Summer Tips: ಬೇಸಿಗೆಯಲ್ಲಿ ಅಡುಗೆಮನೆಯನ್ನು ಕೂಲ್ ಆಗಿ ಇಟ್ಟುಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ 6 ಸಿಂಪಲ್ ಟಿಪ್ಸ್
ಬೇಸಿಗೆಯ ಬಿರು ಬಿಸಿಲಿನಲ್ಲಿ ಮನೆಯ ಹೊರಗೆ ಮಾತ್ರವಲ್ಲ, ಮನೆಯೊಳಗೆ ಇರುವುದು ಅಸಾಧ್ಯವಾಗಿದೆ. ಅದರಲ್ಲೂ ಅಡುಗೆಮನೆಯಂತೂ ಕೇಳುವುದೇ ಬೇಡ. ಬಿಸಿಲುಗಾಲದಲ್ಲಿ ಅಡುಗೆಮನೆಯನ್ನು ತಂಪಾಗಿ, ಗಾಳಿಯಾಡುವಂತೆ ಇರಿಸಿಕೊಳ್ಳುವುದು ಬಹಳ ಮುಖ್ಯ. ಬೇಸಿಗೆಯಲ್ಲಿ ಅಡುಗೆಮನೆಯನ್ನ ತಂಪಾಗಿ ಇರಿಸಿಕೊಳ್ಳಲು ನೆರವಾಗಲು 6 ಟಿಪ್ಸ್‌ಗಳು ಇಲ್ಲಿವೆ.
ಭಾರತದಲ್ಲಿ ತಾಪಮಾನ ದಿನೇ ದಿನೇ ಹೆಚ್ಚುತ್ತಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಬಿಸಿಲ ಉರಿ ಜೋರಿದೆ. ಹಲವು ರಾಜ್ಯಗಳಲ್ಲಿ ಬಿಸಿಗಾಳಿಯಿಂದ ಜನರು ತತ್ತರಿಸಿದ್ದಾರೆ. ಆ ಕಾರಣಕ್ಕೆ ಮನೆಯೊಳಗೆ ಹೆಚ್ಚು ಇರಲು ಸಲಹೆ ನೀಡಲಾಗುತ್ತಿದೆ. ಆದರೆ ಮನೆಯೊಳಗೆ ಬಿಸಿ ಜೋರಾಗಿದೆ. ಅದರಲ್ಲೂ ಅಡುಗೆ ಒಲೆ ಇರುವ ಅಡುಗೆಮನೆಯಲ್ಲಿ ತಾಪಮಾನ ಇನ್ನಷ್ಟು ಹೆಚ್ಚಿರುತ್ತದೆ. ಬೇಸಿಗೆಯಲ್ಲಿ ಅಡುಗೆಮನೆಯಲ್ಲಿ ನಿಂತು ಅಡುಗೆ ಮಾಡುವುದು ಕಷ್ಟಸಾಧ್ಯ.
ಮನೆಯ ಹೃದಯ ಭಾಗ ಎಂದ ಅಡುಗೆಮನೆಯನ್ನು ಕರೆಯುತ್ತಾರೆ. ಇಲ್ಲಿ ಅಡುಗೆ ಮಾಡುವುದು ಮಾತ್ರವಲ್ಲ ಜನರು ಒಂದಾಗಿ ಬೆರೆಯುತ್ತಾರೆ, ಬಾಂಧವ್ಯ ಹಂಚುತ್ತಾರೆ. ಆದರೆ ಬೇಸಿಗೆಯಲ್ಲಿ ಹೊಗೆ, ವಾಸನೆ, ಧೂಳು ಈ ಎಲ್ಲಾ ಕಾರಣಗಳಿಂದ ಅಡುಗೆಮನೆಯಲ್ಲಿ ಇರುವುದು ಕಷ್ಟವಾಗುತ್ತದೆ. ಬಿಸಿಯಾದ ಬಿಸಿಲು, ತಾಪ ಅಡುಗೆಮನೆಯ ವಾತಾವರಣವನ್ನು ಕೆಡಿಸುತ್ತದೆ. ಇದರಿಂದ ಹೆಚ್ಚು ಹೊತ್ತು ಅಲ್ಲಿರುವುದು ಅಸಾಧ್ಯವಾಗುತ್ತದೆ. ಅಡುಗೆಮನೆಯಲ್ಲಿ ನಿಂತು ಅಡುಗೆ ಮಾಡುವುದು ಕಷ್ಟಸಾಧ್ಯವಾಗುತ್ತದೆ. ಅದಕ್ಕಾಗಿ ಅಡುಗೆಮನೆ ತಂಪಾಗಿ ಇರುವಂತೆ ನೋಡಿಕೊಳ್ಳಬೇಕು. ಈ ಬಿರು ಬೇಸಿಗೆಯಲ್ಲಿ ನಿಮ್ಮ ಅಡುಗೆಮನೆಯು ತಂಪಾಗಿ ಇರಬೇಕು ಅಂದ್ರೆ ಈ 6 ಸಲಹೆಗಳನ್ನು ಪಾಲಿಸಿ.
