ಐಫೋನ್‌ ಬಳಕೆದಾರರಿಗೆ ಬಂಪರ್ ಸುದ್ದಿ: ಕೊನೆಗೂ ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯ ನೀಡಿದ ಆಪಲ್
ಕನ್ನಡ ಸುದ್ದಿ  /  ಜೀವನಶೈಲಿ  /  ಐಫೋನ್‌ ಬಳಕೆದಾರರಿಗೆ ಬಂಪರ್ ಸುದ್ದಿ: ಕೊನೆಗೂ ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯ ನೀಡಿದ ಆಪಲ್

ಐಫೋನ್‌ ಬಳಕೆದಾರರಿಗೆ ಬಂಪರ್ ಸುದ್ದಿ: ಕೊನೆಗೂ ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯ ನೀಡಿದ ಆಪಲ್

iPhone Call Recording Feature: ಆಪಲ್ ಐಒಎಸ್ 18.1 ನ ಮೊದಲ ಬೀಟಾ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಈ ಹೊಸ ಅಪ್‌ಡೇಟ್‌ನಲ್ಲಿ ಹಲವು ಹೊಸ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಮುಖ್ಯವಾಗಿ ಈಗ ಐಫೋನ್‌ನಲ್ಲಿ ಕರೆ ರೆಕಾರ್ಡಿಂಗ್ ಮಾಡಲು ಸಾಧ್ಯವಾಗುತ್ತದೆ. (ಬರಹ: ವಿನಯ್‌ ಭಟ್‌)

ಐಫೋನ್‌ ಬಳಕೆದಾರರಿಗೆ ಬಂಪರ್ ಸುದ್ದಿ: ಕೊನೆಗೂ ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯ ನೀಡಿದ ಆಪಲ್
ಐಫೋನ್‌ ಬಳಕೆದಾರರಿಗೆ ಬಂಪರ್ ಸುದ್ದಿ: ಕೊನೆಗೂ ಕಾಲ್ ರೆಕಾರ್ಡಿಂಗ್ ವೈಶಿಷ್ಟ್ಯ ನೀಡಿದ ಆಪಲ್ (HT File Photo)

ಆಪಲ್ ಐಫೋನ್ (iPhone) ಬಳಕೆದಾರರು ಅನುಭವಿಸುತ್ತಿರುವ ಬಹುದೊಡ್ಡ ಸಮಸ್ಯೆ ಎಂದರೆ ಕರೆ ರೆಕಾರ್ಡಿಂಗ್ (Call Recording Feature). ಈ ಫೀಚರ್ ಆಪಲ್ (Apple) ತನ್ನ ಯಾವುದೇ ಐಫೋನ್ ಬಳಕೆದಾರರಿಗೆ ಡಿಫಾಲ್ಟ್‌ ಆಗಿ ನೀಡಿಲ್ಲ. ಬೇಕಾದಲ್ಲಿ ಆ್ಯಪ್ ಸ್ಟೋರ್​ನಿಂದ ಹಣ ಕೊಟ್ಟು ಖರೀದಿಸಬೇಕು. ಆದರೀಗ ಆಪಲ್ ಬಂಪರ್ ಸುದ್ದಿ ನೀಡಿದೆ. ತನ್ನ ಆಪರೇಟಿಂಗ್ ಸಿಸ್ಟಮ್ ಐಒಎಸ್ 18.1 ನ ಮೊದಲ ಬೀಟಾ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಈ ಹೊಸ ಅಪ್‌ಡೇಟ್‌ನಲ್ಲಿ ಹಲವು ಹೊಸ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಮುಖ್ಯವಾಗಿ ಈಗ ಐಫೋನ್‌ನಲ್ಲಿ ಕರೆ ರೆಕಾರ್ಡಿಂಗ್ ಮಾಡಲು ಸಾಧ್ಯವಾಗುತ್ತದೆ.

ಐಒಎಸ್ 18.1 ನಲ್ಲಿ ಅತ್ಯಂತ ವಿಶೇಷವಾದ ಮತ್ತೊಂದು ವೈಶಿಷ್ಟ್ಯವೆಂದರೆ ಆಪಲ್ ಇಂಟೆಲಿಜೆನ್ಸ್. ಇನ್ನು ಹಲವು ವಿಶೇಷ ಫೀಚರ್‌ಗಳನ್ನು ಈ ಅಪ್‌ಡೇಟ್‌ನಲ್ಲಿ ಸೇರಿಸಲಾಗಿದ್ದು, ಇದು ಬಳಕೆದಾರರಿಗೆ ಸಾಕಷ್ಟು ಸಹಾಯ ಮಾಡಲಿದೆ.

