ತಮಿಳುನಾಡಿನ ಭಾಷಾ ದುರಭಿಮಾನ, ರಾಜಕೀಯ-ಸಾಂಸ್ಕೃತಿಕ ದ್ವಂದ್ವದ ಚಿತ್ರಣ ಹೀಗಿದೆ; ರಾಜೀವ ಹೆಗಡೆ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ತಮಿಳುನಾಡಿನ ಭಾಷಾ ದುರಭಿಮಾನ, ರಾಜಕೀಯ-ಸಾಂಸ್ಕೃತಿಕ ದ್ವಂದ್ವದ ಚಿತ್ರಣ ಹೀಗಿದೆ; ರಾಜೀವ ಹೆಗಡೆ ಬರಹ

ತಮಿಳುನಾಡಿನ ಭಾಷಾ ದುರಭಿಮಾನ, ರಾಜಕೀಯ-ಸಾಂಸ್ಕೃತಿಕ ದ್ವಂದ್ವದ ಚಿತ್ರಣ ಹೀಗಿದೆ; ರಾಜೀವ ಹೆಗಡೆ ಬರಹ

ರಾಜೀವ ಹೆಗಡೆ ಬರಹ: ತಮಿಳುನಾಡಿನ ಬಹುತೇಕ ಜನ ಶ್ರಮಜೀವಿಗಳು, ಬೇರೆಯವರ ಉಸಾಬರಿಗೆ ಹೋಗುವವರಲ್ಲ. ತಮ್ಮ ಸುದ್ದಿಗೆ ಬಂದರೆ ಸ್ವಲ್ಪ ಒರಟಾಗಿ ವರ್ತಿಸಬಹುದು. ಆದರೆ ಇವರು ಸಂಸ್ಕೃತಿ, ಧರ್ಮ, ಆಚರಣೆ ಬಗ್ಗೆ ಅತಿಯಾದ ಪ್ರೀತಿ, ಗೌರವ ಉಳಿಸಿಕೊಂಡಿದ್ದಾರೆ. ದ್ರಾವಿಡ ರಾಜಕೀಯದ ಹೆಸರಲ್ಲಿ ಧರ್ಮ ಪರಿವರ್ತನೆ ಮಾಡಿದರೂ ನಮ್ಮತನವನ್ನು ಬಿಟ್ಟು ಅಲ್ಲಿಯ ಜನರಿಗೆ ಇರಲಾಗುತ್ತಿಲ್ಲ.

ಕೀಳಡಿ ಮ್ಯೂಸಿಯಂ
ಕೀಳಡಿ ಮ್ಯೂಸಿಯಂ (PC: Facebook/ Rajeev Hegde )

ಕೋಶ ಓದುವುದಕಿಂತ ದೇಶ ಸುತ್ತುವುದರಿಂದ ವಾಸ್ತವ ಅರಿವಾಗುತ್ತದೆ ಎನ್ನುವುದು ತಮಿಳುನಾಡು ಪ್ರವಾಸದಲ್ಲಿ ಮತ್ತೆ ನನ್ನ ಮಟ್ಟಿಗೆ ಸಾಬೀತಾಯಿತು. ಆದರೆ ತಮಿಳುನಾಡಿನ ಭಾಷಾ ದುರಾಭಿಮಾನ ಹಾಗೂ ರಾಜಕೀಯ-ಸಾಂಸ್ಕೃತಿಕ ದ್ವಂದ್ವದಲ್ಲಿ ಮಾತ್ರ ಯಾವುದೇ ವ್ಯತ್ಯಾಸ ಕಾಣಿಸಲಿಲ್ಲ. ತಮಿಳುನಾಡಿನ ಬಗ್ಗೆ ಇದ್ದ ಇತರ ಸಾಕಷ್ಟು ನೆಗೆಟಿವ್‌ ಅಂಶಗಳು ಒಂದು ಪ್ರವಾಸದಿಂದ ದೂರವಾಯಿತು. ಆದರೆ ಮೇಲೆ ಉಲ್ಲೇಖಿಸಿದ ಎರಡು ವಿಚಾರಕ್ಕೆ ಸಂಬಂಧಿಸಿ ನನ್ನ ಅಭಿಪ್ರಾಯ ಇನ್ನಷ್ಟು ಗಟ್ಟಿಯಾಯಿತು.

