ಬಿಸಿಲ ತಾಪಕ್ಕೆ ಬಾಡದಿರಲಿ ನಯನಗಳು, ಬೇಸಿಗೆಯಲ್ಲಿ ಕಣ್ಣಿನ ಕಾಳಜಿಗಿರಲಿ ಆದ್ಯತೆ; ಸೋಂಕು, ಅಲರ್ಜಿಯಿಂದ ರಕ್ಷಿಸಿಕೊಳ್ಳಲು ಹೀಗೆ ಮಾಡಿ
ಬೇಸಿಗೆಯ ಸುಡು ಬಿಸಿಲಿನಲ್ಲಿ ದೇಹದ ಇತರೆಲ್ಲಾ ಭಾಗಗಳೊಂದಿಗೆ ಕಣ್ಣಿನ ಕಾಳಜಿ ಮಾಡುವುದು ಬಹಳ ಮುಖ್ಯ. ಬಿಸಿಲಿನ ತಾಪದಿಂದ ಕಣ್ಣುಗಳು ತೇವಾಂಶವನ್ನು ಕಳೆದುಕೊಳ್ಳದಿರಲು ಹಾಗೂ ಕಣ್ಣಿನ ಸೋಂಕುಗಳಿಂದ ರಕ್ಷಿಸಿಕೊಳ್ಳಲು ಏನು ಮಾಡಿದರೆ ಸೂಕ್ತ ಎಂಬ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಸೂಕ್ತ ಉತ್ತರ.
ಬೇಸಿಗೆ ಕಾಲ ಬಂತೆಂದರೆ ಸಾಕು ಹಲವು ರೋಗಗಳನ್ನು ನಮ್ಮನ್ನು ಬೆಂಬಿಡದೆ ಕಾಡುತ್ತವೆ. ಅವುಗಳ ಬಗ್ಗೆ ಹೆಚ್ಚಿನ ಗಮನ ವಹಿಸುವ ನಾವು ಬಿಸಿಲ ಬೇಗೆಯಲ್ಲಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದನ್ನು ಮರೆತೇ ಬಿಡುತ್ತೇವೆ. ನೀವು ತಿಳಿಯಲೇಬೇಕಿರುವ ವಿಚಾರವೆಂದರೆ, ಬೇಸಿಗೆಯ ಬಿಸಿಲ ಗಾಳಿ ಕಣ್ಣಿಗೆ ಹಲವು ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂಬುದು. ಅಲ್ಲದೆ ಸುಡುವ ಬಿಸಿಲಿಗೆ ಕಣ್ಣುಗಳು ತೇವಾಂಶವನ್ನು ಕಳೆದುಕೊಂಡು ಕೆಂಗಣ್ಣು ಅಥವಾ ಮಡ್ರಾಸ್ ಐ, ಕಾಮಾಲೆ, ಕಣ್ಣನಲ್ಲಿ ನವೆ, ಅಲರ್ಜಿ, ಕಣ್ಣಿನಲ್ಲಿ ಆಗಾಗ ನೀರು ಸುರಿಯುತ್ತಲೇ ಇರುವುದು, ಕಿರಿಕಿರಿ ಅನುಭವ ಇಲ್ಲವೇ ಕಣ್ಣಿನೊಳಗೆ ಚುಚ್ಚಿದಂತಾಗುವುದು ಹೀಗೆ ಹಲವು ರೀತಿಯ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಸಂದರ್ಭಗಳಲ್ಲಿ ಕಣ್ಣಿನ ಕಾಳಜಿ ಮಾಡುವುದು ಅವಶ್ಯ.
ಬೇಸಿಗೆ ಬೇಗೆಯಲ್ಲಿ ಕಣ್ಣಿನ ಆರೋಗ್ಯಕ್ಕಾಗಿ ಹೀಗೆ ಮಾಡಿ
ಮುಖಕ್ಕೆ ನೀರು ಹಾಕುತ್ತಿರಿ
ದೇಹದ ಒಳಗಿನ ಚಟುವಟಿಕೆಗಳಿಗೆ ನೀರು ಎಷ್ಟು ಅಗತ್ಯವೋ, ಅದರಂತೆಯೇ ಹೊರಪದರಕ್ಕೂ ನೀರಿನ ಅಗತ್ಯವಿರುತ್ತದೆ. ಅಂದರೆ ಮುಖ, ಕಣ್ಣುಗಳಿಗೆ ಆಗಾಗ ನೀರನ್ನು ಹಾಕುತ್ತಿದ್ದರೆ ತೇವಾಂಶವನ್ನು ಹೊಂದಲು ನೆರವಾಗುತ್ತದೆ. ಬೇಸಿಗೆಯಲ್ಲಿ ಸಾಧ್ಯವಾದಷ್ಟು ಮುಖ ತೊಳೆದುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಿ. ದಿನಕ್ಕೆ ಕಡಿಮೆ ಎಂದರೂ 5-6 ಬಾರಿ ಮುಖವನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ನೀವು ಉಲ್ಲಸಿತರಾಗಲು ನೆರವಾಗುವುದರ ಜೊತೆಗೆ ಕಣ್ಣುಗಳಲ್ಲಿ ಧೂಳಿನ ಕಣಗಳು ಸೇರಿದ್ದರೆ ಅದು ನೀರಿನಿಂದ ಹೊರಬರುತ್ತದೆ.
