Summer Temperature: ಬೇಸಿಗೆ ಶಾಖದಿಂದ ಪಾರಾಗಲು ಪ್ರಾಣಿ, ಪಕ್ಷಿಗಳಿಗೆ ನೀರು, ಆಹಾರದ ವ್ಯವಸ್ಥೆ ಮಾಡಿ; ಈ ಅಂಶಗಳು ನಿಮ್ಮ ಗಮನದಲ್ಲಿರಲಿ
Summer Temperature: ಬೇಸಿಗೆ ಸೇರಿದಂತೆ ಎಲ್ಲಾ ಸೀಸನ್‌ಗಳಲ್ಲೂ ನಮ್ಮ ಅಗತ್ಯಕ್ಕೆ ತಕ್ಕಂತೆ ಅನುಕೂಲ ಮಾಡಿಕೊಳ್ಳುತ್ತೇವೆ. ಆದರೆ ಪ್ರಾಣಿ, ಪಕ್ಷಿಗಳು ಸೂಕ್ತ ಆರೈಕೆ ದೊರೆಯದೆ ಸಾಯುತ್ತಿವೆ. ಈಗ ಬಿರು ಬಿಸಿಲಿಗೆ ಎಷ್ಟೋ ಪ್ರಾಣಿಗಳು ನೀರು, ಆಹಾರ ಇಲ್ಲದೆ ನಿತ್ರಾಣಗೊಳ್ಳುತ್ತಿವೆ. ಆದ್ದರಿಂದ ಪ್ರಾಣಿ, ಪಕ್ಷಿಗಳಿಗೆ ಆಹಾರ/ನೀರಿನ ವ್ಯವಸ್ಥೆ ಮಾಡಲು ಪ್ರಯತ್ನಿಸಿ.
Summer Temperature: ಮಾರ್ಚ್, ಏಪ್ರಿಲ್ ಬಂದರೆ ಬೇಸಿಗೆ ಬಂತು ಎಂದೇ ಅರ್ಥ. ಬಿರು ಬೇಸಿಗೆಯ ಧಗೆ ನೆನಪಿಸಿಕೊಂಡರೆ ಭಯ ಎನಿಸುತ್ತದೆ. ಹೊರಗೆ ಹೋಗುವಂತಿಲ್ಲ, ಮನೆಯಲ್ಲಿ ಇರುವಂತಿಲ್ಲ. ಇನ್ನು ವಾಹನಗಳಲ್ಲಿ ಸವಾರಿ ಮಾಡಬೇಕೆಂದರೆ ಮತ್ತೊಂದು ರೀತಿಯ ಕಷ್ಟ. ಕಿಟಕಿ ಬಾಗಿಲು ತೆಗೆದರೆ ಬಿಸಿ ಗಾಳಿ, ಬಾಗಿಲು ಹಾಕಿದರೆ ಸೆಕೆ. ಏನಾದರೂ ಕೆಲಗಳಿದ್ದರೆ ಬೆಳಗ್ಗೆ 10 ಗಂಟೆ ಒಳಗೆ ಅಥವಾ ಸಂಜೆ 4ರ ನಂತರ ಹೋಗಿ ಬರುವ ಪರಿಸ್ಥಿತಿ.
ಇನ್ನು ಬೇಸಿಗೆ ಬಂತೆಂದರೆ ಕೂಲರ್, ಎಸಿ, ಫ್ಯಾನ್‌ಗೆ ಎಲ್ಲಿಲ್ಲದ ಬೇಡಿಕೆ. ಜೊತೆಗೆ ರೆಫ್ರಿಜರೇಟರ್, ವಾಟರ್ ಪ್ಯೂರಿಫೈಯರ್ ಹೀಗೆ ಜನರು ಅಂಗಡಿಗೆ ಹೋಗಿ ತಮಗೆ ಅಗತ್ಯವಿರುವ ಸಾಮಗ್ರಿಗಳನ್ನು ಕೊಂಡು ತರುತ್ತಾರೆ. ದುಡ್ಡಿರುವವರು ಬೇಸಿಗೆಗೆ ತಮಗೆ ಏನು ಬೇಕೋ ಆ ಅನುಕೂಲ ಮಾಡಿಕೊಳ್ಳುತ್ತಾರೆ. ಬಡವರು ಮಡಿಕೆ, ಹೂಜಿಯ ನೀರು ಕುಡಿಯುತ್ತಾ ಅದನ್ನೇ ರೆಫ್ರಿಜರೇಟರ್ ಎಂದುಕೊಳ್ಳುತ್ತಾರೆ. ಆದರೆ ಇಲ್ಲಿ ಸಮಸ್ಯೆ ಅನುಭವಿಸುವುದು ಪ್ರಾಣಿ ಪಕ್ಷಿಗಳು. ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ಆಹಾರವಿರಲಿ, ಅದಕ್ಕಿಂತ ಮುಖ್ಯವಾಗಿ ಜೀವ ರಕ್ಷಕ ಎನಿಸಿಕೊಂಡ ನೀರು ದೊರೆಯುವುದು ಬಹಳ ಕಷ್ಟವಾಗುತ್ತಿದೆ. ನೀರು ದೊರೆಯದೆ ಬಾಯಾರಿಕೆಯಿಂದಲೇ ಎಷ್ಟೋ ಪ್ರಾಣಿ ಪಕ್ಷಿಗಳು ನಿತ್ರಾಣಗೊಂಡರೆ, ಕೆಲವು ಪ್ರಾಣಿಗಳು ಜೀವ ಕಳೆದುಕೊಳ್ಳುತ್ತಿವೆ.
