Summer Skin Care: ಬೇಸಿಗೆಯ ಧಗೆ ನಡುವೆಯೂ ಶುಷ್ಕ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲ್ಲಿವೆ ನೈಸರ್ಗಿಕ ಫೇಸ್‌ಪ್ಯಾಕ್‌ಗಳು-summer skin care how to take care of skin in summer face pack for dry skin papaya face pack beauty tips rsa ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Summer Skin Care: ಬೇಸಿಗೆಯ ಧಗೆ ನಡುವೆಯೂ ಶುಷ್ಕ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲ್ಲಿವೆ ನೈಸರ್ಗಿಕ ಫೇಸ್‌ಪ್ಯಾಕ್‌ಗಳು

Summer Skin Care: ಬೇಸಿಗೆಯ ಧಗೆ ನಡುವೆಯೂ ಶುಷ್ಕ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಇಲ್ಲಿವೆ ನೈಸರ್ಗಿಕ ಫೇಸ್‌ಪ್ಯಾಕ್‌ಗಳು

Skin Care: ಬೇಸಿಗೆ ಕಾಲ ಬಂದ ಕೂಡಲೇ ತ್ವಚೆಯ ಆರೋಗ್ಯದ ವಿಚಾರದಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತದೆ. ಅದರಲ್ಲೂ ಶುಷ್ಕ ತ್ವಚೆ ಹೊಂದಿರುವವರು ಹೆಚ್ಚು ಸಮಸ್ಯೆ ಎದುರಿಸುತ್ತಾರೆ. ಹೀಗಾಗಿ ಇಲ್ಲಿ ಬೇಸಿಗೆಯ ಕಾಲದಲ್ಲಿ ಶುಷ್ಕ ತ್ವಚೆಯನ್ನು ಹೊಂದಿರುವವರು ತ್ವಚೆಯ ಉತ್ತಮ ಆರೋಗ್ಯಕ್ಕಾಗಿ ಬಳಸಬಹುದಾದ ನೈಸರ್ಗಿಕ ಫೇಸ್‌ ಪ್ಯಾಕ್‌ಗಳ ವಿವರ ಇಲ್ಲಿದೆ.

ನೈಸರ್ಗಿಕ ಫೇಸ್‌ಪ್ಯಾಕ್‌ಗಳು
ನೈಸರ್ಗಿಕ ಫೇಸ್‌ಪ್ಯಾಕ್‌ಗಳು (PC: Unsplash)

ಬೇಸಿಗೆ ಕಾಲ ಬಂತು ಎಂದರೆ ಸಾಕು ತ್ವಚೆಯ ಆರೋಗ್ಯ ಕೆಟ್ಟಿತು ಎಂದೇ ಅರ್ಥ. ಅದರಲ್ಲೂ ಬೇಸಿಗೆ ಕಾಲದಲ್ಲಿ ಶುಷ್ಕ ತ್ವಚೆಯನ್ನು ಹೊಂದಿರುವವರು ಹೆಚ್ಚು ಸಮಸ್ಯೆ ಎದುರಿಸುತ್ತಾರೆ. ಶಾಖ ಹೆಚ್ಚಾದಂತೆಲ್ಲ ಮುಖದಲ್ಲಿ ಬೆವರು ಬರಲು ಆರಂಭವಾಗುತ್ತದೆ. ಈ ಬೆವರು ಚರ್ಮದ ಆರೋಗ್ಯವನ್ನ ಹದಗೆಡಿಸುತ್ತದೆ.

ಸೂರ್ಯನ ನೇರಳಾತೀತ ಕಿರಣಗಳು ಹಾಗೂ ಗಾಳಿಯಲ್ಲಿರುವ ಮಲಿನಕಾರಕ ಅಂಶಗಳು ಶುಷ್ಕ ಚರ್ಮದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಸೂರ್ಯನ ಶಾಖಕ್ಕೆ ತ್ಚಚೆಯ ಆರೋಗ್ಯ ಹದಗೆಡವುದನ್ನು ತಪ್ಪಿಸಲು ಸನ್‌ಸ್ಕ್ರೀನ್‌ ಬಳಕೆ ಮಾಡಬಹುದು. ಆದರೆ ಇದನ್ನು ಹೊರತುಪಡಿಸಿ ನೀವು ಮನೆಯಿಂದ ಹೊರ ಹೋಗುವ ಮುನ್ನ ಕೆಲವೊಂದು ಪೂರ್ವ ತಯಾರಿಯನ್ನು ಮಾಡಿಕೊಳ್ಳುವುದೂ ಕೂಡ ಅತ್ಯಗತ್ಯವಾಗಿದೆ.

