Swami Vivekananda Jayanti: ಇಂದು ವಿಶ್ವ ಸಂತ ಸ್ವಾಮಿ ವಿವೇಕಾನಂದ ಜಯಂತಿ; ಈ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಏಕೆ ಆಚರಿಸುತ್ತಾರೆ
ಸ್ವಾಮಿ ವಿವೇಕಾನಂದರ ಬೋಧನೆಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ, ಅದರಲ್ಲೂ ವಿಶೇಷವಾಗಿ ಯುವ ಜನತೆಗೆ ಸ್ಪೂರ್ತಿ ನೀಡುತ್ತಲೇ ಇದೆ. ಇಂದು (ಜನವರಿ 12, ಭಾನುವಾರ) ಸ್ವಾಮಿ ವಿವೇಕಾನಂದ ಜಯಂತಿ. ಪ್ರತಿವರ್ಷದಂತೆ ಈ ಬಾರಿಯು ದೇಶಾದ್ಯಂತ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ.

ಇಂದು (ಜನವರಿ 12, ಭಾನುವಾರ) ದೇಶದಾದ್ಯಂತ ಮಹಾನ್ ಅಧ್ಯಾತ್ಮಿಕ ನಾಯಕ, ತತ್ವಜ್ಞಾನಿ, ಚಿಂತಕ ಹಾಗೂ ವಿಶ್ವ ಸನ್ಯಾಸಿ ಸ್ವಾಮಿ ವಿವೇಕಾನಂದರ 162 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಸ್ವಾಮಿ ವಿವೇಕಾನಂದರ ಚಿಂತನೆಗಳು ಯಾವಾಗಲೂ ಯುವಕರನ್ನು ಪ್ರೇರೇಪಿಸುವಂತಿವೆ. ಜೊತೆಗೆ ಅವರಲ್ಲಿ ಹೊಸ ಶಕ್ತಿ ಮತ್ತು ಪ್ರಜ್ಞೆಯನ್ನು ತುಂಬುತ್ತಿವೆ. ಸ್ವಾಮಿ ವಿವೇಕಾನಂದರ ಜಯಂತಿಯನ್ನು ಭಾರತದಲ್ಲಿ ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ. ರಾಷ್ಟ್ರೀಯ ಯುವ ದಿನದಂದು, ವೈಯಕ್ತಿಕ ಅಭಿವೃದ್ಧಿ, ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಧನಾತ್ಮಕವಾಗಿ ಕೊಡುಗೆ ನೀಡಲು ಯುವಕರನ್ನು ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳು, ಸಿಮಿನಾರ್ ಹಾಗೂ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ.
ಸ್ವಾಮಿ ವಿವೇಕಾನಂದರ 162 ನೇ ಜನ್ಮ ದಿನಾಚರಣೆ ಮತ್ತು ರಾಷ್ಟ್ರೀಯ ಯುವ ದಿನಾಚರಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಈ ವರ್ಷ ದೆಹಲಿಯ ಭಾರತ್ ಮಂಟಪದಲ್ಲಿ ಅಭಿವೃದ್ಧಿ ಹೊಂದಿದ ಭಾರತ ಯುವ ನಾಯಕರ ಸಂವಾದ 2025 (ಜನವರಿ 11-12, 2025) ಅನ್ನು ಆಯೋಜಿಸಿದೆ. ಈ ಮೂಲಕ ಯುವ ಸಬಲೀಕರಣ ಮತ್ತು ನಾಯಕತ್ವಕ್ಕೆ ಒತ್ತು ನೀಡಲಾಗುತ್ತಿದೆ.
ಸ್ವಾಮಿ ವಿವೇಕಾನಂದರ ಬೋಧನೆಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ, ಅದರಲ್ಲೂ ವಿಶೇಷವಾಗಿ ಯುವ ಜನತೆಗೆ ಸ್ಪೂರ್ತಿ ನೀಡುತ್ತಲೇ ಇದೆ. ಯುವ ಪೀಳಿಗೆಯ ವೈಯಕ್ತಿಕ ಬೆಳವಣಿಗೆ, ಸ್ವಯಂ ಸುಧಾರಣೆ ಹಾಗೂ ಸಾಮಾಜಿಕ ಪ್ರಗತಿಯತ್ತ ಶ್ರಮಿಸಲು ಪ್ರೋತ್ಸಾಹ ಹಾಗೂ ಯುವಕರ ಏಳಿಗಾಗಿ ಸ್ವಾಮಿ ವಿವೇಕಾನಂದರ ಸ್ಪೂರ್ತಿದಾಯಕ ಮಾತುಗಳ ಇಂದಿಗೂ ಪ್ರಸ್ತುತ ಎನಿಸಿವೆ.
