ಏರ್ ಕೂಲರ್ ಕಾರ್ಯಕ್ಷಮತೆ ಸುಧಾರಿಸಲು ಈ 5 ಟ್ರಿಕ್ಸ್ ಅನುಸರಿಸಿ; ಎಸಿ ಇಲ್ಲದೆಯೂ ಕೋಣೆ ಕೂಲ್ ಆಗುತ್ತೆ ನೋಡಿ
ಬೇಸಿಗೆಯಲ್ಲಿ ಏರ್ ಕೂಲರ್ ಬಳಸುವವರ ಸಂಖ್ಯೆ ಹೆಚ್ಚು. ಅದನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳುವ ಮೂಲಕ ನಿಮ್ಮ ಕೋಣೆಯನ್ನು ಮತ್ತಷ್ಟು ತಂಪಾಗಿಸಬಹುದು. ಕೂಲರ್ ಬಳಸುವವರು ಅದರ ಪರಿಣಾಮಕಾರಿ ಪ್ರಯೋಜನ ಪಡೆಯಲು ಸರಿಯಾಗಿ ನಿರ್ವಹಣೆ ಮಾಡಬೇಕು. ಅದಕ್ಕಾಗಿ ಅಗತ್ಯ ಸಲಹೆ ಇಲ್ಲಿದೆ.

ಹಗಲಿಡೀ ದಣಿದ ದೇಹಕ್ಕೆ ರಾತ್ರಿ ನೆಮ್ಮದಿಯ ನಿದ್ದೆ ಬೇಕು. ಆಗಲೇ ಮನಸು ಹಾಗೂ ದೇಹಕ್ಕೆ ಸರಿಯಾದ ವಿಶ್ರಾಂತಿ ಸಿಗಲು ಸಾಧ್ಯ. ಬಿಸಿಲಿನಲ್ಲಿ ಬೆಂದು ದಣಿದ ನಂತರ, ಮಲಗುವ ಸಮಯದಲ್ಲಿ ನೆಮ್ಮದಿಯ ವಾತಾವರಣ ಬೇಕೇ ಬೇಕು. ಈ ಬೇಸಿಗೆಯಲ್ಲಿ ನೆಮ್ಮದಿ ಸಿಗಬೇಕೆಂದರೆ, ಮಲಗುವ ಕೋಣೆ ತಂಪಾಗಿರಬೇಕು. ಆರ್ಥಿಕವಾಗಿ ಸಬಲರು ಏರ್ ಕಂಡೀಷನರ್ ಹಾಕಿ ಮಲಗಿದರೆ, ಸಾಮಾನ್ಯರು ತಮ್ಮ ಕೈಗೆಟಕುವ ಫ್ಯಾನ್ ಅಥವಾ ಏರ್ ಕೂಲರ್ ಖರೀದಿಸಿ ಬಳಸುತ್ತಾರೆ. ವಾಟರ್ ಕೂಲರ್ ಬಳಸುವವರಾದರೆ, ಅದನ್ನು ಸರಿಯಾಗಿ ನಿರ್ವಹಿಸುವುದನ್ನೂ ತಿಳಿದುಕೊಂಡಿರಬೇಕು.
ಯಾವುದೇ ವಸ್ತುವಾದರೂ, ಅದು ದೀರ್ಘಕಾಲ ಬಾಳಿಕೆ ಬಂದು ಒಂದೇ ದಕ್ಷತೆಯಿಂದ ಕೆಲಸ ಮಾಡಬೇಕೆಂದರೆ ಸಕಾಲಿಕವಾಗಿ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕಾಗುತ್ತದೆ. ಏರ್ ಕೂಲರ್ ವಿಷಯಕ್ಕೆ ಬಂದರೆ, ನೀರಿನ ತೊಟ್ಟಿಯನ್ನು ಆಗಾಗ ಸ್ವಚ್ಛಗೊಳಿಸುವ ಕೆಲಸ ನಿಯಮಿತವಾಗಿ ಮಾಡಬೇಕು. ಆಗ ಕೂಲರ್ ಕಾರ್ಯಕ್ಷಮತೆಯಲ್ಲಿ ಸುಧಾರಣೆ ಕಾಣಬಹುದು.
