Sunday Motivation: ಅನಂತ್ ಅಂಬಾನಿ ತೂಕ ನೋಡಿ ಬಾಡಿ ಶೇಮಿಂಗ್ ಮಾಡ್ತಿದ್ದೀರಾ? ಅದಕ್ಕೂ ಮುನ್ನ ಒಮ್ಮೆ ಇತ್ತ ಗಮನಿಸಿ
Sunday Motivation: ಇತ್ತೀಚಿನ ದಿನಗಳಲ್ಲಿ ಬಾಡಿ ಶೇಮಿಂಗ್ ಎನ್ನುವುದು ಹೆಚ್ಚಾಗುತ್ತಿದೆ. ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಅವರನ್ನೂ ಬಹಳಷ್ಟು ಜನರು ಬಾಡಿ ಶೇಮಿಂಗ್ ಮಾಡುತ್ತಿದ್ದಾರೆ. ಆದರೆ ಮತ್ತೊಬ್ಬರ ಜೀವನದ ಬಗ್ಗೆ ಮಾತನಾಡುವ ಮುನ್ನ ಜನರು ತಮ್ಮ ಜೀವನದಲ್ಲಿ ಎಲ್ಲವೂ ಸರಿ ಇದೆಯೇ ಎಂದು ಪ್ರಶ್ನಿಸಿಕೊಳ್ಳಬೇಕು.
ಭಾನುವಾರದ ಸ್ಫೂರ್ತಿಮಾತು: ಕಳೆದ ಒಂದು ವಾರದಿಂದ ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿ ಆಗುತ್ತಿರುವುದು ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆ ಕಾರ್ಯಕ್ರಮಗಳು. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ನಡೆಯುತ್ತಿರುವುದು ಇದೇ ವರ್ಷ ಜುಲೈ 12 ರಂದು. ಆದರೆ ಅದಕ್ಕೂ ಮುನ್ನ ವಿವಾಹಪೂರ್ವ ಕಾರ್ಯಕ್ರಮ ನೆರವೇರಿದೆ.
ಇತ್ತೀಚೆಗೆ ಮುಂಬೈನಲ್ಲಿ ಅದ್ದೂರಿಯಾಗಿ ನಡೆದ ವಿವಾಹಪೂರ್ವ ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ವಿದೇಶದ ಸೆಲೆಬ್ರಿಟಿಗಳು ಆಗಮಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು. ಆದರೆ ಇಷ್ಟೆಲ್ಲಾ ಅದ್ದೂರಿತನದ ನಡುವೆ ನೋಡುವವರ ಗಮನ ಸೆಳೆದದ್ದು ಅನಂತ್ ಅಂಬಾನಿ ಅವರ ದೇಹ. ಕಾರ್ಯಕ್ರಮದ ಫೋಟೋಗಳು, ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಜನರು ಅವರ ತೂಕವನ್ನು ಟೀಕಿಸಿ ಕಾಮೆಂಟ್ ಮಾಡಿದ್ದರು. ಒಂದು ರೀತಿಯಲ್ಲಿ ಇದು ಬಾಡಿ ಶೇಮಿಂಗ್ ಎನ್ನಬಹುದು. ಈ ಬಾಡಿ ಶೇಮಿಂಗ್ ಎನ್ನುವಂಥ ಭೂತ ಮಹಿಳೆಯರನ್ನು ಮಾತ್ರವಲ್ಲ ಪುರುಷರನ್ನೂ ಬಿಟ್ಟಿಲ್ಲ.
