ಮಳೆ-ಪ್ರವಾಹ ನೀರಿನಿಂದ ಕಾರಿಗೆ ಹಾನಿಯಾಯ್ತಾ? ಎಂಜಿನ್ ಸ್ಟಾರ್ಟ್ ಮಾಡೋ ಮುನ್ನ ಈ 5 ಕೆಲಸಗಳನ್ನು ತಪ್ಪದೆ ಮಾಡಿ
Tech Tips: ಪ್ರವಾಹ ಸೇರಿದಂತೆ ನೀರಿನಿಂದ ಹಾನಿಗೊಳಗಾದ ಕಾರನ್ನು ಮತ್ತೆ ಸಹಜ ಸ್ಥಿತಿಗೆ ತರಬಹುದು. ಸರಿಯಾಗಿ ನಿರ್ವಹಿಸುವ ಮೂಲಕ ಹೆಚ್ಚಿನ ಹಾನಿಯನ್ನು ತಡೆಯಬಹುದು. ಕಾರನ್ನು ತಕ್ಷಣ ಸ್ಟಾರ್ಟ್ ಮಾಡಿದರೆ ಅಪಾಯ ಹೆಚ್ಚು. ಹೀಗಾಗಿ ಎಂಜಿನ್ ಸ್ಟಾರ್ಟ್ ಮಾಡೋ ಮುಂಚೆ ಈ ಐದು ಅಂಶಗಳು ನಿಮ್ಮ ಗಮದಲ್ಲಿರಲಿ.
ಭಾರತದ ಹಲವು ಭಾಗಗಳಲ್ಲಿ ಈ ಬಾರಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದ ಸಂದರ್ಭಗಳಲ್ಲಿ ಮನೆಗಳು ಜಲಾವೃತವಾಗುವ ಜೊತೆಗೆ; ಕಾರು-ಬೈಕ್ ಸೇರಿದಂತೆ ವಾಹನಗಳಿಗೂ ಹಾನಿ ಉಂಟಾಗುತ್ತದೆ. ಪಾರ್ಕ್ ಮಾಡಿದ್ದ ಕಾರು ಇರಬಹುದು ಅಥವಾ ರಸ್ತೆಯಲ್ಲಿ ಸಾಗುವಾಗ ಅತಿಯಾದ ನೀರಿನ ಹರಿವಿನಿಂದ ಕಾರಿಗೆ ಹಾನಿ ಉಂಟಾಗಬಹುದು. ವಿಶೇಷವಾಗಿ ನೆಲಮಾಳಿಗೆಯ ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡುವ ಅಥವಾ ತೆರೆದ ಸ್ಥಳದಲ್ಲಿ ನಿಲ್ಲಿಸಲಾದ ಕಾರುಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗುತ್ತದೆ. ಅದನ್ನು ರಿಪೇರಿ ಮಾಡಿಸುವುದೇ ಮಾಲಕರಿಗೆ ಒಂದು ಸವಾಲು.
ಪ್ರವಾಹದಿಂದ ಹಾನಿಗೆ ಒಳಗಾದ ವಾಹನವನ್ನು ಮತ್ತೆ ಸಹಜ ಸ್ಥಿತಿಗೆ ತರಬಹುದು. ಸೂಕ್ತ ರೀತಿಯಲ್ಲಿ ಕಾಳಜಿ ವಹಿಸುವ ಮೂಲಕ ಮೊದಲಿನಂತೇ ಮಾಡಬಹುದು. ಪ್ರವಾಹಕ್ಕೆ ತುತ್ತಾದ ಕಾರನ್ನು ಹೇಗೆ ನಿರ್ವಹಿಸಬೇಕು ಮತ್ತು ಹೆಚ್ಚಿನ ಹಾನಿಯನ್ನು ತಡೆಯುವುದು ಹೇಗೆ ಎಂಬುದರ ಕುರಿತು ತಿಳಿಯೋಣ.
