ಕನ್ನಡ ಸುದ್ದಿ  /  Lifestyle  /  Summer Skin Care Tips How To Get Rid Off Inner Thigh Rashes Home Remedy For Intimate Health Rsa

Summer Skin Care: ಬೇಸಿಗೆಯಲ್ಲಿ ಒಳ ತೊಡೆಯ ದದ್ದು ಸಮಸ್ಯೆ ಜೀವ ಹಿಂಡುತ್ತಿದೆಯೇ? ಇಲ್ಲಿದೆ ಸಿಂಪಲ್ ಮನೆ ಮದ್ದು

Summer Skin Care: ಬೇಸಿಗೆ ಬಂತೆಂದರೆ ಸಾಕು ಒಳತೊಡೆಯಲ್ಲಿ ದದ್ದುಗಳು ಉಂಟಾಗುವ ಸಮಸ್ಯೆ ಬಹುತೇಕರನ್ನು ಕಾಡುತ್ತದೆ. ಇದು ಕೇಳೋಕೆ ಸಾಮಾನ್ಯ ಸಮಸ್ಯೆಯಾದರೂ ಸಹ ಇದು ತರುವ ನೋವು ಯಾವುದೇ ನರಕಕ್ಕೆ ಕಡಿಮೆಯಿಲ್ಲ. ಹೀಗಾಗಿ ಒಳತೊಡೆ ದದ್ದುಗಳು ಉಂಟಾದಾಗ ಹೇಗೆ ಮನೆಮದ್ದುಗಳಿಂದ ರಕ್ಷಣೆ ಪಡೆಯಬಹುದು ಎಂಬುದಕ್ಕೆ ಮಾಹಿತಿ ಇಲ್ಲಿದೆ.

 ಒಳತೊಡೆ ಸಂದುಗಳಲ್ಲಿ ಉಂಟಾಗುವ ದದ್ದುಗಳಿಗೆ ಮನೆಮದ್ದು (ಸಾಂದರ್ಭಿಕ ಚಿತ್ರ)
ಒಳತೊಡೆ ಸಂದುಗಳಲ್ಲಿ ಉಂಟಾಗುವ ದದ್ದುಗಳಿಗೆ ಮನೆಮದ್ದು (ಸಾಂದರ್ಭಿಕ ಚಿತ್ರ) (PC: Unsplash)

Summer Skin Care: ಒಳ ತೊಡೆಯ ಸಂಧುಗಳಲ್ಲಿ ದದ್ದುಗಳಾದ ನಡೆಯುವುದು ಯಾವ ನರಕಕ್ಕೂ ಕಡಿಮೆ ಇರೋದಿಲ್ಲ. ಇದು ಸಾಮಾನ್ಯವಾಗಿ ಎಲ್ಲರಿಗೂ ಅನುಭವವಾಗಿರುವಂತಹ ಸಮಸ್ಯೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಒಳ ತೊಡೆಗಳಲ್ಲಿ ಹಾಗೂ ತೊಡೆಯ ಸಂದುಗಳಲ್ಲಿ ಹೆಚ್ಚಿನ ತೇವಾಂಶ ಉಂಟಾದಾಗ ಒಂದು ರೀತಿ ಗಾಯವಾದಂತಹ ಅನುಭವವಾಗುತ್ತದೆ.

ತೊಡೆಗಳ ನಡುವಿನ ನಿರಂತರ ಘರ್ಷಣೆಯಿಂದಾಗಿ ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರಗಳಿಂದಾಗಿ ಈ ಸಮಸ್ಯೆ ಉಂಟಾಗುತ್ತದೆ. ಇದೊಂದು ರೀತಿಯಲ್ಲಿ ಬ್ಯಾಕ್ಟೀರಿಯಾ ಸೋಂಕಾಗಿದೆ. ಆದರೆ ಇದೇನು ಗಂಭೀರ ಕಾಯಿಲೆಯಲ್ಲ. ಮನೆಯಲ್ಲಿರುವ ವಿವಿಧ ವಸ್ತುಗಳನ್ನು ಬಳಕೆ ಮಾಡಿ ನೀವು ಒಳತೊಡೆಯಲ್ಲಿ ಉಂಟಾದ ದದ್ದುಗಳನ್ನು ವಾಸಿ ಮಾಡಿಕೊಳ್ಳಬಹುದಾಗಿದೆ.

ಒಳತೊಡೆ ಗಾಯ ಹೇಗೆ ಸಂಭವಿಸುತ್ತದೆ..?

