ಆಲ್ಟೊ ಕಾರನ್ನು ಕೀಬೋರ್ಡ್ ಮೂಲಕ ಓಡಿಸುವಂತೆ ಮಾಡಿದ 20ರ ಯುವಕ: ಇದು ಹೇಗೆ ಸಾಧ್ಯ ನೋಡಿ?
ಕನ್ನಡ ಸುದ್ದಿ  /  ಜೀವನಶೈಲಿ  /  ಆಲ್ಟೊ ಕಾರನ್ನು ಕೀಬೋರ್ಡ್ ಮೂಲಕ ಓಡಿಸುವಂತೆ ಮಾಡಿದ 20ರ ಯುವಕ: ಇದು ಹೇಗೆ ಸಾಧ್ಯ ನೋಡಿ?

ಆಲ್ಟೊ ಕಾರನ್ನು ಕೀಬೋರ್ಡ್ ಮೂಲಕ ಓಡಿಸುವಂತೆ ಮಾಡಿದ 20ರ ಯುವಕ: ಇದು ಹೇಗೆ ಸಾಧ್ಯ ನೋಡಿ?

ಡ್ರೈವರ್ ಸೀಟಿನಲ್ಲಿ ಯಾರೂ ಇಲ್ಲದಿದ್ದರೂ ಈ ಕಾರು ಚಲಿಸುತ್ತದೆ. ಈ ದೃಶ್ಯವನ್ನು ಪಾಕಿಸ್ತಾನದ ಅಬೋಟಾಬಾದ್ ನಗರದಲ್ಲಿ ಕಾಣಬಹುದು. ಪಾಕಿಸ್ತಾನದ ಯುವಕ ಎಹ್ಸಾನ್ ಜಾಫರ್ ಅಬ್ಬಾಸಿ ಕೀಬೋರ್ಡ್ ಚಾಲಿತ ಕಾರನ್ನು ತಯಾರಿಸುವ ಮೂಲಕ ಜಗತ್ತೇ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ.

ಆಲ್ಟೊ ಕಾರನ್ನು ಕೀಬೋರ್ಡ್ ಮೂಲಕ ಓಡಿಸುವಂತೆ ಮಾಡಿದ 20ರ ಯುವಕ
ಆಲ್ಟೊ ಕಾರನ್ನು ಕೀಬೋರ್ಡ್ ಮೂಲಕ ಓಡಿಸುವಂತೆ ಮಾಡಿದ 20ರ ಯುವಕ (Instagram)

ಸ್ವಯಂ ಚಾಲಿತ ಕಾರುಗಳ ಬಗ್ಗೆ ಇಡೀ ಜಗತ್ತಿಗೆ ತಿಳಿದಿದೆ. ಆದರೆ ಕಂಪ್ಯೂಟರ್ ಕೀಬೋರ್ಡ್​ನಿಂದ ಓಡಿಸುವ ಕಾರನ್ನು ನೀವು ಎಂದಾದರೂ ನೋಡಿದ್ದೀರಾ? ಡ್ರೈವಿಂಗ್ ಸೀಟಿನಲ್ಲಿ ಯಾರೂ ಕುಳಿತುಕೊಳ್ಳದೆ ಈ ಕಾರನ್ನು ಓಡಿಸಬಹುದು. ಈರೀತಿಯ ಅದ್ಭುತ ಪ್ರಯೋಗ ಮಾಡಿದ್ದು ಪಾಕಿಸ್ತಾನದ ಅಬೋಟಾಬಾದ್ ಮೂಲದ ನಿವಾಸಿ ಎಹ್ಸಾನ್ ಜಾಫರ್ ಅಬ್ಬಾಸಿ. ಕೇವಲ 20 ವರ್ಷದ ಅಬ್ಬಾಸಿ, ಸುಜುಕಿ ಆಲ್ಟೊ ಕಾರನ್ನು ಸ್ವಯಂ ಚಾಲಿತ ಕಾರಾಗಿ ಮಾರ್ಪಡಿಸಿದ್ದಾರೆ. ಇದನ್ನು ಕೀಬೋರ್ಡ್ ಮೂಲಕ ನಿಯಂತ್ರಿಸಬಹುದು. ಅಬ್ಬಾಸಿಯ ಈ ಸಾಧನೆ ಅವರನ್ನು ಪಾಕಿಸ್ತಾನದಲ್ಲಿ ಬಹಳಷ್ಟು ಫೇಮಸ್ ಮಾಡಿದೆ.