ಶ್ರೀರಂಗಂ, ರಾಮೇಶ್ವರಂ ಹಾಗೂ ಮಧುರೈಗೆ ಭೇಟಿ ನೀಡಿದ್ದ ನನಗೆ, ದೇವಾಲಯದೊಳಗೆ ಅಲ್ಲಿಯ ಅವ್ಯವಸ್ಥೆ ನೋಡಿ ತುಂಬಾ ಬೇಸರವಾಗಿತ್ತು. ತಮಿಳುನಾಡು ಸರ್ಕಾರಕ್ಕೆ ನಮ್ಮ ಆಚರಣೆ ಹಾಗೂ ಧರ್ಮದ ಬಗ್ಗೆ ಎಷ್ಟು ದ್ವೇಷವಿದೆ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿತ್ತು. ದೇವಾಲಯದ ಸಿಬ್ಬಂದಿಯಿಂದ ಹಿಡಿದು, ಅಲ್ಲಿರುವ ಯಾರಿಗೂ ಹಣ ದೋಚುವ ಕೆಲಸ ಬಿಟ್ಟು ಉಳಿದಿರುವುದರಲ್ಲಿ ಆಸಕ್ತಿಯೇ ಇಲ್ಲ. 100 ದರ್ಶನ, 500 ದರ್ಶನದ ಬಗ್ಗೆ ಮಾತ್ರ ಭಕ್ತರ ಬಳಿ ಸಿಬ್ಬಂದಿ ಮಾತನಾಡುತ್ತಾರೆ. ಉಳಿದಂತೆ ದೇವಾಲಯದ ಇತಿಹಾಸ, ವಾಸ್ತುಶಿಲ್ಪಗಳ ಹಿನ್ನೆಲೆ ಹಾಗೂ ವೈಭವದ ಬಗ್ಗೆ ಸಣ್ಣ ಮಾಹಿತಿ ಕೂಡ ದೊರೆಯುವುದಿಲ್ಲ. ಅರೆಬೆಂದ ಗೈಡ್‌ಗಳು ಕೂಡ ಸಿಗುವುದಿಲ್ಲ. ಕೊನೆಯ ಪಕ್ಷ ಒಂದು ಉತ್ತಮ ಸೂಚನಾ ಫಲಕವನ್ನೂ ಹಾಕಿರುವುದಿಲ್ಲ. ಇರುವ ಬಹುತೇಕ ಸೂಚನಾ ಫಲಕಗಳು ತಮಿಳು ಭಾಷೆಯಲ್ಲಿರುತ್ತವೆ. ದೇವಾಲಯದೊಳಗೆ ಮೊಬೈಲ್‌ ನಿಷೇಧ ಇರುವುದರಿಂದ ಗೂಗಲ್‌ ಲೆನ್ಸ್‌ ಸಹಾಯ ಪಡೆಯಲೂ ಆಗುವುದಿಲ್ಲ.