1.ಸುಗಂಧಭರಿತ ಉತ್ಪನ್ನಗಳು : ಒಳ ತೊಡೆಗಳಲ್ಲಿ ಈ ರೀತಿ ಸಮಸ್ಯೆ ಉಂಟಾಗಲು ಮೊದಲ ಕಾರಣವೆಂದರೆ ಅತಿಯಾದ ಸುಗಂಧ ಭರಿತ ಸಾಬೂನು ಹಾಗೂ ಬಾಡಿಲೋಷನ್‌ಗಳ ಬಳಕೆ ಎಂದು ಹೇಳಬಹುದಾಗಿದೆ. ಇವುಗಳಲ್ಲಿ ಇರುವ ಹಾನಿಕಾರಕ ರಾಸಾಯನಿಕಗಳು ಒಳತೊಡೆಯ ಸೂಕ್ಷ್ಮ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಇದರಿಂದ ತೊಡೆ ಕೆಂಪಾಗುವುದು, ತುರಿಕೆ ಹಾಗೂ ದದ್ದುಗಳಿಂದ ಅಸಾಮಾನ್ಯವಾದ ನೋವು ಉಂಟಾಗುತ್ತದೆ.

2. ಘರ್ಷಣೆ : ನಡೆದಾಡುವಾಗ ನಮ್ಮ ತೊಡೆಗಳ ನಡುವೆ ಉಂಟಾಗುವ ಘರ್ಷನೆಯು ಒಳತೊಡೆಯ ಗಾಯಕ್ಕೆ ಕಾರಣವಾಗುತ್ತದೆ. ಬಿಗಿಯಾದ ಹಾಗೂ ಒರಟಾದ ಬಟ್ಟೆಗಳನ್ನು ಧರಿಸುವ ವ್ಯಕ್ತಿಗಳಿಗೆ ಈ ಸಮಸ್ಯೆ ಪದೇ ಪದೇ ಕಾಡುತ್ತದೆ. ಈ ಭಾಗದಲ್ಲಿ ಹೆಚ್ಚು ಬೆವರಿದಾಗ ದದ್ದುಗಳು ಉಂಟಾಗುತ್ತದೆ. ಶೀಲಿಂಧ್ರ ಹಾಗೂ ಬ್ಯಾಕ್ಟೀರಿಯಾ ಸೋಂಕು ಕಾಣಿಸಿಕೊಳ್ಳುತ್ತದೆ.

3. ಸೂಕ್ಷ್ಮ ಚರ್ಮ : ಒಳತೊಡೆ ದದ್ದುಗಳಿಗೆ ಸೂಕ್ಷ್ಮ ಚರ್ಮ ಕೂಡ ಒಂದು ಕಾರಣವಾಗಿದೆ. ವಿಶೇಷವಾಗಿ ಹವಾಮಾನ ಬದಲಾದಂತೆಲ್ಲ ತಾಪಮಾನ ಹಾಗೂ ತೇವಾಂಶಗಳಲ್ಲಿಯೂ ಬದಲಾವಣೆ ಉಂಟಾಗುತ್ತದೆ. ಇದು ಸೂಕ್ಷ್ಮ ಚರ್ಮದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಬಹುದು. ಇದರಿಂದ ಒಳತೊಡೆಯ ಚರ್ಮದಲ್ಲಿ ಕಿರಿಕಿರಿ ಉಂಟಾಗುತ್ತದೆ. ಅತಿಯಾದ ಸೆಖೆ ಹಾಗೂ ಮಳೆಗಾಲದ ಸಂದರ್ಭದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.

4. ಸ್ವಚ್ಛಗೊಳಿಸದ ರೇಜರ್‌ಗಳ ಬಳಕೆ : ನಿಮ್ಮ ಖಾಸಗಿ ಭಾಗಗಳಲ್ಲಿರುವ ಕೂದಲನ್ನು ತೆಗೆಯುವ ಸಂದರ್ಭದಲ್ಲಿ ನೀವು ಕೊಳೆಯಾದ ರೇಜರ್‌ಳನ್ನು ಬಳಕೆ ಮಾಡಿದಾಗಲೂ ಸಹ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

5. ಬಿಗಿಯಾದ ಬಟ್ಟೆ : ಅತ್ಯಂತ ಬಿಗಿಯಾದ ಬಟ್ಟೆ ಕೂಡ ಚರ್ಮದ ಆರೋಗ್ಯಕ್ಕೆ ಒಲ್ಳೆಯದಲ್ಲ. ಇದರಿಂದ ಚರ್ಮದಲ್ಲಿ ದದ್ದುಗಳು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಪಾಲಿಸ್ಟರ್ ಹಾಗೂ ನೈಲಾನ್‌ಗಳಿಂದ ತಯಾರಿಸಿದ ಒಳ ಉಡುಪುಗಳನ್ನು ಎಂದಿಗೂ ಬಳಸಬೇಡಿ. ಇವುಗಳು ಚರ್ಮಕ್ಕೆ ಉಸಿರಾಡಲು ಅವಕಾಶ ನೀಡುವುದಿಲ್ಲ.

ಒಳತೊಡೆಯ ದದ್ದುಗಳಿಂದ ಪಾರಾಗುವುದು ಹೇಗೆ..?