ಕನಿಷ್ಠ ೬-೮ ಲೀಟರ್ ನೀರು ಕುಡಿಯಿರಿ
ಬೇಸಿಗೆ ಕಾಲವಾಗಿರುವುದರಿಂದ ದೇಹವು ಬೇಗನೆ ನಿರ್ಜಲೀಕರಣಗೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ಪ್ರತಿ ದಿನ ಏನಿಲ್ಲವೆಂದರೂ ೬-೮ ಲೀಟರ್ ನೀರು ಕುಡಿಯಿರಿ. ಇದರಿಂದ ದೇಹದ ಸಮತೋಲನ ಕಾಪಾಡಿಕೊಳ್ಳುವುದರ ಜೊತೆಗೆ ಕಣ್ಣಿನ ಆರೋಗ್ಯಕ್ಕೂ ಸಹಕಾರಿ.
ಸನ್‌ಗ್ಲಾಸ್ ಬಳಕೆ ಮಾಡಿ
ಸುಡು ಬಿಸಿಲಿನಲ್ಲಿ ಮನೆಯಿಂದ ಹೊರಗೆ ಬರುವ ಅಗತ್ಯ ಬಂದಾಗೆಲ್ಲ ಸನ್‌ಗ್ಲಾಸ್ ಬಳಕೆ ಮಾಡಿ. ಬೈಕ್, ಕಾರು ಅಥವಾ ಇನ್ಯಾವುದೇ ವಾಹನಗಳನ್ನು ಚಾಲನೆ ಮಾಡುವ ವೇಳೆಯೂ ಸನ್‌ಗ್ಲಾಸ್ ಬಳಕೆ ಮಾಡುವುದರಿಂದ ಧೂಳಿನ ಕಣಗಳು ಅಥವಾ ಬಿಸಿಗಾಳಿ ಕಣ್ಣುಗಳನ್ನು ಸೇರದಂತೆ ತಡೆಯುತ್ತದೆ. ಬೈಕ್ ಸವಾರರು ಆದಷ್ಟು ಮುಚ್ಚಿರುವ ಹೆಲ್ಮೆಟ್‍ಗಳನ್ನು ಬಳಸುವುದು ಉತ್ತಮ.
ಕಣ್ಣಿನ ಸೋಂಕಿನ ಬಗ್ಗೆ ನಿರ್ಲಕ್ಷ್ಯ ತೋರದಿರಿ
ಕೆಂಗಣ್ಣು ಎಂಬುದು ಬೇಸಿಗೆಯಲ್ಲಿ ಸರ್ವೇಸಾಮಾನ್ಯ. ಹಾಗಾಗಿ ಧೂಳಿನ ಕೈಗಳನ್ನು ಸ್ವಚ್ಛ ಮಾಡಿದ ನಂತರವೇ ಕಣ್ಣನ್ನು ಮುಟ್ಟಬೇಕು. ಯಾವುದೇ ಕಾರಣಕ್ಕೂ ಕೊಳಕು ಕೈಗಳಿಂದ ಕಣ್ಣು ಮುಟ್ಟಿಕೊಳ್ಳಬಾರದು. ಈ ಸೋಂಕು ಒಬ್ಬರಿಂದ ಒಬ್ಬರಿಗೆ ಬಹುಬೇಗನೆ ಹರಡುವ ಗುಣ ಹೊಂದಿರುವುದರಿಂದ ಇತರರು ಬಳಸಿದ ಟವೆಲ್ ಅಥವಾ ಕರವಸ್ತ್ರಗಳಿಂದ ದೂರವಿರಿ.
ರಾತ್ರಿ ವೇಳೆ ಅತಿಯಾದ ಫ್ಯಾನ್, ಎಸಿ ಬಳಕೆ ಒಳ್ಳೆಯದಲ್ಲ
ಡ್ರೈ ಐ ಸಿಂಡ್ರೋಮ್ ಸಮಸ್ಯೆಗಳು ಬೇಸಿಗೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ರಾತ್ರಿಯ ವೇಳೆ ಕಡಿಮೆ ಬೆಳಕಿನಲ್ಲಿ ಮೊಬೈಲ್ ಬಳಕೆ, ಕಂಪ್ಯೂಟರ್ ಬಳಕೆ ಮಾಡದಿರಿ. ಬೇಸಿಗೆಯಲ್ಲಿ ಹೆಚ್ಚಾಗಿ ಎಸಿ ಮತ್ತು ಫ್ಯಾನುಗಳನ್ನು ಬಳಸುತ್ತೇವೆ. ಇದರಿಂದಾಗಿ ಕಣ್ಣುಗಳು ಬೇಗ ಒಣಗುತ್ತವೆ. ಆದಷ್ಟು ಎಸಿ ಅಥವಾ ಫ್ಯಾನಿನ ಗಾಳಿ ನೇರವಾಗಿ ಕಣ್ಣಿಗೆ ತಗುಲದಂತೆ ನೋಡಿಕೊಳ್ಳಬೇಕು.
