ಸ್ವಪ್ನಶಾಸ್ತ್ರ: ರಾತ್ರಿ ಕನಸಿನಲ್ಲಿ ಗರ್ಭಿಣಿಯಾದ ಕನಸು ಕಂಡಿರಾ? ಈ ಕನಸಿಗೆ ಇವೆಯಂತೆ 14 ಅರ್ಥಗಳು-swapna shastra dream meaining do you dreat of being pregnant in a night dream there are 14 meanings of this dream arc ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸ್ವಪ್ನಶಾಸ್ತ್ರ: ರಾತ್ರಿ ಕನಸಿನಲ್ಲಿ ಗರ್ಭಿಣಿಯಾದ ಕನಸು ಕಂಡಿರಾ? ಈ ಕನಸಿಗೆ ಇವೆಯಂತೆ 14 ಅರ್ಥಗಳು

ಸ್ವಪ್ನಶಾಸ್ತ್ರ: ರಾತ್ರಿ ಕನಸಿನಲ್ಲಿ ಗರ್ಭಿಣಿಯಾದ ಕನಸು ಕಂಡಿರಾ? ಈ ಕನಸಿಗೆ ಇವೆಯಂತೆ 14 ಅರ್ಥಗಳು

ರಾತ್ರಿಯಲ್ಲಿ ಬೀಳುವ ಕೆಲವು ಕನಸುಗಳೇ ಹಾಗೆ. ಕೆಲವರಿಗೆ ಸಮಾಧಾನವನ್ನು ತಂದರೆ ಇನ್ನು ಕೆಲವರಿಗೆ ನೋವನ್ನುಂಟು ಮಾಡುತ್ತದೆ. ಗರ್ಭಿಣಿಯಾದ ಕನಸು ಕಾಣುವುದರ ಹಿಂದೆ ಹಲವಾರು ಕಾರಣಗಳಿವೆ. ಅದು ನಿಮ್ಮ ಜೀವನದಲ್ಲಿ ಹೊಸ ಬದಲಾವಣೆಯೂ ಆಗಿರಬಹುದು. (ಬರಹ: ಅರ್ಚನಾ ವಿ.ಭಟ್)

Being Pregnant Dream: ರಾತ್ರಿ ಕನಸಿನಲ್ಲಿ ಗರ್ಭಿಣಿಯಾದ ಕನಸು ಕಂಡಿರಾ? ಈ ಕನಸಿಗೆ ಇವೆಯಂತೆ 14 ಅರ್ಥಗಳು
Being Pregnant Dream: ರಾತ್ರಿ ಕನಸಿನಲ್ಲಿ ಗರ್ಭಿಣಿಯಾದ ಕನಸು ಕಂಡಿರಾ? ಈ ಕನಸಿಗೆ ಇವೆಯಂತೆ 14 ಅರ್ಥಗಳು

ಕನಸುಗಳೇ ಹಾಗೆ, ನಗೆಯುಕ್ಕಿಸುವ ಕನಸುಗಳೇ ಇರಲಿ ಅಥವಾ ಬೆಚ್ಚಿ ಬೀಳಿಸುವ ದುಸ್ವಪ್ನಗಳೇ ಇರಲಿ ಅದನ್ನು ನಮ್ಮ ಹತ್ತಿರದವರಲ್ಲಿ ಹೇಳಿಕೊಳ್ಳದೇ ಇರಲು ಸಾಧ್ಯವೇ ಇಲ್ಲ. ಚಿತ್ರ–ವಿಚಿತ್ರ ಕನಸುಗಳ ಬಗ್ಗೆ ನಾವು ಅದೆಷ್ಟೋ ಬಾರಿ ಕೇಳಿರುತ್ತೇವೆ. ಕೆಲವು ಕನಸುಗಳಿಗೆ ಅರ್ಥವಿರುತ್ತದೆ ಎಂದು ಹೇಳುತ್ತಾರೆ. ಅದು ಭವಿಷ್ಯದಲ್ಲಿ ಸಂಭವಿಸಬಹುದಾದ ಘಟನೆಗಳ ಎಚ್ಚರಿಕೆ ಇರಬಹುದು ಅಥವಾ ಸಂತಸದ ಸುದ್ದಿಯೂ ಆಗಿರಬಹುದು. ಕೆಲವರಿಗೆ ತಾವು ಗರ್ಭಿಣಿಯಾದಂತ ಕನಸು ಬೀಳುತ್ತದೆಯಂತೆ. ಗರ್ಭಧಾರಣೆಗೆ ಸಂಬಂಧಿಸಿದ ಕನಸು ಅದರ ಬಗ್ಗೆ ನಿಮಗಿರುವ ಅಭಿಪ್ರಾಯವನ್ನು ಅವಲಂಬಿಸಿ ಸಂತೋಷ, ಭಯ ಅಥವಾ ಹತಾಷೆ ಭಾವನೆಗಳನ್ನುಂಟು ಮಾಡಬಹುದು. ಅದೇನೇ ಇರಲಿ, ಪ್ರತಿಯೊಂದು ಕನಸಿಗೂ ಅದರದೇ ಆದ ಹಲವು ಅರ್ಥಗಳನ್ನು ಹೇಳಲಾಗುತ್ತದೆ. ಕನಸುಗಳು ನಮ್ಮ ಮನಸ್ಸು ಮತ್ತು ಭಾವನೆಗಳ ಸಾಂಕೇತಿಕ ನಿರೂಪಣೆ ಎಂದು ಹೇಳಬಹುದು.