ಆಪಲ್ ಇಂಟೆಲಿಜೆನ್ಸ್ ಹೊಸ ತಂತ್ರಜ್ಞಾನವಾಗಿದ್ದು ಇದು ಫೋನ್ ಮತ್ತು ಕಂಪ್ಯೂಟರ್‌ಗಳನ್ನು ಇನ್ನಷ್ಟು ಸ್ಮಾರ್ಟ್ ಮಾಡುತ್ತದೆ. ಈ ನವೀಕರಣದಲ್ಲಿ, ಆಪಲ್ ರೈಟಿಂಗ್ ವೈಶಿಷ್ಟ್ಯವನ್ನು ಸಹ ನೀಡಿದೆ. ಅಂದರೆ ನಿಮ್ಮ ಲಿಖಿತ ಪಠ್ಯವನ್ನು ಪರಿಶೀಲಿಸಲು ಮತ್ತು ತಪ್ಪುಗಳನ್ನು ಗುರುತಿಸಲು ಈ ವೈಶಿಷ್ಟ್ಯವು ನಿಮಗೆ ಸಹಾಯ ಮಾಡುತ್ತದೆ. ಸುಲಭವಾಗಿ ಹೇಳಬೇಕೆಂದರೆ ಇದು ಪ್ರೂಫ್ ರೀಡಿಂಗ್‌ ಕೆಲಸ ಮಾಡುತ್ತದೆ.

ಚುರುಕಾಗಿದ್ದಾಳೆ ಸಿರಿ

ಈ ಹೊಸ ಅಪ್ಡೇಟ್​ನಲ್ಲಿ ಸಿರಿಯೂ ಮೊದಲಿಗಿಂತ ಚುರುಕಾಗಿದ್ದಾಳೆ. ನೀವು ಈಗ ಸಿರಿಯಿಂದ ಹೆಚ್ಚು ವಿಷಯವನ್ನು ಕಲಿಯಬಹುದು ಮತ್ತು ಹೆಚ್ಚು ಮಾತನಾಡಬಹುದು. ಇದಲ್ಲದೆ, ಸಿರಿ ಕಾಣಿಸಿಕೊಳ್ಳುವ ವಿಧಾನವೂ ಬದಲಾಗಿದೆ. ಸಿರಿಯನ್ನು ಆಪಲ್‌ನ ವರ್ಚುವಲ್ ಧ್ವನಿ ಸಹಾಯಕ ಎಂದು ಕರೆಯಲಾಗುತ್ತದೆ. ಅದರ ಸಹಾಯದಿಂದ, ಬಳಕೆದಾರರು ಮಾತನಾಡುವ ಮೂಲಕ ಯಾವುದೇ ಕೆಲಸವನ್ನು ಐಫೋನ್ ಮೂಲಕ ಮಾಡಬಹುದು. ಉದಾಹರಣೆಗೆ, ಬಳಕೆದಾರರು ಯಾರಿಗಾದರೂ ಕರೆ ಮಾಡಲು ಬಯಸಿದರೆ, ಇದಕ್ಕಾಗಿ ಅವರು ಸಿರಿಯನ್ನು ಕೇಳಬಹುದು. ಆಗ ಸಿರಿ ಸ್ವಯಂಚಾಲಿತವಾಗಿ ಆ ವ್ಯಕ್ತಿಗೆ ಕರೆ ಮಾಡುತ್ತದೆ.

ಫೋಟೋ ಅಪ್ಲಿಕೇಶನ್‌ನಲ್ಲಿಯೂ ಬದಲಾವಣೆಗಳನ್ನು ಮಾಡಲಾಗಿದೆ. ಈಗ ನೀವು ನಿಮ್ಮ ಫೋಟೋದಿಂದ ಸ್ವಯಂಚಾಲಿತ ವಿಡಿಯೋವನ್ನು ರಚಿಸಬಹುದು. ಜೊತೆಗೆ ನೀವು ಈ ವಿಡಿಯೋದಲ್ಲಿ ಬದಲಾವಣೆಗಳನ್ನು ಸಹ ಮಾಡಬಹುದು. ಸಫಾರಿ ಬ್ರೌಸರ್‌ನಲ್ಲಿಯೂ ಬದಲಾವಣೆ ಮಾಡಲಾಗಿದೆ. ಈಗ ನೀವು ಒಂದು ವೆಬ್‌ಸೈಟ್ ಸಂಪೂರ್ಣ ಮಾಹಿತಿಯನ್ನು ಸಫಾರಿಯಲ್ಲಿ ಪಡೆಯಬಹುದು.

ಯಾವ ಐಫೋನ್‌ಗಳಲ್ಲಿ ಈ ವೈಶಿಷ್ಟ್ಯಗಳು ಲಭ್ಯ?

ಪ್ರಸ್ತುತ, ಈ ಹೊಸ ನವೀಕರಣವು ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್​ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ, ಏಕೆಂದರೆ ಅವುಗಳು ವಿಶೇಷ ರೀತಿಯ ಚಿಪ್ ಅನ್ನು ಹೊಂದಿವೆ. ಇದಲ್ಲದೆ, ಆಪಲ್‌ನ ಐಪ್ಯಾಡ್ ಮತ್ತು ಮ್ಯಾಕ್‌ನಲ್ಲಿ ಕೆಲವು ಹೊಸ ವೈಶಿಷ್ಟ್ಯಗಳು ಸಹ ಬಂದಿವೆ. ಈ ಎಲ್ಲಾ ಹೊಸ ವೈಶಿಷ್ಟ್ಯಗಳು ಇನ್ನೂ ಪರೀಕ್ಷಾ ಹಂತದಲ್ಲಿವೆ ಮತ್ತು ಇದು ಎಲ್ಲ ಐಫೋನ್ ಬಳಕೆದಾರರಿಗೆ ಇನ್ನೂ ಲಭ್ಯವಿಲ್ಲ.