Washing Machine: ಐದು ವಿಧದ ಬಟ್ಟೆಗಳನ್ನು ವಾಷಿಂಗ್ ಮೆಷಿನ್‌ಗೆ ಹಾಕಲೇಬೇಡಿ; ಈ ಸಮಸ್ಯೆಗಳು ಎದುರಾಗಬಹುದು ಎಚ್ಚರ
ಮನೆಯಲ್ಲಿ ವಾಷಿಂಗ್ ಮೆಷಿನ್ ಇದ್ದರೆ, ಕೆಲವರಂತೂ ಅದರಲ್ಲಿ ಎಲ್ಲಾ ವಿಧದ ಬಟ್ಟೆಗಳನ್ನು ತುರುಕುತ್ತಾರೆ. ಒಗೆಯಲು ಸುಲಭವಾಗುತ್ತದೆ, ಕೆಲಸ ಉಳಿಯುತ್ತದೆ ಎನ್ನುವುದು ಅವರ ಆಲೋಚನೆಯಾಗಿದೆ. ಆದರೆ ಕೆಲವೊಂದು ವಿಧದ ಬಟ್ಟೆಗಳನ್ನು ವಾಷಿಂಗ್ ಮೆಷಿನ್‌ಗೆ ಹಾಕಬಾರದು. ಅದರಿಂದ ಮೆಷಿನ್ ಹಾಳಾಗಬಹುದು.

ಮನೆಗಳಲ್ಲಿ ಬಟ್ಟೆ ಒಗೆಯುವುದೇ ಒಂದು ದೊಡ್ಡ ಸವಾಲು. ಅದರಲ್ಲೂ ಮಕ್ಕಳು ಇದ್ದರಂತೂ, ಅವರದ್ದು ಕೆಲವು ಜತೆ ಬಟ್ಟೆಗಳೇ ಸಾಕಷ್ಟಿರುತ್ತದೆ. ಅದರಲ್ಲೂ ಮನೆಯಲ್ಲಿ ಹೆಚ್ಚಿನ ಜನರಿದ್ದರೆ, ಕೆಲವೊಮ್ಮೆ ಅವರ ಬಟ್ಟೆ ಅವರೇ ಒಗೆಯುವುದಿಲ್ಲ, ರಾಶಿ ಹಾಕಿರುತ್ತಾರೆ. ಅಂತಹ ಸಂದರ್ಭದಲ್ಲಿ ನಮ್ಮ ಅನುಕೂಲಕ್ಕೆ ಬಂದಿದ್ದೇ ವಾಷಿಂಗ್ ಮೆಷಿನ್.. ವಾಷಿಂಗ್ ಮೆಷಿನ್ ಎಂದಕೂಡಲೇ, ಅದು ಎಲ್ಲಾ ವಿಧದ ಬಟ್ಟೆಗಳನ್ನು ಒಗೆಯುತ್ತದೆ ಎಂದು ಹೇಳಬೇಕಿಲ್ಲ. ಅದರಲ್ಲೂ ಕೆಲವೊಂದು ಮಿತಿಗಳಿವೆ. ಅವುಗಳನ್ನು ನಾವು ತಿಳಿದುಕೊಂಡರೆ, ಬಟ್ಟೆಯ ಗುಣಮಟ್ಟವೂ ಚೆನ್ನಾಗಿರುತ್ತದೆ. ಮೆಷಿನ್ ಕೂಡ ದೀರ್ಘ ಬಾಳಿಕೆ ಬರುತ್ತದೆ.
ರೇಷ್ಮೆ ಉಡುಪು ಮತ್ತು ಸೀರೆ
ರೇಷ್ಮೆ ಬಟ್ಟೆ ಮತ್ತು ಸೀರೆಗಳನ್ನು ನೀವು ಗಮನಿಸಿರಬಹುದು. ದುಬಾರಿಯೂ ಮಾತ್ರವಲ್ಲ, ಅದರದ್ದೇ ಆದ ಆಕರ್ಷಕ ವಿನ್ಯಾಸ, ಬಣ್ಣ, ಗುಣಮಟ್ಟದ ಬಟ್ಟೆಯನ್ನು ಹೊಂದಿರುತ್ತದೆ. ಸಿಲ್ಕ್ ಎನ್ನುವುದು ತೀರಾ ಸೂಕ್ಷ್ಮ. ಅದರ ನೂಲುಗಳು, ಬಟ್ಟೆ ವಾಷಿಂಗ್ ಮೆಷಿನ್‌ಗೆ ಹಾಕಿದರೆ ಅದು ಖಂಡಿತವಾಗಿಯೂ ಹಾಳಾಗುತ್ತದೆ. ರೇಷ್ಮೆ ಸೀರೆ ಅದರ ಬಣ್ಣ, ರೂಪ ಕಳೆದುಕೊಂಡು, ನೂಲು ಸಡಿಲವಾಗಬಹುದು. ದುಬಾರಿ ಬೆಲೆಯ ಸೀರೆ, ಬಟ್ಟೆ ಹಾಳಾಗಬಹುದು. ಹೀಗಾಗಿ ಮೆಷಿನ್‌ಗೆ ವಾಷ್ ಮಾಡಲು ಹಾಕಬೇಡಿ.