ರಾಖಿ ಸಾವಂತ್‌ನಿಂದ ಬಾಡಿ ಶೇಮಿಂಗ್
ಅನಂತ್ ಅಂಬಾನಿ ಬಗ್ಗೆ ರಾಖಿ ಸಾವಂತ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು. ತನನ್ನು ಏಕೆ ಮದುವೆಗೆ ಆಹ್ವಾನಿಸಲಿಲ್ಲ ಎಂದು ಪ್ರಶ್ನಿಸಿದ್ದಲ್ಲದೆ, ಅನಂತ್ ತೂಕದ ಬಗ್ಗೆ ಕೂಡಾ ಮಾತನಾಡಿದ್ದರು. ರಾಖಿ ಸಾವಂತ್ ತಾನೂ ಒಬ್ಬ ಸೆಲೆಬ್ರಿಟಿಯಾಗಿ ಅದನ್ನೂ ಮರೆತು ಅನಂತ್ ಅಂಬಾನಿ ಬಗ್ಗೆ ಮಾತನಾಡಿದ್ದರು. ಜನ ಸಾಮಾನ್ಯರು ಕೂಡಾ ಅನಂತ್ ಅಂಬಾನಿ ತೂಕದ ಹಿಂದಿನ ಕಾರಣ ಕೂಡಾ ತಿಳಿಯದೆ ಮನುಷ್ಯತ್ವ ಮರೆತವರಂತೆ ಅವರನ್ನು ಟೀಕಿಸಿದ್ದರು. ಆದರೆ ಆತನನ್ನು ಟೀಕಿಸುವ ಮುನ್ನ ನೀವು ಎಂದಾದರೂ ನಿಮ್ಮ ಆರೋಗ್ಯದ ಬಗ್ಗೆ ಅಥವಾ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಯೋಚಿಸಿದ್ದೀರಾ?
ನಾನು ಎಷ್ಟೇ ಶ್ರೀಮಂತನ ಮಗನಾದರೂ ಎಲ್ಲರಂತೆ ನನಗೂ ಕಷ್ಟಗಳಿವೆ, ನನಗೂ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂದು ಸ್ವತ: ಅನಂತ್ ಅಂಬಾನಿ, ನೋವಿನಿಂದ ಹೇಳಿಕೊಂಡಿದ್ದರು. ಅಷ್ಟಾದರೂ ಅವರ ದೇಹದ ಬಗ್ಗೆ ಹೀಯಾಳಿಸುವುದು ಎಷ್ಟು ಸರಿ? ತಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದ್ದರೂ ಜನರು ಮಾತ್ರ ಮತ್ತೊಬ್ಬರ ತಟ್ಟೆಯಲ್ಲಿ ಬಿದ್ದಿರುವ ನೊಣವನ್ನು ಹುಡುಕಲು ಪ್ರಯತ್ನಿಸುತ್ತಾರೆ. ಬಾಡಿ ಶೇಮಿಂಗ್ ಗಂಭೀರ ಅಪರಾಧ. ಇದು ಇತರರ ವಿಶ್ವಾಸಕ್ಕೆ ಧಕ್ಕೆ ತರುತ್ತದೆ. ಒಬ್ಬ ವ್ಯಕ್ತಿಯು ತನ್ನ ಆತ್ಮವಿಶ್ವಾಸವನ್ನು ಕಳೆದುಕೊಂಡರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಅದರಿಂದ ನೊಂದು ಮಾನಸಿಕ ಹಿಂಸೆಗೆ ಒಳಗಾದವರು ಎಷ್ಟೋ ಜನರಿದ್ದಾರೆ. ಆದ್ದರಿಂದ ಯಾರ ಬಗ್ಗೆಯಾದರೂ ಬಾಡಿ ಶೇಮಿಂಗ್ ಮಾಡುವ ಮುನ್ನ ಎರಡು ಬಾರಿ ಯೋಚಿಸಿ.
