ಮುದ್ದಿನ ನಾಯಿ-ಬೆಕ್ಕಿಗೂ ಈಗ ಭಾರಿ ಸೆಕೆ; ಬೇಸಿಗೆ ಕಾಲದಲ್ಲಿ ಸಾಕುಪ್ರಾಣಿಗಳ ಆರೈಕೆಗೂ ತುಸು ಸಮಯ ಕೊಡಿ
ಮನೆಯಲ್ಲಿರುವ ನಾಯಿ, ಬೆಕ್ಕು, ದನ-ಕರುಗಳಿಗೂ ಈಗ ಭಾರಿ ಸೆಕೆಯ ಕಾಲ. ಮನುಷ್ಯನಂತೆ ಅವುಗಳಿಗೂ ಸೂರ್ಯನ ಬಿಸಿ ನಾಟುತ್ತದೆ. ಬೇಸಿಗೆಯಲ್ಲಿ ತಂಪಾಗಿರಲು ಸಾಕು ಪ್ರಾಣಿಗಳು ಬಯಸುತ್ತವೆ. ಹೀಗಾಗಿ ಮನೆಯವರಾಗಿ ನೀವು ಅದರ ಕಾಳಜಿ ವಹಿಸದಿದ್ದರೆ ಹೇಗೆ? ಈ ಸಲಹೆಗಳು ನಿಮಗಾಗಿ.
ಬೇಸಿಗೆಯ ಸೆಕೆಗೆ ಮನುಷ್ಯನ ಸಹಜ ಜೀವನಕ್ಕೆ ಸಾಕಷ್ಟು ಕಿರಿಕಿರಿಯಾಗುತ್ತದೆ. ಇನ್ನು ನಾವು ಮನೆಯಲ್ಲಿ ಸಾಕುವ ಸಾಕುಪ್ರಾಣಿಗಳು ನೆಮ್ಮದಿಯಿಂದ ಇರಲು ಸಾಧ್ಯವೇ? ಖಂಡಿತಾ ಇಲ್ಲ. ತಾಪಮಾನವು ಹೆಚ್ಚಾದಂತೆ ಪ್ರಾಣಿಗಳು ಕೂಡಾ ತಂಪಾದ ವಾತಾವರಣಕ್ಕಾಗಿ ಹಾತೊರೆಯುತ್ತವೆ. ತಣ್ಣನೆಯ ಆಹಾರ, ತಂಪಾದ ಗಾಳಿ ಸಾಕು ಪ್ರಾಣಿಗಳಿಗೂ ಬೇಕು. ಇದೇ ವೇಳೆ, ತಾಪಮಾನ ಏರಿಕೆಯಿಂದಾಗಿ ಸಾಕುಪ್ರಾಣಿಗಳ ಆರೋಗ್ಯದಲ್ಲೂ ಏರುಪೇರಾಗುವ ಸಾಧ್ಯತೆಗಳಿರುತ್ತದೆ. ಬೇಸಿಗೆ ಸಮಯದಲ್ಲಿ ಸಾಕು ಪ್ರಾಣಿಗಳನ್ನು ಮನೆಯ ಹೊರಗೆ ಆಡಿಸುವಾಗ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಉತ್ತಮ.
ಬೇಸಿಗೆಯಲ್ಲಿ ಸಾಕುಪ್ರಾಣಿಗಳ ಕಾಳಜಿಗೆ ಈ ಸಲಹೆಗಳನ್ನು ಅನುಸರಿಸಿ
ಈ ರೋಗಲಕ್ಷಣಗಳನ್ನು ಗಮನಿಸಿ
ಶಾಖ ಗಾಳಿಗೆ ಸಾಕುಪ್ರಾಣಿಗಳಲ್ಲಿ ಉಸಿರುಗಟ್ಟುವಿಕೆ, ಹೃದಯ ಬಡಿತ ಹೆಚ್ಚಳ ಮಾತ್ರವಲ್ಲದೆ ಜೊಲ್ಲು ಸುರಿಸುವಿಕೆ ಕಾಣಿಸಿಕೊಳ್ಳಬಹುದು. ಅಂತಹ ಸಂದರ್ಭಗಳಲ್ಲಿ, ಅವುಗಳಿಗೆ ನೆರಳಿನಲ್ಲಿ ವಿಶ್ರಾಂತಿ ಸಿಗುವಂತೆ ಮಾಡಿ. ಸ್ವಚ್ಛ ವಾತಾವರಣವನ್ನು ಅದಕ್ಕೆ ಕಲ್ಪಿಸಿ.