ತಂಪು ಹೊತ್ತಿನಲ್ಲಿ ಅಡುಗೆ ಮಾಡಿ
ಬೇಸಿಗೆಯಲ್ಲಿ ಅಡುಗೆ ಮಾಡಲು ತಂಪು ಹೊತ್ತನ್ನು ಆಯ್ಕೆ ಮಾಡಿಕೊಳ್ಳಿ. ಅಂದರೆ ಬೆಳಿಗ್ಗೆ ಅಥವಾ ಸಂಜೆ ಹೊತ್ತಿನಲ್ಲಿ ಅಡುಗೆ ಮಾಡಿ. ಈ ಸಮಯದಲ್ಲಿ ವಾತಾವರಣವೂ ಕೂಲ್ ಆಗಿರುತ್ತದೆ. ಇದು ಅಡುಗೆಮನೆಯ ವಾತಾವರಣ ಇನ್ನಷ್ಟು ಬಿಸಿಯಾಗುವುದನ್ನು ತಡೆಯುತ್ತದೆ. ಬೆಳಿಗ್ಗೆ, ಸಂಜೆ ಎರಡು ಹೊತ್ತು ಅಡುಗೆ ಮಾಡಿ. ಯಾವುದೇ ಕಾರಣಕ್ಕೂ ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಅಡುಗೆ ಮಾಡಬೇಡಿ.
ಕೆಲಸಗಳನ್ನು ಮೊದಲೇ ಮಾಡಿಟ್ಟುಕೊಳ್ಳಿ
ಕತ್ತರಿಸುವುದು, ಹೆಚ್ಚುವುದು, ರುಬ್ಬುವುದು ಇಂತಹ ಚಟುವಟಿಕೆಗಳನ್ನು ಮೊದಲೇ ಮಾಡಿಟ್ಟುಕೊಳ್ಳಿ. ಇದಕ್ಕೆ ಹೆಚ್ಚಿನ ಸಮಯ ಅಗತ್ಯವಿರುವ ಕಾರಣ ಮೊದಲೇ ಮಾಡಿಟ್ಟುಕೊಳ್ಳುವುದರಿಂದ ಸಹಾಯವಾಗುತ್ತದೆ. ಇದರಿಂದ ಅಡುಗೆಯು ಬೇಗ ಆಗಿ ಅಡುಗೆಮನೆಯಲ್ಲಿ ಹೆಚ್ಚಿನ ಸಮಯ ಕಳೆಯುವ ಪ್ರಸಂಗ ಬರುವುದಿಲ್ಲ. ಇದು ಅಡುಗೆಮನೆಯನ್ನು ತಂಪಾಗಿಸುವ ಉಪಾಯವೂ ಹೌದು.
ನೋ-ಕುಕ್ ಹಾಗೂ ಕ್ವಿಕ್ ಮೀಲ್ಸ್ ಆಯ್ಕೆ ಮಾಡಿ
ಅಡುಗೆ ಮಾಡದೇ ಇರುವುದು ಅಥವಾ ಥಟ್ಟಂತ ತಯಾರಾಗುವ ಅಡುಗೆ ಮಾಡುವುದರಿಂದ ಸಮಯವು ಉಳಿತಾಯವಾಗುತ್ತದೆ. ಇದರಿಂದ ಅಡುಗೆಮನೆಯಲ್ಲಿ ಹೆಚ್ಚಿನ ಸಮಯ ಕಳೆಯುವ ಪ್ರಸಂಗ ಬರುವುದಿಲ್ಲ. ಸಲಾಡ್, ಸ್ಯಾಂಡ್‌ವಿಚ್, ಸೂಪ್, ಜ್ಯೂಸ್ ಇಂತಹವನ್ನು ಹೆಚ್ಚು ತಯಾರಿಸಿ. ಇಂತಹ ಆಹಾರಗಳು ಬೇಸಿಗೆಯಲ್ಲಿ ದೇಹವನ್ನು ರಿಫ್ರೆಶ್ ಮಾಡುವ ಜೊತೆಗೆ ಅಡುಗೆ ಮನೆಯಲ್ಲಿ ಬಿಸಿ ಹೆಚ್ಚದಂತೆ ಮಾಡುತ್ತವೆ. ಸಾಂಪ್ರದಾಯಿಕ ಓವನ್‌ಗಳು ಮತ್ತು ಸ್ಟೌವ್‌ಗಳಿಗೆ ಹೋಲಿಸಿದರೆ ಕಡಿಮೆ ಶಾಖವನ್ನು ಉತ್ಪಾದಿಸುವ ನಿಧಾನ ಕುಕ್ಕರ್‌ಗಳು, ಪ್ರೆಶರ್ ಕುಕ್ಕರ್‌ಗಳು ಮತ್ತು ಟೋಸ್ಟರ್ ಓವನ್‌ಗಳಂತಹ ಅಡುಗೆ ಸಲಕರಣೆಗಳನ್ನು ಬಳಸಿ.
