ಶ್ರೀರಾಮಕೃಷ್ಣ ಪರಮಹಂಸರ ಪ್ರಕಾರ ಗುರು ಎಂದರೆ ಯಾರು, ಅವರು ನೀಡಿದ ವಿವರಣೆಗಳ ಪೈಕಿ 5 ಹೀಗಿವೆ
ಕನ್ನಡ ಸುದ್ದಿ  /  ಜೀವನಶೈಲಿ  /  ಶ್ರೀರಾಮಕೃಷ್ಣ ಪರಮಹಂಸರ ಪ್ರಕಾರ ಗುರು ಎಂದರೆ ಯಾರು, ಅವರು ನೀಡಿದ ವಿವರಣೆಗಳ ಪೈಕಿ 5 ಹೀಗಿವೆ

ಶ್ರೀರಾಮಕೃಷ್ಣ ಪರಮಹಂಸರ ಪ್ರಕಾರ ಗುರು ಎಂದರೆ ಯಾರು, ಅವರು ನೀಡಿದ ವಿವರಣೆಗಳ ಪೈಕಿ 5 ಹೀಗಿವೆ

ಇಂದು ಶಿಕ್ಷಕರ ದಿನಾಚರಣೆ. ಸ್ವಾಮಿ ವಿವೇಕಾನಂದರ ಗುರುಗಳಾದ ಶ್ರೀರಾಮಕೃಷ್ಣ ಪರಮಹಂಸರು ಗುರು ಎಂದರೆ ಯಾರು ಎಂಬ ವಿವರಣೆಯನ್ನು ಹಲವು ಸಂದರ್ಭಗಳಲ್ಲಿ ನೀಡಿದ್ದರು. ಶ್ರೀರಾಮಕೃಷ್ಣ ವಚನವೇದದಲ್ಲಿ ಆ ವಿವರಣೆಗಳಿವೆ. ಅವುಗಳ ಪೈಕಿ ಆಯ್ದ ವಿವರಣೆಗಳು ಇಲ್ಲಿವೆ.

ಗುರು ಎಂದರೆ ಯಾರು ಶ್ರೀರಾಮಕೃಷ್ಣ ಪರಮಹಂಸರು ನೀಡಿದ ವಿವರಣೆಗಳ ಪೈಕಿ 5 ಆಯ್ದ ವಿವರಣೆಗಳು ಇಲ್ಲಿವೆ (ಸಾಂದರ್ಭಿಕ ಚಿತ್ರ)
ಗುರು ಎಂದರೆ ಯಾರು ಶ್ರೀರಾಮಕೃಷ್ಣ ಪರಮಹಂಸರು ನೀಡಿದ ವಿವರಣೆಗಳ ಪೈಕಿ 5 ಆಯ್ದ ವಿವರಣೆಗಳು ಇಲ್ಲಿವೆ (ಸಾಂದರ್ಭಿಕ ಚಿತ್ರ) (Pixels)

ದೇಶಾದ್ಯಂತ ಇಂದು ಶಿಕ್ಷಕರ ದಿನ ಆಚರಿಸಲಾಗುತ್ತಿದೆ. ಪ್ರತಿಯೊಬ್ಬನ ಬದುಕನ್ನು ರೂಪಿಸುವಲ್ಲಿ ಗುರುವಿನ ಪಾತ್ರವನ್ನು ಸ್ಮರಿಸುವುದಕ್ಕೆ, ಅವರನ್ನು ಗೌರವಿಸುವುದಕ್ಕೆ ಈ ದಿನ ಒಂದು ನಿಮಿತ್ತ. ಗುರು ಸದಾ ಪ್ರಾತಸ್ಮರಣೀಯರ ಸಾಲಿನಲ್ಲಿರುವವರು. ಇದು ಆಧುನಿಕ ಶಿಕ್ಷಣಕ್ಕೆ ಸಂಬಂಧಿಸಿದ ಆಚರಣೆ ಇದಾಗಿದ್ದರೂ, ಭಾರತೀಯ ನೆಲೆಗಟ್ಟಿನಲ್ಲಿ ನೋಡುವಾಗ ನೆನಪಾಗುವ ಗುರು ಶಿಷ್ಯರ ಸಾಲಿನಲ್ಲಿ ರಾಮಕೃಷ್ಣ ಪರಮಹಂಸರು ಮತ್ತು ಅವರ ಶಿಷ್ಯ ಸ್ವಾಮಿ ವಿವೇಕಾನಂದರು ಮುಂಚೂಣಿಯಲ್ಲಿ ಕಾಣುತ್ತಾರೆ. ಶ್ರೀ ರಾಮಕೃಷ್ಣ ಪರಮಹಂಸರು ಗುರು ಎಂದರೆ ಯಾರು ಎಂಬುದರ ವಿವರಣೆಯನ್ನು ಕಾಲಾನುಕ್ರಮದಲ್ಲಿ ಕೊಟ್ಟಿದ್ದರು. ಶ್ರೀ ರಾಮಕೃಷ್ಣ ವಚನ ವೇದದಲ್ಲಿ ಅವುಗಳ ವಿವರಣೆ ಇದೆ.