ಸೂಕ್ತ ಕ್ರಮದಲ್ಲಿ ಆಹಾರ ನೀಡಿ
ಬೇಸಿಗೆಯಲ್ಲಿ ಸಾಕುಪ್ರಾಣಿಗಳು ಹಣ್ಣನ್ನು ಇಷ್ಟಪಟ್ಟರೆ ಅಚ್ಚರಿಯೇನಲ್ಲ. ಯಾವುದೇ ಆಹಾರವು ದ್ರವ ರೂಪದಲ್ಲಿ ಇದ್ದರೆ ಉತ್ತಮ. ಹೆಚ್ಚು ನೀರಿನ ಅಂಶವಿರುವ ಹಣ್ಣುಗಳು ಮತ್ತು ತರಕಾರಿಗಳು ನಿರ್ಜಲೀಕರಣಗೊಳ್ಳುವುದನ್ನು ತಡೆಯುತ್ತದೆ. ಜೊತೆಗೆ ಸರಿಯಾದ ಪೋಷಣೆಯನ್ನು ಒದಗಿಸುತ್ತದೆ. ಮೊಸರು ಮತ್ತು ಅನ್ನ, ಮಜ್ಜಿಗೆ ಅಥವಾ ಮೊಸರು ಬೆರೆಸಿದ ಪೀನಟ್ ಬಟರ್ ಸಾಕು ಪ್ರಾಣಿಗಳಿಗೆ ಬೇಸಿಗೆಯ ಉತ್ತಮ ಆಹಾರಗಳಾಗಿವೆ. ಕಲ್ಲಂಗಡಿ, ಬಾಳೆಹಣ್ಣುಗಳು, ಕಿತ್ತಳೆ, ಸೌತೆಕಾಯಿ ಸಹ ಕೊಡಬಹುದು. ಆದಷ್ಟು ಉಪ್ಪು ಮತ್ತು ಸಕ್ಕರೆ ಇರುವ ಉತ್ಪನ್ನಗಳನ್ನು ದೂರವಿಡಿ. ತಣ್ಣನೆಯ ವೆಜ್ ಅಥವಾ ಚಿಕನ್ ಸೂಪ್‌ಗಳ ಕೊಡುವ ಮೂಲಕ ನೀರಿನ ಸೇವನೆಯನ್ನು ಹೆಚ್ಚಿಸಿ. ಬಿಸಿ ಆಹಾರದ ಬದಲಿಗೆ ತಂಪಾಗಿರುವಂತೆ ನೋಡಿಕೊಳ್ಳಿ.
ಪ್ರಾಣಿಗಳ ಗೂಡನ್ನು ಸ್ವಚ್ಛವಾಗಿ ತಂಪಾಗಿರುವಂತೆ ನೋಡಿಕೊಳ್ಳಿ
ಮನೆಯ ಸಾಕುಪ್ರಾಣಿಗಳಿಗೆ ರಚಿಸಿದ ಗೂಡಿನಲ್ಲಿ ಸಾಕಷ್ಟು ಗಾಳಿಯಾಡುವಂತೆ ಮತ್ತು ತಂಪಾಗಿರುವಂತೆ ನೋಡಿಕೊಳ್ಳಿ. ನೇರವಾಗಿ ಬಿಸಲು ಬೀಳುತ್ತಿದ್ದರೆ, ಆ ಸ್ಥಳವನ್ನು ಬದಲಾಯಿಸಿ. ಗೂಡಿಗೆ ಫ್ಯಾನ್ ಅಥವಾ ಏರ್ ಕೂಲರ್ ಅಳವಡಿಸಿ. ಗೂಡಿನ ಉಷ್ಣತೆ ಹೆಚ್ಚಾಗದಂತೆ ನೋಡಿಕೊಳ್ಳಿ. ಆಗಾಗ ನೀರಿನಿಂದ ತೊಳೆದು ಸ್ವಚ್ಛವಾಗಿಸಿ ಮತ್ತೆ ಒಣಗಿಸಿ ಬಿಡಿ.