ಅಂದ್ಹಾಗೆ ಇದು ಕಣ್ತಪ್ಪಿನಿಂದ ಆಗಿರುವ ಪ್ರಮಾದ ಖಂಡಿತವಾಗಿಯೂ ಅಲ್ಲ. ಉದ್ದೇಶಪೂರ್ವಕವಾಗಿ ಅಲ್ಲಿಯ ಸರ್ಕಾರ ಮಾಡಿರುವ ಕೆಲಸವಿದು ಎನಿಸುತ್ತದೆ. ಭಕ್ತರಿಗೆ ದೇವಾಲಯದಲ್ಲಿ ಸರಿಯಾದ ಪ್ರಸಾದ ವಿತರಣೆಯಗೂ ವ್ಯವಸ್ಥೆ ಮಾಡುವುದಿಲ್ಲ. ಹೀಗಾಗಿ ಆ ಪ್ರದೇಶದ ಮೇಲೆ ಒಳ್ಳೆಯ ಭಾವನೆ ಮೂಡಬಾರದು ಹಾಗೂ ಹೊಸಬರಿಗೆ ಹೆಚ್ಚುವರಿ ಮಾಹಿತಿ ಸಿಗಬಾರದು ಎನ್ನುವ ಪ್ರಯತ್ನ ಕೂಡ ಆಗಿರಬಹುದು ಎಂದು ಹೊರಗಿನಿಂದ ಹೋದವನಿಗೆ ಎನಿಸುತ್ತದೆ. ಅನ್ಯ ಉದ್ದೇಶಗಳಿದ್ದರೆ ಯಾರಾದರು ನನ್ನ ಅಭಿಪ್ರಾಯವನ್ನು ಸರಿಪಡಿಸಿ.

ಇದಕ್ಕೆ ಪೂರಕವಾಗಿ ಇಲ್ಲಿಯ ಐತಿಹಾಸಿಕ ದೇವಾಲಯಗಳಲ್ಲಿನ ಅದೆಷ್ಟೋ ಪ್ರಮುಖ ಶಿಲ್ಪ ಹಾಗೂ ಸಂಬಂಧಿಸಿದ ಶಾಸನಗಳು ನಾಶವಾಗುತ್ತಿದ್ದಾಗಲೂ ತಮಿಳುನಾಡು ಸರ್ಕಾರ ಮೌನವಾಗಿಯೇ ಇತ್ತಂತೆ. ಇಲ್ಲಿಯವರೆಗಿನ ಕೇಂದ್ರ ಸರ್ಕಾರಕ್ಕೂ ಅಷ್ಟೊಂದು ಆಸಕ್ತಿ ಇರಲಿಲ್ಲವಂತೆ. ತಂಜಾವೂರಿನ ನನ್ನ ಸ್ನೇಹಿತನೊಬ್ಬನೇ ಹೇಳಿದಂತೆ, ದೇವಾಲಯಕ್ಕೆ ಬಣ್ಣ ಬಡಿಯಬೇಡಿ, ದೇವಾಲಯದೊಳಗಿನ ಶಾಸನಗಳನ್ನು ರಕ್ಷಿಸಿ ಎಂದು ಹೋರಾಟ ಮಾಡಿದರೆ ಸರ್ಕಾರದಲ್ಲಿ ಕಿವಿ ಹಾಕುವವರೇ ಇರಲಿಲ್ಲವಂತೆ. ಆದರೆ ತಮಿಳುನಾಡು ಸರ್ಕಾರಕ್ಕೆ ತನ್ನ ಇತಿಹಾಸದ ಬಗ್ಗೆ ಆಸಕ್ತಿಯಿಲ್ಲವೆಂದಲ್ಲ, ಸೆಲೆಕ್ಟಿವ್‌ ಆಗಿದ್ದಾರಷ್ಟೆ. ಮಧುರೈ ದೇವಾಲಯದಲ್ಲಿ ಹೊಸದಾಗಿ ಕೆಲ ಕಂಬಗಳನ್ನು ನಿರ್ಮಿಸಿದ್ದಾರೆ. ಅಲ್ಲಿ ತೋರಿರುವ ನಿರ್ಲಕ್ಷ್ಯವು ಕೀಳಡಿ ಮ್ಯೂಸಿಯಂನಲ್ಲಿ ಕಾಣಿಸುವುದಿಲ್ಲ.

