ಬೆಂಗಳೂರಿನ ನಲ್ಲಿಗಳಿಗೆ ಏರಿಯೇಟರ್‌ ಅಳವಡಿಕೆ ಕಡ್ಡಾಯ; ಏನಿದು ಏರಿಯೇಟರ್? ಇದು ನೀರು ಉಳಿಸಲು ಹೇಗೆ ಸಹಾಯ ಮಾಡುತ್ತೆ; ಇಲ್ಲಿದೆ ವಿವರ
ಕನ್ನಡ ಸುದ್ದಿ  /  ಜೀವನಶೈಲಿ  /  ಬೆಂಗಳೂರಿನ ನಲ್ಲಿಗಳಿಗೆ ಏರಿಯೇಟರ್‌ ಅಳವಡಿಕೆ ಕಡ್ಡಾಯ; ಏನಿದು ಏರಿಯೇಟರ್? ಇದು ನೀರು ಉಳಿಸಲು ಹೇಗೆ ಸಹಾಯ ಮಾಡುತ್ತೆ; ಇಲ್ಲಿದೆ ವಿವರ

ಬೆಂಗಳೂರಿನ ನಲ್ಲಿಗಳಿಗೆ ಏರಿಯೇಟರ್‌ ಅಳವಡಿಕೆ ಕಡ್ಡಾಯ; ಏನಿದು ಏರಿಯೇಟರ್? ಇದು ನೀರು ಉಳಿಸಲು ಹೇಗೆ ಸಹಾಯ ಮಾಡುತ್ತೆ; ಇಲ್ಲಿದೆ ವಿವರ

ಬೆಂಗಳೂರಿನಲ್ಲಿ ದಿನೇ ದಿನೇ ನೀರಿನ ಸಮಸ್ಯೆ ಬಿಗಾಡಾಯಿಸುತ್ತಿದೆ. ನೀರಿನ ಸಮಸ್ಯೆಗೆ ಕಡಿವಾಣ ಹಾಕಲು ನಗರದ ಪ್ರತಿ ಮನೆಯ ನಳ್ಳಿಗೂ ಏರಿಯೇಟರ್‌ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಏನಿದು ಏರಿಯೇಟರ್‌, ಇದರಲ್ಲಿ ಎಷ್ಟು ವಿಧ, ನೀರು ಉಳಿಸಲು ಇದು ಹೇಗೆ ಸಹಾಯ ಮಾಡುತ್ತದೆ. ಇಲ್ಲಿದೆ ವಿವರ.

ಏನಿದು ಏರಿಯೇಟರ್? ಇದು ನೀರು ಉಳಿಸಲು ಹೇಗೆ ಸಹಾಯ ಮಾಡುತ್ತೆ
ಏನಿದು ಏರಿಯೇಟರ್? ಇದು ನೀರು ಉಳಿಸಲು ಹೇಗೆ ಸಹಾಯ ಮಾಡುತ್ತೆ

ಮಹಾನಗರಿ ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಹೆಚ್ಚುತ್ತಲೇ ಇದೆ. ನೀರು ಉಳಿಸುವ ಸಲುವಾಗಿ ನಾನಾ ಮಾರ್ಗಗಳನ್ನು ಅನುಸರಿಸುತ್ತಿದ್ದರೂ ನೀರಿನ ಸಮಸ್ಯೆ ಬಗೆಹರಿಯುತ್ತಿಲ್ಲ. ಇದೀಗ ನೀರಿನ ಬಳಕೆ ನಿಯಂತ್ರಣಕ್ಕೆ ಹೊಸ ಮಾರ್ಗವೊಂದನ್ನು ಕಂಡುಕೊಳ್ಳಲಾಗಿದೆ. ಅದುವೇ ಏರಿಯೇಟರ್‌. ಬೆಂಗಳೂರಿನಲ್ಲಿರುವ ವಾಣಿಜ್ಯ ಮಳಿಗೆ, ಕೈಗಾರಿಕೆ, ಅಪಾರ್ಟ್‌ಮೆಂಟ್‌, ಐಷಾರಾಮಿ ಹೋಟೆಲ್, ರೆಸ್ಟೋರೆಂಟ್‌ಗಳ ನಲ್ಲಿಗಳಿಗೆ ಏರಿಯೇಟರ್‌ ಅಳವಡಿಕೆ ಕಡ್ಡಾಯ ಎಂದ ಬೆಂಗಳೂರು ಜಲಮಂಡಳಿ ಘೋಷಿಸಿದೆ. ಮನೆಗಳಲ್ಲೂ ಏರಿಯೇಟರ್‌ ಅಳವಡಿಕೆ ಮಾಡಿಕೊಳ್ಳುವಂತೆ ಮನವಿ ಮಾಡಿದೆ. ಹಾಗಾದರೆ ಏನಿದು ಏರಿಯೇಟರ್‌, ಇದರಲ್ಲಿ ಎಷ್ಟು ವಿಧ, ನೀರು ಉಳಿಸಲು ಇದು ಹೇಗೆ ಸಹಾಯ ಮಾಡುತ್ತೆ ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಮೂಡಿರಬಹುದು. ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಏನಿದು ಟ್ಯಾಪ್‌ ಏರಿಯೇಟರ್‌?