ಲೆದರ್ ಜಾಕೆಟ್ ಮತ್ತು ಬಟ್ಟೆಗಳು
ಕೆಲವರು ಚರ್ಮದಿಂದ ತಯಾರಿಸಿದ ಜಾಕೆಟ್, ಕೋಟ್, ಶೂ, ವ್ಯಾಲೆಟ್, ಬ್ಯಾಗ್ ಹೀಗೆ ಎಲ್ಲವನ್ನೂ ವಾಷಿಂಗ್ ಮೆಷಿನ್‌ಗೆ ಒಗೆಯಲು ಹಾಕುತ್ತಾರೆ. ಆದರೆ ಹೀಗೆ ಮಾಡಿದರೆ, ನಿಮ್ಮ ಲೆದರ್ ಜಾಕೆಟ್ ಮತ್ತು ಇತರ ವಸ್ತುಗಳು ಹಾಳಾಗುತ್ತವೆ. ಅಲ್ಲದೆ, ಬೆಲ್ಟ್ ಅದರಲ್ಲಿ ಸಿಲುಕಿಕೊಂಡು ವಾಷಿಂಗ್ ಮೆಷಿನ್ ಹಾಳಾಗಬಹುದು. ಲೆದರ್ ಉಡುಪುಗಳು ತೀರಾ ಸೂಕ್ಷ್ಮವಾಗಿರುವುದರಿಂದ, ಕೈಯಲ್ಲೇ ಸ್ವಚ್ಚಗೊಳಿಸುವುದು ಮತ್ತು ಮೆತ್ತಗಿನ ಬ್ರಷ್ ಅಥವಾ ವೈಪ್ಸ್‌ನಿಂದ ಸ್ವಚ್ಛಗೊಳಿಸಬಹುದು.
ಉಣ್ಣೆಯ ಬಟ್ಟೆಗಳು
ವುಲನ್ ಬಟ್ಟೆಗಳನ್ನು ಚಳಿಗಾಲದಲ್ಲಿ ಹೆಚ್ಚಾಗಿ ಬಳಸುತ್ತಾರೆ. ಮಳೆ ಸಮಯದಲ್ಲಿ ಚಳಿ ಹೆಚ್ಚಿದ್ದಾಗಲೂ ಬಳಸಲಾಗುತ್ತದೆ. ಆದರೆ ವುಲನ್ ಬಟ್ಟೆಗಳನ್ನು, ಕೈಯಲ್ಲಿ ಹೆಣೆದ ಉಣ್ಣೆಯ ಜಾಕೆಟ್ ಅಥವಾ ಇನ್ಯಾವುದೇ ಉಡುಪುಗಳನ್ನು ಮೆಷಿನ್ ವಾಷ್‌ಗೆ ಹಾಕಬಾರದು. ಅದು ವುಲನ್ ನೂಲುಗಳನ್ನು ಹಾನಿಗೊಳಿಸಬಹುದು, ಬಟ್ಟೆ ಬಿಗು ಕಳೆದುಕೊಂಡು ಸಡಿಲವಾಗಬಹುದು. ಹೀಗಾಗಿ ಮೆಷಿನ್‌ಗೆ ಹಾಕಬೇಡಿ, ಕೈಯಲ್ಲೇ ತಣ್ಣಗಿನ ನೀರಿನಲ್ಲಿ ಒಗೆಯಿರಿ.
