Sunday Motivation: ಯಶಸ್ಸಿನ ಹಾದಿ ಎಂದಿಗೂ ಹೂವಿನ ಹಾಸಿಗೆಯಲ್ಲ, ಕಲ್ಲು ಮುಳ್ಳುಗಳನ್ನ ತುಳಿದ ನಂತರವಷ್ಟೇ ಸಾಧಿಸಲು ಸಾಧ್ಯ-sunday motivation path of success is never a bed of flowers after stepping on the stones only you will get success rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Sunday Motivation: ಯಶಸ್ಸಿನ ಹಾದಿ ಎಂದಿಗೂ ಹೂವಿನ ಹಾಸಿಗೆಯಲ್ಲ, ಕಲ್ಲು ಮುಳ್ಳುಗಳನ್ನ ತುಳಿದ ನಂತರವಷ್ಟೇ ಸಾಧಿಸಲು ಸಾಧ್ಯ

Sunday Motivation: ಯಶಸ್ಸಿನ ಹಾದಿ ಎಂದಿಗೂ ಹೂವಿನ ಹಾಸಿಗೆಯಲ್ಲ, ಕಲ್ಲು ಮುಳ್ಳುಗಳನ್ನ ತುಳಿದ ನಂತರವಷ್ಟೇ ಸಾಧಿಸಲು ಸಾಧ್ಯ

ಯಶಸ್ಸಿನ ಹಾದಿಯಲ್ಲಿ ಸಾಗುವವರಿಗೆ ಸದಾ ಗೆಲುವೇ ಸಿಗುತ್ತದೆ ಎಂಬುದಿಲ್ಲ. ಆರಂಭದಲ್ಲೇ ಯಶಸ್ಸು ಸಿಗುವುದಿಲ್ಲ, ಈ ಹಾದಿಯಲ್ಲಿ ಒಂದಿಷ್ಟು ದೂರ ಸಾಗಿದಾಗ ದಾರಿಯೇ ಮುಚ್ಚಬಹುದು, ಹಾಗಂತ ಹಿಂದಿರುಗಬಾರದು. ಮತ್ತೊಂದು ದಾರಿ ಹುಡುಕಿ ಹೊರಡಲೇಬೇಕು. ಆಗಷ್ಟೇ ಯಶಸ್ಸು ನಿಮ್ಮದಾಗಲು ಸಾಧ್ಯ.

ಯಶಸ್ಸಿನ ಹಾದಿ ಎಂದಿಗೂ ಹೂವಿನ ಹಾಸಿಗೆಯಲ್ಲ, ಕಲ್ಲು ಮುಳ್ಳುಗಳನ್ನ ತುಳಿದ ನಂತರವಷ್ಟೇ ಸಾಧಿಸಲು ಸಾಧ್ಯ
ಯಶಸ್ಸಿನ ಹಾದಿ ಎಂದಿಗೂ ಹೂವಿನ ಹಾಸಿಗೆಯಲ್ಲ, ಕಲ್ಲು ಮುಳ್ಳುಗಳನ್ನ ತುಳಿದ ನಂತರವಷ್ಟೇ ಸಾಧಿಸಲು ಸಾಧ್ಯ