ಏರಿಯೇಟರ್‌ಗಳು ಟ್ಯಾಪ್‌ಗಳಿಂದ ನೀರಿನ ಹರಿವಿನ ಪ್ರಮಾಣವನ್ನು ಕಡಿಮೆ ಮಾಡುತ್ತವೆ. ಇದರಿಂದ ನೀರಿನ ಬಳಕೆಯು ಮಿತಿಗೊಳ್ಳುತ್ತದೆ. ಇದೊಂದು ದುಂಡನೆಯ ಗ್ಯಾಜೆಟ್‌ ರೂಪದಲ್ಲಿದ್ದು, ಇದರ ಸುತ್ತಲೂ ಚಿಕ್ಕ ಚಿಕ್ಕ ರಂಧ್ರಗಳಿರುತ್ತವೆ. ಇದನ್ನು ಟ್ಯಾಪ್‌ನ ಸ್ಪೌಟ್‌ಗೆ ಲಗತ್ತಿಸಬಹುದಾಗಿದೆ.

ಟ್ಯಾಪ್‌ ಏರಿಯೇಟರ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

ಏರಿಯೇಟರ್‌ಗಳು ನಳಿಕೆಯಲ್ಲಿ ಅನೇಕ ಸಣ್ಣ ಸಣ್ಣ ರಂಧ್ರಗಳನ್ನು ಹೊಂದಿರುತ್ತವೆ. ಈ ರಂಧ್ರಗಳ ಮೂಲಕ ನೀರು ಹೊರ ಬರುತ್ತದೆ. ನೀರಿನೊಂದಿಗೆ ಗಾಳಿಯು ಬೆರೆತು ಒತ್ತಡ ಹೆಚ್ಚುತ್ತದೆ, ಜೊತೆಗೆ ನಾವು ಬಳಸುವ ನೀರಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ನೀರಿನ ವೇಗ ಹೆಚ್ಚಿ ಕಡಿಮೆ ನೀರು ಹರಿಯುತ್ತದೆ. ಏರಿಯೇಟರ್‌ ಬಳಕೆಯಿಂದ ಪ್ರತಿ ನಿಮಿಷಕ್ಕೆ 10 ಲೀಟರ್‌ನಷ್ಟು ನೀರಿನ ಹರಿವನ್ನು ಕಡಿಮೆ ಮಾಡಬಹುದು. ಒಂದು ನಿಮಿಷದಲ್ಲಿ 18 ಲೀಟರ್‌ ಅನ್ನು 8 ಲೀಟರ್‌ಗೆ ಇಳಿಸುವ ಸಾಮರ್ಥ್ಯವಿದೆ. ಇದರಿಂದ ನೀರಿನ ಬಿಲ್‌ನಲ್ಲಿ ಕೂಡ ಉಳಿತಾಯ ಮಾಡಬಹುದು.

ಏರಿಯೇಟರ್‌ಗಳನ್ನು ಬಾತ್‌ರೂಮ್‌ ಹಾಗೂ ಅಡುಗೆಮನೆಯ ನಳ್ಳಿಗಳಲ್ಲಿ ಬಳಸಬಹುದು. ಇವುಗಳನ್ನು ಶವರ್‌ ಹೆಡ್‌, ಹಾಟ್‌ ಟಬ್‌, ಹೋಸ್‌ಪೈಪ್‌ಗಳಿಗೂ ಅಳವಡಿಕೆ ಮಾಡಬಹುದು.

ಟ್ಯಾಪ್‌ ಏರಿಯೇಟರ್‌ಗಳ ಪ್ರಯೋಜನವೇನು?

ಟ್ಯಾಪ್‌ ಏರಿಯೇಟರ್‌ಗಳು ವಿವಿಧ ವಿನ್ಯಾಸಗಳಲ್ಲಿ ಲಭ್ಯವಿದ್ದು, ಇದು ನಿಮ್ಮ ಹಾಗೂ ಭೂಮಿಯಲ್ಲಿನ ಅಂತರ್ಜಲದ ಕೊರತೆ ನೀಗಿಸಲು ಸಹಾಯ ಮಾಡುತ್ತದೆ.

* ನೀರಿನ ಹರಿವಿನ ಒತ್ತಡವನ್ನು ಹೆಚ್ಚಿಸುತ್ತದೆ.

ನೀರಿನೊಂದಿಗೆ ಗಾಳಿಯು ಸೇರಿದಾಗ ನೀರಿನ ಹರಿವಿನ ರಭಸ ಹೆಚ್ಚುತ್ತದೆ.

* ಇದು ವೇಗವಾಗಿ ನೀರು ಬರಲು ಸಹಾಯ ಮಾಡುತ್ತದೆ ಹಾಗೂ ನಿಮ್ಮ ಕೆಲಸ ಬೇಗ ಮುಗಿಯುವಂತೆ ಮಾಡುತ್ತದೆ.