ಕೀಳಡಿ(Keeladi) ಎನ್ನುವ ಹೊಸ ರಾಜಕೀಯ ಕೇಂದ್ರ

ಉತ್ತರ, ದಕ್ಷಿಣದ ಮಧ್ಯೆ ಕಂದಕ ಸೃಷ್ಟಿಸಿ, ದೇಶದೊಳಗೆ ಬಿರುಕನ್ನು ಸೃಷ್ಟಿಸುವಲ್ಲಿ ತಮಿಳುನಾಡಿನ ದ್ರಾವಿಡ ರಾಜಕೀಯ ಮೊದಲಿನಿಂದಲೂ ಪ್ರಯತ್ನ ಮಾಡುತ್ತಿದೆ. ಪ್ರತ್ಯೇಕ ರಾಷ್ಟ್ರದವರೆಗೂ ಈ ಮಾತು ಹೋಗಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ಇಂತಹ ಎಡಪಂಥೀಯರ ಹೊಸ ರಾಜಕೀಯ ತಾಣವೇ ಕೀಳಡಿ. ಮಧುರೈಗೆ ಹತ್ತಿರದಲ್ಲೇ ಈ ಊರಿದೆ. ತಮಿಳುನಾಡು ಪುರಾತತ್ವ ಇಲಾಖೆಯು ಕೀಳಡಿಯಲ್ಲಿ ಒಂದು ವಸ್ತು ಸಂಗ್ರಹಾಲಯ ಮಾಡಿದೆ. ಈ ಊರಿನಲ್ಲಿ ಉತ್ಖನನ ಮಾಡಿದ ಸಾವಿರಾರು ವಸ್ತುಗಳನ್ನು ಇಲ್ಲಿ ಇರಿಸಲಾಗಿದೆ. ತಮಿಳುನಾಡು ಸರ್ಕಾರ ಹೇಳಿಕೊಳ್ಳುವಂತೆ ಎರಡೂವರೆ ಸಾವಿರ ವರ್ಷಗಳ ಹಿಂದೆ ವೈಗೈ ನದಿಯ ತಪ್ಪಲಿನ ಈ ಹಳ್ಳಿಯಲ್ಲಿ ಅಭಿವೃದ್ಧಿ ಹೊಂದಿದ ನಗರವಿತ್ತು ಎನ್ನುವ ವಾದವನ್ನು ದಾಖಲೆ ಸಮೇತ ಮಂಡಿಸಲಾಗಿದೆ. ಆಯ್ದ ವಸ್ತುಗಳಿಗೆ ಸಂಬಂಧಿಸಿ ಕಾರ್ಬನ್‌ ಡೇಟಿಂಗ್‌ ಅಧ್ಯಯನ ಕೂಡ ನಡೆದಿದೆ. ಆ ಪ್ರಕಾರ 2600 ವರ್ಷಗಳ ಹಿಂದಿನ ವಸ್ತುಗಳು ಸಿಕ್ಕಿವೆ.

