ಎಸಿ, ವಾಟರ್ ಕೂಲರ್ ಬೇಕಿಲ್ಲ; ಬೇಸಿಗೆ ಬಿಸಿಗೆ ಮನೆಯನ್ನು ತಂಪಾಗಿಡಲು 7 ನೈಸರ್ಗಿಕ ಮಾರ್ಗಗಳು ಇಲ್ಲಿವೆ
Natural Ways to Keep home Cool: ಈ ಬೇಸಿಗೆಯ ಬಿಸಿಯಲ್ಲೂ ಏರ್ ಕಂಡೀಶನರ್ ಬಳಕೆಯಿಲ್ಲದೆ ಮನೆಯನ್ನು ತಂಪಾಗಿಸಲು ಸಾಧ್ಯವಿದೆ. ನೆಮ್ಮದಿಯ ನಿದ್ದೆಗಾಗಿ ನೈಸರ್ಗಿಕ ವಿಧಾನದಲ್ಲಿ ಮನೆಯನ್ನು ತಂಪಾಗಿ ಇರಿಸಬಹುದು. ಇದರೊಂದಿಗೆ ಹಣ ಉಳಿಸುವುದು ಮಾತ್ರವಲ್ಲದೆ ಪರಿಸರ ರಕ್ಷಣೆಗೂ ಕೊಡುಗೆ ನೀಡಿದಂತಾಗುತ್ತದೆ.
ಬೇಸಿಗೆಯ ಶಾಖಕ್ಕೆ ಮನೆಯ ಹೊರಗೆ ಓಡಾಡುವ ಕಷ್ಟ ಒಂದೆಡೆಯಾದರೆ, ಮನೆಯೊಳಗೆ ನೆಮ್ಮದಿಯಿಂದ ಇರುವುದೂ ಕಷ್ಟವೇ. ಅದರಲ್ಲೂ ತಾರಸಿ ಮನೆಯೊಳಗೆ ತಾಪಮಾನ ಹೆಚ್ಚು. ಹೊರಗಿನ ಬಿಸಿಲಿನ ಅನುಭವ ಮನೆಯೊಳಗೂ ಆಗುತ್ತದೆ. ಈ ಬಿಸಿಗೆ ಫ್ಯಾನ್ ಹಾಕಿದರೂ ಪ್ರಯೋಜನವಿಲ್ಲ. ಹೀಗಾಗಿ ಜನರು ಏರ್ ಕಂಡೀಶನರ್ ಹಾಗೂ ವಾಟರ್ ಕೂಲರ್ ಮೊರೆ ಹೋಗುತ್ತಿದ್ದಾರೆ. ಆದರೆ, ಎಲ್ಲ ವರ್ಗದ ಜನರಿಗೂ ಏರ್ ಕಂಡೀಶನರ್ ಅಳವಡಿಸುವ ಆರ್ಥಿಕ ಸಾಮರ್ಥ್ಯ ಇರುವುದಿಲ್ಲ. ಅಂಥವರು ತಮ್ಮ ಮನೆಯನ್ನು ನೈಸರ್ಗಿಕವಾಗಿ ತಂಪಾಗಿರಿಸಬಹುದು. ನಾವು ನಿಮಗೆ ಕೆಲವೊಂದು ಸ್ಮಾರ್ಟ್ ಸಲಹೆಗಳನ್ನು ನೀಡುತ್ತಿದ್ದೇವೆ. ಇದರೊಂದಿಗೆ ಪರಿಸರದ ಕಾಳಜಿಯೊಂದಿಗೆ ವಿದ್ಯುತ್ ವೆಚ್ಚ ಕೂಡಾ ಕಡಿತಗೊಳಿಸುವ ಮೂಲಕ ಬೇಸಿಗೆಯನ್ನು ಬಜೆಟ್ ಸ್ನೇಹಿಯಾಗಿ ಕಳೆಯಬಹುದು.
ಮನೆಯೊಳಗೆ ಗಾಳಿಯಾಡಲು ಬಿಡಿ
ದಿನದ ಎಲ್ಲಾ ಸಮಯದಲ್ಲಿಯೂ ಮನೆ ಕಿಟಕಿ ಬಾಗಿಲುಗಳನ್ನು ಮುಚ್ಚಿಡಬೇಡಿ. ಹೊರಗಿನ ನೈಸರ್ಗಿಕ ಗಾಳಿಯು ಮನೆಯೊಳಗೆ ಪ್ರವೇಶಿಸಲು ಕಿಟಕಿಗಳನ್ನು ತೆರೆಯಿರಿ. ಕನಿಷ್ಠ ಬೆಳಗ್ಗೆ 5 ರಿಂದ 8ರವರೆಗೆ ಹಾಗೂ ಸಂಜೆ 7ರಿಂದ ಕನಿಷ್ಠ ರಾತ್ರಿ 10 ಗಂಟೆಯವರೆಗೆ ಕಿಟಿಕಿ ಬಾಗಿಲುಗಳನ್ನು ತೆರೆದಿಡಿ. ಏಕೆಂದರೆ ಈ ಸಮಯದಲ್ಲಿ ತಂಪಾದ ಗಾಳಿ ಮನೆ ಪ್ರವೇಶಿಸುತ್ತದೆ. ಆಗ ನಿದ್ರೆಯ ಸಮಯದಲ್ಲಿ ತಾಪಮಾನವು ಇಳಿಕೆಯಾಗಿ ಮನೆ ತುಸು ತಂಪಾಗುತ್ತದೆ. ಸೊಳ್ಳೆಗಳ ಭೀತಿಯಿದ್ದರೆ, ಬಾಗಿಲು ಮತ್ತು ಕಿಟಕಿಗಳ ಮೇಲೆ ಸೊಳ್ಳೆ ಪರದೆ ಅಳವಡಿಸಿದರೆ ಸಮಸ್ಯೆಗೆ ಪರಿಹಾರ ಸಿಕ್ಕಂತೆಯೇ.
