ಅಯ್ಯಪ್ಪ, ಷಣ್ಮುಖ ದೇವರ ನೈವೇದ್ಯಕ್ಕೆ ಶ್ರೇಷ್ಠ ಈ ಅಪ್ಪಂ: ಕಾರ್ತಿಕ ಮಾಸ ಮುಗಿಯುವ ಮೊದಲೇ ಮನೆಯಲ್ಲೊಮ್ಮೆ ಮಾಡಿ, ಮಕ್ಕಳಿಗೂ ಇಷ್ಟವಾಗುತ್ತೆ
ಕಾರ್ತಿಕ ಮಾಸದಲ್ಲಿ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮಣಿಕಂಠನಿಗೆ ಇಷ್ಟವಾಗುವ ನೈವೇದ್ಯಗಳನ್ನು ಮಾಡಿ ಬಡಿಸುವ ಸಂಪ್ರದಾಯವೂ ಇದೆ. ಇಂತಹ ಭಕ್ಷ್ಯಗಳಲ್ಲಿ ಅಪ್ಪಂ ಕೂಡ ಒಂದು. ಈಗ ಕಾರ್ತಿಕ ಮಾಸ ನಡೆಯುತ್ತಿದ್ದು, ಈ ತಿಂಗಳು ಮುಗಿಯವ ಮುನ್ನವೇ ಮನೆಯಲ್ಲಿ ಒಮ್ಮೆ ಅಪ್ಪಂ ಮಾಡಿ. ಇದು ಮಕ್ಕಳಿಗೂ ಇಷ್ಟವಾಗುತ್ತದೆ. ಇದನ್ನು ಮಾಡೋದು ಹೇಗೆ, ವಿವರ ಇಲ್ಲಿದೆ
ಅಪ್ಪಂ ಇದು ಕೇರಳ ಮೂಲದ ಸಿಹಿತಿನಿಸು. ಹಲವು ದೇವರಿಗೆ ಇಷ್ಟವಾಗುವ ಭ್ಯಕ್ಷವಿದು. ಶೀಕೃಷ್ಣ, ಅಯ್ಯಪ್ಪಸ್ವಾಮಿಗೆ ಅಪ್ಪಂ ನೈವೇದ್ಯ ಮಾಡಲಾಗುತ್ತದೆ. ಕರ್ನಾಟಕದ ಕೆಲವು ದೇವಾಯಲಗಳಲ್ಲೂ ಅಪ್ಪಂ ಅನ್ನು ಪ್ರಸಾದ ರೂಪದಲ್ಲಿ ನೀಡುವುದನ್ನು ನೀವು ನೋಡಿರಬಹುದು.
ಕಾರ್ತಿಕ ಮಾಸದಲ್ಲಿ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ಈ ಸಮಯದಲ್ಲಿ ಅಯ್ಯಪ್ಪನಿಗೆ ಅಪ್ಪಂ ಮಾಡಿ ನೈವೇದ್ಯ ಮಾಡುವ ಸಂಪ್ರದಾಯ ಕೆಲವು ಕಡೆ ಇದೆ. ಈ ತಿನಿಸು ಮಕ್ಕಳಿಗೂ ತುಂಬಾನೇ ಇಷ್ಟವಾಗುತ್ತದೆ. ಸದ್ಯ ಕಾರ್ತಿಕ ಮಾಸ ನಡೆಯುತ್ತಿದ್ದು, ಈ ತಿಂಗಳು ಮುಗಿಯುವ ಮುನ್ನ ಮನೆಯಲ್ಲಿ ಒಮ್ಮೆ ಅಪ್ಪಂ ಮಾಡಿ. ಇದು ನಿಮ್ಮ ಮನೆಮಂದಿಗೆಲ್ಲಾ ಇಷ್ಟವಾಗುವುದು ಖಂಡಿತ. ಹಾಗಾದರೆ ಅಪ್ಪಂ ತಯಾರಿಸಲು ಏನೆಲ್ಲಾ ಬೇಕು, ಇದನ್ನು ತಯಾರಿಸುವುದು ಹೇಗೆ ಇಲ್ಲಿದೆ ಮಾಹಿತಿ.
