Bharat Fiber: ಬಿಎಸ್‌ಎನ್‌ಎಲ್‌ ಫೈಬರ್‌ ಇಂಟರ್‌ನೆಟ್‌ ಗ್ರಾಮೀಣ ಜನರಿಗೆ ವರವೋ ಶಾಪವೋ? ಫ್ರಾಂಚೈಸಿಗಳ ಲೂಟಿಗೆ ಬೇಕಿದೆ ಕಡಿವಾಣ- ಓದುಗರ ಪತ್ರ-technology news bsnl bharat fiber boon or curse for rural people franchise looting needs curb reader letter pcp ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Bharat Fiber: ಬಿಎಸ್‌ಎನ್‌ಎಲ್‌ ಫೈಬರ್‌ ಇಂಟರ್‌ನೆಟ್‌ ಗ್ರಾಮೀಣ ಜನರಿಗೆ ವರವೋ ಶಾಪವೋ? ಫ್ರಾಂಚೈಸಿಗಳ ಲೂಟಿಗೆ ಬೇಕಿದೆ ಕಡಿವಾಣ- ಓದುಗರ ಪತ್ರ

Bharat Fiber: ಬಿಎಸ್‌ಎನ್‌ಎಲ್‌ ಫೈಬರ್‌ ಇಂಟರ್‌ನೆಟ್‌ ಗ್ರಾಮೀಣ ಜನರಿಗೆ ವರವೋ ಶಾಪವೋ? ಫ್ರಾಂಚೈಸಿಗಳ ಲೂಟಿಗೆ ಬೇಕಿದೆ ಕಡಿವಾಣ- ಓದುಗರ ಪತ್ರ

ಬಿಎಸ್‌ಎನ್‌ಎಲ್‌ ಎಫ್‌ಟಿಟಿಎಚ್‌ (Bharat Fiber FTTH) ಫ್ರಾಂಚೈಸಿ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಮನೆಮನೆಗೆ ಇಂಟರ್‌ನೆಟ್‌ ಸೌಲಭ್ಯ ನೀಡಲಾಗುತ್ತಿದೆ. ಫ್ರಾಂಚೈಸಿಗಳು ಗ್ರಾಹಕರಿಗೆ ಯಾವುದೇ ರೀತಿಯ ರಸೀದಿ ನೀಡುವುದಿಲ್ಲ. ಜನರಿಂದ ಅಧಿಕ ಹಣ ಪಡೆಯುತ್ತಿದ್ದಾರೆ. ಈ ಕುರಿತು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಓದುಗರೊಬ್ಬರು ಬರೆದ "ವಾಚಕರ ಪತ್ರ" ಇಲ್ಲಿದೆ.

ಬಿಎಸ್‌ಎನ್‌ಎಲ್‌ ಫೈಬರ್‌ ಇಂಟರ್‌ನೆಟ್‌ ಗ್ರಾಮೀಣ ಜನರಿಗೆ ವರವೋ ಶಾಪವೋ? - ಓದುಗರ ಪತ್ರ
ಬಿಎಸ್‌ಎನ್‌ಎಲ್‌ ಫೈಬರ್‌ ಇಂಟರ್‌ನೆಟ್‌ ಗ್ರಾಮೀಣ ಜನರಿಗೆ ವರವೋ ಶಾಪವೋ? - ಓದುಗರ ಪತ್ರ