ಜ್ಯೋತಿಷ್ಯದ ದೃಷ್ಟಿಯಿಂದಲೂ ಒಳ್ಳೆಯ ಕೆಲಸ
ಈ ಭೂಮಿ ಮೇಲೆ ಮನುಷ್ಯರಂತೆ ಪ್ರಾಣಿ, ಪಕ್ಷಿಗಳಿಗೂ ಕೂಡಾ ಬದುಕುವ ಹಕ್ಕಿದೆ. ಪ್ರಾಣಿ ಪಕ್ಷಿಗಳ ನೆಲೆಯಾದ ಕಾಡನ್ನು ಮನುಷ್ಯ ನಾಶ ಮಾಡಿ ಅವುಗಳಿಗೆ ನೆಲೆ ಇಲ್ಲದಂತೆ ಮಾಡುತ್ತಿದ್ದಾನೆ. ಆದ್ದರಿಂದ ತಾನು ಮಾಡಿದ ತಪ್ಪಿಗೆ ಪರಿಹಾರ ಎನ್ನುವಂತೆ ನೀರು, ಆಹಾರ ಹುಡುಕಿ ಬರುವ ಪ್ರಾಣಿ, ಪಕ್ಷಿಗಳಿಗೆ ಆಹಾರ, ನೀರಿನ ವ್ಯವಸ್ಥೆ ಮಾಡಬೇಕಿದೆ. ಪ್ರಾಣಿ ಪಕ್ಷಿಗಳಿಗೆ ಆಹಾರ, ನೀರು ನೀಡುವುದು ಜ್ಯೋತಿಷ್ಯದ ದೃಷ್ಟಿಯಿಂದ ಕೂಡಾ ಬಹಳ ಒಳ್ಳೆಯದು, ಇರುವೆಗಳಿಗೆ ಸಕ್ಕರೆ ಹಾಕುವುದು, ಹಸುಗಳಿಗೆ ಮೇವು ನೀಡುವುದು, ಕೋತಿಗಳಿಗೆ ಬಾಳೆಹಣ್ಣು ನೀಡುವುದು, ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡುವುದು ಬಹಳ ಪುಣ್ಯದ ಕೆಲಸ.
ಪ್ರತಿ ವರ್ಷವೂ ತಾಪಮಾನ ಏರುತ್ತಲೇ ಇದೆ. ಮನುಷ್ಯರಾದರೆ ಅಲ್ಲಿ ಇಲ್ಲಿ ಹುಡುಕಿ ಪರಿಚಯಸ್ಥರ ಬಳಿ ಕೇಳಿಯೋ, ದುಡ್ಡು ಕೊಟ್ಟೋ ತಮಗೆ ಬೇಕಾದ ಆಹಾರ, ನೀರು ಸೇವಿಸುತ್ತಾರೆ. ಆದರೆ ಪ್ರಾಣಿಗಳ ಕಥೆ ಏನು? ಅದಕ್ಕೆ ನಾವೇ ಸಹಾಯ ಮಾಡಬೇಕು. ಇದಕ್ಕಾಗೇ ಅನೇಕ ಟ್ರಸ್ಟ್‌ಗಳು ಕೈ ಜೋಡಿಸಿದ್ದು ನೀವು ಕೂಡಾ ನೆರವಾಗಬಹುದು. ಈ ಟ್ರಸ್ಟ್‌ನ ಸದಸ್ಯರು ಬೀದಿ ಪ್ರಾಣಿಗಳು, ಪಕ್ಷಿಗಳ ರಕ್ಷಣೆಗೆ ಮುಂದಾಗಿದ್ದಾರೆ. ವಿವಿಧ ಸ್ಥಳಗಳಲ್ಲಿ ಪಕ್ಷಿಗಳಿಗೆ, ಪ್ರಾಣಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ. ಅದರ ಜೊತೆಗೆ ವಾರಸುದಾರರಿಲ್ಲದ ಜಾನುವಾರುಗಳು, ನಾಯಿಗಳಿಗೆ ಆಹಾರ ನೀಡಲು ಎಲ್ಲಾ ವ್ಯವಸ್ಥೆ ಮಾಡುತ್ತಿದ್ದಾರೆ.
