Kannada News  /  Lifestyle  /  Sunday And Mindfulness: How To Have A Mindful Sunday? Follow This Tips
ಸ್ನೇಹಿತರ ಬಳಗ
ಸ್ನೇಹಿತರ ಬಳಗ

Sunday and mindfulness: ಭಾನುವಾರ ಮಲಗಿಕೊಂಡೇ ದಿನ ಕಳೆಯುತ್ತೀರಾ? ಇನ್ಮುಂದೆ ಬದಲಾಗಿ, ಈ ತಂತ್ರಗಳ ಅನುಕರಣೆಯ ಮೂಲಕ ಕ್ರಿಯಾಶೀಲರಾಗಿರಿ

18 March 2023, 17:21 ISTReshma
18 March 2023, 17:21 IST

Sunday and mindfulness: ಭಾನುವಾರ ಬಂತೆಂದರೆ ಬಹುತೇಕರು ಮಲಗಿಕೊಂಡೇ ಸಮಯ ಕಳೆಯುತ್ತಾರೆ. ಭಾನುವಾರ ಎಂದರೆ ಸೋಂಬೇರಿ ದಿನ. ಆದರೆ ಇದನ್ನು ಸುಳ್ಳು ಮಾಡುವ ಮೂಲಕ ದಿನವಿಡಿ ಸಂತಸ, ಚಟುವಟಿಕೆಯಿಂದ ಇರಬಹುದು. ಅದಕ್ಕೆ ಈ ತಂತ್ರಗಳು ಸಹಾಯ ಮಾಡುತ್ತವೆ.

ಭಾನುವಾರ ಬಹುತೇಕರಿಗೆ ರಜಾದಿನ, ವಾರವಿಡೀ ದಣಿದಿರುವ ದೇಹ, ಮನಸ್ಸು ಭಾನುವಾರ ಬಂತೆಂದರೆ ಹಾಯಾಗಿ ಮಲಗಿ ನಿದ್ರಿಸಲು ಕಾಯುತ್ತಿರುತ್ತದೆ. ಭಾನುವಾರ ಸೊಂಬೇರಿ ದಿನವೂ ಹೌದು. ವಾರದ ದಿನಗಳಲ್ಲಿ ಚುರುಕಾಗಿರುವ ದೇಹ, ಮನಸ್ಸು ಭಾನುವಾರ ಬಂತೆಂದರೆ ಜಡ ಹಿಡಿದಂತಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಆ ಕಾರಣಕ್ಕೆ ದಿನವಿಡಿ ಮಲಗಿಕೊಂಡೇ ಇರುವುದು, ತಡವಾಗಿ ಎದ್ದು ಇಡೀ ವಾರ ಬಾಕಿ ಇರಿಸಿದ್ದ ಮನೆಗೆಲಸ ಮಾಡುವುದು, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಅಡುಗೆ ಮಾಡಿ ಊಟ ಮಾಡಿ ಮತ್ತೆ ಮಲಗುವುದು ಇದೇ ದಿನಚರಿ ಹಲವು ಪಾಲಿಸುತ್ತಾರೆ. ಇದರಿಂದ ಭಾನುವಾರ ಬಂತೆಂದರೆ ಹಲವರಿಗೆ ಖುಷಿ ಬದಲು ಬೇಸರ ಮೂಡುತ್ತದೆ. ಆ ಬೇಸರ ಕಳೆಯಲು ನೀವು ಕೆಲವೊಂದು ಸೂತ್ರಗಳನ್ನು ಅನುಸರಿಸಬೇಕು, ಅದನ್ನು ಪಾಲಿಸುವ ಮೂಲಕ ಭಾನುವಾರವನ್ನು ಅತ್ಯಂತ ಖುಷಿಯಿಂದ ಕಳೆಯಬಹುದು.