ಇದನ್ನೂ ಓದಿ | Black Panther: ನಾಗರಹೊಳೆ ಸಫಾರಿಗೆ ಹೋದವರಿಗೆ ಕರಿಚಿರತೆ ದರ್ಶನ, ಕಂಡವರು ಖುಷ್ photos
ಸಾಕುಪ್ರಾಣಿಗಳಿಗೂ ಗ್ರೂಮಿಂಗ್ ಮಾಡಿ
ನಾಯಿ, ಬೆಕ್ಕುಗಳನ್ನು ಕೂಡಾ ನಿತ್ಯ ಸ್ನಾನ ಮಾಡಿಸಿ. ಜೊತೆಗೆ ಹಲ್ಲುಜ್ಜುವುದು, ಉಗುರು ಟ್ರಿಮ್ ಮಾಡುವುದನ್ನು ನಿಯಮಿತವಾಗಿ ಮಾಡುತ್ತಿರಿ. ಜೊತೆಗೆ ಪ್ರಾಣಿಗಳ ಕೂದಲನ್ನು ಕೂಡಾ ಟ್ರಿಮ್ ಮಾಡಿಸಬೇಕು. ಇದರಿಂದ ಪ್ರಾಣಿಗಳಿಗೆ ವಿಶ್ರಾಂತಿ ಮಾಡಲು ಸುಲಭವಾಗುತ್ತದೆ. ದೇಹವು ಆರಾಮದಾಯಕವಾಗಿರುತ್ತದೆ.
ತೂಕವನ್ನು ಪರಿಶೀಲಿಸಿ
ಮುಂಜಾನೆ ಅಥವಾ ಸಂಜೆ ಬಳಿಕ ನಿಮ್ಮ ಸಾಕು ನಾಯಿಗಳನ್ನು ಕೂಡಾ ಜಾಗಿಂಗ್ ಮಾಡಿಸಿ. ಅವುಗಳಿಗೂ ಲಘು ವ್ಯಾಯಾಮ ಮಾಡಿಸಿ. ಸೂರ್ಯನ ನೇರ ಬೆಳಕನ್ನು ತಪ್ಪಿಸಿ ತಂಪಾದ ವಾತಾವರಣ ಇರುವಾಗ ಹೊರಗಡೆ ಕರೆದುಕೊಂಡು ಹೋಗಿ.
ಸಾಕುಪ್ರಾಣಿಗಳನ್ನು ಕಾರಿನಲ್ಲಿ ಬಿಟ್ಟು ಬಿಡಬೇಡಿ
ಇದು ಯಾವ ಕಾಲಕ್ಕೂ ಅನುಸರಿಸಬೇಕಾದ ಸಲಹೆ. ಸಾಕುಪ್ರಾಣಿಗಳನ್ನು ಮುಚ್ಚಿದ ಕಾರಿನಲ್ಲಿ ಬಿಡುವುದನ್ನು ನಿಲ್ಲಿಸಿ. ಅತಿಯಾಸ ಶಾಖದ ಹೊಡೆತದಿಂದ ಶೀಘ್ರವೇ ಉಸಿರುಗಟ್ಟುವಿಕೆಗೆ ಕಾರಣವಾಗಬಹುದು. ಸಾಮಾನ್ಯ ದಿನದಲ್ಲಿಯೇ ಕಾರಿನೊಳಗಿನ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗೆ ತಲುಪಬಹುದು. ಒಂದು ವೇಳೆ ನೇರವಾಗಿ ಸೂರ್ಯನ ಬೆಳಕು ಬಿದ್ದರೆ 100ಕ್ಕೂ ಅಧಿಕ ತಾಪಮಾನ ಸೃಷ್ಟಿಯಾಗಬಹುದು. ಹೀಗಾಗಿ ಪ್ರಾಣಿಗಳನ್ನು ರಕ್ಷಿಸಿ.
ಆಗಾಗ ಪಶುವೈದ್ಯರ ಭೇಟಿ ಮಾಡುತ್ತಿರಿ
ಸಾಕುಪ್ರಾಣಿಗಳು ಅತಿಯಾಗಿ ಜೊಲ್ಲು ಸುರಿಸುವುದು, ಉಸಿರಾಟದ ತೊಂದರೆ ಅನುಭವಿಸುವ ಲಕ್ಷಣ ಕಂಡರೆ, ಅವನ್ನು ಪಶುವೈದ್ಯರ ಬಳಿ ಕರೆದುಕೊಂಡು ಹೋಗಿ. ಜ್ವರ ಅಥವಾ ವಾಂತಿಯ ಯಾವುದೇ ಲಕ್ಷಣ ಗಮನಿಸಿದರೂ ಸೂಕ್ತ ಔಷಧಿ ಕೊಡಿಸಿ.
ಇನ್ನಷ್ಟು ಲೈಫ್ಸ್ಟೈಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ನಿರ್ಜಲೀಕರಣ ಸಮಸ್ಯೆಯಿಂದ ಮೂತ್ರಪಿಂಡದ ಮೇಲೆ ಬೀಳಬಹುದು ಪರಿಣಾಮ; ಬೇಸಿಗೆಯಲ್ಲಿ ಹೀಗಿರಲಿ ನಿಮ್ಮ ಜೀವನಶೈಲಿ
ವಿಭಾಗ