1.ಚೌಧುರಿ – ಮಹಾಶಯರೆ, ಗುರುವಿಲ್ಲದ ಭಗವಂತನ ಸಾಕ್ಷಾತ್ಕಾರ ದೊರೆಯುವುದಿಲ್ಲವೆ?

ಶ್ರೀರಾಮಕೃಷ್ಣರು – ಸಚ್ಚಿದಾನಂದನೇ ಗುರು. ಶವಸಾಧನೆ ಮಾಡಿ ಇನ್ನೇನು ಇಷ್ಟದರ್ಶನವಾಗುತ್ತದೆ ಎನ್ನುವಾಗ ಗುರು ಕಾಣಿಸಿಕೊಂಡು ಸಾಧಕನಿಗೆ ಹೇಳುತ್ತಾನೆ, “ನೋಡಲ್ಲಿ! ನಿನ್ನಿಷ್ಟದೇವನನ್ನು ನೋಡಲ್ಲಿ!” ಬಳಿಕ ಗುರು ಇಷ್ಟದೇವನಲ್ಲಿ ಲೀನವಾಗಿ ಬಿಡುತ್ತಾನೆ. ಯಾರು ಗುರುವೋ ಆತನೇ ಇಷ್ಟದೇವ. ಗುರು ಭಗವಂತನಿಗೆ ಕೊಂಡೊಯ್ಯುವ ದಾರ…

2. ಬ್ರಾಹ್ಮ ಭಕ್ತ: ಮಹಾಶಯರೇ, ಗುರುವಿಲ್ಲದೆ ಇದ್ದರೆ ಜ್ಞಾನ ದೊರೆಯುವುದಿಲ್ಲವೆ?

ಶ್ರೀರಾಮಕೃಷ್ಣರು: ಕೇವಲ ಸಚ್ಚಿದಾನಂದನೇ ಗುರು. ಮನುಷ್ಯ ಗುರುವಿನ ಪಟ್ಟಧರಿಸಿ ಜನರಲ್ಲಿ ಆತ್ಮಜಾಗೃತಿ ಉಂಟುಮಾಡಿದ್ದೇ ಆದರೆ, ಆಗ ತಿಳಿದುಕೊಳ್ಳಬೇಕು, ಸಚ್ಚಿದಾನಂದನೇ ಆ ರೂಪ ಧರಿಸಿದ್ದಾನೆ ಎಂಬುದಾಗಿ. ಗುರು ಒಬ್ಬ ಸ್ನೇಹಿತ ಇದ್ದ ಹಾಗೆ. ಆತ ಕೈಹಿಡಿದು ಕರೆದುಕೊಂಡು ಹೋಗುತ್ತಾನೆ. ಭಗವಂತನ ದರ್ಶನವಾದ ನಂತರ ಗುರು- ಶಿಷ್ಯರ ಭೇದವಿರದು. ಅದು ಬಹಳ ತೊಡಕಿನ ಸನ್ನಿವೇಶದ ಸೃಜಿಸುತ್ತದೆ. ಅಲ್ಲಿ ಗುರು- ಶಿಷ್ಯರು ಒಬ್ಬರನ್ನೊಬ್ಬರು ಗುರುತಿಸಲಾರರು. ಇದಕ್ಕಾಗಿಯೇ ಜನಕರಾಜ ಶುಕದೇವನಿಗೆ ಹೇಳಿದ: “ನಿನಗೆ ಬ್ರಹ್ಮಜ್ಞಾನ ಬೇಕಿದ್ದರೆ ಮೊದಲು ದಕ್ಷಿಣೆ ಕೊಡು”. ಏಕೆಂದರೆ ಬ್ರಹ್ಮಜ್ಞಾನ ದೊರೆತ ನಂತರ ಆತ ಗುರು, ತಾನು ಶಿಷ್ಯ ಎಂಬ ಭೇದಬುದ್ಧಿ ಇರದು. ಭಗವಂತನ ಸಾಕ್ಷಾತ್ಕಾರವಾಗದೆ ಇರುವವರೆಗೆ ಮಾತ್ರ ಗುರು- ಶಿಷ್ಯ ಸಂಬಂಧ.