Bharat Fiber FTTH: ಭಾರತೀಯ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್‌) ಭಾರತ್‌ ಫೈಬರ್‌ ಎಫ್‌ಟಿಟಿಎಚ್‌ ಮೂಲಕ ಇಂಟರ್‌ನೆಟ್‌ ಸೇವೆ ನೀಡುತ್ತಿದೆ. ರೂರಲ್‌ ಎಫ್‌ಟಿಟಿಎಚ್‌ ವಾಯ್ಸ್‌ ಅನ್‌ಲಿಮಿಟೆಡ್‌ ಪ್ಲ್ಯಾನ್‌ನಿಂದ ಹಿಡಿದು ಫೈಬರ್‌ ಬೇಸಿಕ್‌ ನಿಯೋದವರೆಗೆ ಹಲವು ಪ್ಲ್ಯಾನ್‌ಗಳನ್ನು ನೀಡುತ್ತದೆ. ನಗರದ ಜನರಿಗೆ ಇಂಟರ್‌ನೆಟ್‌, ವೈಫೈ ಸೇವೆ ಪಡೆಯಲು ಹಲವು ಅವಕಾಶಗಳು ಇವೆ. ಆದರೆ, ಗ್ರಾಮೀಣ ಜನರಿಗೆ ಬಿಎಸ್‌ಎನ್‌ಎಲ್‌, ಬಿಬಿಎನ್‌ಎಲ್‌ನಂತಹ ಕೆಲವು ಆಯ್ಕೆಗಳು ಮಾತ್ರ ಇವೆ. ಶಿವಮೊಗ್ಗ ಜಿಲ್ಲೆಯ ಗ್ರಾಮವೊಂದರಲ್ಲಿ ಇದೇ ರೀತಿ ಬಿಎಸ್‌ಎನ್‌ಎಲ್‌ ಸೇವೆ ಪಡೆಯುವ ರಾಘವೇಂದ್ರ ಸಿಎಸ್ ಎಂಬ ಎಚ್‌ಟಿ ಕನ್ನಡದ ಓದುಗರೊಬ್ಬರ ಫೈಬರ್‌ ಇಂಟರ್‌ನೆಟ್‌ನ ಗ್ರಾಮೀಣ ಸೇವೆಯ ಇನ್ನೊಂದು ಮುಖವನ್ನು ತೆರೆದಿಟ್ಟಿದ್ದಾರೆ.

"ಕಳೆದ ನಾಲ್ಕು ವರ್ಷಗಳಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾ ತುಮರಿಯಲ್ಲಿ ಎಫ್‌ಟಿಟಿಎಚ್‌ ಫ್ರಾಂಚೈಸಿ ಮೂಲಕ ಮನೆಮನೆಗೆ ಇಂಟರ್ನೆಟ್ ಸೌಲಭ್ಯ ನೀಡಲಾಗಿದೆ. ಈಗಿನ ಜನರಿಗೆ ಇಂಟರ್ ನೇಟ್ ಒಂದು ಮೂಲಭೂತ ಅವಶ್ಯಕ ವಸ್ತುವಾಗಿದೆ. ಇದನ್ನು ಫೈಬರ್‌ನೆಟ್‌ ಫ್ರಾಂಚೈಸಿಗಳು ದುರಪಯೋಗಪಡಿಸಿಕೊಳ್ಳುತ್ತಿವೆ" ಎಂದು ರಾಘವೇಂದ್ರ ಸಿಎಚ್‌ ಹೇಳಿದ್ದಾರೆ.

ಹಣ ಪಾವತಿಗೆ ರಸೀದಿಯಿಲ್ಲ

"ಮೊದಲನೆಯದಾಗಿ ಈ ಫ್ರಾಂಚೈಸಿಗಳು ಇಲ್ಲಿನ ಜನರಿಗೆ ಎಫ್‌ಟಿಟಿಎಚ್‌ ಸಂಪರ್ಕ ಕಲ್ಪಿಸಲು ಜನರನ್ನು ದೋಚತೊಡಗಿದ್ದಾರೆ. ಒಂದು ಸಂಪರ್ಕಕ್ಕೆ 4000 ದಿಂದ 10000 ಸಾವಿರ ರೂಪಾಯಿವರೆಗೂ ಅವರಿಗೆ ಹಣ ಪಾವತಿಮಾಡಬೇಕಾಗಿದೆ. ಆ ಹಣ ಪಾವತಿಗೆ ಯಾವುದೇ ಅಧಿಕೃತ ಪಾವತಿ ರಶೀದಿ ದೊರೆಯುತ್ತಿಲ್ಲ(ಜಿ ಎಸ್ ಟಿ ರಶೀದಿ ದೊರೆಯುವುದು ಕನಸಿನ ಮಾತು). ಈ ಹಣ ಪಾವತಿ ಮಾಡಲು ಬಿಎಸ್ಎನ್ಎಲ್ ಕೂಡ ಯಾವುದೇ ಮಾನದಂಡ ಅಥವಾ ಪ್ರೊಟೊಕಾಲ್‌ ಅನುಸರಿಸುತ್ತಿಲ್ಲ. ಪೇಟೆಗಳಲ್ಲಿ ಬರೇ 500 ರೂ ಭದ್ರತಾ ಠೇವಣಿ ಮಾತ್ರ ಪಡೆದು ಸಂಪರ್ಕ ಕಲ್ಪಿಸುತ್ತಿದ್ದಾರೆ. (ಕೆಲವು ಪ್ಲಾನ್ ಗಳಿಗೆ ಮಾಡೆಮ್ ಉಚಿತವಾಗಿ ನೀಡುತ್ತಾರೆ ಇದು ಹಳ್ಳಿಯ ಜನರಿಗೆ ಗೊತ್ತೆ ಇಲ್ಲ)" ಎಂದು ಅವರು ಹೇಳಿದ್ದಾರೆ.