ಈ ಬೇಸಿಗೆಯಲ್ಲಿ ನಿಮ್ಮ ಮನೆಯ ಏರ್ ಕೂಲರ್ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಕೆಲವೊಂದು ಅಗತ್ಯ ಸಲಹೆಗಳನ್ನು ನಾವು ಕೊಡುತ್ತೇವೆ.
ಕೋಣೆಯ ವೆಂಟಿಲೇಶನ್ (ವಾತಾಯನ) ಸಮರ್ಪಕವಾಗಿರಲಿ
ಏರ್ ಕಂಡಿಷನರ್‌ಗಳಿಗೆ ಮುಚ್ಚಿದ ಕೋಣೆಗಳು ಬೇಕು. ಆದರೆ, ಏರ್ ಕೂಲರ್‌ಗಳು ಸರಿಯಾಗಿ ಗಾಳಿಯಾಡುವ ಪ್ರದೇಶಗಳಲ್ಲಿ ಮಾತ್ರವೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ನಿಮ್ಮ ಕೋಣೆಯನ್ನು ಏರ್ ಕೂಲರ್ ತಂಪಾಗಿಸಬೇಕೆಂದರೆ, ಕೋಣೆಯಲ್ಲಿ ಸ್ಥಿರವಾದ ಗಾಳಿಯ ಹರಿವು ಇರಬೇಕು. ಅಲ್ಲದೆ ಕೋಣೆಯಿಂದ ತೇವಾಂಶವನ್ನು ಹೊರಹಾಕಲು ಉತ್ತಮ ವಾತಾಯನದ ಅಗತ್ಯವೂ ಇದೆ.
ಸರಿಯಾದ ಜಾಗದಲ್ಲಿಡಿ
ಏರ್ ಕೂಲರ್‌ಗಳನ್ನು ನೀವು ಯಾವ ಭಾಗದಲ್ಲಿ ಇಡುತ್ತೀರಿ ಎಂಬುದು ಮುಖ್ಯವಾಗುತ್ತದೆ. ನಿಮ್ಮ ಏರ್ ಕೂಲರ್ ಅನ್ನು ಕಿಟಕಿಯ ಬಳಿ ಇರಿಸಿದರೆ, ಅದು ತಾಜಾ ಮತ್ತು ತಂಪಾದ ಗಾಳಿಯನ್ನು ಕೋಣೆಯ ಮೂಲೆಗಳಿಗೆ ಪೂರೈಕೆ ಮಾಡುತ್ತದೆ. ಪರಿಣಾಮಕಾರಿಯಾಗಿ ಕೂಲರ್ ಕಾರ್ಯನಿರ್ವಹಿಸಲು ಆ ಏರ್ ಕೂಲರ್‌ನ ಹಿಂಭಾಗವನ್ನು ಮನೆಯ ಕಿಟಕಿ ಅಥವಾ ಬಾಗಿಲು ಬಳಿ ಇರಿಸುವುದು ಉತ್ತಮ ತಂತ್ರ.