ಮನೆಯಲ್ಲಿ ನೈಸರ್ಗಿಕ ವಸ್ತುಗಳಿಂದ ತಯಾರಿಸುವ ಫೇಸ್‌ ಪ್ಯಾಕ್‌ಗಳು ಶುಷ್ಕ ಚರ್ಮವನ್ನು ಹೈಡ್ರೇಟ್ ಮಾಡುವುದರ ಜೊತೆಗೆ ಮುಖಕ್ಕೆ ತೇವಾಂಶ ಒದಗಿಸಿಕೊಡುತ್ತವೆ. ಮುಖದ ಮೇಲೆ ಬೆವರಿನಿಂದಾಗಿ ಉಂಟಾಗುವ ಕಪ್ಪು ಕಲೆಗಳನ್ನು ಹೋಗಲಾಡಿಸಲು ಕೂಡಾ ಫೇಸ್‌ ಪ್ಯಾಕ್‌ಗಳು ಸಹಾಯಕಾರಿಯಾಗಿವೆ. ಹೀಗಾಗಿ ಶುಷ್ಕ ಅಥವಾ ಒಣ ಚರ್ಮವನ್ನು ಹೊಂದಿರುವವರು ಯಾವೆಲ್ಲಾ ರೀತಿಯ ಫೇಸ್‌ ಪ್ಯಾಕ್‌ಗಳನ್ನು ಮನೆಯಲ್ಲೇ ತಯಾರಿಸಿ ಹಚ್ಚಬಹುದು ಎಂಬುದಕ್ಕೆ ಮಾಹಿತಿ ಇಲ್ಲಿದೆ ನೋಡಿ.

ಪಪ್ಪಾಯ ಫೇಸ್‌ ಪ್ಯಾಕ್‌: ಪರಂಗಿ ಹಣ್ಣಿನಲ್ಲಿ ವಿಟಮಿನ್ ಎ ಹಾಗೂ ಸಿ ಸಮೃದ್ಧವಾಗಿದೆ. ಇದು ಒಟ್ಟಾರೆ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಪಪ್ಪಾಯಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಚರ್ಮದ ಮೇಲಾದ ಸುಕ್ಕುಗಳನ್ನು ನಿವಾರಣೆ ಮಾಡಲು ಸಹಕಾರಿಯಾಗಿದೆ ಚರ್ಮವನ್ನು ಚೆನ್ನಾಗಿ ಎಕ್ಸ್ಫೋಲಿಯೇಟ್ ಮಾಡುವ ಕಾರ್ಯವನ್ನು ಪಪ್ಪಾಯ ಮಾಡುತ್ತದೆ. ಅಲ್ಲದೇ ಪಪ್ಪಾಯ ಫೇಸ್‌ ಪ್ಯಾಕ್‌ ಸಾಮಾನ್ಯವಾಗಿ ಯಾವುದೇ ಅಡ್ಡಪರಿಣಾಮವನ್ನು ಹೊಂದಿರುವುದಿಲ್ಲ.

ಪಪ್ಪಾಯ ಫೇಸ್‌ ಪ್ಯಾಕ್‌ ತಯಾರಿಸುವುದು ಹೇಗೆ..?