ವಾರದ ದಿನಗಳಲ್ಲೂ ಮನೆಕೆಲಸ ಮಾಡಿ

ಕಚೇರಿ ಕೆಲಸ, ಟ್ರಾಫಿಕ್‌ ಕಿರಿಕಿರಿ, ಕೆಲಸದ ಒತ್ತಡ ನಡುವೆ ಹಲವರು ವಾರದ ದಿನಗಳಲ್ಲಿ ಮನೆಕೆಲಸದ ಮೇಲೆ ಗಮನ ಹರಿಸುವುದಿಲ್ಲ. ಇದರಿಂದಲೇ ವಾರಾಂತ್ಯದ ದಿನವನ್ನು ಎಂಜಾಯ್‌ ಮಾಡದೇ ಕೊರಗುತ್ತಾ ಕಳೆಯುತ್ತಾರೆ. ಆ ಕಾರಣಕ್ಕೆ ಮೊದಲು ಮಾಡಬೇಕಾದ ಕೆಲಸ ಎಂದರೆ ಬೆಳಿಗ್ಗೆ ಅಥವಾ ಸಂಜೆ ಹೊತ್ತು ನಿಮ್ಮಿಂದ ಆದಷ್ಟು ಮನೆಗೆಲಸಗಳನ್ನು ಮಾಡಿ, ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು, ಮನೆ ಗುಡಿಸಿ, ಒರೆಸುವುದು ಇಂತಹ ಕೆಲಸಗಳನ್ನು ಮೊದಲೇ ಮಾಡಿಟ್ಟಿರಿ. ಇದರಿಂದ ವಾರಾಂತ್ಯದಲ್ಲಿ ಒತ್ತಡ ಇರುವುದಿಲ್ಲ, ಸಂಡೆ ಬಂತು ಮನೆಗೆಲಸ ಮಾಡಬೇಕಲ್ಲ ಎಂಬ ಚಿಂತೆಯೂ ಇರುವುದಿಲ್ಲ.

ಪಿಕ್ನಿಕ್‌ ಪ್ಲಾನ್‌ ಮಾಡಿ

ವಾರಾಂತ್ಯ ಇರುವುದು ನಮಗಾಗಿ, ಭಾನುವಾರ ಎನ್ನುವುದು ನಮ್ಮ ದಿನ, ಅದನ್ನು ಎಂಜಾಯ್‌ ಮಾಡಬೇಕು ಎನ್ನುವ ಮನೋಭಾವ ಬೆಳೆಸಿಕೊಳ್ಳಿ. ಬೆಳಿಗ್ಗೆ ಹೋಗಿ ಸಂಜೆ ಬರುವಂತಹ ಜಾಗಕ್ಕೆ ಪಿಕ್ನಿಕ್‌ ಪ್ಲಾನ್‌ ಮಾಡಿ. ಸ್ನೇಹಿತರೆಲ್ಲರನ್ನೂ ಕೂಡಿಸಿಕೊಂಡು ಪಿಕ್ನಿಕ್‌ ಹೋಗಿ ದಿನವನ್ನು ಎಂಜಾಯ್‌ ಮಾಡಿ. ದೇವಸ್ಥಾನ, ಮ್ಯೂಸಿಯಂನಂತಹ ಜಾಗದ ಬದಲು ಫಾಲ್ಸ್‌, ಬೀಚ್‌ನಂತಹ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಇದರಿಂದ ಹೆಚ್ಚು ಖುಷಿ ಸಿಗುತ್ತದೆ.

ಹಳ್ಳಿಗಳಿಗೆ ಹೋಗಿ

ಹಳ್ಳಿ ಜೀವನ ನಿಜಕ್ಕೂ ಚೆಂದ. ಹಳ್ಳಿಗಳಲ್ಲಿ ಸಂಪ್ರದಾಯ, ಆಚಾರ ವಿಚಾರಗಳ ನಮಗೆ ಅರಿವು ಕಡಿಮೆ. ಅಲ್ಲದೆ ಪಟ್ಟಣದ ಜೀವನದಿಂದ ಬೇಸತ್ತು ಹೋಗಿರುವವರಿಗೆ ಹಳ್ಳಿಯ ಹಸಿರು, ಅಲ್ಲಿನ ವಾತಾವರಣ ಖುಷಿ ನೀಡುವುದರಲ್ಲಿ ಸಂಶಯವಿಲ್ಲ, ಸುಮ್ಮನೆ ಹಳ್ಳಿಗಳಿಗೆ ಹೋಗಿ ಹೊಲ, ಗದ್ದೆಗಳಲ್ಲಿ ಸುತ್ತಾಡಿ. ಕಾಡು ಮೇಡು ಅಲೆಯಿರಿ. ಇದು ನಿಜಕ್ಕೂ ಮನಸ್ಸಿಗೆ ಆಹ್ಲಾದ ಎನ್ನಿಸುತ್ತದೆ.