ಕಿಟಕಿಗಳಿಗೆ ಬ್ಲೈಂಡ್ಸ್ ಹಾಕಿ
ಮನೆ ಕಿಟಿಕಿಗಳು ಹೊರಗಿನ ಶಾಖವನ್ನು ಹೀರಿಕೊಳ್ಳುತ್ತವೆ. ತುರುವಾಯ ಮನೆ ಒಳಗೂ ಅತ್ಯಂತ ಬಿಸಿಯಾಗುತ್ತದೆ. ಹೀಗಾಗಿ ಇಂಥಾ ಅನಪೇಕ್ಷಿತ ಶಾಖದಿಂದ ಮನೆಯನ್ನು ರಕ್ಷಿಸಲು ಕಿಟಕಿಗಳಿಗೆ ಕರ್ಟನ್‌ನಂಥ ಬ್ಲೈಂಡ್ಸ್ ಅಳವಡಿಸಿ. ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಈ ಬ್ಲೈಂಡ್‌ಗಳನ್ನು ಮುಚ್ಚಿ. ಮಾರುಕಟ್ಟೆಯಲ್ಲಿ ಸಿಗುವ ಬ್ಲೈಂಡ್ಸ್ ಅನ್ನು ಮನಸಿಗೆ ಬಂದಂತೆ ಅಳವಡಿಸದಿರಿ. ಬದಲಿಗೆ ಸೆಣಬಿನ ಪರದೆ ಅಥವಾ ಬಿದಿರಿನಿಂದ ಮಾಡಿದ ನೈಸರ್ಗಿಕ ಬ್ಲೈಂಡ್ಸ್ ಸಿಗುತ್ತವೆ. ಗಾಳಿಯಾಡಬಲ್ಲ ಹಗುರವಾದ ಬ್ಲೈಂಡ್ಸ್ ಅನಗತ್ಯ ಶಾಖವನ್ನು ತಡೆಯುತ್ತದೆ. ಇದರಲ್ಲೂ ಬಿಳಿ ಅಥವಾ ತಿಳಿ ಬಣ್ಣವನ್ನು ಆಯ್ಕೆ ಮಾಡಿ.
ನೈಸರ್ಗಿಕ ಬಟ್ಟೆಗಳನ್ನು ಬಳಸಿ
ಬೇಸಿಗೆಯ ಶಾಖಕ್ಕೆ ರೇಷ್ಮೆ, ಸ್ಯಾಟಿನ್, ಚರ್ಮ ಮತ್ತು ಪಾಲಿಯೆಸ್ಟರ್ ಬಟ್ಟೆಗಳು ಶಾಖವನ್ನು ಸುಲಭವಾಗಿ ಹೀರಿಕೊಳ್ಳುತ್ತವೆ. ಜವಳಿ ಮತ್ತು ಹಾಸಿಗೆ ವಿಷಯಕ್ಕೆ ಬಂದಾಗ, ಲಿನಿನ್ ಮತ್ತು ಹತ್ತಿ ಬಟ್ಟೆಗಳನ್ನು ಆರಿಸಿಕೊಳ್ಳಿ. ದಪ್ಪನೆಯ ಬಟ್ಟೆಗಳನ್ನು ಧರಿಸಬೇಡಿ. ಮನೆ ಹೊರಗೆ ಹೋಗುವಾಗ ಆದಷ್ಟು ಬಿಳಿ ಬಟ್ಟೆ ಧರಿಸಿ. ಗಾಢಬಣ್ಣದ ಬಟ್ಟೆಗಳು ಶಾಖವನ್ನು ಹೀರಿಕೊಂಡು ದೇಹವನ್ನು ಬಿಸಿಯಾಗಿಸುತ್ತವೆ.