ಪಪ್ಪಾಯವನ್ನು ಕತ್ತರಿಸಿ ಅದರಿಂದ ಸಿಪ್ಪೆ ಹಾಗೂ ಬೀಜಗಳನ್ನು ಬೇರೆ ಮಾಡಿ ಬಳಿಕ ಪಪ್ಪಾಯ ತಿರುಳನ್ನು ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಮುಖದ ಮೇಲೆ ಹಚ್ಚಿಕೊಳ್ಳಿ. ಹತ್ತಿ ಉಂಡೆಯನ್ನು ಬಳಸಿ ನೀವು ಫೇಸ್‌ ಪ್ಯಾಕ್‌ ಹಚ್ಚಿಕೊಳ್ಳಬಹುದು. 15 ನಿಮಿಷ ಬಿಟ್ಟು ಬಳಿಕ ಶುದ್ಧವಾದ ಹಾಗೂ ಉಗುರು ಬೆಚ್ಚನೆಯ ನೀರಿನಿಂದ ಮುಖ ತೊಳೆದುಕೊಳ್ಳಿ.

ಮೊಸರು : ಒಣ ತ್ವಚೆಗೆ ತೇವಾಂಶವನ್ನು ಮರಳಿ ನೀಡುವುದರಲ್ಲಿ ಮೊಸರು ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದು ನೈಸರ್ಗಿಕ ಬ್ಲೀಚ್‌ನಂತೆಯೂ ಕಾರ್ಯ ನಿರ್ವಹಿಸುತ್ತದೆ. ಜೇನುತುಪ್ಪವು ತ್ವಚೆಯು ಮೃದುವಾಗಲು ಸಹಕಾರಿಯಾಗಿದೆ. ಹೀಗಾಗಿ ಮೊಸರಿನ ಜೊತೆಯಲ್ಲಿ ಜೇನುತುಪ್ಪವನ್ನು ಸೇರಿಸಿ ಮುಖಕ್ಕೆ ಫೇಸ್‌ ಪ್ಯಾಕ್‌ ಹಚ್ಚುವ ಮೂಲಕ ಬೇಸಿಗೆಕಾಲದಲ್ಲಿ ಚರ್ಮದ ಮೇಲಾಗುವ ಅಪಾಯದಿಂದ ಪಾರಾಗಬಹುದಾಗಿದೆ.

ಮೊಸರಿನ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ..?

2 ದೊಡ್ಡ ಚಮಚ ಮೊಸರಿಗೆ 1 ಟೀ ಸ್ಪೂನ್ ಜೇನುತುಪ್ಪವನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ನಿಮ್ಮ ಮುಖದ ಮೇಲೆ ಲೇಪಿಸಿಕೊಂಡು ಅದು ಒಣಗುವವರೆಗೂ ಕಾಯಬೇಕು. ಬಳಿಕ ಶುದ್ಧವಾದ ನೀರಿನಲ್ಲಿ ನಿಮ್ಮ ಮುಖವನ್ನು ತೊಳೆದುಕೊಳ್ಳಿ.

ಮೊಸರು ಹಾಗೂ ಜೇನುತುಪ್ಪದ ಮಿಶ್ರಣಕ್ಕೆ ಸ್ಟ್ರಾಬೆರಿ ಪೇಸ್ಟ್‌ ಸೇರಿಸಿ ಕೂಡ ನೀವು ಫೇಸ್ಪ್ಯಾಕ್ ಮುಖಕ್ಕೆ ಹಚ್ಚಿಕೊಳ್ಳಬಹುದು. ಇದು ಮುಖದ ಕಾಂತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಶ್ರೀಗಂಧ

ಶ್ರೀಗಂಧ ಹಾಗೂ ರೋಸ್ ವಾಟರ್ ಹಳೆಯ ಕಾಲದಿಂದಲೂ ತ್ವಚೆಯ ಆರೈಕೆಗೆ ಬಳಕೆ ಮಾಡುವಂತಹ ಒಂದು ಪದಾರ್ಥವಾಗಿದೆ. ಬೇಸಿಗೆ ಕಾಲದಲ್ಲಿ ಚರ್ಮಕ್ಕೆ ಇದನ್ನು ಬಳಕೆ ಮಾಡುವುದು ಬಹಳಷ್ಟು ರೀತಿಯಲ್ಲಿ ಲಾಭವನ್ನು ನೀಡುತ್ತದೆ. ಬೇಸಿಗೆಯ ಶಾಖದಿಂದ ಚರ್ಮದ ಮೇಲಾಗುವ ದುಷ್ಪರಿಣಾಮಗಳನ್ನು ಹೋಗಲಾಡಿಸಲು ಸಹಕಾರಿಯಾಗಿದೆ.

