ಕನ್ನಡ ಸುದ್ದಿ  /  Lifestyle  /  Summer Skin Care Tips Aloe Vera Ice Cube Treatment For Skin How To Remove Dirt In Skin Rsa

Skin Care in Summer: ಬೇಸಿಗೆಯಲ್ಲಿ ಮುಖದ ತ್ವಚೆ ಹದ ಗೆಡುವ ಭಯವೇ? ಎಲ್ಲಾ ಚರ್ಮದ ಸಮಸ್ಯೆಗೂ ಮನೆಯಲ್ಲೇ ತಯಾರಿಸುವ ಅಲೋ ಐಸ್ ಮದ್ದು

Summer Skin Care: ಬೇಸಿಗೆ ಕಾಲದಲ್ಲಿಯೂ ಚರ್ಮದ ಆರೋಗ್ಯ ಸರಿಯಾಗಿರುವಂತೆ ನೋಡಿಕೊಳ್ಳಲು ಇಲ್ಲೊಂದು ಸರಳವಾದ ಮನೆ ಮದ್ದಿದೆ. ಮನೆ ತೋಟದಲ್ಲೇ ಬೆಳೆಯುವ ಆಲೋವೆರಾವನ್ನು ಬಳಸಿಕೊಂಡು ನೀವು ಇದನ್ನು ಸುಲಭವಾಗಿ ತಯಾರಿಸಬಹುದಾಗಿದೆ.

ಬೇಸಿಗೆಯಲ್ಲಿ ಚರ್ಮದ ಚಿಕಿತ್ಸೆಗೆ ಅಲೋವೆರಾ ಐಸ್‌ ಚಿಕಿತ್ಸೆ
ಬೇಸಿಗೆಯಲ್ಲಿ ಚರ್ಮದ ಚಿಕಿತ್ಸೆಗೆ ಅಲೋವೆರಾ ಐಸ್‌ ಚಿಕಿತ್ಸೆ (PC: Unsplash)

ಚರ್ಮದ ಕಾಳಜಿ: ನಾವೀಗ ಬೇಸಿಗೆ ಕಾಲದ ಹೊಸ್ತಿಲಲ್ಲಿ ಇದ್ದೇವೆ. ಈಗಾಗಲೇ ಬಹುತೇಕ ಕಡೆಗಳಲ್ಲಿ ಬಿಸಿಲಿನ ಧಗೆ ಮಿತಿ ಮೀರಿ ಹೋಗಿದೆ. ನೀವಿನ್ನು ವಾರ್ಡ್‌ರೋಬ್‌ನಲ್ಲಿ ಸ್ವೆಟರ್‌ಗಳ್ನು ಮಡಚಿಟ್ಟು ಬೇಸಿಗೆಗೆ ಹೊಂದುವ ಬಟ್ಟೆಗಳನ್ನು ಬಳಸುವ ಸಮಯ ಬಂದೇಬಿಟ್ಟಿದೆ. ಚಹಾ, ಕಾಫಿಯ ಜಾಗದಲ್ಲಿ ಜನರು ಎಳ ನೀರು, ಜ್ಯೂಸ್‌, ಐಸ್‌ಕ್ರೀಮ್‌ಗಳನ್ನು ಹುಡುಕುವ ಸಮಯವಿದು.

ಬೇಸಿಗೆ ಕಾಲವು ನಿಮ್ಮ ದಿನಚರಿಯಲ್ಲಿ ಇಷ್ಟೆಲ್ಲಾ ಬದಲಾವಣೆಗಳನ್ನು ಮಾಡುತ್ತದೆ ಎಂದ ಮೇಲೆ ಇನ್ನು ನಮ್ಮ ತ್ವಚೆಯ ಮೇಲೆ ಯಾವೆಲ್ಲಾ ರೀತಿ ಪರಿಣಾಮ ಬೀರಬಹುದು ಅಲ್ಲವೇ..? ಈ ಸಮಯದಲ್ಲಿ ಅತಿಯಾದ ಸೆಖೆಯಿಂದಾಗಿ ಮುಖವು ಬೆವರುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ. ಇಂಥಹ ಸಂದರ್ಭದಲ್ಲಿ ಮುಖದ ಮೇಲೆ ಸಾಕಷ್ಟು ಕಲೆಗಳು ಉಂಟಾಗಬಹುದು. ಬೇಸಿಗೆ ಕಾಲದಲ್ಲಿ ತ್ವಚೆಯ ಮೇಲೆ ಉಂಟಾಗುವ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನೀವು ಆಲೋವೇರಾ ಐಸ್ ಚಿಕಿತ್ಸೆಯನ್ನು ಬಳಸಬಹುದಾಗಿದೆ.

ಏನಿದು ಆಲೋ ಐಸ್ ಮನೆಮದ್ದು..?

ಆಲೋವೇರಾದ ಐಸ್ ಸಾಕಷ್ಟು ಚರ್ಮದ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದು ಬೇಸಿಗೆಗಾಲದಲ್ಲಿ ಚರ್ಮವನ್ನು ಹೈಡ್ರೇಟ್ ಮಾಡಲು ಸಹಕಾರಿಯಾಗಿದೆ. ಇದು ಮುಖದಲ್ಲಿ ಇರುವ ರಂಧ್ರಗಳನ್ನು ಮುಚ್ಚುವ ಕೆಲಸ ಮಾಡುತ್ತದೆ. ಚರ್ಮಕ್ಕೆ ಒಳ್ಳೆಯ ಪೋಷಣೆ ನೀಡುತ್ತದೆ. ಮೊಡವೆಗಳನ್ನು ಕಡಿಮೆ ಮಾಡಲು ಕೂಡ ಇದು ಸಹಕಾರಿಯಾಗಿದೆ.