ಇದನ್ನೂ ಓದಿ | ಸೀಲಿಂಗ್ ಮತ್ತು ಎಕ್ಸಾಸ್ಟ್ ಫ್ಯಾನ್ ಸ್ವಚ್ಛಗೊಳಿಸುವ ಸರಳ ವಿಧಾನ; ಈ ಟಿಪ್ಸ್ ಅನುಸರಿಸಿದ್ರೆ ನಿಮ್ಮ ಫ್ಯಾನ್ ಹೆಚ್ಚು ಬಾಳಿಕೆ ಬರುತ್ತೆ
ನೀರಿನ ಮಟ್ಟವನ್ನು ಖಚಿತಪಡಿಸಿಕೊಳ್ಳಿ
ಏರ್ ಕೂಲರ್ ತಂಪಾದ ಗಾಳಿ ಕೊಡಬೇಕೆಂದರೆ ಅದರಲ್ಲಿ ನೀರು ಹಾಕಬೇಕು. ಬಿಸಿ ಗಾಳಿಯು ತಂಪಾಗಬೇಕೆಂದರೆ ನೀರನ್ನು ಸರಿಯಾದ ಪ್ರಮಾಣದಲ್ಲಿ ಹಾಕಬೇಕು. ಸಾಕಷ್ಟು ನೀರು ಇಲ್ಲದೆ ಏರ್ ಕೂಲರ್ ಆನ್ ಮಾಡುವುದರಿಂದ ಅದು ಹಾಳಾಗಬಹುದು. ಹೀಗಾಗಿ ಸಾಕಷ್ಟು ನೀರಿನ ಮಟ್ಟವನ್ನು ಖಚಿತಪಡಿಸಿಕೊಳ್ಳಿ.
ಹೆಚ್ಚು ಕೂಲಿಂಗ್‌ಗಾಗಿ ಐಸ್ ಸೇರಿಸಿ
ನೀರಿನ ತೊಟ್ಟಿಗೆ ಐಸ್ ಹಾಕಿದರೆ ಗಾಳಿಯು ಮತ್ತಷ್ಟು ಕೂಲ್ ಆಗುತ್ತದೆ. ಅಥವಾ ಐಸ್ ನೀರನ್ನೇ ಹಾಕಿದರೂ ಉತ್ತಮ. ಚೇಂಬರ್‌ಗೆ ಮಂಜುಗಡ್ಡೆ ಹಾಕಿದಾಗ ಪ್ಯಾಡ್‌ಗಳು ತಂಪಾಗುತ್ತವೆ. ಆಗ ಗಾಳಿಯ ಹರಿವಿನ ತಾಪಮಾನ ಇನ್ನಷ್ಟು ಕಡಿಮೆಯಾಗುತ್ತದೆ. ಐಸ್ ಚೇಂಬರ್ ಅನ್ನು ಐಸ್ ಕ್ಯೂಬ್‌ಗಳಿಂದ ತುಂಬಿಸಿದರೆ ತಂಪಾದ ಗಾಳಿ ಹರಡಿ ಹವಾನಿಯಂತ್ರಣ ಕೊಠಡಿಯ ಅನುಭವ ನಿಮ್ಮದಾಗುತ್ತದೆ.
ಆರ್ದ್ರತೆಯ ನಿಯಂತ್ರಣದೊಂದಿಗೆ ಏರ್ ಕೂಲರ್ ಬಳಸಿ
ನೀರು ಹಾಕುವುದರಿಂದಾಗಿ ಏರ್ ಕೂಲರ್‌ಗಳು ಗಾಳಿಗೆ ತೇವಾಂಶವನ್ನು ಸೇರಿಸುತ್ತವೆ. ಆದ, ತೇವಾಂಶವು ಆವಿಯಾಗುವ ಮೂಲಕ ತಂಪಾಗಿಸುವ ಪ್ರಕ್ರಿಯೆಗೆ ಅಡ್ಡಿಪಡಿಸುತ್ತದೆ. ಹೀಗಾಗಿ ಆರ್ದ್ರತೆಯನ್ನು ನಿಯಂತ್ರಣದಲ್ಲಿಡಲು ಉಪಾಯ ಬೇಕು. ಸಾಮಾನ್ಯವಾಗಿ ತೇವಾಂಶ ನಿಗ್ರಹಿಸಲು ಸರಿಯಾದ ವಾತಾಯನ ವ್ಯವಸ್ಥೆ ಸಾಕಾಗುತ್ತದೆ. ಇನ್ನೂ ಸುಧಾರಿತ ವ್ಯವಸ್ಥೆ ಬೇಕೆನಿಸಿದರೆ, ಇನ್‌ಬಿಲ್ಟ್ ಹ್ಯುಮಿಡಿಟಿ ನಿಯಂತ್ರಣ ಇರುವ ಏರ್ ಕೂಲರ್ ಬಳಸಬಹುದು.