ಈ ಉತ್ಖನನದಲ್ಲಿ ಭಾಗಿಯಾಗಿದ್ದ ಡಾ.ಪಿಜೆ ಚೆರಿಯನ್‌ ಅವರು ಹೀಗೆ ಹೇಳುತ್ತಾರೆ, ʼತಮಿಳುನಾಡಿನ ಸಮಕಾಲೀನ ತಾಣಗಳಿಂದ ದೊರೆತ ವಸ್ತುಗಳು, ಪುರಾವೆಗಳು ತಮಿಳಿನ ಆರಂಭಿಕ ಅಭಿವ್ಯಕ್ತಿಗಳನ್ನು ಪ್ರತಿನಿಧಿಸುತ್ತ, ಕೀಳಡಿ ಉತ್ಖನನಗಳಲ್ಲಿ ಇದುವರೆಗೆ ದೊರೆತಿರುವ ಆಧಾರಗಳಲ್ಲಿ ಯಾವುದೇ ಧಾರ್ಮಿಕ ಸಂಕೇತಗಳು ಕಂಡುಬಂದಿಲ್ಲʼ. ತಮಿಳುನಾಡು ಹಾಗೂ ನಮ್ಮ ದಕ್ಷಿಣವನ್ನು ಧಾರ್ಮಿಕ ನೆಲಗಟ್ಟಿನಿಂದ ದೂರವಿಡಬೇಕು ಎನ್ನುವ ಕಥಾವಸ್ತುವನ್ನು ತಯಾರಿಸಿಕೊಂಡೇ ಉತ್ಖನನ ಮಾಡುತ್ತಿರಬಹುದು ಅಥವಾ ಉದ್ದೇಶಪೂರ್ವಕವಾಗಿ ಕೆಲವನ್ನು ಮುಚ್ಚಿಡುವ ಕೆಲಸ ಮಾಡುತ್ತಿರಬಹುದು ಎನ್ನುವ ಸಂದೇಹ ಮೂಡುತ್ತದೆ. ಹಾಗೆಯೇ ಅಲ್ಲಿರುವ ಕೆಲವು ವಸ್ತುಗಳನ್ನು ನೋಡಿದಾಗ ಸ್ವಲ್ಪ ಉತ್ಪ್ರೇಕ್ಷೆ ಕಾಣಿಸುತ್ತದೆ. ಅದರ ಬಗ್ಗೆ ನನ್ನ ತಲೆಯಲ್ಲಿ ಮೂಡಿರುವ ಇನ್ನಷ್ಟು ಸಂದೇಹಗಳ ಬಗ್ಗೆ ಮಾತನಾಡುವಷ್ಟು ನಾನು ಇತಿಹಾಸದ ಬಗ್ಗೆ ಓದಿಕೊಂಡಿಲ್ಲ. ಹೀಗಾಗಿ ತುಂಬಾ ಬರೆದರೆ ಇತಿಹಾಸಕ್ಕೆ ಮಾಡುವ ಅಪಚಾರವಾಗಬಹುದು. ಆದರೆ ತಮಿಳುನಾಡು ಸರ್ಕಾರವು, ತಾನು ನಂಬಿರುವ ವಿಚಾರವನ್ನು ಜನರಿಗೆ ತನ್ನದೇ ಕನ್ನಡಕದ ಮೂಲಕ ತಿಳಿಸಲು ಮಾಡಿರುವ ಪ್ರಯತ್ನ ತುಂಬಾ ಅಚ್ಚುಕಟ್ಟಾಗಿದೆ. ಭಾರತದ ಬಗ್ಗೆ ಭಾಷಣ ಮಾಡುವ ಇತರರು ಕೂಡ ಅಧಿಕಾರದಲ್ಲಿದ್ದಾಗ ತಾನು ನಂಬಿರುವ ಸತ್ಯಗಳನ್ನು ದಾಖಲೆ ಮೂಲಕ ಇದೇ ರೀತಿ ತೋರಿಸುವ ಪ್ರಯತ್ನವನ್ನು ಮಾಡಬೇಕು. ಹಾಗೆಯೇ ಇತಿಹಾಸಕಾರರು ಮುಚ್ಚಿಟ್ಟಿರುವ ಸತ್ಯಗಳನ್ನು ಬಹಿರಂಗವಾಗಿಯೇ ಬಿಚ್ಚಿಡುವ ಕೆಲಸ ಮಾಡಬೇಕು. ನಮ್ಮ ದುರಾದೃಷ್ಟವೆಂದರೆ ದಶಕಗಳ ಬಳಿಕವೂ ನಮ್ಮ ಭವ್ಯ ಇತಿಹಾಸವನ್ನು ಕೆಲವರ ಉಪನ್ಯಾಸಕ್ಕೆ ಸೀಮಿತವಾಗಿ ಕೇಳಬೇಕಿದೆ. ಬಹಿರಂಗವಾಗಿ ಮ್ಯೂಸಿಯಂ ಹಾಗೂ ಇತರ ಪ್ರಚಾರ ಕೇಂದ್ರಗಳಲ್ಲಿ ಕಾಣಲು ಆಗುತ್ತಿಲ್ಲ.