ಸಣ್ಣ ಉಪಕರಣಗಳನ್ನು ಬಳಸಿ
ಮೈಕ್ರೊವೇವ್, ಏರ್ ಫ್ರೈಯರ್ ಅಥವಾ ಎಲೆಕ್ಟ್ರಿಕ್ ಗ್ರಿಡಲ್‌ನಂತಹ ಸಣ್ಣ ಉಪಕರಣಗಳ ಬಳಕೆಯು ಅಡುಗೆಮನೆಯಲ್ಲಿ ಶಾಖದ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.ಈ ಸಣ್ಣ ಉಪಕರಣಗಳು ಬೇಸಿಗೆಯಲ್ಲಿ ಸೂಕ್ತವಾಗಿವೆ ಮತ್ತು ಸಣ್ಣ ಬ್ಯಾಚ್ಗಳಲ್ಲಿ ಅಡುಗೆ ಮಾಡಲು ಅಥವಾ ಪ್ರತ್ಯೇಕ ಭಕ್ಷ್ಯಗಳನ್ನು ತಯಾರಿಸಲು ನಿಮಗೆ ಸಹಾಯ ಮಾಡುತ್ತದೆ.
ಗಾಳಿಯಾಡುವಂತೆ ನೋಡಿಕೊಳ್ಳಿ
ಬೇಸಿಗೆಯಲ್ಲಿ ಅಡುಗೆಮನೆಯಲ್ಲಿ ಚೆನ್ನಾಗಿ ಗಾಳಿಯಾಡುವಂತೆ ನೋಡಿಕೊಳ್ಳಿ. ಇದರಿಂದ ಅಡುಗೆಮನೆಯೊಳಗೆ ತಂಪಾಗಿರುತ್ತದೆ. ಅಡುಗೆಮನೆಯಿಂದ ಶಾಖ ಮತ್ತು ವಾಸನೆಯನ್ನು ತೆಗೆದುಹಾಕಲು ಎಕ್ಸಾಸ್ಟ್ ಫ್ಯಾನ್‌ಗಳು, ರೇಂಜ್ ಹುಡ್‌ಗಳು ಮತ್ತು ಇತರ ಗಾಳಿ ಉಪಕರಣಗಳನ್ನು ವ್ಯಾಪಕವಾಗಿ ಬಳಸಿ. ಯಾವಾಗಲೂ ಅಡುಗೆಮನೆಯ ಕಿಟಕಿ ಹಾಗೂ ಬಾಗಿಲನ್ನು ತೆಗೆದಿಡಿ. ಅಡುಗೆಮನೆಯಲ್ಲಿ ಗಾಳಿಯ ಪ್ರಸರಣಕ್ಕಾಗಿ ನೀವು ಪೋರ್ಟಬಲ್ ಫ್ಯಾನ್ಗಳು ಮತ್ತು ಸೀಲಿಂಗ್ ಫ್ಯಾನ್‌ಗಳನ್ನು ಸಹ ಬಳಸಬಹುದು.
ಶಾಖದ ಉತ್ಪಾದನೆಯನ್ನು ಕಡಿಮೆ ಮಾಡಿ
ಅಡುಗೆಮನೆಯಲ್ಲಿ ಹೆಚ್ಚು ಶಾಖ ಉತ್ಪಾದಿಸುವ ಚಟುವಟಿಕೆಗಳಿಗೆ ನಿಯಂತ್ರಣ ಹೇರಿ. ದೊಡ್ಡ ಪಾತ್ರೆಗಳಲ್ಲಿ ನೀರನ್ನು ಕುದಿಸುವುದನ್ನು ತಪ್ಪಿಸಿ. ದೀರ್ಘಕಾಲದವರೆಗೆ ಒಲೆಯನ್ನು ಬಳಸಬೇಡಿ. ಏಕಕಾಲದಲ್ಲಿ ಅನೇಕ ಶಾಖ-ಉತ್ಪಾದಿಸುವ ಉಪಕರಣಗಳನ್ನು ಚಾಲನೆ ಮಾಡಬೇಡಿ.
ಈ ಸುಲಭ ಕ್ರಮಗಳನ್ನು ಪಾಲಿಸುವ ಮೂಲಕ ಬೇಸಿಗೆಯಲ್ಲಿ ಅಡುಗೆಮನೆ ತಂಪಾಗಿ ಇರುವಂತೆ ನೋಡಿಕೊಳ್ಳಬಹುದು. ಅಡುಗೆಮನೆ ತಂಪಾಗಿ ಇರುವುದರಿಂದ ಅಡುಗೆಯು ಕೆಡದಂತೆ ನೋಡಿಕೊಳ್ಳಬಹುದು, ಜೊತೆಗೆ ಇದು ಆರೋಗ್ಯಕ್ಕೂ ಉತ್ತಮ. ಇನ್ಯಾಕೆ ತಡ, ಅಡುಗೆಮನೆಯನ್ನು ಹೀಗೆ ತಂಪಾಗಿ ಇರಿಸಿಕೊಳ್ಳಿ.