ನಿಮಗೂ ಪ್ರಾಣಿ, ಪಕ್ಷಿಗಳಿಗೆ ಆಹಾರ ನೀರಿನ ವ್ಯವಸ್ಥೆ ಮಾಡಬೇಕು ಎಂಬ ಮನಸ್ಸಿದ್ದರೆ ಈ ಅಂಶಗಳು ನಿಮ್ಮ ಗಮನದಲ್ಲಿರಲಿ
1) ಪಕ್ಷಿಗಳಿಗೆ ನೀವು ನೀರಿನ ವ್ಯವಸ್ಥೆ ಮಾಡಬೇಕೆಂದರೆ ನಿಮ್ಮ ಮನೆಯ ಮೇಲ್ಬಾಗದಲ್ಲಿ ನೀವು ಬಳಸದ ಪ್ಲೇಟ್ ಅಥವಾ ಅಡಿಕೆ ಹಾಳೆಯಲ್ಲಿ ಧಾನ್ಯಗಳು, ಒಂದು ಬೌಲ್‌ನಲ್ಲಿ ನೀರು ಇಡಿ.
2) ಅಥವಾ ನಿಮ್ಮ ಮನೆಯ ಬಳಿ ಸಣ್ಣ ಪುಟ್ಟ ಮರ ಗಿಡಗಳಿದ್ದರೆ, ಬಟ್ಟಲಿನ ಮೂರು ಬದಿಗಳಲ್ಲಿ ತೂತುಗಳನ್ನು ಮಾಡಿ ದಾರದಲ್ಲಿ ಕಟ್ಟಿ ಅವುಗಳಲ್ಲಿ ನೀರು/ ಆಹಾರ ಧಾನ್ಯಗಳನ್ನು ಹಾಕಿ.
3) ಕೆಲವರು ಒಮ್ಮೆ ಈ ರೀತಿಯ ವ್ಯವಸ್ಥೆ ಮಾಡಿ ಮತ್ತೆ ಹಿಂತಿರುಗಿ ನೋಡುವುದಿಲ್ಲ. ಆದರೆ 2 ದಿನಗಳಿಗೊಮ್ಮೆ ನೀವು ಹಾಕಿಟ್ಟ ಆಹಾರ/ನೀರು ಖಾಲಿ ಆಗಿದ್ಯಾ ಎಂಬುದನ್ನು ಗಮನಿಸುತ್ತಿರಿ.
4) ನಿಮ್ಮ ಮನೆ ಟೆರೆಸ್ ಅಥವಾ ಕಾಂಪೌಂಡ್ ಮೇಲೆ ಆಹಾರ ತಿನ್ನಲು ಬರುವ ಪಕ್ಷಿಗಳು ಹಿಕ್ಕೆ ಹಾಕಿದರೆ ಅದನ್ನು ಹಾಗೇ ಬಿಡಬೇಡಿ, ದಿನಕ್ಕೆ ಒಮ್ಮೆಯಾದರೂ ಸ್ವಚ್ಛಗೊಳಿಸಿ.
5) ನೀವು ತಿಂದು ಬಿಟ್ಟ ಆಹಾರವನ್ನಾಗಲೀ, ಕುಡಿಯಲು ಯೋಗ್ಯವಲ್ಲದ ನೀರನ್ನಾಗಲೀ ದಯವಿಟ್ಟು ಪ್ರಾಣಿ, ಪಕ್ಷಿಗಳಿಗೆ ಇಡಬೇಡಿ.
6) ನೀರು ಕುಡಿಯಲು ಬಂದ ಪಕ್ಷಿಗಳಿಗೆ ನೆಮ್ಮದಿಯಾಗಿರಲು ಬಿಡಿ, ಪದೇ ಪದೇ ಹೋಗಿ ಫೋಟೋ ಕ್ಲಿಕ್ ಮಾಡುವುದು, ಅದನ್ನು ಹಿಡಿದು ಮಕ್ಕಳ ಕೈಗೆ ಆಟವಾಡಲು ಕೊಡುವ ಪ್ರಯತ್ನ ಬೇಡ.
7) ಧಾನ್ಯಗಳು ಹಾಗೂ ನೀರು ಎರಡನ್ನೂ ಒಂದೇ ಬಟ್ಟಲಲ್ಲಿ ಇಡದೆ, ಪ್ರತ್ಯೇಕವಾಗಿ ಇಡಿ.
8) ಸಾಧ್ಯವಾದರೆ ನಿಮ್ಮ ಸ್ನೇಹಿತರಿಗೂ ಇದರ ಬಗ್ಗೆ ತಿಳಿಸಿಕೊಟ್ಟು ಅವರಿಗೂ ಕೈಲಾದ ಪ್ರಯತ್ನ ಮಾಡುವಂತೆ ಮನವಿ ಮಾಡಿ.
9) ಜಾನುವಾರುಗಳು ಬಂದರೆ ಬಕೆಟ್‌ನಲ್ಲಿ ಅವುಗಳಿಗೆ ತೃಪ್ತಿಯಾಗುವಷ್ಟು ನೀರು ಕೊಡಿ, ನಿಮಗೆ ಶಕ್ತಿ ಇದ್ದರೆ ನೀರಿನ ತೊಟ್ಟಿಗಳನ್ನು ಕಟ್ಟಿಸಿ.