ಪ್ಲ್ಯಾನ್‌ ಡೌನ್‌ಗ್ರೇಡ್‌ ಮಾಡಲು ಅವಕಾಶವಿಲ್ಲ

"ಇನ್ನು ಈ  ಫ್ರಾಂಚೈಸಿಯವರು ಸಾಮಾನ್ಯವಾಗಿ 500 ರೂ ಮೇಲ್ಪಟ್ಟ ಪ್ಲ್ಯಾನ್‌ಗಳನ್ನು ಮಾತ್ರ ಇಲ್ಲಿಯ ಜನರಿಗೆ ಹಾಕುತ್ತಿದ್ದಾರೆ. ಇದರಿಂದ ಅವರಿಗೆ ಕಮೀಷನ್ ಜಾಸ್ತಿ ಬರುತ್ತದೆ ಅಂತಾ (ಟೋಟಲ್ ಶೇಕಡ 40 ರಿಂದ 50 ಪ್ಲ್ಯಾನ್‌ಗಳ ಮೇಲೆ). ಇನ್ನು ನಾವು ಪ್ಲ್ಯಾನ್‌ ಅಪ್‌ಗ್ರೇಡ್‌ ಮಾಡಲು ಬಿಎಸ್‌ಎನ್‌ಎಲ್‌ನವರ ಅಧಿಕೃತ ಸೆಲ್ಪ್ ಕೇರ್ ಪೋರ್ಟಲ್‌ನಲ್ಲಿ ಅವಕಾಶವಿದೆ. ಅದೇ ಡೌನ್ ಗ್ರೇಡ್ ಮಾಡಲು ಇಲ್ಲಿ ಅವಕಾಶವಿಲ್ಲ ಅದಕ್ಕೆ ನಾವು ಬಿಎಸ್ಎನ್ಎಲ್ ಆಫೀಸ್‌ಗೆ ತೆರಳಿ ಲೇಟರ್ ನೀಡಬೇಕು. ಮೊದಲು ಸೆಲ್ಫ್‌ ಕೇರ್‌ ಪೋರ್ಟಲ್‌ನಲ್ಲಿ ಡೌನ್‌ಗ್ರೇಡ್‌ ಆಯ್ಕೆ ಇತ್ತು. ಅದನ್ನ ಯಾರ ಒತ್ತಡಕ್ಕೋ ಅಥವಾ ಹಿತಾಸಕ್ತಿಗೋ ತೆಗೆದರೋ ಗೊತ್ತಿಲ್ಲ" ಎಂದು ರಾಘವೇಂದ್ರ ತಿಳಿಸಿದ್ದಾರೆ.

" ಇನ್ನು ಎಫ್‌ಟಿಟಿಎಚ್‌ ಕೇಬಲ್‌ಗಳನ್ನು ಸಹ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಎಲ್ಲೆಂದರಲ್ಲಿ ಅಂದರೆ ಕೆಲವು ಕಡೆ ಮರದ ಮೇಲೆ, ನೆಲದ ಮೇಲೆ ಎಲ್ಲಿ ಬೇಕಾದರೂ ಹಾಕಿಹೋಗುತ್ತಿದ್ದಾರೆ. ಕೇಬಲ್ ಮಧ್ಯೆ ತುಂಡಾದರೆ ಅದನ್ನು ಎಲ್ಲೆಂದರಲ್ಲಿ ಜಾಯಿಂಟ್ ಮಾಡಿ ಹೋಗುತ್ತಾರೆ. ಕೇಬಲ್ ಬದಲಾವಣೆಯಂತೂ ಕನಸಿನ ಮಾತು. ಇದರಿಂದಾಗಿ ಎಫ್‌ಟಿಟಿಎಚ್‌ ಡಾಟಾ ಸ್ಪೀಡ್ ಮೇಲೆ ಪರಿಣಾಮ ಬೀರುತ್ತಿದ್ದು ಎಷ್ಟೇ ಮೌಲ್ಯದ ಪ್ಲಾನ್ ಹಾಕಿಸಿದರೂ ಸ್ಪೀಡ್ ಮಾತ್ರ ಗಗನಕುಸುಮವಾಗಿದೆ. ಇದರಿಂದಾಗಿ ನಮ್ಮಲ್ಲಿ ಎಷ್ಟೋ ಜನ ವರ್ಕ್ ಪ್ರಮ್ ಹೋಮ್ ಇದ್ದರೂ ಈ ಸಮಸ್ಯೆಯಿಂದಾಗಿ ಊರಿಗೆ ಬರದೇ ದೂರದ ಊರಿನಲ್ಲಿ ಅಂದರೆ ಬೆಂಗಳೂರು ಮುಂತಾದ ಕಡೆ ನೆಲಸುವಂತಾಗಿದೆ. ಇಲ್ಲಿ ಬಿಎಸ್ಎನ್ಎಲ್ ಸೇವೆ ಮಾತ್ರ ಲಭ್ಯವಿದ್ದು ಬೇರೆ ಯಾವುದೇ ಖಾಸಗೀ ಆಪರೇಟರ್‌ಗಳ ಸೇವೆ ಲಭ್ಯವಿಲ್ಲದೇ ಇರುವುದು ಅವರಿಗೆ ವರ ನಮಗೆ ಶಾಪವಾಗಿ ಪರಿಣಮಿಸಿದೆ"