ಸ್ವಾಮಿ ವಿವೇಕಾನಂದರನ್ನು ಜಗತ್ತಿಗೆ ಪರಿಚಯಿಸಿದ ಚಿಕಾಗೋ ಭಾಷಣ
ಸ್ವಾಮಿ ವಿವೇಕಾನಂದರು 1863 ರ ಜನವರಿ 12 ರಂದು ಕೋಲ್ಕತ್ತಾದಲ್ಲಿ ಜನಿಸಿದ್ದರು. 1893 ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಂಸತ್ತಿನಲ್ಲಿ ಭಾಷಣದ ಮೂಲಕ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡರು. ವಿವೇಕಾನಂದರ ಅಂದಿನ ಭಾಷಣ ಇತಿಹಾಸದಲ್ಲಿ ಅವರ ಅತ್ಯಂತ ಪ್ರಸಿದ್ದ ಕ್ಷಣಗಳಲ್ಲಿ ಒಂದಾಗಿದೆ. ತಮ್ಮ ಭಾಷಣದ ಆರಂಭದಲ್ಲಿ ಸ್ವಾಮಿ ವಿವೇಕಾನಂದರು, 'ಅಮೆರಿಕದ ಸಹೋದರ ಸಹೋದರಿಯರೇ' ಎಂದು ಹೇಳಿದಾಗ ಸದನವು ಎರಡು ನಿಮಿಷಗಳ ಕಾಲ ಚಪ್ಪಾಳೆಯನ್ನು ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿತ್ತು. ಅಂದಿನಿಂದ, ಭಾರತ ಮತ್ತು ಭಾರತೀಯ ಸಂಸ್ಕೃತಿಗೆ ಪ್ರಪಂಚದಾದ್ಯಂತ ಮಾನ್ಯತೆ ಸಿಕ್ಕಿತು. ಕೇವಲ 30ನೇ ವಯಸ್ಸಿನಲ್ಲಿ, ವಿವೇಕಾನಂದರು ಹಿಂದುತ್ವದ ದೃಷ್ಟಿಕೋನದಿಂದ ಸಹೋದರತ್ವದ ಪಾಠವನ್ನು ಜಗತ್ತಿಗೆ ಕಲಿಸಿದರು. ಧರ್ಮಗಳ ಸಂಸತ್ತಿನಲ್ಲಿ ಈ ಯುವ ಸನ್ಯಾಸಿ ಮಾಡಿದ ಭಾಷಣದಿಂದ ಇಡೀ ಜಗತ್ತು ಮಂತ್ರಮುಗ್ಧವಾಯಿತು.
ಸಾರ್ವತ್ರಿಕ ಸಹೋದರತ್ವ ಮತ್ತು ಸಹಿಷ್ಣುತೆಯ ಕುರಿತ ಅವರ ಭಾಷಣವು ಜಾಗತಿಕ ವ್ಯಕ್ತಿಯನ್ನಾಗಿ ರೂಪಿಸಿತು. 1984 ರಲ್ಲಿ ಭಾರತ ಸರ್ಕಾರವು, ಸ್ವಾಮಿ ವಿವೇಕಾನಂದರ ಜನ್ಮದಿನದ ನೆನಪಿಗಾಗಿ ಮತ್ತು ಯುವಕರು ವಿವೇಕಾನಂದರ ಸಂದೇಶಗಳಿಂದ ಸ್ಪೂರ್ತಿ ಪಡೆಯಲು ಜನವರಿ 12 ಅನ್ನು ರಾಷ್ಟ್ರೀಯ ಯುವ ದಿನವೆಂದು ಘೋಷಣೆ ಮಾಡಿತ್ತು. ಶ್ರೀಮಂತ ಕುಟುಂಬದಲ್ಲಿ ಜನಿಸಿದ ಸ್ವಾಮಿ ವಿವೇಕಾನಂದರು ಬಾಲ್ಯದಿಂದಲೂ ತುಂಬಾ ತೀಕ್ಷ್ಣ ಮತ್ತು ಅನ್ವೇಷಣಾಶೀಲರಾಗಿದ್ದರು. ಅವರ ಬುದ್ಧಿವಂತಿಕೆಯ ಬಗ್ಗೆ ಆತನ ಶಿಕ್ಷಕರಿಗೂ ಮನವರಿಕೆಯಾಗಿತ್ತು. ಆದರೆ ದೇವರಿಗಾಗಿ ಹಂಬಲಿಸುತ್ತಿದ್ದರು. ದೇವರನ್ನು ತಿಳಿದುಕೊಳ್ಳಲು ಬಹಳ ಕುತೂಹಲವಿತ್ತು. ತನ್ನ ಹೆತ್ತವರು ಮದುವೆಯಾಗುವಂತೆ ಕೇಳಿದಾಗ, ವಿವೇಕಾನಂದರು ದೇವರನ್ನು ಹುಡುಕುತ್ತಿದ್ದೇನೆಯೇ ಹೊರತು ತನ್ನ ಹೆಂಡತಿಯನ್ನು ಅಲ್ಲ ಎಂದು ಉತ್ತರಿಸಿದ್ದರಂತೆ.
ರಾಮಕೃಷ್ಣ ಪರಮಹಂಸರನ್ನು ಭೇಟಿಯಾದ ನಂತರ ವಿವೇಕಾನಂದರಿಗೆ ಅಧ್ಯಾತ್ಮಿಕತೆಯತ್ತ ಒಲವು ಬೆಳೆಯಿತು. ರಾಮಕೃಷ್ಣ ಪರಮಹಂಸರ ಆತ್ಮೀಯ ಶಿಷ್ಯರಾದರು. ಪರಮಹಂಸರನ್ನು ತಮ್ಮ ಅಧ್ಯಾತ್ಮಿಕ ಗುರುವೆಂದು ಪರಿಗಣಿಸಿದ ನಂತರ, ಅವರನ್ನು ಸ್ವಾಮಿ ವಿವೇಕಾನಂದ ಎಂದು ಕರೆಯಲಾಯಿತು. ಶಕ್ತಿಯ ಸಾಕಾರರೂಪವಾಗಿದ್ದರು. ಆ ನಂತರ ಅಧ್ಯಾತ್ಮಿಕ ಕ್ರಾಂತಿಯನ್ನು ಪ್ರಾರಂಭಿಸಿದರು. ರಾಮಕೃಷ್ಣ ಪರಮಹಂಸರ ಮಹಾಸಮಾಧಿಯ ನಂತರ, ಸ್ವಾಮಿ ವಿವೇಕಾನಂದರು ಭಾರತದಾದ್ಯಂತ ಪ್ರಯಾಣಿಸಿದರು.

ವಿಭಾಗ