ಅಬ್ಬಾಸಿ ತಮ್ಮ ಮನೆಯಲ್ಲೇ ಒಂದು ಸಣ್ಣ ಲ್ಯಾಬ್ ಮಾಡಿಕೊಂಡಿದ್ದಾರೆ. ಇಲ್ಲಿ ಅವರು ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಈ ಬಗ್ಗೆ ಮಾತನಾಡಿದ ಅಬ್ಬಾಸಿ, 'ವಿಡಿಯೋ ಗೇಮ್‌ಗಳನ್ನು ಆಡುವ ಮೂಲಕ ಕೀಬೋರ್ಡ್ ಚಾಲಿತ ಕಾರನ್ನು ತಯಾರಿಸುವ ಕಲ್ಪನೆಯನ್ನು ಪಡೆದುಕೊಂಡೆ ಎಂದು ಹೇಳಿದ್ದಾರೆ. ಕಷ್ಟಪಟ್ಟು ಕೆಲಸ ಮಾಡುವ ಮೂಲಕ, ಅಬ್ಬಾಸಿ ತನ್ನ ಫ್ಯಾಮಿಲಿ ಕಾರು ಸುಜುಕಿ ಆಲ್ಟೊವನ್ನು ಕೀಬೋರ್ಡ್ ಮೂಲಕ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಡಿಯೋ ಗೇಮ್‌ ಆಡುವುದರಿಂದ ಐಡಿಯಾ ಬಂತು

ಜಾಗತಿಕವಾಗಿ ಅಷ್ಟೇನೂ ಖ್ಯಾತಿ ಪಡೆಯದ ಪಾಕಿಸ್ತಾನದಂಥ ದೇಶದಿಂದ ಈ ರೀತಿಯ ಆವಿಷ್ಕಾರ ಹೊರಹೊಮ್ಮಿರುವುದು ನಿಜಕ್ಕೂ ಶ್ಲಾಘನೀಯ. ಅಬೋಟಾಬಾದ್‌ನಲ್ಲಿ ಸಾಕಷ್ಟು ವಿದ್ಯುತ್ ಸಮಸ್ಯೆ ಇದೆ. ವಿದ್ಯುತ್ ಇದ್ದಾಗಲೆಲ್ಲಾ, ಅಬ್ಬಾಸಿ ಜಿಟಿಎ: ವೈಸ್ ಸಿಟಿ ಅಥವಾ ಸಿಡಿಯಿಂದ ನೀಡ್ ಫಾರ್ ಸ್ಪೀಡ್‌ನಂತಹ ಆಟಗಳನ್ನು ಆಡುತ್ತಿದ್ದರು. ವಿಡಿಯೋ ಗೇಮ್‌ಗಳನ್ನು ಆಡುವಾಗ, ಗೇಮ್‌ನಲ್ಲಿರುವ ಕಾರನ್ನು ಕೀಬೋರ್ಡ್‌ನಿಂದ ನಿಯಂತ್ರಿಸಲಾಗುತ್ತದೆ. ಆಗ ನಿಜವಾದ ಕಾರನ್ನು ಕೀಬೋರ್ಡ್‌ನಿಂದಲೂ ಓಡಿಸಬಹುದು ಎಂದು ಅವರು ಭಾವಿಸಿ ಈ ಪ್ರಯೋಗಕ್ಕೆ ಮುಂದಾದರಂತೆ.

ಕೀಬೋರ್ಡ್ ಚಾಲಿತ ಕಾರನ್ನು ತಯಾರಿಸಿದ್ದು ಹೀಗೆ?