ಗರ್ಭಿಣಿಯಾಗಿರುವ ಕನಸಿನ ಹಿಂದಿರುವ ಅರ್ಥ ತಿಳಿಯುವ ಮೊದಲು ಈಗಿರುವ ನಿಮ್ಮ ಜೀವನವನ್ನು ಅವಲೋಕಿಸುವುದು ಮುಖ್ಯವಾಗಿದೆ. ನೀವು ಕುಟುಂಬದೊಂದಿಗೆ ಮನೆಯಲ್ಲಿ ಸುರಕ್ಷಿತವಾಗಿದ್ದೀರಾ ಅಥವಾ ಒಂಟಿಯಾಗಿದ್ದೀರಾ? ಗರ್ಭಧಾರಣೆಯ ಬಗ್ಗೆ ನಿಮ್ಮಲ್ಲಿ ಸಂತೋಷ ಅಥವಾ ಭಯವಿದೆಯಾ? ಮುಂತಾದ ವಿಷಯಗಳನ್ನು ನೀವು ಅರಿತಾಗ ನಿಮ್ಮ ಕನಸನ್ನು ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ.

ಗರ್ಭಿಣಿಯಾದ ಕನಸು ಕಾಣುವುದರ ಹಿಂದೆ ಇರುವ 14 ಅರ್ಥಗಳು

1) ಹೊಸ ಪ್ರಾರಂಭ: ಗರ್ಭಣಿಯಾಗಿರುವ ಕನಸು ಕೆಲವೊಮ್ಮೆ ನಿಮ್ಮ ಜೀವನದಲ್ಲಿ ಏನೋ ಹೊಸತು ಪ್ರಾರಂಭವಾಗುತ್ತಿದೆ ಎಂಬುದನ್ನು ಸೂಚಿಸಬಹುದು. ನೀವು ಗರ್ಭಾವಸ್ಥೆಯ ಮೊದಲ ಹಂತದಲ್ಲಿದ್ದೀರಿ ಎಂಬುದನ್ನೂ ಕೂಡಾ ಇದು ಹೇಳಬಹುದು.

2) ಜೀವನದಲ್ಲಿ ಸೆಟಲ್‌ ಆಗಬಹುದು: ಕನಸಿನಲ್ಲಿ ಗರ್ಭಿಣಿಯಾದಂತೆ ಕಾಣುವುದರ ಅರ್ಥ ನೀವು ಮುಂದೆ ಜೀವನದಲ್ಲಿ ಸೆಟಲ್‌ ಆಗಲಿದ್ದೀರಿ ಎಂಬುದನ್ನು ಸೂಚಿಸಬಹುದು. ಇದರ ಅರ್ಥ ನೀವು ಗರ್ಭಿಣಿಯಾಗಲು ತಯಾರಾಗಿದ್ದೀರಿ ಎಂದಲ್ಲ, ಬದಲಿಗೆ ನೀವು ಮನೆ ಅಥವಾ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಲು ತಯಾರಾಗಿದ್ದೀರಿ ಎಂದು. ನೀವು ನಿಮ್ಮ ಸಂಗಾತಿಯೊಂದಿಗೆ ಹೊಸ ಜೀವನ ಪ್ರಾರಂಭಿಸಬಹುದು ಎಂಬುದನ್ನು ಕೂಡ ಈ ಕನಸು ಹೇಳುತ್ತದೆ.

3) ಗರ್ಭಪಾತದ ಮುನ್ಸೂಚನೆ ಆಗಿರಬಹುದು: ಗರ್ಭಧಾರಣೆಯ ಕನಸು ಗರ್ಭಪಾತ, ಮಗುವನ್ನು ಕಳೆದುಕೊಳ್ಳುವುದು ಮುಂತಾದವುಗಳನ್ನು ಸೂಚಿಸುವ ಮುನ್ಸೂಚನೆಯೂ ಆಗಿರಬಹುದು.

