ನಿಮ್ಮ ಬೆರಳಿನಿಂದ ಸ್ಮಾರ್ಟ್‌ಫೋನ್ ಕ್ಯಾಮೆರಾ ಒರೆಸಿ ಸ್ವಚ್ಛಗೊಳಿಸುತ್ತಿದ್ದೀರಾ; ಈ ತಪ್ಪು ಎಂದಿಗೂ ಮಾಡದಿರಿ
ನೀವು ಕ್ಯಾಮೆರಾವನ್ನು ಸರಿಯಾಗಿ ಸ್ವಚ್ಛಗೊಳಿಸುತ್ತಿದ್ದೀರಾ?, ಸ್ವಚ್ಛಗೊಳಿಸುತ್ತಿದ್ದರೂ ಅದು ಸರಿಯಾದ ವಿಧಾನವೇ? ನೀವು ಫೋನ್‌ನ ಕ್ಯಾಮೆರಾವನ್ನು ಸ್ವಚ್ಛಗೊಳಿಸುವಾಗ ಮಾಡಬೇಕಾದ ಮತ್ತು ಮಾಡಬಾರದ ಕೆಲವು ವಿಷಯಗಳ ಬಗ್ಗೆ ನಾವು ಹೇಳುತ್ತೇವೆ. (ವರದಿ: ವಿನಯ್ ಭಟ್)
ಕಾಲ್ ಮತ್ತು ಮೆಸೇಜ್ ಕಳುಹಿಸುವುದರ ಜೊತೆಗೆ ಇಂದು ಮೊಬೈಲ್ ಫೋನ್‌ಗಳು ಫೋಟೋ - ವಿಡಿಯೋಗ್ರಫಿಯ ಸಾಧನವಾಗಿ ಮಾರ್ಪಟ್ಟಿವೆ. ಇತ್ತೀಚಿನ ದಿನಗಳಲ್ಲಿ, ಫೋನ್ ಖರೀದಿಸುವ ಮೊದಲು ಹೆಚ್ಚಿನವರು ಅದರ ಕ್ಯಾಮೆರಾವನ್ನು ಪರಿಶೀಲಿಸುತ್ತಾರೆ. ಈಗಂತೂ ಕ್ಯಾಮೆರಾ ಸ್ಮಾರ್ಟ್ಫೋನ್ಗಳು ಎಗ್ಗಿಲ್ಲದೆ ಸೇಲ್ ಆಗುತ್ತಿದೆ. ಆದರೆ ಈ ಫೋನಿನ ಕ್ಯಾಮೆರಾವನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿಯೂ ನಿಮ್ಮ ಮೇಲಿರುತ್ತದೆ. ಇದು ಸ್ವಚ್ಛವಾಗಿದ್ದಾಗ ಮಾತ್ರ ನೀವು ಉತ್ತಮ ಚಿತ್ರಗಳನ್ನು ಸೆರೆ ಹಿಡಿಯಬಹುದು.
ಆದರೆ ನೀವು ಕ್ಯಾಮೆರಾವನ್ನು ಸರಿಯಾಗಿ ಸ್ವಚ್ಛಗೊಳಿಸುತ್ತಿದ್ದೀರಾ?, ಸ್ವಚ್ಛಗೊಳಿಸುತ್ತಿದ್ದರೂ ಅದು ಸರಿಯಾದ ವಿಧಾನವೇ?. ನೀವು ಫೋನ್‌ನ ಕ್ಯಾಮೆರಾವನ್ನು ಸ್ವಚ್ಛಗೊಳಿಸುವಾಗ ಮಾಡಬೇಕಾದ ಮತ್ತು ಮಾಡಬಾರದ ಕೆಲವು ವಿಷಯಗಳ ಬಗ್ಗೆ ನಾವು ಹೇಳುತ್ತೇವೆ. ಇದನ್ನು ಅನುಸರಿಸಿದರೆ, ನಿಮ್ಮ ಕ್ಯಾಮೆರಾ ಸ್ವಚ್ಛವಾಗಿದ್ದು, ಗುಣಮಟ್ಟದ ಫೋಟೋ ಕ್ಲಿಕ್ ಮಾಡಬಹುದು.