ಎಂಜಿನ್ ಸ್ಟಾರ್ಟ್ ಮಾಡಬೇಡಿ
ಮಳೆ ಅಥವಾ ಪ್ರವಾಹ ಮಾತ್ರವಲ್ಲದೆ ಬೇರೆ ಬೇರೆ ಕಾರಣಗಳಿಂದ ನೀರು ಒಳಹೊಕ್ಕು ಹಾನಿಗೊಳಗಾದ ಕಾರನ್ನು ಸರಿಪಡಿಸುವಾಗ ಮೊದಲು ಗಮನಿಸಬೇಕಾದ ಪ್ರಮುಖ ವಿಷಯವೆಂದರೆ, ಎಂಜಿನ್ ಅನ್ನು ಆನ್ ಮಾಡದಿರುವುದು. ಒಂದು ವೇಳೆ ಸ್ಟಾರ್ಟ್ ಮಾಡಿದರೆ ಕಾರಿಗೆ ಆಂತರಿಕವಾಗಿ ಮತ್ತಷ್ಟು ಹಾನಿಯಾಗಬಹುದು. ಅದರಲ್ಲೂ ನೀರು ಎಂಜಿನ್ ಅಥವಾ ಎಲೆಕ್ಟ್ರಿಕಲ್ ಸಿಸ್ಟಮ್‌ಗೆ ಹೋದರೆ ಭಾರಿ ಕಷ್ಟ.
ಕಾರನ್ನು ಒಣಗಲು ಬಿಡಿ
ಮೊದಲಿಗೆ ಕಾರಿನ ಎಲ್ಲಾ ಡೋರ್‌ಗಳನ್ನು ತೆರೆಯಿರಿ. ಆಗ ಹೆಚ್ಚುವರಿ ನೀರು ಹೊರಹೋಗುತ್ತದೆ. ಲೈಟ್‌ಗಳು, ರೇಡಿಯೋ ಸೇರಿದಂತೆ ಯಾವುದೇ ವಿದ್ಯುತ್ ಸ್ವಿಚ್ ಆನ್ ಮಾಡಬೇಡಿ. ಪೋರ್ಟಬಲ್ ಫ್ಯಾನ್ ಬಳಸಿ ಕಾರಿನ ಒಳಭಾಗ ವೇಗವಾಗಿ ಒಣಗಲು ಬಿಡಿ. ಹೆಚ್ಚುವರಿ ಗಾಳಿಯಾಡುವಂತೆ ಮಾಡಿ. ಮತ್ತೆ ಸ್ಟಾರ್ಟ್ ಮಾಡಲು ಪ್ರಯತ್ನಿಸುವ ಮೊದಲು ಕಾರು ಸಂಪೂರ್ಣವಾಗಿ ಒಣಗಲಿ.
ಬ್ಯಾಟರಿ ಸಂಪರ್ಕ ಡಿಸ್ಕನೆಕ್ಟ್ ಮಾಡಿ
ವಿದ್ಯುತ್ ಹಾನಿಯನ್ನು ತಪ್ಪಿಸಲು ಬ್ಯಾಟರಿ ಟರ್ಮಿನಲ್‌ಗಳನ್ನು ಹೊರತೆಗೆಯಿರಿ. ಹುಡ್ ಅಡಿಯಲ್ಲಿ ಬ್ಯಾಟರಿ ಇರುವುದನ್ನು ಪತ್ತೆ ಮಾಡಿ, ಮೊದಲು ನೆಗೆಟಿವ್ ಟರ್ಮಿನಲ್ ಸಂಪರ್ಕ ಕಡಿತಗೊಳಿಸಿ. ಆ ಬಳಿಕ ಪಾಸಿಟಿವ್ ಟರ್ಮಿನಲ್ ಕೂಡಾ ಆಫ್ ಮಾಡಿ. ಇದು ಅಪಾಯಕಾರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭಾವ್ಯತೆ ತಪ್ಪಿಸುತ್ತದೆ.