ಇದೆಲ್ಲ ಕಾರಣದಿಂದ ಕುತೂಹಲ ತಣಿಸಿಕೊಳ್ಳಲು, ಅಲ್ಲಿ ಉತ್ಪ್ರೇಕ್ಷೆಗಳಿದ್ದರೆ ಅದನ್ನು ಬಯಲಿಗೆಳೆಯಲು ಆಸಕ್ತರು, ಇತಿಹಾಸಕಾರರು ಒಮ್ಮೆ ಭೇಟಿ ನೀಡಿ ವೀಕ್ಷಿಸಬೇಕು. ಹಾಗೆಯೇ ಅಧಿಕಾರದಲ್ಲಿದ್ದಾಗಲೂ ಭಾರತದ ಸಂಸ್ಕೃತಿ ಬಗ್ಗೆ ಭಾಷಣ ಮಾಡಿಕೊಂಡೇ ಕಾಲ ಕಳೆಯುವವರು ಕೂಡ ಒಮ್ಮೆ ತಮಿಳುನಾಡಿನ ಆ ಸೈದ್ಧಾಂತಿಕ ನಿಷ್ಠೆಯನ್ನು ಒಮ್ಮೆ ನೋಡಬೇಕು.

ಇದೇ ಕೀಳಡಿ ಮೂಲಕ ತಮಿಳು ರಾಜಕೀಯದ ಇನ್ನೊಂದು ದ್ವಂದ್ವ ಸಾಬೀತಾಯಿತು. ಅವರು ತಮ್ಮ ಇತಿಹಾಸದ ವೈಭವನ್ನು ಹೇಳುವಾಗ ಚೋಳ, ಪಾಂಡ್ಯ, ಮಧುರೈ ಬಗ್ಗೆ ಸಾಕಷ್ಟು ಬಾರಿ ಉಲ್ಲೇಖಿಸುತ್ತಾರೆ. ಆದರೆ ಇದೇ ಚೋಳರು, ಪಾಂಡ್ಯರು ಹಾಗೂ ಮಧುರೈನ ಧಾರ್ಮಿಕ ಹಾಗೂ ಸಂಸ್ಕೃತಿಕ ಜತೆಗಿರುವ ಆಧ್ಯಾತ್ಮಿಕ ಇತಿಹಾಸವನ್ನು ನಯವಾಗಿ ಹಿನ್ನೆಲೆಗೆ ದೂಡುತ್ತಾರೆ. ತಮಿಳುನಾಡಿನ ದ್ರಾವಿಡ ರಾಜಕೀಯದ ಈ ಅಸಹ್ಯವನ್ನು ಜಗತ್ತಿಗೆ ತೋರಿಸಲಾದರೂ ನಾವು ಈ ರಾಜ್ಯಕ್ಕೆ ಭೇಟಿ ನೀಡುತ್ತಿರಬೇಕು. ಆ ಮೂಲಕ ಇತಿಹಾಸವನ್ನು ಅಳಿಸಲು ಬಿಡಬಾರದು. ಇಲ್ಲವಾದಲ್ಲಿ ರಾಮಸೇತು ಆ್ಯಡಮ್‌ ಬ್ರಿಡ್ಜ್‌ ಆದ ವೇಗದಲ್ಲೇ ದೇವಾಲಯಗಳ ಸಾವಿರಾರು ವರ್ಷಗಳ ಇತಿಹಾಸದ ಕೊಂಡಿ ಕಳಚಿಬಿಡಬಹುದು. ತಮಿಳು ಅತ್ಯಂತ ಹಳೆಯ ಭಾಷೆ ಹಾಗೂ ಅತ್ಯದ್ಭುತ ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ನಾಡು ಎನ್ನುವ ಹೆಮ್ಮೆಯನ್ನು ನಾವು ಕೂಡ ಸಂಭ್ರಮಿಸೋಣ. ಆದರೆ ಆ ಭವ್ಯ ಇತಿಹಾಸವನ್ನು ಎಡಪಂಥೀಯ ದ್ರಾವಿಡರಿಗೆ ಬೇಕಾದಂತೆ ಬರೆಯಲು ಹಾಗೂ ಸಂಭ್ರಮಿಸಲು ಬಿಡಬಾರದು.