ಇದರಿಂದಾಗಿ ಫೋನ್ ಕ್ಯಾಮೆರಾ ಹಾಳಾಗುತ್ತದೆ
ಇಂದು ಹೆಚ್ಚಿನ ಜನರು ಮಾಡುವ ಅತಿ ದೊಡ್ಡ ಮತ್ತು ಸಾಮಾನ್ಯ ತಪ್ಪು ಎಂದರೆ ಆತುರದಲ್ಲಿ ಬೆರಳುಗಳಿಂದಲೇ ಫೋನ್ ಕ್ಯಾಮೆರಾವನ್ನು ಸ್ವಚ್ಛಗೊಳಿಸುವುದು. ಹೀಗೆ ಮಾಡಿದಾಗ ನಿಮ್ಮ ಫಿಂಗರ್‌ಪ್ರಿಂಟ್‌ಗಳು ಆ ಕ್ಯಾಮೆರಾ ಗ್ಲಾಸ್ ಮೇಲೆ ಅಂಟಿಕೊಂಡಿರುತ್ತದೆ. ಈ ತಪ್ಪನ್ನು ದೀರ್ಘಕಾಲದವರೆಗೆ ಪುನರಾವರ್ತಿಸಿದರೆ, ಕ್ಯಾಮೆರಾ ಸಂಪೂರ್ಣವಾಗಿ ಮಸುಕಾಗಿ ಕಾಣಿಸುತ್ತದೆ. ಬಳಿಕ ಕ್ಯಾಮೆರಾ ಗ್ಲಾಸ್ ಬದಲಾಯಿಸಲು ಹೆಚ್ಚು ಹಣ ಪಾವತಿಸಬೇಕಾಗಿ ಬರಬಹುದು.
ಇದಲ್ಲದೆ, ಅನೇಕ ಜನರು ಫೋನ್ ಕ್ಯಾಮೆರಾವನ್ನು ಬೆರಳುಗಳ ಜೊತೆಗೆ ತಮ್ಮ ಶರ್ಟ್ ಅಥವಾ ಮಹಿಳೆಯರು ಸೀರೆಯ ಮೂಲಕ ಸ್ವಚ್ಚಗೊಳಿಸುತ್ತಾರೆ. ಈ ಪ್ರತಿಯೊಂದು ಬಟ್ಟೆಗಳು ವಿಭಿನ್ನವಾಗಿವೆ, ಆದ್ದರಿಂದ ಕ್ಯಾಮೆರಾದಲ್ಲಿ ಗೀರುಗಳು ಬೀಳಬಹುದು.
ಯಾವ ಬಟ್ಟೆಯನ್ನು ಬಳಸಬೇಕು?
ಯಾವುದೇ ಸ್ಮಾರ್ಟ್‌ಫೋನ್‌ನ ಅತ್ಯಂತ ಸೂಕ್ಷ್ಮ ಭಾಗವೆಂದರೆ ಅದರ ಕ್ಯಾಮೆರಾ. ಅದನ್ನು ಸ್ವಚ್ಛಗೊಳಿಸಲು ನೀವು ಯಾವಾಗಲೂ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಬೇಕು. ಇದು ಲೆನ್ಸ್ ಅನ್ನು ಸ್ವಚ್ಛವಾಗಿರಿಸುತ್ತದೆ ಮತ್ತು ಗೀರುಗಳಿಂದ ರಕ್ಷಿಸುತ್ತದೆ. ಈ ಬಟ್ಟೆಯ ಹೊರತಾಗಿ ನೀವು ಹತ್ತಿ ಬಟ್ಟೆಯನ್ನು ಸಹ ಬಳಸಬಹುದು. ಆದರೆ ಯಾವುದೇ ಒರಟು ಬಟ್ಟೆ ಅಥವಾ ಕಳಪೆ ಗುಣಮಟ್ಟದ ಟಿಶ್ಯೂ ಪೇಪರ್ ಅನ್ನು ಬಳಸಬೇಡಿ.