ಆಯಿಲ್ (fluids) ಬದಲಾಯಿಸಿ
ಕಾರನ್ನು ನೀವು ಎಷ್ಟು ಬೇಗ ಕಾರ್ಯನಿರ್ವಹಿಸುತ್ತೀರೋ, ಅಷ್ಟು ಒಳ್ಳೆಯದು. ಕಾರಿಗೆ ಚೆನ್ನಾಗಿ ಗಾಳಿಯಾಡುವಂತೆ ಮಾಡಿದ ಬಳಿಕ ಎಂಜಿನ್ ಆಯಿಲ್, ಗೇರ್ ಬಾಕ್ಸ್ ಆಯಿಲ್ ಅಥವಾ ಕೂಲಂಟ್‌ನಂತಹ ಎಲ್ಲಾ ಫ್ಲ್ಯೂಡ್‌ಗಳನ್ನು ಬದಲಾಯಿಸಿ. ಏಕೆಂದರೆ ಇವುಗಳಲ್ಲಿ ನೀರು ಸೇರುವ ಸಾಧ್ಯತೆ ಇರುತ್ತದೆ.
ಇಂಧನ ಟ್ಯಾಂಕ್ ಖಾಲಿ ಮಾಡಿ
ಪ್ರವಾಹಕ್ಕೆ ತುತ್ತಾದ ಕಾರಿನ ಇಂಧನ ಟ್ಯಾಂಕ್ ಅನ್ನು ಖಾಲಿ ಮಾಡಿ. ನೀರು ಕಾರಿನ ಸಿಲಿಂಡರ್‌ಗಳು ಮತ್ತು ಇಂಧನ ಇಂಜೆಕ್ಟರ್‌ಗಳು ಅಥವಾ ಕಾರ್ಬ್ಯುರೇಟರ್‌ಗಳು ಮತ್ತು ಇತರ ಘಟಕಗಳ ಮೇಲೆ ಪರಿಣಾಮ ಬೀರಬಹುದು. ಇಂಧನ ಟ್ಯಾಂಕ್ ಖಾಲಿ ಮಾಡಿದ ನಂತರ ಅದಕ್ಕೆ ಮತ್ತೆ ಹೊಸದಾಗಿ ಇಂಧನ ತುಂಬಿಸಿ. ಅದಾದ ನಂತರ, ಬ್ಯಾಟರಿ ಟರ್ಮಿನಲ್‌ಗಳನ್ನು ಮತ್ತೆ ಜೋಡಿಸಿ ನಿಧಾನವಾಗಿ ಎಂಜಿನ್ ಆನ್ ಮಾಡಿ.
ವೃತ್ತಿಪರ ಮೆಕ್ಯಾನಿಕ್ ನೆರವು ಪಡೆಯಿರಿ
ನಿಮ್ಮ ಸ್ವಂತ ಕಾರನ್ನು ರಿಪೇರಿ ಮಾಡಲು ಪ್ರಯತ್ನಿಸುವುದು ಒಳ್ಳೆಯದೆ. ಆದರೆ ಸೂಕ್ತ ಮಾಹಿತಿ ಇಲ್ಲದಿದ್ದರೆ ಅದನ್ನು ಸರ್ವಿಸ್ ಸೆಂಟರ್‌ಗೆ ಒಪ್ಪಿಸುವುದೇ ಒಳ್ಳೆಯದು. ಪರಿಣತಿ ಹೊಂದಿದವರು ಹಾನಿಯ ಪ್ರಮಾಣವನ್ನು ವ್ಯಾಖ್ಯಾನಿಸಿ ಅಗತ್ಯವಿದ್ದರೆ ದುರಸ್ತಿ ಮಾಡುತ್ತಾರೆ. ಅಲ್ಲದೆ ಅವರಲ್ಲಿ ಅದಕ್ಕೆ ಬೇಕಾದ ವಿಶೇಷ ಉಪಕರಣಗಳು ಇರುತ್ತವೆ.
ಸರ್ವಿಸ್ ಸೆಂಟರ್‌ಗೆ ಕಾರನ್ನು ಕಳುಹಿಸಿ
ಕಾರನ್ನು ಸರ್ವೀಸ್ ಸೆಂಟರ್‌ಗೆ ಕೊಂಡೊಯ್ಯುವುದು ಒಳ್ಳೆಯದು. ಅವರು ಅದನ್ನು ಎಚ್ಚರಿಕೆಯಿಂದ ನಿರ್ವಹಿಸುತ್ತಾರೆ. ಆ ಮೂಲಕ ಸಂಭಾವ್ಯ ತೊಡಕುಗಳನ್ನು ತಪ್ಪಿಸಬಹುದು.