ಐಸಿಂಗ್, ಚರ್ಮಕ್ಕೆ ಸಾಕಷ್ಟು ರೀತಿ ಸಹಾಯ ಮಾಡುತ್ತದೆ ಎಂದು ಈಗಾಗಲೇ ಸಾಕಷ್ಟು ಅಧ್ಯಯನಗಳು ತಿಳಿಸಿವೆ. ಚರ್ಮದಲ್ಲಿ ಉಂಟಾದ ರಂಧ್ರಗಳನ್ನು ಮುಚ್ಚಲು, ಮೊಡವೆಯನ್ನು ತಡೆಯಲು, ಚರ್ಮವು ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಲು. ಹೀಗೆ ಸಾಕಷ್ಟು ರೀತಿಯಲ್ಲಿ ಮಂಜುಗಡ್ಡೆ ಮುಖಕ್ಕೆ ನೆರವಾಗುತ್ತದೆ. ಅಲ್ಲದೇ ಯಾರ ಮುಖದಲ್ಲಿ ಅತಿಯಾಗಿ ಎಣ್ಣೆಯಂಶ ಇರುತ್ತದೆಯೋ ಅವರು ಮಂಜುಗಡ್ಡೆಯಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳುವ ಮೂಲಕ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದಾಗಿದೆ.

ಇನ್ನು ಆಲೋವೇರಾ ಕೂಡಾ ನಿಮ್ಮ ಚರ್ಮಕ್ಕೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಜರ್ನಲ್ ಆಫ್ ಟ್ರೆಡಿಷನಲ್ ಹಾಗೂ ಕಾಂಪ್ಲಿಮೆಂಟರಿ ಮೆಡಿಸಿನ್ ಅಧ್ಯಯನದ ಪ್ರಕಾರ, ಅಲೋವೇರಾದಲ್ಲಿ ಆಂಟಿ ಆಕ್ಸಿಡಂಟ್‌ಗಳು. ಆಂಟಿ ಮೈಕ್ರೊಬಿಯಲ್, ಹೈಪೋಗ್ಲಿಸಿಮಿಕ್, ಹೈಪೋಲಿಪಿಡೆಮಿಕ್ ಅಂಶಗಳು ಹಾಗೂ ಮಧುಮೇಹಿ ವಿರೋಧಿ ಗುಣಗಳು ಕೂಡಾ ಇದೆ.

ಅಲೋವೇರಾ ಐಸ್ ತಯಾರಿಸುವುದು ಹೇಗೆ...?

ಆಲೋವೇರಾದ ತಾಜಾ 3 ಕಾಂಡಗಳನ್ನು ತೆಗೆದುಕೊಳ್ಳಿ. ಇವುಗಳಲ್ಲಿ ಹಳದಿ ಬಣ್ಣದ ರಸ ಹೊರ ಬರುವವರೆಗೂ ಅದನ್ನು ಬಾಟಲಿ ಇಲ್ಲವೇ ಜಾರ್‌ನಲ್ಲಿ ಇಟ್ಟುಕೊಳ್ಳಿ. ಹಳದಿ ಬಣ್ಣದ ದ್ರವ ಕಾಣಿಸಿಕೊಳ್ಳಲು ಆರಂಭಿಸಿದ ಬಳಿಕ ಆಲೋವೇರಾದ ತಿರುಳನ್ನು ಬೇರ್ಪಡಿಸಿ . ಈಗ ಈ ತಿರುಳನ್ನು ಜ್ಯೂಸರ್‌ನಲ್ಲಿ ಚೆನ್ನಾಗಿ ಬ್ಲೆಂಡ್ ಮಾಡಿ. ಇದಾದ ಬಳಿಕ ಒಂದು ಕಪ್ ತೆಗೆದುಕೊಳ್ಳಿ. ಇದರಲ್ಲಿ ಆಲೋವೇರಾ ಜೆಲ್ ಹಾಕಿ. ಅದರ ಮೇಲೆ ವೃತ್ತಾಕಾರದ ಹಣಿಗೆಯನ್ನು ಮುಚ್ಚಳದ ರೀತಿಯಲ್ಲಿ ಇರಿಸಿ. ವೃತ್ತಾಕಾರದ ಬಾಚಣಿಗೆಯ ಹಿಡಿಕೆಗೆ ಎರಡು ಚಿಕ್ಕದಾದ ಕೋಲುಗಳನ್ನು ಸಿಕ್ಕಿಸಿ. ರಾತ್ರಿಯಿಡೀ ಇದನ್ನು ಫ್ರೀಜರ್‌ನಲ್ಲಿ ಇಡಿ.

ಮರುದಿನ ಇದು ಗಟ್ಟಿಯಾಗಿರುತ್ತದೆ. ಕಪ್‌ನಿಂದ ಆಲೋವೇರಾ ಜೆಲ್‌ ಬೇರ್ಪಡಿಸಿ. ಬಾಚಣಿಕೆಯು ನಿಮಗೆ ಹಿಡಿಕೆಯಂತೆ ಕಾರ್ಯ ನಿರ್ವಹಿಸಲಿದೆ. ಈಗ ಈ ಆಲೋವೇರಾ ಐಸ್‌ನಿಂದ ನಿಮ್ಮ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ. ನೀವು ವಾರದಲ್ಲಿ ಕನಿಷ್ಠ 2 ಬಾರಿಯಾದರೂ ಮುಖಕ್ಕೆ ಆಲೋವೆರಾ ಐಸ್ ಮಸಾಜ್ ನೀಡಿದರೆ ಬೇಸಿಗೆಯ ಯಾವುದೇ ಬಾಧೆಯು ನಿಮ್ಮ ಚರ್ಮಕ್ಕೆ ಅಂಟುವುದಿಲ್ಲ.