ಸ್ನೇಹಿತರನ್ನು ಭೇಟಿ ಮಾಡಿ

ಸ್ನೇಹಿತರಿಲ್ಲದ ಜೀವನಕ್ಕೆ ಅರ್ಥವಿಲ್ಲ. ನಮ್ಮೆಲ್ಲರ ಜೀವನದಲ್ಲೂ ಸಾಕಷ್ಟು ಸ್ನೇಹಿತರುತ್ತಾರೆ. ನಮ್ಮ ಕೆಲಸದ ಒತ್ತಡ ನಡುವೆ ಅವರನ್ನೂ ಮರೆತಿರುತ್ತೇವೆ. ಹಾಗಾಗಿ ಭಾನುವಾರದ ದಿನ ಸ್ನೇಹಿತರನ್ನು ಭೇಟಿ ಮಾಡಿ. ಇದರಿಂದ ಅವರಿಗೂ ಖುಷಿ ಸಿಗುತ್ತದೆ. ಸ್ನೇಹಿತರೊಂದಿಗೆ ಸಮಯ ಕಳೆಯುವುದು ಬಹುಶಃ ಯಾರಿಗೂ ಬೇಸರ ತರುವ ವಿಷಯವಲ್ಲ.

ಸಾಮಾಜಿಕ ಜಾಲತಾಣಗಳಿಂದ ದೂರವಿರಿ

ಭಾನುವಾರ ಅಥವಾ ವಾರಾಂತ್ಯದ ದಿನಗಳಲ್ಲಿ ಮೊದಲು ಮಾಡಬೇಕಿರುವುದು ಸಾಮಾಜಿಕ ಜಾಲತಾಣಗಳಿಂದ ದೂರ ಇರುವುದು. ಇದರಿಂದ ದೇಹ ಮನಸ್ಸು ಎರಡೂ ಖುಷಿಯಾಗಿರುತ್ತದೆ. ಸಾಮಾಜಿಕ ಜಾಲತಾಣಗಳು ನಮ್ಮ ಅಮೂಲ್ಯ ಸಮಯವನ್ನೂ ಹಾಳು ಮಾಡುತ್ತವೆ. ಅಲ್ಲದೆ ದಿನವಿಡೀ ಅದರಲ್ಲೇ ಕಳೆದು ಹೋಗುವಂತೆ ಮಾಡುತ್ತವೆ. ಆ ಕಾರಣಕ್ಕೆ ಮೊಬೈಲ್‌ ಫೋನ್‌ ಅನ್ನು ದಿನದ ಮಟ್ಟಿಗೆ ಸೈಲೆಂಟ್‌ ಮಾಡುವುದು ಉತ್ತಮ.

ಮನಸ್ಸಿಗೆ ಖುಷಿ ನೀಡುವ ಅಡುಗೆ ಮಾಡಿ

ವಾರದ ದಿನಗಳಲ್ಲಿ ಗಡಿಬಿಡಿಯಲ್ಲಿ ಅಡುಗೆ ಮಾಡುವುದು, ಹೊರಗಡೆ ಸಿಕ್ಕಿದ್ದನ್ನು ತಿನ್ನುವುದು ಇದರಿಂದ ನಾಲಿಗೆ, ಹೊಟ್ಟೆ ಹಾಗೂ ಮನಸ್ಸು ಹದಗೆಟ್ಟಿರುತ್ತದೆ. ಆ ಕಾರಣಕ್ಕೆ ಭಾನುವಾರದಂದು ನೆಮ್ಮದಿಯಾಗಿ ಮನಸ್ಸಿಗೆ ಹಿಡಿಸುವ ನಳಪಾಕ ತಯಾರಿಸಿ. ತಾಯಿ, ಮನೆಯವರು ಅಥವಾ ಯೂಟ್ಯೂಬ್‌ ಸಹಾಯ ಪಡೆಯಿರಿ. ಅಡುಗೆ ಮಾಡುವುದು ಕೂಡ ಮಾನಸಿಕ ಆರೋಗ್ಯ ಸುಧಾರಣೆಯ ಮಾರ್ಗ ಎನ್ನುವುದು ಸುಳ್ಳಲ್ಲ.

ವಿಭಾಗ