ಯಶಸ್ಸನ್ನು ಹುಡುಕಿ ಹೊರಟವರಿಗೆ ಹಾದಿಯಲ್ಲಿ ನೂರಾರು ಅಡೆತಡೆಗಳು ಎದುರಾಗುವುದು ಸಹಜ. ಕೆಲವರು ಈ ಅಡ್ಡಿ-ಆತಂಕಗಳಿಗೆ ಅಂಜಿ ಮುಂದೆ ಸಾಗುವುದಕ್ಕೆ ಹಿಂಜರಿಯುತ್ತಾರೆ. ಆದರೆ ಯಶಸ್ಸಿನ ಹಾದಿ ಖಂಡಿತ ಸುಲಭವಿಲ್ಲ, ಅಲ್ಲದೇ ಆ ಹಾದಿಯ ಅಂತ್ಯ ಆರಂಭದಲ್ಲೇ ದಕ್ಕುವಂಥದ್ದೂ ಅಲ್ಲ. ಹಾಗಾಗಿ ನೀವು ಆ ಹಾದಿಯಲ್ಲಿ ನೀವು ದೀರ್ಘ ಪಯಣ ಮಾಡಲೇಬೇಕಿದೆ. ಆರಂಭದಲ್ಲೇ ಎದುರಾದ ಕಷ್ಟಗಳಿಗೆ ಅಂಜಿ ನಿಂತಲ್ಲೇ ನಿಂತು ಬಿಟ್ಟರೆ ಅಥವಾ ಹಿಂದಿರುಗಿ ಹೊರಟರೆ ಪ್ರಯೋಜನವಿಲ್ಲ.

ಸಾಧನೆಯ ಹಾದಿ ಎಂಬುದು ರೋಚಕ, ಅದರಲ್ಲಿ ನಾವು ಉತ್ಸಾಹದಿಂದ ಮುನ್ನಡೆಯಬೇಕು. ಯಶಸ್ಸಿನ ಹಾದಿಯಲ್ಲಿ ಸವಾಲುಗಳ ಎದುರಾದಾಗ ದಾರಿ ಮುಚ್ಚಿದೆ ಎಂದುಕೊಂಡರೆ ನಿರಾಸೆ ಕಾಡುವುದು ಸಹಜ. ಇದರಿಂದ ನಿಮ್ಮನ್ನು ಹತಾಶೆ, ಖಿನ್ನತೆ ಕಾಡಬಹುದು. ಒಂದು ದಾರಿ ಮುಚ್ಚಿತು ಎಂದರೆ ನಿಮ್ಮ ಪಯಣ ಅಲ್ಲಿಗೆ ಮುಗಿಯಿತು ಎಂದಲ್ಲ. ಒಂದು ಬಾಗಿಲು ಮುಚ್ಚಿದೆ ಎಂದರೆ ಆ ದೇವರು ಖಂಡಿತ ನಿಮಗಾಗಿ ಇನ್ನೊಂದು ಬಾಗಿಲು ತೆರೆಯುತ್ತಾನೆ. ಮೊದಲ ಬಾಗಿಲು ಮುಚ್ಚಿದಾಗ ಎರಡನೇ ಬಾಗಿಲನ್ನು ಹುಡುಕಿ ಹೊರಡಿ. ಆಗ ನಿಮ್ಮ ಯಶಸ್ಸಿನ ಕನಸು ಖಂಡಿತ ನಿಜವಾಗುತ್ತದೆ.