ಕೊನೆಯದಾಗಿ: ತಮಿಳು ಜನರನ್ನು ಕೂಡ ಕರುಣಾನಿಧಿ, ಸ್ಟಾಲಿನ್‌, ಉಧಯನಿಧಿಯನ್ನು ನೋಡುವ ಕನ್ನಡಕದಲ್ಲಿಯೇ ಕಾಣುವ ಅಗತ್ಯವಿಲ್ಲ. ನಾನು ಗಮನಿಸಿದಂತೆ ಅಲ್ಲಿಯ ಬಹುತೇಕ ಜನರು ಶ್ರಮಜೀವಿಗಳು ಹಾಗೂ ಬೇರೆಯವರ ಉಸಾಬರಿಗೆ ಹೋಗುವವರಲ್ಲ. ತಮ್ಮ ಸುದ್ದಿಗೆ ಬಂದರೆ ಸ್ವಲ್ಪ ಒರಟಾಗಿ ವರ್ತಿಸಬಹುದು, ಆದರೆ ಬಹುತೇಕ ತುಂಬಾ ಒಳ್ಳೆಯ ಜನರು. ಜತೆಗೆ ಸಂಸ್ಕೃತಿ, ಧರ್ಮ, ಆಚರಣೆ ಬಗ್ಗೆ ಅತಿಯಾದ ಪ್ರೀತಿ, ಗೌರವವನ್ನು ಉಳಿಸಿಕೊಂಡಿದ್ದಾರೆ. ದ್ರಾವಿಡ ರಾಜಕೀಯದ ಹೆಸರಲ್ಲಿ ಧರ್ಮ ಪರಿವರ್ತನೆ ಮಾಡಿದರೂ ನಮ್ಮತನವನ್ನು ಬಿಟ್ಟು ಅಲ್ಲಿಯ ಜನರಿಗೆ ಇರಲಾಗುತ್ತಿಲ್ಲ. ಹೀಗಾಗಿಯೇ ನಮ್ಮ ಧರ್ಮಧ್ವಜಗಳು, ಕಾಲ್ನಡಿಗೆ ಹಾಗೂ ಇತರ ಕೆಲ ಆಚರಣೆಗಳು ಧರ್ಮಾಂತರ ಮಾಡಿಸಿಕೊಂಡ ಸಂಸ್ಥೆಗಳ ಆವರಣದಲ್ಲಿ ಕಾಣಸಿಗುತ್ತವೆ. ಒಂದರ್ಥದಲ್ಲಿ ಅಲ್ಲಿಯ ಇತರ ಧರ್ಮೀಯ ಸ್ಥಳಗಳು ಕೂಡ ಕೆಸರೀಣಕರಣಗೊಂಡಿವೆ. ಆಸಕ್ತ ಸಂಘಟನೆಗಳು ರಾಜಕೀಯವನ್ನು ಬದಿಗಿರಿಸಿ, ನಮ್ಮೊಳಗಿನ ಜಾತಿ ವ್ಯವಸ್ಥೆಗೆ ತಿಲಾಂಜಲಿ ಹಾಡಿ ಸರಿಪಡಿಸಿದರೆ ಇನ್ನೊಮ್ಮೆ ಭವ್ಯ ತಮಿಳುನಾಡನ್ನು ನೋಡುವುದು ಅಸಾಧ್ಯವಲ್ಲ.

Whats_app_banner