ಅಪ್ಪಂ ರೆಸಿಪಿ
ಬೇಕಾಗುವ ಸಾಮಗ್ರಿಗಳು: ಗೋಧಿಹಿಟ್ಟು – 1ಕಪ್, ಅಕ್ಕಿಹಿಟ್ಟು – 2 ಚಮಚ, ಬೆಲ್ಲ – ಅರ್ಧ ಕಪ್, ತೆಂಗಿನತುರಿ – 1ಚಮಚ, ಏಲಕ್ಕಿ ಪುಡಿ – ಚಿಟಿಕೆ, ಬಾಳೆಹಣ್ಣು – 1, ಎಣ್ಣೆ – ಕರಿಯಲು, ತುಪ್ಪ – 1 ಚಮಚ
ಅಪ್ಪಂ ತಯಾರಿಸುವ ವಿಧಾನ
ದಪ್ಪ ತಳದ ಪಾತ್ರೆಗೆ ಬೆಲ್ಲ ಹಾಕಿ ಅದಕ್ಕೆ ಕಾಲು ಕಪ್ ನೀರು ಸೇರಿಸಿ. ಬೆಲ್ಲ ಚೆನ್ನಾಗಿ ಕರುಗುವವರೆಗೂ ಕುದಿಸಿ. ಬೆಲ್ಲವನ್ನು ಒಮ್ಮೆ ಸೋಸಿ ಕಸದ ಅಂಶವನ್ನು ಹೊರಹಾಕಿ. ಈಗ ಗೋಧಿಹಿಟ್ಟು, ಅಕ್ಕಿಹಿಟ್ಟು,ತೆಂಗಿನತುರಿ, ಏಲಕ್ಕಿಯನ್ನು ಒಂದು ಪಾತ್ರೆಗೆ ಹಾಕಿ. ಸೋಸಿಕೊಂಡ ಬೆಲ್ಲದ ಪಾಕವನ್ನು ಪುನಃ 3 ರಿಂದ 4 ನಿಮಿಷ ಕುದಿಯಲು ಬಿಡಿ. ಕಳಿತ ಬಾಳೆಹಣ್ಣನ್ನು ಪ್ಯೂರಿ ಮಾಡಿಟ್ಟುಕೊಳ್ಳಿ. ಈ ಮೊದಲೇ ಮಾಡಿಟ್ಟುಕೊಂಡ ಹಿಟ್ಟಿನ ಮಿಶ್ರಣಕ್ಕೆ ಬಾಳೆಹಣ್ಣಿನ ಪ್ಯೂರಿ ಹಾಗೂ ಬೆಲ್ಲದ ನೀರು ಸೇರಿಸಿ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ. ಕೊನೆಯಲ್ಲಿ ತುಪ್ಪ ಸೇರಿಸಿ ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಮಿಶ್ರಣ ಸ್ವಲ್ಪ ದಪ್ಪವಾಗಿರಬೇಕು.
ನಂತರ ಇನ್ನೊಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ. ಎಣ್ಣೆ ಬಿಸಿಯಾದ ಮೇಲೆ ಸಣ್ಣ ಲೋಟದಲ್ಲಿ ಹಿಟ್ಟು ಹಾಕಿ ಇದನ್ನು ಎಣ್ಣೆಗೆ ಬಿಡಿ. ಇದನ್ನು ಎಣ್ಣೆಯಲ್ಲಿ ಎರಡೂ ಬದಿ ಚೆನ್ನಾಗಿ ಕರಿಯಿರಿ. ಅಪ್ಪಂ ಕಂದುಗೆಂಪು ಬಣ್ಣಕ್ಕೆ ತಿರುಗಬೇಕು. ಈ ಅಪ್ಪಂ ಅನ್ನು ಬಿಸಿಯಿದ್ದಾಗಲೇ ತಿನ್ನಬಹುದು. ಆದರೆ ಮರುದಿನ ತಿಂದರೆ ಅದರ ರುಚಿಯೇ ಬೇರೆ. ಇದನ್ನು ಗಾಳಿಯಾಡದ ಡಬ್ಬಿಯಲ್ಲಿ ಹಾಕಿ 2,3 ದಿನ ಇಟ್ಟು ತಿನ್ನಬಹುದು.
ವಿಭಾಗ