅತ್ಯಂತ ಸುವಾಸನೆ ಭರಿತ ಹಣ್ಣು. ಇದು ಆಕಸ್ಮಿಕವಾಗಿ ಬೀಜ ಬಿದ್ದು ಹುಟ್ಟಿದ ಮಾವಿನ ತಳಿಯಾಗಿದೆ. ಹಳದಿ ಬಣ್ಣದ ತೆಳುವಾದ ಸಿಪ್ಪೆ ಹೊಂದಿರುವ ಈ ಮಾವು ಸಿಹಿ ರುಚಿಯನ್ನು ಹೊಂದಿದೆ. ಇದನ್ನು ಸದ್ಯ ವಾರಣಸಿ ಫಲವತ್ತಾದ ಮಣ್ಣಿನಲ್ಲಿ ಬೆಳೆಯಲಾಗುತ್ತಿದೆ.

ಭಾಗಲ್ಪುರಿ ಜರ್ದಾಲು

ಬಿಹಾರದ ಭಾಗಲ್ಪುರದಲ್ಲಿ ಬೆಳೆಯುವ ಈ ಮಾವಿನ ಹಣ್ಣಿನ ಪರಿಮಳಕ್ಕೆ ಬೇರೆ ಸಾಟಿಯಿಲ್ಲ. ತಿಳಿ ಹಳದಿ ಸಿಪ್ಪೆ ಹಾಗೂ ಘಮವೇ ಇದರ ವಿಶೇಷ. ಈ ಮಾವಿನಹಣ್ಣುಗಳನ್ನು ಉಡುಗೊರೆ ಅಥವಾ ಗಣ್ಯರಿಗೆ ಸನ್ಮಾನ ಮಾಡುವಾಗ ವಿಶೇಷವಾಗಿ ನೀಡಲಾಗುತ್ತದೆ. ಮಾವಿನ ಪ್ರಿಯರು ಒಮ್ಮೆಯಾದ್ರೂ ಈ ಹಣ್ಣಿನ ರುಚಿ ಹಾಗೂ ಇದರ ಪರಿಮಳವನ್ನು ಸವಿಯಬೇಕು.

ಖಿರ್ಸಪತಿ

ಈ ಮಾವಿನಹಣ್ಣಿಗೆ ಹೆಚ್ಚಾಗಿ ಹಿಮ್ಸಾಗರ್ ಎಂದು ಕೂಡ ಕರೆಯಲಾಗುತ್ತದೆ. ಖಿರ್ಸಪತಿ ಮಾವಿನ ಹಣ್ಣಿನಲ್ಲಿ ಯಾವುದೇ ನಾರು ಇರುವುದಿಲ್ಲ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮತ್ತು ಮಾಲ್ಡಾದಲ್ಲಿ ಇದನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಹಣ್ಣು ರಫ್ತಾಗದೇ ಇದ್ದರೂ ಭಾರತದ ಅತ್ಯುತ್ತಮ ಮಾವಿನ ತಳ್ಳಿಗಳಲ್ಲಿ ಒಂದಾಗಿದೆ.

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.