ಕಣ್ಣಿನ ಆರೋಗ್ಯಕ್ಕೆ ಸರಿಯಾದ ನಿದ್ರೆ ಅತೀ ಅಗತ್ಯ
ಕಣ್ಣಿನ ಆರೋಗ್ಯಕ್ಕೆ ರಾತ್ರಿಯ ನಿದ್ರೆ ಬಹಳ ಮುಖ್ಯ. ಸಾಮಾನ್ಯವಾಗಿ ೭-೮ ಗಂಟೆಗಳ ಕಾಲ ಸರಿಯಾಗಿ ನಿದ್ರೆ ಆದರೆ ದೇಹಕ್ಕೆ ನಿಶ್ಯಕ್ತಿಯಿರದು. ಜೊತೆಗೆ ಕಣ್ಣಿನ ಸಮಸ್ಯೆಯಿಂದಲೂ ದೂರವಿರಬಹುದು.
ಕಣ್ಣಿಗೆ ತಂಪು ಮಾಡುತ್ತಲೇ ಇರಿ
ದೇಹಕ್ಕೆ ತಂಪು ಮಾಡುವಂತೆ, ಕಣ್ಣಿಗೂ ತಂಪು ಮಾಡುವ ಅಗತ್ಯವಿದೆ. ಅದಕ್ಕಾಗಿ ಸೌತೆಕಾಯಿಯನ್ನು ವೃತ್ತಾಕಾರದ ತುಂಡುಗಳನ್ನಾಗಿ ಮಾಡಿ ಕಣ್ಣಿನ ಮೇಲೆ ಇಟ್ಟುಕೊಳ್ಳುವುದರಿಂದ ಕಣ್ಣು ತಂಪಾಗುತ್ತದೆ. ಇಲ್ಲವಾದರೆ ವಾರಕ್ಕೆ ೨-೩ ಬಾರಿಯಾದರೂ ತಲೆಗೆ ಕೊಬ್ಬರಿ ಎಣ್ಣೆ ಇಲ್ಲವೇ ಎಳ್ಳೆಣ್ಣೆಯನ್ನು ಹಚ್ಚಿ ಗಂಟೆಗಳ ಕಾಲ ಬಿಟ್ಟು ತಲೆಗೆ ಸ್ನಾನ ಮಾಡಿಕೊಳ್ಳಿ. ಇದರಿಂದ ಕಣ್ಣಿನ ಉರಿಯನ್ನು ಕಡಿಮೆ ಮಾಡಿಕೊಳ್ಳಬಹುದು.
ಕಣ್ಣಿನ ಸಮಸ್ಯೆಗೆ ಸೂಕ್ತ ವೈದ್ಯರನ್ನು ಸಂಪರ್ಕಿಸಿ
ಕಣ್ಣು ದೇಹದ ಅಮೂಲ್ಯ ಅಂಗ. ಆದ್ದರಿಂದ ಉಳಿದೆಲ್ಲಾ ಕಾಲಗಳಿಗಿಂತಲೂ ಬೇಸಿಗೆಯಲ್ಲಿ ಕಣ್ಣಿನ ಆರೋಗ್ಯ ಬಹಳ ಮುಖ್ಯವಾಗುತ್ತದೆ. ಒಂದು ವೇಳೆ ಬೇಸಿಗೆಯಲ್ಲಿ ಕಣ್ಣು ಉರಿ ಕಾಣಿಸಿಕೊಳ್ಳುತ್ತಿದ್ದರೆ ನೀವೇ ಸ್ವತಃ ವೈದ್ಯರಾಗಿ, ಕೈಗೆ ಸಿಕ್ಕ ಡ್ರಾಪ್‌ಗಳನ್ನು ಬಳಸಲು ಹೋಗಬೇಡಿ. ಬದಲಾಗಿ, ವೈದ್ಯರನ್ನು ಭೇಟಿಯಾಗುವ ಮೂಲಕ ಕಣ್ಣುಗಳನ್ನು ಪರೀಕ್ಷಿಸಿ ಕಣ್ಣಿಗೆ ಹಾಕುವ ಡ್ರಾಪ್‌ಗಳನ್ನು ತೆಗೆದುಕೊಳ್ಳಿ.
ಬೇಸಿಗೆ ಕಾಲದಲ್ಲಿ ಕಣ್ಣಿನ ಬಗ್ಗೆ ಅತಿಯಾದ ಕಾಳಜಿ ವಹಿಸುವುದು ಅತೀ ಅಗತ್ಯ. ಸ್ವಲ್ಪ ನಿರ್ಲಕ್ಷ್ಯ ತೋರಿದರೂ ದೃಷ್ಟಿದೋಷಕ್ಕೂ ಇದು ಎಡೆಮಾಡಬಹುದು. ಆದ್ದರಿಂದ ಈ ಸರಳ ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ದೇಹದ ಅಮೂಲ್ಯ ಆಸ್ತಿಯನ್ನು ಕಾಪಾಡಿಕೊಳ್ಳಿ.