ಕ್ಯಾಮೆರಾ ಲೆನ್ಸ್‌ಗಳು ಮತ್ತು ಲಿಕ್ವಿಡ್‌ಗಳು
ಕ್ಯಾಮೆರಾ ಲೆನ್ಸ್‌ಗಳನ್ನು ನಿಧಾನವಾಗಿ ಸ್ವಚ್ಛಗೊಳಿಸಬೇಕು. ಬಲ ಪ್ರಯೋಗಿಸಿ ಅಲ್ಲ. ಯಾವುದೇ ರೀತಿಯ ದ್ರವ ಅಥವಾ ನೀರಿನಿಂದ ಅದನ್ನು ಸ್ವಚ್ಛಗೊಳಿಸಲು ಪ್ರಯತ್ನಿಸಬೇಡಿ, ಈ ತಪ್ಪು ಮಾಡಿದರೆ ಕ್ಯಾಮೆರಾಕ್ಕೆ ಹಾನಿಯಾಗಬಹುದು, ಬಳಿಕ ದುಬಾರಿ ವೆಚ್ಚವಾಗಬಹುದು. ಇದಕ್ಕಾಗಿ ನೀವು ಲೆನ್ಸ್ ಕ್ಲೀನರ್ ಅಥವಾ ಎಲೆಕ್ಟ್ರಾನಿಕ್ ಸಾಧನ ಕ್ಲೀನರ್ ಅನ್ನು ಬಳಸಬಹುದು. ಹಾಗೆಯೆ ಈ ಲೆನ್ಸ್ ಕ್ಲೀನರ್ ಅನ್ನು ಎಂದಿಗೂ ನೇರವಾಗಿ ಕ್ಯಾಮೆರಾಗೆ ಅನ್ವಯಿಸಬೇಡಿ. ಮೈಕ್ರೋಫೈಬರ್ ಬಟ್ಟೆಗೆ ಅದನ್ನು ಹಾಕಿ ಸ್ವಚ್ಚಗೊಳಿಸಿ.
ಕ್ಯಾಮೆರಾವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಎಂದರೆ ಮೊದಲು ನೀವು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಚೆನ್ನಾಗಿ ಬಳಸಬೇಕು. ಅಂದರೆ ಮನೆ ಅಥವಾ ಕಚೇರಿಯಲ್ಲಿ ಫೋನ್ ಅನ್ನು ಸ್ವಚ್ಛವಾದ ಸ್ಥಳದಲ್ಲಿ ಇರಿಸಿ. ಆದಷ್ಟು ಧೂಳು ಬರುವ ಜಾಗದಲ್ಲಿ ಇಡಬೇಡಿ. ಈ ಎಲ್ಲಾ ಸೂಕ್ಷ್ಮ ಕ್ರಮಗಳನ್ನು ಅನುಸರಿಸುವುದರಿಂದ ಫೋನ್ ಕ್ಯಾಮೆರಾವನ್ನು ಸ್ವಚ್ಛವಾಗಿರಿಸಬಹುದು. ಇದರೊಂದಿಗೆ ಗುಣಮಟ್ಟದ ಫೋಟೋ ಕ್ಲಿಕ್ ಮಾಡಬಹುದು.
ಇನ್ನಷ್ಟು ಟೆಕ್ ಸಲಹೆಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಸರ್ವಿಸ್ ನಂತರ ವಾಹನದ ಹಳೆಯ ಎಂಜಿನ್ ಆಯಿಲ್ ಚೆಲ್ಲುತ್ತೀರಾ? ಮತ್ತೆಇಂಥಾ ತಪ್ಪು ಮಾಡಬೇಡಿ -Auto Tips