ಎಂಬ್ರಾಯಿಡರಿ ಬಟ್ಟೆಗಳು
ಕೆಲವು ರವಿಕೆ, ಚೂಡಿದಾರ್ ಟಾಪ್‌ಗಳಲ್ಲಿ ಆಕರ್ಷಕ ಕುಸುರಿ ಕೆಲಸ ಮಾಡಿರುತ್ತಾರೆ. ಕಸೂತಿ ಮಾಡಿರುವ ಬಟ್ಟೆಗಳಲ್ಲಿ ಗಾಜಿನ ಚೂರಿನ ವಿನ್ಯಾಸ, ಆಕರ್ಷಕ ಚಿತ್ತಾರವನ್ನು ಮೂಡಿಸಿರುತ್ತಾರೆ. ಅವುಗಳನ್ನು ಮೆಷಿನ್‌ಗೆ ವಾಷ್ ಮಾಡಲು ಹಾಕಲೇಬಾರದು. ಬಟ್ಟೆಯಲ್ಲಿ ಕೂರಿಸಿರುವ ಸ್ಟೋನ್, ಬೀಡ್ಸ್, ವಿನ್ಯಾಸ, ಅದರಲ್ಲಿನ ಎಂಬ್ರಾಯಿಡರಿ ವರ್ಕ್ ಹಾಳಾಗುವ ಜತೆಗೆ, ವಾಷಿಂಗ್ ಮೆಷಿನ್ ಕೂಡ ಹಾನಿಯಾಗಬಹುದು.
ಒಳಉಡುಪು ಮತ್ತು ಬ್ರಾ
ಮಹಿಳೆಯರು ಒಗೆಯಲು ಸುಲಭವಾಗುತ್ತದೆ ಎಂದು ಒಳ ಉಡುಪುಗಳು ಮತ್ತು ಬ್ರಾವನ್ನು ವಾಷಿಂಗ್ ಮೆಷಿನ್‌ಗೆ ಹಾಕುತ್ತಾರೆ. ಹಾಗೆ ಮಾಡಬಾರದು. ಅವುಗಳನ್ನು ಸಾಧ್ಯವಾದಷ್ಟು ಕೈಯಲ್ಲೇ ಒಗೆದು, ಸರಿಯಾಗಿ ಬಿಸಿಲಿನಲ್ಲಿ ಒಣಗಿಸಬೇಕು. ಒಳ ಉಡುಪು ಮತ್ತು ಬ್ರಾ ಮೆಷಿನ್‌ಗೆ ಹಾಕಿದರೆ ಅದರ ಎಲಾಸ್ಟಿಕ್ ಸಡಿಲವಾಗಬಹುದು, ಹುಕ್‌ಗಳು ಕಡಿಯಬಹುದು, ಬ್ರಾ ವಿನ್ಯಾಸ ಬದಲಾಗುವ ಸಾಧ್ಯತೆಯಿದೆ. ಬ್ರಾಂಡೆಡ್ ಬ್ರಾ ಆಗಿದ್ದರೆ ಅದರ ಪ್ಯಾಡ್ ಕೂಡ ಹಾನಿಯಾಗಬಹುದು. ಹೀಗಾಗಿ ಮೆಷಿನ್‌ಗೆ ಹಾಕಬೇಡಿ.
ವಾಷ್ ಕೇರ್ ಗೈಡ್ ಗಮನಿಸಿ
ಬ್ರಾಂಡೆಡ್ ಉಡುಪುಗಳ ಒಳಭಾಗದಲ್ಲಿ, ಕಾಲರ್‌ನಲ್ಲಿ ಅದರಲ್ಲಿ ಲಗತ್ತಿಸಿರುವ ಚೀಟಿಯಲ್ಲಿ ವಾಷ್ ಕೇರ್ ಗೈಡ್ ನೀಡಿರುತ್ತಾರೆ. ಅಂದರೆ ಎಲ್ಲ ಉಡುಪುಗಳನ್ನು ನೀವು ಮೆಷಿನ್‌ನಲ್ಲಿ ಒಗೆಯುವಂತಿಲ್ಲ. ಹೀಗಾಗಿ ಅವುಗಳನ್ನು ಗಮನಿಸಿ, ವಾಷ್ ಮತ್ತು ಇಸ್ತ್ರಿ ಹಾಕುವ ಮುನ್ನ ಗಮನಿಸಿದರೆ ಬಟ್ಟೆಯೂ ಚೆನ್ನಾಗಿರುತ್ತದೆ, ಬಾಳಿಕೆಯೂ ಬರುತ್ತದೆ.

ವಿಭಾಗ