ಯಶಸ್ಸು ಎಂಬುದು ತಟ್ಟೆಯಲ್ಲಿ ಬಡಿಸಿಟ್ಟ ಭಕ್ಷ್ಯದಂತಲ್ಲ. ಇದಕ್ಕಾಗಿ ನಾವು ಸಾಕಷ್ಟು ಶ್ರಮಿಸಬೇಕು. ನಮ್ಮ ಅನ್ನಕ್ಕಾಗಿ ನಾವೇ ಬಿತ್ತಿ, ಬೆಳೆದು, ಕಟಾವು ಮಾಡಿ ಅಡುಗೆ ತಯಾರಿಸಿ ಊಟ ಮಾಡಿದಂತೆ. ಯಶಸ್ಸಿನ ಹಾದಿಯಲ್ಲಿ ಸಾಗಲು ಬಯಸುವವರು ತಮ್ಮೆಲ್ಲಾ ಸಂತೋಷ, ಸೌಕರ್ಯಗಳನ್ನು ತ್ಯಾಗ ಮಾಡಬೇಕು. ಆರಂಭದಲ್ಲಿ ಎದುರಾಗುವ ಎಲ್ಲಾ ಕಷ್ಟಗಳನ್ನ ಎದುರಿಸಿದಾಗ ಅಂತ್ಯದಲ್ಲಿ ನಿಮಗೆ ಸುಖವಷ್ಟೇ ಇರುತ್ತದೆ. ಒಮ್ಮೆ ನೀವು ಯಶಸ್ಸು ಗಳಿಸಿದರೆ ಜೀವನದಲ್ಲಿ ಎಲ್ಲವೂ ನಿಮ್ಮನ್ನು ಹಿಂಬಾಲಿಸಿ ಬರುತ್ತದೆ. ಆದರೆ ಸಂತೋಷ, ವೈಭೋಗದ ಹಿಂದೆ ಓಡಿದರೆ ಯಶಸ್ಸು ಖಂಡಿತ ನಿಮ್ಮದಾಗುವುದು ಕಷ್ಟಸಾಧ್ಯ. ಶಿಸ್ತು, ಕಠಿಣ ಪರಿಶ್ರಮ, ದೃಢಸಂಕಲ್ಪ, ಸಾಧಿಸುವ ಛಲ, ಏಕಾಗ್ರತೆ ಈ ಎಲ್ಲವೂ ನಿಮ್ಮಲ್ಲಿದ್ದಾಗ ಯಶಸ್ಸು ತಾನಾಗಿಯೇ ಒಲಿದು ಬರುತ್ತದೆ. ಇದರೊಂದಿಗೆ ಸುಂದರ, ಅದ್ಭುತ ಮನಸ್ಥಿತಿ ನಮ್ಮದಾಗಿರಬೇಕು.

ಸೋಲನ್ನು ಸ್ವೀಕರಿಸಿ

ಸೋಲು ಜೀವನದ ಅಂತ್ಯವಲ್ಲ. ಬದುಕಲ್ಲಿ ಎದುರಾಗುವ ಪ್ರತಿ ಸೋಲುಗಳನ್ನು ಮೆಟ್ಟಿ ನಿಂತಾಗ ಮಾತ್ರ ಯಶಸ್ಸಿನ ಉತ್ತುಂಗಕ್ಕೇರಲು ಸಾಧ್ಯ. ಯಶಸ್ಸು ಸುಲಭವಾಗಿ ನಮ್ಮ ಕೈಗೆ ದಕ್ಕಿದರೆ ಅದರ ಮೌಲ್ಯ ತಿಳಿಯುವುದಿಲ್ಲ. ಹಾಗಾಗಿ ಸೋಲುತ್ತಾ, ಸೋಲುತ್ತಾ ಗೆದ್ದಾಗ ಮಾತ್ರ ಯಶಸ್ಸಿನ ಮೌಲ್ಯ ನಮಗೆ ಅರ್ಥವಾಗುತ್ತದೆ. ಆ ಕಾರಣಕ್ಕೆ ಬದುಕಿನಲ್ಲಿ ಗೆಲ್ಲಲ್ಲು ನೀವು ಸಾಕಷ್ಟು ಶ್ರಮ ಹಾಕಲೇಬೇಕು.

ಸೋಲು ಎದುರಾದಾಗ ಅಳುತ್ತಾ ಕೂರಬೇಡಿ. ಸೋತಿದ್ದೇನೆ ಎಂದು ಎಲ್ಲಿಯೂ ತೋರಿಸಬೇಡಿ, ನಗುತ್ತಲೇ ಸೋಲನ್ನು ಸ್ವೀಕರಿಸಿ. ನಿಮ್ಮ ಸೋಲು ಯಶಸ್ಸಿನ ಮೊದಲ ಹೆಜ್ಜೆ ಎಂದು ಪರಿಗಣಿಸಿ. ಸೋತಾಗೆಲ್ಲಾ ನಿಮ್ಮ ವೇಗವನ್ನು ಇನ್ನಷ್ಟು ಹೆಚ್ಚಿಸಿಕೊಂಡು ಮುನ್ನೆಡೆಯಿರಿ. ಒಂದು ದಾರಿ ಮುಚ್ಚಿದೆ ಎಂದು ಅಲ್ಲೇ ನಿಂತು ಬಿಡುವುದಕ್ಕಿಂತ ಇನ್ನೊಂದು ದಾರಿಯನ್ನು ಹುಡುಕಿ ಹೊರಡುವುದೇ ಯಶಸ್ಸಿನ ಮೊದಲ ಪಾಠ. ಸೋಲುಗಳಿಂದ ಜೀವನದ ಪಾಠ ಕಲಿಯಿರಿ. ಏಕೆಂದರೆ ಇಂತಹ ಅನುಭವಗಳೇ ನಿಮಗೆ ಯಶಸ್ಸಿನ ಮೆಟ್ಟಲನ್ನು ತೋರುತ್ತವೆ.