ಶ್ರೀಗಂಧದ ಫೇಸ್‌ ಪ್ಯಾಕ್‌ ತಯಾರಿಸುವುದು ಹೇಗೆ..?

3 ಚಮಚ ಶ್ರೀಗಂಧದ ಪುಡಿಗೆ ಸ್ವಲ್ಪ ರೋಸ್ ವಾಟರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಮುಖಕ್ಕೆ ಲೇಪಿಸಿಕೊಳ್ಳಿ. 15 ನಿಮಿಷ ಬಿಟ್ಟು ಮುಖ ತೊಳೆದುಕೊಳ್ಳಿ. ಮುಖದ ಮೇಲೆ ಮೂಡುವ ಬ್ಲಾಕ್‌ ಹೆಡ್‌ಗಳ ನಿವಾರಣೆಗೂ ಶ್ರೀಗಂಧದ ಫೇಸ್‌ ಪ್ಯಾಕ್‌ ಬಳಸಬಹುದಾಗಿದೆ. ಇದಕ್ಕಾಗಿ ನೀವು ಶ್ರೀಗಂಧದ ಪುಡಿಗೆ ಸ್ವಲ್ಪ ಅರಿಶಿಣ ಸೇರಿಸಿ ಉಗುರು ಬೆಚ್ಚಗಿನ ನೀರಿನಲ್ಲಿ ಪೇಸ್ಟ್ ತಯಾರಿಸಿಕೊಳ್ಳಿ. ಎಲ್ಲೆಲ್ಲಿ ಬ್ಲಾಕ್‌ ಹೆಡ್‌ ಮೂಡಿದೆಯೋ ಅಲ್ಲಿ ಈ ಪೇಸ್ಟ್‌ ಹಚ್ಚಿ ಒಣಗಲು ಬಿಡಿ. ಬಳಿಕ ಮುಖ ತೊಳೆಯಿರಿ.

ಸೌತೆಕಾಯಿ ಹಾಗೂ ಓಟ್ಸ್

ಓಟ್ಸ್ ಹಾಗೂ ಸೌತೆಕಾಯಿ ಕೂಡಾ ತ್ವಚೆಯ ಆರೋಗ್ಯವನ್ನು ಹೆಚ್ಚಿಸುವ ಸಾಕಷ್ಟು ಅಂಶಗಳನ್ನು ಹೊಂದಿವೆ.

ಸೌತೆಕಾಯಿ, ಓಟ್ಸ್ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ..?

ಮೂರು ಚಮಚ ಓಟ್ಸ್‌ಗೆ 1 ಚಮಚ ಸೌತೆಕಾಯಿ ರಸ ಸೇರಿಸಿ. ಇದಕ್ಕೆ 1 ಚಮಚ ಮೊಸರನ್ನೂ ಹಾಕಿ. ಎಲ್ಲವನ್ನೂ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಬಳಿಕ ಶುದ್ಧ ನೀರಿನಿಂದ ಮುಖ ತೊಳೆದುಕೊಳ್ಳಿ. ಫೇಸ್ ಪ್ಯಾಕ್‌ಗಳನ್ನು ಹಚ್ಚಿ ಬಳಿಕ ಮುಖ ತೊಳೆದುಕೊಂಡು ಹಾಗೆಯೇ ಬಿಡಬೇಡಿ. ಮುಖಕ್ಕೆ ಮರೆಯದೆ ಮಾಯಿಶ್ಚರೈಸರ್‌ ಹಚ್ಚಿ. ಇದರಿಂದ ನಿಮ್ಮ ಮುಖದ ಕಾಂತಿ ಇನ್ನಷ್ಟು ಹೆಚ್ಚಲಿದೆ .

mysore-dasara_Entry_Point