4) ಮನದಾಳದ ಭಾವನೆ ಹೊರಹಾಕಬಹುದು: ಕನಸಿನಲ್ಲಿ ಹೆರಿಗೆ ನೋವು ಅನುಭವಿಸಿದಂತೆ ಕಂಡರೆ ಅದರ ಅರ್ಥ ನೀವು ಭಾವನಾತ್ಮಕವಾಗಿ ಕೆಲಸ ಮಾಡಲಿದ್ದೀರಿ ಎಂಬುದ ಇದರ ಅರ್ಥ.

5) ಹೊಸ ವ್ಯಕ್ತಿತ್ವ ಬೆಳೆಸಿಕೊಳ್ಳುವುದು: ಗರ್ಭಿಣಿಯಾದಂತೆ ಕನಸು ಕಾಣುವುದರ ಹಿಂದಿನ ಅರ್ಥ ನೀವು ಈ ಜಗತ್ತಿಗೆ ತೋರಿಸುವಂತಹ ಹೊಸ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲಿದ್ದೀರಿ ಎಂಬುದಾಗಿದೆ. ನಿಮ್ಮ ಜೀವನದಲ್ಲಿ ನಡೆದ ಆಘಾತಗಳಿಂದ ಹೊರಬರುವುದನ್ನು ಸೂಚಿಸಬಹುದು.

6) ಭಯವನ್ನು ಹೊರಹಾಕಬಹುದು: ಒತ್ತಡದ ದಿನಗಳಲ್ಲಿ ನೀವು ಯಾವುದೋ ಒಂದು ವಿಷಯದಿಂದ ಭಯಗೊಂಡಿದ್ದರೆ ಅಥವಾ ಆ ವಿಷಯವನ್ನು ನೀವು ದೂರವಿಡಲು ಪ್ರಯತ್ನಿಸುತ್ತಿದ್ದರೆ ನಿಮಗೆ ಆಗುವ ಭಯವನ್ನು ಇದು ತೋರಿಸಬಹುದು.

7) ಹೊಸ ಜವಾಬ್ದಾರಿ: ಗರ್ಭಾವಸ್ಥೆಯ ಕನಸು ನಿಮ್ಮ ಹೊಸ ಜವಾಬ್ದಾರಿಯನ್ನು ಪ್ರತಿನಿಧಿಸಬಹುದು. ಮಗುವಿನ ಲಾಲನೆ ಪಾಲನೆಗೆ ಸಂಬಂಧಿಸಿಲ್ಲದಿದ್ದರೂ ಹೊಸ ಜವಾಬ್ದಾರಿ ನಿಮ್ಮ ಪಾಲಿಗೆ ಬರಲಿದೆ ಎಂಬುದನ್ನು ಸೂಚಿಸಬಹುದು.

8) ಗರ್ಭಪಾತದ ನೆನಪು: ದುರದೃಷ್ಟವಶಾತ್‌ ನಿಮಗೆ ಗರ್ಭಪಾತವಾಗಿದ್ದರೆ ಆಗ ಈ ರೀತಿಯ ಕನಸು ಕಾಣುವುದರಲ್ಲಿ ಆಶ್ಚರ್ಯವೇನಿಲ್ಲ. ಇದು ನಿಮ್ಮ ಮನಸ್ಸಿನಲ್ಲಿ ಸುಪ್ತವಾಗಿರುವ ಭಯ ಅಥವಾ ಚಿಂತೆಗಳ ಮೂಲಕ ಬರಬಹುದು. ಅಷ್ಟೇ ಅಲ್ಲದೇ ಗರ್ಭಪಾತದ ನಂತರ ಮತ್ತೆ ಗರ್ಭಿಣಿಯಾದಾಗಲೂ ಈ ರೀತಿಯ ಹಳೆಯ ನೆನಪುಗಳು ಕನಸಿನ ರೂಪದಲ್ಲಿ ಬರಬಹುದು.

9) ಜವಾಬ್ದಾರಿಯನ್ನು ನೆನಪಿಸಬಹುದು: ನೀವು ಧೀಡೀರ್‌ ಎಂದು ಗರ್ಭಿಣಿಯಾದಂತೆ ಕನಸು ಕಂಡರೆ, ಅಥವಾ ನಿಮ್ಮ ಗರ್ಭಧಾರಣೆಯ ಬಗ್ಗೆ ನಿಮಗೆ ತಿಳಿದಿರದಿದ್ದರೆ ಆಗ ಈ ರೀತಿಯ ಕನಸುಗಳು ನಿಮ್ಮ ಜವಾಬ್ದಾರಿಯನ್ನು ನೆನಪು ಮಾಡಿಕೊಳ್ಳಬೇಕು ಎಂಬುದನ್ನು ಅದು ಸೂಚಿಸಬಹುದು.