ಇದನ್ನೂ ಓದಿ | Health Tips: ಸ್ನಾನದ ಬಳಿಕ ನೀರು ಕುಡಿಯಬಾರದೆ; ಒಂದು ವೇಳೆ ಕುಡಿದರೆ ಏನಾಗುತ್ತೆ
ತಿಳಿ ಬಣ್ಣ ಬಳಿಯಿರಿ
ಮನೆಗೂ ಗಾಢ ಬಣ್ಣಗಳನ್ನು ಬಳಿಯುವ ಬದಲು ಮಂದ ಬಣ್ಣಗಳನ್ನು ಆಯ್ಕೆ ಮಾಡಿ. ಬಿಳಿ, ತಿಳಿ ಹಳದಿ, ಆಕ್ವಾ, ಮಿಲೇನಿಯಲ್ ಪಿಂಕ್, ಬೀಜ್ ಮತ್ತು ಬಿಳಿಯಂತಹ ತಿಳಿ ಬಣ್ಣಗಳು ಬೇಸಿಗೆಗೆ ಉತ್ತಮ.
ಮನೆ ಚಾವಣಿ ಹೀಗಿರಲಿ
ಮನೆಯನ್ನು ತಂಪಾಗಿರಿಸುವಲ್ಲಿ ಮನೆಯ ಚಾವಣಿಯ ಪಾತ್ರ ತುಂಬಾ ಮುಖ್ಯ. ಚಾವಣಿಗೆ ಬಳಿಯಲು ವಾಟರ್‌ಪ್ರೂಫಿಂಗ್ ಲೇಪನಗಳು ಸಿಗುತ್ತವೆ. ಇದನ್ನು ಬಳಿದರೆ ಎಲ್ಲಾ ಕಾಲಗಳಿಗೂ ಉಪಕಾರಿಯಾಗುತ್ತವೆ. ರೂಫ್ ಗಾರ್ಡ್ ಲೇಪನವು ಹಾನಿಕಾರಕ ನೇರಳಾತೀತ ಕಿರಣಗಳನ್ನು ಪ್ರತಿಬಿಂಬಿಸಲು ಸಹಾಯ ಮಾಡುವ ಮೂಲಕ ಶಾಖ ಹೀರಿಕೊಳ್ಳುವಿಕೆಗೆ ನೆರವಾಗುತ್ತದೆ. ವಾಟರ್‌ಪ್ರೂಫಿಂಗ್ ಅಗತ್ಯವಿಲ್ಲದಿದ್ದರೆ ಬಿಳಿ ಬಣ್ಣವನ್ನು ಬಳಿಯಬಹುದು.
ಹೂಗಿಡಡ ಹಾಗೂ ಹಸಿರು ಸಸ್ಯಗಳನ್ನು ಬೆಳೆಸಿ
ಅಲೋವೆರಾ, ಜರಿಗಿಡಗಳಂಥ ಸಸ್ಯಗಳು ಗಾಳಿಯಲ್ಲಿನ ವಿಷವನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿರುವುದರಿಂದ ಮನೆಯನ್ನು ತಂಪಾಗಿರಿಸಬಹುದು. ಅಲ್ಲದೆ ಇವು ಆಕರ್ಷಕವಾಗಿ ಕಾಣುತ್ತವೆ. ಮನೆಯ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ನೆರಳು ನೀಡುವ ಮರಗಳನ್ನು ಬೆಳೆಸಿ. ಅವು ಸೂರ್ಯನ ನೇರ ಕಿರಣಗಳನ್ನು ತಡೆಯುತ್ತದೆ. ಮನೆಯ ಬಾಲ್ಕನಿಯಲ್ಲಿ ಹಾಗೂ ಹೊರಭಾಗದಲ್ಲಿ ವಿವಿಧ ಹೂಗಿಡ, ಬಳ್ಳಿಗಳನ್ನು ಬೆಳೆಸುವುದರಿಂದ ಮನೆ ತಂಪಾಗಿರುತ್ತದೆ.
ಸೂಕ್ತ ಲೈಟ್‌ಗಳನ್ನು ಬಳಸಿ
ಕೆಲವೊಂದು ಬಲ್ಬ್ ಅಥವಾ ಲೈಟ್‌ಗಳು ಹೆಚ್ಚಿನ ಶಾಖವನ್ನು ಹೊರಸೂಸುತ್ತವೆ. ಅವು ಮನೆಗೆ ಅಗತ್ಯವಿಲ್ಲ. ಅದು ಬೆಳಕು ನೀಡುವ ಬದಲಿಗೆ ಹೆಚ್ಚು ಬೆಚ್ಚಗಾಗಿಸುತ್ತದೆ. ಹೀಗಾಗಿ LED ಅಥವಾ CFL ಬಲ್ಬ್‌ಗಳು ಮನೆಗೆ ಉತ್ತಮ. ಬಳಕೆಯಲ್ಲಿಲ್ಲದಿದ್ದಾಗ ಆ ದೀಪಗಳನ್ನು ಆಫ್ ಮಾಡಿ. ಹೆಚ್ಚು ಶಾಖವನ್ನು ಹೊರಸೂಸುವ ವಿದ್ಯುತ್ ಉಪಕರಣಗಳನ್ನು ಬಳಕೆಯಲ್ಲಿಲ್ಲದಾಗ ಆಫ್ ಮಾಡಿ.