ಅಲೋವೆರಾ : ಅಲೋವೇರಾ ಜೆಲ್‌ನಲ್ಲಿ ಆ್ಯಂಟಿ ಬ್ಯಾಕ್ಟೀರಿಯಾದಂತಹ ಗುಣಗಳು ಇರುತ್ತದೆ. ಇವುಗಳು ತುರಿಕೆ ಹಾಗೂ ಉರಿಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ತೊಡೆಯ ಮಧ್ಯೆ ಉಂಟಾದ ಗಾಯಗಳಿಂದ ತೀವ್ರ ನೋವುಂಟಾಗುತ್ತಿದ್ದರೆ ಅವುಗಳನ್ನೂ ಅಲೋವೆರಾ ಕಡಿಮೆ ಮಾಡುತ್ತದೆ.

ಕೊಬ್ಬರಿ ಎಣ್ಣೆ : ನಂಜು ನಿರೋಧಿ ಹಾಗೂ ಮಾಯಿಶ್ಚರೈಸರ್‌ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಕೊಬ್ಬರಿ ಎಣ್ಣೆಯು ಚರ್ಮದ ತುರಿಕೆ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ದದ್ದುಗಳು ಉಂಟಾದ ಜಾಗದಲ್ಲಿ ತೆಂಗಿನ ಎಣ್ಣೆಯನ್ನು ಸವರಿ ನಿಧಾನವಾಗಿ ಮಸಾಜ್ ಮಾಡಿಕೊಳ್ಳಬಹುದು.

ಬೇಕಿಂಗ್ ಸೋಡಾ : ಬೇಕಿಂಗ್ ಸೋಡಾವನ್ನು ನೀರಿನಲ್ಲಿ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಎಲ್ಲೆಲ್ಲಿ ದದ್ದುಗಳು ಉಂಟಾಗಿದೆಯೋ ಅಲ್ಲೆಲ್ಲ ಹಚ್ಚಿ. ಇವುಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇರುವುದರಿಂದ ಕ್ಷಣಾರ್ಧದಲ್ಲಿ ಈ ಸಮಸ್ಯೆಗೆ ಪರಿಹಾರ ನೀಡುತ್ತವೆ .

ಟೀ ಟ್ರೀ ಎಣ್ಣೆ : ಕೊಬ್ಬರಿ ಎಣ್ಣೆ ಜೊತೆಯಲ್ಲಿ ಟೀ ಟ್ರೀ ಎಣ್ಣೆಯನ್ನು ಹಾಕಿ. ಬಳಿಕ ಇದನ್ನು ಗಾಯವಾದ ಜಾಗದಲ್ಲಿ ಸವರಿ. ಟೀ ಟ್ರೀ ಎಣ್ಣೆಯು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು ತುರಿಕೆ ಹಾಗೂ ಉರಿಯೂತದಿಂದ ರಕ್ಷಣೆಯನ್ನು ನೀಡುತ್ತದೆ.

ಇದನ್ನು ಹೊರತುಪಡಿಸಿ ನೀವು ಗಾಯವಾದ ಜಾಗದಲ್ಲಿ ಐಸ್‌ಕ್ಯೂಬ್‌ ಕೂಡಾ ಇಡಬಹುದಾಗಿದೆ. ಒಂದು ಟವಲ್‌ಲ್ಲಿ ಮಂಜುಗಡ್ಡೆಯನ್ನು ಸುತ್ತಿ ದದ್ದುಗಳಾದ ಜಾಗದಲ್ಲಿ 10 ರಿಂದ 15 ನಿಮಿಷಗಳ ಕಾಲ ಮಸಾಜ್ ಮಾಡುವ ಮೂಲಕ ಪರಿಹಾರ ಕಂಡು ಕೊಳ್ಳಬಹುದಾಗಿದೆ.

ಪ್ರತಿನಿತ್ಯ ಹೆಚ್ಚು ನೀರು ಕುಡಿಯುವವರು ತೊಡೆ ಸಂದುಗಳ ದದ್ದು ಸಮಸ್ಯೆಯಿಂದ ಎಂದಿಗೂ ಮುಕ್ತರಾಗಿ ಇರುತ್ತಾರೆ. ಬೇಸಿಗೆಯ ಸಂದರ್ಭದಲ್ಲಿ ಸ್ವಲ್ಪ ದೊಡ್ಡದಾದ ಹಾಗೂ ಹತ್ತಿ ಬಟ್ಟೆಗಳನ್ನು ಹೆಚ್ಚಾಗಿ ಧರಿಸಿ. ಪ್ರತಿನಿತ್ಯ ಸ್ನಾನವಾದ ಬಳಿಕ ತೊಡೆಯ ಮಧ್ಯಕ್ಕೆ ಪೌಡರ್‌ ಹಚ್ಚಿಕೊಳ್ಳಿ. ಇವುಗಳು ತೊಡೆಯ ನಡುವೆ ಘರ್ಷಣೆ ಉಂಟಾಗುವುದನ್ನು ತಡೆಯುತ್ತವೆ.