* ನೀರಿನ ಒತ್ತಡ ಹೆಚ್ಚಿಸುವ ಮೂಲಕ ಟ್ಯಾಪ್‌ ಏರಿಯೇಟರ್‌ಗಳು ನೀರಿನ ಬಳಕೆ ಕಡಿಮೆಯಾಗುವಂತೆ ಮಾಡುತ್ತವೆ.

* ನೀವು ಬೇಗ ಟ್ಯಾಪ್‌ ಆಫ್‌ ಮಾಡುವಂತೆ ಇದು ನಿಮಗೆ ಸಹಾಯ ಮಾಡುತ್ತದೆ. (ಅಂದರೆ 5 ನಿಮಿಷಗಳ ಬದಲು ಒಂದೇ ನಿಮಿಷದಲ್ಲಿ ನೀವು ಕಾಲು ತೊಳೆಯುತ್ತೀರಿ).

* ನೀರಿನ ಬಳಕೆಯ ಪ್ರಮಾಣ ಕಡಿಮೆಯಾಗುವ ಕಾರಣ ಸಮಯ ಹಾಗೂ ಹಣವನ್ನು ಉಳಿಸುತ್ತದೆ.

* ಇದು ಪರಿಸರ ಹಾಗೂ ಅಂತರ್ಜಲ ಏರಿಕೆಗೂ ಪರೋಕ್ಷವಾಗಿ ಸಹಾಯ ಮಾಡುತ್ತದೆ.

* ಇದು ಶುದ್ದ ನೀರಿನ ಬಳಕೆಯನ್ನು ಮಿತಿಗೊಳಿಸುತ್ತದೆ.

* ಏರಿಯೇಟರ್‌ ಬಳಕೆಯು ಕಾರ್ಬನ್‌ ಡೈಆಕ್ಸೈಡ್‌ ಹೊರ ಸೂಸುವಿಕೆಯನ್ನು ನಿಯಂತ್ರಿಸುತ್ತದೆ.

* ನೀರು ಆಚೆ ಈಚೆ ಪೋಲಾಗುವುದನ್ನು ತಡೆಯುತ್ತದೆ.

ಟ್ಯಾಪ್‌ ಏರಿಯೇಟರ್‌ ಅಳವಡಿಸುವುದು ಹೇಗೆ?

ಟ್ಯಾಪ್‌ ಏರಿಯೇಟರ್‌ಗಳನ್ನು ನಾವೇ ಸುಲಭವಾಗಿ ಅಳವಡಿಸಿಕೊಳ್ಳಬಹುದು. ನೀವು ಈಗಾಗಲೇ ಟ್ಯಾಪ್‌ನಲ್ಲಿ ಏರಿಯೇಟರ್‌ ಹೊಂದಿದ್ದರೆ ಅದನ್ನು ಆಂಟಿಕ್ಲಾಕ್‌ವೈಸ್‌ ತಿರುಗಿಸಿ. ಅದರ ಸ್ಕ್ರೂ ಸಡಿಲವಾಗಬೇಕು. ನಂತರ ಹೊಸ ಏರಿಯೇಟರ್‌ ಅಳವಡಿಸಿ ಸ್ಕ್ರೂ ತಿರುಗಿಸಿ. ಅಳವಡಿಕೆಯಾದ ಮೇಲೆ ಇನ್ನೊಮ್ಮೆ ಸರಿಯಾಗಿದೆಯೇ ಪರಿಶೀಲಿಸಿ. ಇಲ್ಲದೇ ಹೋದರೆ ನೀರಿನ ಒತ್ತಡ ಕಡಿಮೆಯಾಗಬಹುದು.

ಏರಿಯೇಟರ್‌ ಅನ್ನು ಎಷ್ಟು ಬಾರಿ ಬದಲಿಸಬೇಕು?

ಟ್ಯಾಪ್‌ ಏರಿಯೇಟರ್‌ಗಳನ್ನು ಆಗಾಗ ಸ್ವಚ್ಛಗೊಳಿಸಬೇಕು. ಇದರಲ್ಲಿ ಪಾಚಿ ಕಟ್ಟುವುದನ್ನು ತಡೆಯಲು ಬದಲಿಸುತ್ತಿರುವುದು ಅವಶ್ಯ. ಪಾಚಿ ಕಟ್ಟುವ ಕಾರಣ ಏರಿಯೇಟರ್‌ನಲ್ಲಿನ ರಂಧ್ರಗಳು ಮುಚ್ಚಿ ಹೋಗಬಹುದು. ಇದರಿಂದ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಬಹುದು. ಹಾಗಾಗಿ ತಿಂಗಳಿಗೊಮ್ಮೆಯಾದ್ರೂ ಸ್ವಚ್ಚ ಮಾಡಿ. ಆಗಾಗ ಬದಲಿಸಬೇಕು ಎಂದೇನಿಲ್ಲ, ಆದರೆ ಸ್ವಚ್ಛಗೊಳಿಸುವುದು ಅಗತ್ಯ.

Whats_app_banner