"ಇನ್ನು ತಿಂಗಳಿಗೆ ಲಕ್ಷಗಟ್ಟಲೇ ಕಮಿಷನ್‌ ಪಡೆಯುವ ಫ್ರಾಂಚೈಸಿಗಳು ಜಿಎಸ್‌ಟಿ ಬಿಲ್ ಸಹ ನೀಡುವುದಿಲ್ಲ. ಅವರಿಗೆ ಟಿಡಿಎಸ್, ಇನ್‌ಕಂ ಟ್ಯಾಕ್ಸ್ ಗಳಿಂದ ವಿನಾಯತಿ ನೀಡಲಾಗಿದೆಯೇ ಎನ್ನುವುದೂ ಗೊತ್ತಾಗುತ್ತಿಲ್ಲ.ಇದರ ಬಗ್ಗೆ ಬಿಎಸ್ಎನ್ಎಲ್ ಸಂಸ್ಥೆಯನ್ನು ಸಂಪರ್ಕಿಸಿದರೆ ಹಾರಿಕೆಯ ಉತ್ತರ ನೀಡುತ್ತಾರೆ. ಇದರಲ್ಲಿ ಅಂದರೆ ಫ್ರಾಂಚೈಸಿ ಕಮೀಷನ್‌ನಲ್ಲಿ ಅವರಿಗೂ ಒಂದು ಪಾಲು ಸಲ್ಲುತ್ತಿದೆಯಾ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಪ್ರತಿ ಮನೆಗೆ ಇಂಟರ್ನೆಟ್ ಎನ್ನುವ ಇವರ ಧ್ಯೇಯ ಬರೇ ಮಾತಿಗೆ ಸೀಮಿತವಾಗಿದ್ದು, ಅದಕ್ಕೆ ಹಳ್ಳಿಯ ಜನ ಭಾರಿ ಬೆಲೆ ತೆರಬೇಕಾಗುತ್ತಿದೆ"

- ರಾಘವೇಂದ್ರ ಸಿ.ಎಸ್.

ಓದುಗರು ನಿಮ್ಮ ಊರಿನ ಸುದ್ದಿಗಳು, ಸಮಸ್ಯೆಗಳನ್ನು ಎಚ್‌ಟಿ ಕನ್ನಡದ ಜತೆ ಹಂಚಿಕೊಳ್ಳಬಹುದು. ಸೂಕ್ತವೆನಿಸಿದ ಓದುಗರ ಬರಹಗಳನ್ನು ಪ್ರಕಟಿಸುತ್ತೇವೆ. ಇದೇ ರೀತಿ, ಲೇಖನಗಳನ್ನೂ ಕಳುಹಿಸಬಹುದು. ನಿಮ್ಮ ಬರಹದ ಜತೆ ಕಡ್ಡಾಯವಾಗಿ ನಿಮ್ಮ ಹೆಸರು, ದೂರವಾಣಿ ಸಂಖ್ಯೆ ನಮೂದಿಸಿರಬೇಕು. ನಿಮ್ಮ ಬರಹಗಳನ್ನು ನಮ್ಮ ಇಮೇಲ್‌ ವಿಳಾಸ ht.kannada@htdigital.in ಕ್ಕೆ ಕಳುಹಿಸಿ.

mysore-dasara_Entry_Point