ಅಬ್ಬಾಸಿ ಕೀಬೋರ್ಡ್ ಚಾಲಿತ ಕಾರಿಗೆ ಬೇಕಾಗುವ ವಸ್ತುಗಳನ್ನು ಹುಡುಕಿ ತಂದರು. ಅರ್ಥಾತ್ ಹಳೆಯ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಪ್ರಿಂಟರ್‌ಗಳು, ಕಂಪ್ಯೂಟರ್‌ಗಳು, ಪ್ರೊಜೆಕ್ಟರ್‌ಗಳು, ಜ್ಯೂಸ್ ಯಂತ್ರಗಳು ಇತ್ಯಾದಿಗಳನ್ನು ತಂದು ತಮ್ಮ ಸಂಶೋಧನೆಯನ್ನು ಮುಂದುವರೆಸಿದರು. ಏಳು ತಿಂಗಳ ಕಠಿಣ ಪರಿಶ್ರಮದ ನಂತರ, ಅವರು ಕೀಬೋರ್ಡ್‌ನಿಂದ ಆಲ್ಟೋ ಓಡಿಸುವಲ್ಲಿ ಯಶಸ್ವಿಯಾದರು.

ಕಾರು ಹೇಗೆ ಚಲಿಸುತ್ತೆ?

  • ಈ ಕೀಬೋರ್ಡ್ ಕಾರಲ್ಲಿ ಎಂಟರ್ ಕೀಲಿಯೊಂದಿಗೆ ಕಾರು ಪ್ರಾರಂಭವಾಗುತ್ತದೆ.
  • ರೇಸ್ (ಆಕ್ಸಿಲರೇಟ್) ಅನ್ನು ಆಲ್ಟ್ ಕೀ ಮೂಲಕ ನೀಡಲಾಗುತ್ತದೆ.
  • ಬಲ ಮತ್ತು ಎಡ ಬಾಣದ ಕೀಗಳು ಕ್ರಮವಾಗಿ ಬಲ ಮತ್ತು ಎಡಕ್ಕೆ ತಿರುಗುತ್ತವೆ.
  • ಡಿಲೀಟ್ ಕೀಲಿಯೊಂದಿಗೆ ಹಾರ್ನ್ ಆಗುತ್ತದೆ.

ಇದಲ್ಲದೆ, ಕ್ಲಚ್ ಮತ್ತು ಬ್ರೇಕ್​ಗಾಗಿ ಪ್ರತ್ಯೇಕ ಕೀಗಳನ್ನು ಬಳಸಲಾಗುತ್ತದೆ. ಅಬ್ಬಾಸಿ ಈ ಕಾರಿನಲ್ಲಿ ಇನ್ನಷ್ಟು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಅಂಗವಿಕಲರು ಸಹ ಈ ಕಾರನ್ನು ಆರಾಮವಾಗಿ ಓಡಿಸಬಹುದಂತೆ.

ಕಾರು ಕಳ್ಳತನ ತಡೆಯುವ ಸಾಧನ

ಕೀಬೋರ್ಡ್ ಕಂಟ್ರೋಲ್ ಕಾರ್ ಹೊರತುಪಡಿಸಿ, ಅಬ್ಬಾಸಿ ಮತ್ತೊಂದು ಸಾಧನವನ್ನು ಸೃಷ್ಟಿಸಿದ್ದಾರೆ. ಇದು ಕಾರನ್ನು ಕದಿಯುವುದನ್ನು ತಡೆಯಲು ಸಹಾಯ ಮಾಡುತ್ತದೆ. ಮೊಬೈಲ್ ಸಿಮ್‌ನೊಂದಿಗೆ ಕಾರ್ಯನಿರ್ವಹಿಸುವ ಈ ಸಾಧನದಲ್ಲಿ ಕರೆ ಮಾಡಿದ ತಕ್ಷಣ ಕಾರು ನಿಲ್ಲುತ್ತದೆ. ಇದಲ್ಲದೆ, ಮೊಬೈಲ್ ಫೋನ್‌ನಿಂದಲೇ ಬ್ರೇಕ್‌ಗಳನ್ನು ಕೂಡ ನಿಯಂತ್ರಿಸಬಹುದು.