10) ತಾಯಿಯಾಗಲು ಸಿದ್ಧರಿರುವ ಸೂಚನೆ: ಮಗುವಿಗೆ ಏನೋ ಅಪಾಯವಾಗಿದೆ ಎಂಬ ದುಃಸ್ವಪ್ನಗಳು ಆಗಷ್ಟೆ ತಾಯಿಯಾದವರಲ್ಲಿ ಸಾಮಾನ್ಯ. ಹೆರಿಗೆಯ ನಂತರ ಮಹಿಳೆಯರು ಭಾವನಾತ್ಮಕವಾಗಿ ಆತಂಕವನ್ನು ಹೊರಹಾಕಲು ಈ ರೀತಿಯ ಕನಸು ಕಾಣುತ್ತಾರೆ ಎಂದು 2007 ರಲ್ಲಿ ನಡೆದ ಸಂಶೋಧನೆಯೊಂದು ವರದಿ ಮಾಡಿದೆ. ಅದೇ ರೀತಿ ಗರ್ಭಿಣಿಯಾದಂತೆ ಕನಸು ಬಿದ್ದರೆ ಅದು ನೀವು ತಾಯಿಯಾಗಲು ಸಿದ್ಧರಿದ್ದೀರಿ ಎನ್ನುವುದನ್ನು ಸಹ ಸೂಚಿಸಬಹುದು.

11) ಸದ್ಯದಲ್ಲೇ ನಿಮ್ಮ ಆಸೆ ಈಡೇರಲಿದೆ: ಕನಸಿನಲ್ಲಿ ಪ್ರಸವವಾಗುತ್ತಿರುವುದನ್ನು ಕಂಡರೆ ಆ ಸಮಯ ಹತ್ತಿರವಾಗುತ್ತಿದೆ ಅಥವಾ ತಾಯಿಯಾಗುವ ನಿಮ್ಮ ಆಸೆ ಸದ್ಯದಲ್ಲೇ ಪೂರ್ಣಗೊಳ್ಳಲಿದೆ ಎಂಬುದನ್ನು ಸೂಚಿಸುತ್ತದೆ.

12) ಪೋಷಕರಾಗಲು ಸಿದ್ಧರಾಗಿದ್ದೀರಿ: ಕೆಲವೊಮ್ಮೆ ಕನಸುಗಳು ಸರಳ ವಿವರಣೆಯನ್ನು ನೀಡುತ್ತವೆ. ನೀವು ಗರ್ಭಿಣಿಯಾದ ಕನಸಿನ ಹಿಂದೆ ನೀವು ಪೋಷಕರಾಗಲು ಸಿದ್ಧರಾಗಿದ್ದೀರಿ ಎಂಬುದನ್ನು ಸೂಚಿಸುತ್ತದೆ.

13) ಸಮಯ ಕಳೆದು ಹೋಗುವ ಭಯ: ಗರ್ಭಿಣಿಯಾಗುವ ಕನಸು ಕಾಣುವ ವ್ಯಕ್ತಿಯ ವಯಸ್ಸಿನ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ವಯಸ್ಸು ಮೀರಿದ್ದರೆ ಈ ರೀತಿಯ ಕನಸುಗಳು ನೀವು ಪೋಷಕರಾಗುವ ಸಮಯವನ್ನು ದಾಟಿ ಬಂದಿದ್ದೀರಿ ಎಂಬುದನ್ನು ಸೂಚಿಸುತ್ತದೆ. ಇದು ನಿಮ್ಮ ಚಿಂತೆಗೂ ಕಾರಣವಾಗಿರಬಹುದು.

14) ಇನ್ನೂ ಸಿದ್ಧರಾಗಿಲ್ಲ: ಗರ್ಭಧಾರಣೆಗೆ ಸಂಬಂಧಿಸಿದ ಕನಸುಗಳು ಯಾವಾಗಲೂ ಸಕಾರಾತ್ಮಕವಾಗಿಯೇ ಇರುವುದಿಲ್ಲ. ಅದು ಗರ್ಭಿಣಿಯಾಗಲು ಇಷ್ಟಪಡದವರಲ್ಲಿ ಈ ರೀತಿಯ ಕನಸು ಕಾಣುವ ಸಾಧ್ಯತೆಯಿದೆ. ಅವರು ಆ ಸಮಯದಲ್ಲಿ ಬದಲಾವಣೆಗೆ ಇನ್ನೂ ಸಿದ್ಧರಾಗಿಲ್ಲ ಎಂದೂ ಸೂಚಿಸಬಹುದು.