ಅಸ್ತಮಾದಿಂದ ಬಳಲುತ್ತಿರುವ ಅನಂತ್ ಅಂಬಾನಿ
ಅನಂತ್ ಅಂಬಾನಿ ತೂಕದ ಬಗ್ಗೆ ಮನಸ್ಸಿಗೆ ಬಂದಂತೆ ಕಾಮೆಂಟ್ ಮಾಡುವವರು ಒಮ್ಮೆ ಯೋಚಿಸಿ ನೋಡಿ. ನೀವು ಅವರ ತೂಕವನ್ನು ನೋಡಿ ನಗುತ್ತಿದ್ದರೆ, ಅವರು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ನೋಡಿ ನಗಬಹುದು. ಈ ಪ್ರಪಂಚದಲ್ಲಿ ಯಾರೂ ಪರಿಪೂರ್ಣರಲ್ಲ. ಎಲ್ಲದಕ್ಕೂ ಒಂದು ಮಿತಿ ಇದೆ. ಎಲ್ಲರಲ್ಲೂ ಏನಾದರೊಂದು ಸಮಸ್ಯೆ ಇರುತ್ತದೆ. ಅವರ ಸ್ಥಿತಿ, ಜೀವನ ಮತ್ತು ಆರೋಗ್ಯವನ್ನು ತಿಳಿಯದೆ ಇತರರ ಮೇಲೆ ಬಾಡಿ ಶೇಮಿಂಗ್ ಕಾಮೆಂಟ್‌ಗಳನ್ನು ಮಾಡುವುದು ಒಳ್ಳೆಯದಲ್ಲ. ಅದರೆ ನೀವು ಒಳ್ಳೆ ಮನಸ್ಸನ್ನು ಹೊಂದಿದ್ದರೆ, ಅದಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ.
ಅನಂತ್ ಅಂಬಾನಿ ಅವರೇ ಹೇಳಿಕೊಳ್ಳುವಂತೆ ಅವರಿಗೆ ಬಾಲ್ಯದಿಂದಲೂ ಅಸ್ತಮಾ ಇದೆ. ಅದಕ್ಕಾಗಿ ಅವರಿ ಬಳಸಿದ ಸ್ಟಿರಾಯ್ಡ್‌ನಿಂದಲೇ ಅವರ ತೂಕ ಹೆಚ್ಚಾಗಿದೆ. ಅಸ್ತಮಾ ಕಾರಣದಿಂದ ಅನಂತ್ ಅಂಬಾನಿ ಒಂದು ದಿನವಾದರೂ ಎಸಿ ರೂಮ್‌ನಲ್ಲಿ ಮಲಗಲು ಸಾಧ್ಯವಾಗಿಲ್ಲ. ಈ ಸಮಸ್ಯೆಯಿಂದ ಹೊರ ಬಂದು ತೂಕ ಇಳಿಸಿಕೊಳ್ಳಲು ತಿಂಗಳುಗಟ್ಟಲೆ ಹೆಣಗಾಡಿದರು. 18 ತಿಂಗಳಲ್ಲಿ 108 ಕೆಜಿ ಕಳೆದುಕೊಂಡರು. ಆದರೆ ಆರೋಗ್ಯ ಸಮಸ್ಯೆಗಳಿಂದಾಗಿ ಮತ್ತೆ ತೂಕ ಹೆಚ್ಚಾಗತೊಡಗಿತು. ಇದು ಅವರ ತಪ್ಪಲ್ಲ. ಆರೋಗ್ಯ ಸಮಸ್ಯೆ ಯಾರಿಗಾದರೂ ಬರಬಹುದು. ಅದು ಬಡವ ಶ್ರೀಮಂತ ಎಂದು ನೋಡುವುದಿಲ್ಲ. ವಯಸ್ಸಿಗೆ ತಕ್ಕಂತೆ ಆರೋಗ್ಯ ಮತ್ತು ಸೌಂದರ್ಯ ಬದಲಾಗುತ್ತದೆ. ಅನಂತ್ ಅಂಬಾನಿ ಬಗ್ಗೆ ಕಾಮೆಂಟ್ ಮಾಡುವವರ ಜೀವನದಲ್ಲಿ ಎಲ್ಲವೂ ಸರಿ ಇದೆಯೇ? ಒಮ್ಮೆ ನಿಮ್ಮಲ್ಲಿ ನೀವೇ ಪ್ರಶ್ನಿಸಿಕೊಳ್ಳಿ.