3. ಒಬ್ಬ ಭಕ್ತ: ಮಹಾಶಯರೇ ಗುರುವಿನ ಅವಶ್ಯಕತೆ ಇದೆಯೇ?

ಶ್ರೀರಾಮಕೃಷ್ಣರು: ಹೌದು, ಗುರು ಅನೇಕರಿಗೆ ಬೇಕಾಗುತ್ತಾನೆ. ಆದರೆ ಅತನ ವಾಕ್ಯದಲ್ಲಿ ಶ್ರದ್ಧೆಯಿಡಬೇಕು. ಗುರುವನ್ನು ಸಾಕ್ಷಾತ್‌ ಭಗವಂತನೇ ಎಂಬ ದೃಷ್ಟಿಯಿಂದ ನೋಡಿದಾಗ ಮಾತ್ರವೇ ಆಧ್ಯಾತ್ಮಿಕ ಉನ್ನತಿ ಸಾಧ್ಯವಾಗುತ್ತದೆ. ಅದಕ್ಕಾಗಿಯೇ ವೈಷ್ಣವರು ಹೇಳುವುದು: ಗುರು ಕೃಷ್ಣ ವೈಷ್ಣವ ಒಂದೇ ಎಂದು.

4. ಸಾಧಕ: ಮಹಾಶಯರೇ ಸಾಕ್ಷಾತ್ಕಾರದ ಮಾರ್ಗವೇನು?

ಶ್ರೀರಾಮಕೃಷ್ಣ – ಗುರುವಾಕ್ಯದಲ್ಲಿ ಶ್ರದ್ಧೆ, ಗುರುವಿನ ಉಪದೇಶವನ್ನು ಅನುಕ್ರಮವಾಗಿ ಆಚರಿಸಿದರೆ ಭಗವಂತನ ಸಾಕ್ಷಾತ್ಕಾರ ದೊರೆತುಬಿಡುತ್ತದೆ. ಇದು ದಾರವನ್ನು ಅನುಸರಿಸಿ ವಸ್ತುವನ್ನು ಮುಟ್ಟುವ ಹಾಗೆ.

5. ಗುರು ಯಾರು ಎಂದರೆ

ಶ್ರೀರಾಮಕೃಷ್ಣ ವಚನ ವೇದರಲ್ಲಿರುವ ಎರಡು ವಿವರಣೆಗಳು ಹೀಗಿವೆ

ಇರತಕ್ಕ ಗುರು ಕೇವಲ ಒಬ್ಬನೇ ಒಬ್ಬ. ಆತನೇ ಸಚ್ಚಿದಾನಂದ. ಆತ ಮಾತ್ರವೇ ಶಿಕ್ಷಣ ಕೊಡಬಲ್ಲ. ನನ್ನದು ಸಂತಾನಭಾವ. ಮಾನವ ಅಂತಸ್ತಿನಲ್ಲಿರುವ ಗುರುಗಳು ಲಕ್ಷಗಟ್ಟಲೆ ಸಿಗುತ್ತಾರೆ. ಎಲ್ಲರಿಗೂ ಗುರು ಆಗಬೇಕು ಎಂಬ ಇಚ್ಛೆ. ಆದರೆ ಶಿಷ್ಯನಾಗಬೇಕು ಅಂತ ಯಾರಿಗೆ ತಾನೆ ಇಚ್ಛೆ ಇದೆ.

ಗುರುವನ್ನು ಮನುಷ್ಯ ಎಂದು ಭಾವಿಸಬಾರದು. ಸಚ್ಚಿದಾನಂದನೇ ಗುರುವಿನ ರೂಪವನ್ನು ಧರಿಸಿರುತ್ತಾನೆ. ಗುರುವಿನ ಕೃಪೆಯಿಂದ ಇಷ್ಟದೇವನ ದರ್ಶನ ದೊರೆಯುತ್ತದೆ. ಬಳಿಕ ಗುರು ಇಷ್ಟದೇವನಲ್ಲಿ ಲೀನವಾಗಿಬಿಡುತ್ತಾನೆ.

(ಕೃಪೆ – ಶ್ರೀಗುರುಗೀತಾ, ಸಂಪಾದನೆ, ಭಾವನುವಾದ – ಸ್ವಾಮಿ ಶಿವಾತ್ಮಾನಂದ, ಪ್ರಕಾಶಕರು ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ)

Whats_app_banner