ಸಮಯದ ಸದುಪಯೋಗ

ಸಮಯವನ್ನು ಬುದ್ಧಿವಂತಿಕೆಯಿಂದ ಬಳಸಿ ಸದುಪಯೋಗಪಡಿಸಿಕೊಳ್ಳಿ. ನಿಮ್ಮನ್ನು ಪ್ರೇರೇಪಿಸಲು, ಕಷ್ಟಪಟ್ಟು ಯಶಸ್ಸು ಸಾಧಿಸಿದ ಸಾಧಕರ ಕಥೆಗಳನ್ನು ಓದಿ. ಯಾವಾಗಲೂ ಅವರನ್ನು, ಅವರು ಪಟ್ಟ ಕಷ್ಟವನ್ನು ನೆನಪಿಸಿಕೊಳ್ಳುತ್ತಿರಿ. ಯಾವುದೇ ವ್ಯಕ್ತಿ ಒಂದೇ ಬಾರಿಗೆ ಶ್ರೇಷ್ಠನಾಗಲು ಸಾಧ್ಯವಿಲ್ಲ. ಅದರ ಹಿಂದೆ ವರ್ಷಗಳ ಶ್ರಮ ಬೇಕು. ಅವರ ಒಂದು ಸಾಧನೆಯ ಹಿಂದಿ ನೂರಾರು ತ್ಯಾಗಗಳಿರುತ್ತವೆ.

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ನಮಗಿಂತ ಹಣದಲ್ಲಿ ಶ್ರೀಮಂತಿಕೆ ಹೊಂದಿರುವವರನ್ನು ನೋಡಿದಾಗ ನಾವು ಅವರಂತಿಲ್ಲವಲ್ಲ ಎಂದು ಅನ್ನಿಸುವುದು ಸಹಜ. ಆದರೆ ಅವರಿಗೂ ನಮ್ಮಂತೆ ಜೀವನದ ಪ್ರತಿ ಹೆಜ್ಜೆಯಲ್ಲೂ ಸಮಸ್ಯೆಗಳಿರುತ್ತವೆ. ಅವರು ಅದನ್ನು ಜಯಿಸಲು ಅವಕಾಶಗಳನ್ನು ಹುಡುಕುತ್ತಾರೆ. ಸಮಸ್ಯೆಗಳಿಲ್ಲದೆ ಜೀವನವಿಲ್ಲ. ಮಿಲಿಯನೇರ್ ಆಗಿರಲಿ ಅಥವಾ ಬಡವರಿರಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ. ಯಶಸ್ಸಿಗೆ ಕೂಡ ಬಡವ ಶ್ರೀಮಂತ ಎಂಬ ಭೇದವಿಲ್ಲ. ಆದ್ದರಿಂದ ಇತರರನ್ನು ಕಂಡು ಅಸೂಯೆಪಡುವ ಬದಲು ನಿಮ್ಮ ಜೀವನವನ್ನು ಹೇಗೆ ಯಶಸ್ವಿಗೊಳಿಸಬಹುದು ಎಂದು ಯೋಚಿಸಿ.