ಐಫೋನ್ 16 ಅಭಿವೃದ್ಧಿ ಹಿಂದೆ ಭಾರತದ ಐಐಟಿ ಪದವೀಧರನ ಕೊಡುಗೆ, ಆಪಲ್ ಉದ್ಯೋಗಿ ಪಿಯೂಶ್ ಪ್ರತೀಕ್ ಬಗ್ಗೆ ತಿಳಿಯಿರಿ
ದೆಹಲಿಯ ಐಐಟಿಯಿಂದ ಪದವಿ ಪಡೆದಿರುವ ಪಿಯೂಶ್ ಪರತಿಕ್ ಅವರು ಆಪಲ್ ಕಂಪನಿಯಲ್ಲಿ ಕಳೆದ 5 ವರ್ಷಗಳಿಂದ ಉದ್ಯೋಗದಲ್ಲಿದ್ದಾರೆ. ಕೂಪರ್‌ಟಿನೊನಲ್ಲಿ ಕೆಲಸ ಮಾಡುವ ಮುನ್ನ ಇನ್ನೂ ಹಲವು ಟೆಕ್ ಕಂಪನಿಗಳಲ್ಲಿ ಉದ್ಯೋಗ ಮಾಡಿದ್ದರು. ಆಪಲ್‌ನ ಐಫೋನ್ 16 ಸೀರಿಸ್‌ಗೆ ಇವರ ಕೊಡುಗೆ ಸಾಕಷ್ಟಿದೆ.
ಬೆಂಗಳೂರು: ಭಾರತದ ಐಐಟಿ ಪದವೀಧರರು ಜಗತ್ತಿನ ಪ್ರಮುಖ ಟೆಕ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಚೌಕಟ್ಟಿನಾಚೆಗೆ ಯೋಚನೆ ಮಾಡುವ ಐಐಟಿ ಪ್ರತಿಭಾನ್ವಿತರಿಗೆ ಎಲ್ಲೆಲ್ಲೂ ಬೇಡಿಕೆ ಇದ್ದು, ವಿಶ್ವಾದ್ಯಂತ ತಮ್ಮ ಕೌಶಲ ಪ್ರದರ್ಶಿಸುತ್ತಿದ್ದಾರೆ. ಇದೇ ಕಾರಣಕ್ಕೆ ಐಐಟಿ ದೆಹಲಿಯ ಹಳೆ ವಿದ್ಯಾರ್ಥಿಯೊಬ್ಬರು ಈಗ ಸುದ್ದಿಯಲ್ಲಿದ್ದಾರೆ. ನಿನ್ನೆ ಆಪಲ್ ಕಂಪನಿಯು ಐಫೋನ್ 16 ಸೀರಿಸ್ ಬಿಡುಗಡೆ ಮಾಡಿತ್ತು. ಆಪಲ್ ಇವೆಂಟ್‌ನಲ್ಲಿ ಐಐಟಿ ಹಳೆ ವಿದ್ಯಾರ್ಥಿಯೊಬ್ಬರು ಕಾಣಿಸಿಕೊಂಡಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೂಪರ್‌ಟಿನೋ ಮೂಲದ ಆಪಲ್ ಕಂಪನಿಯು ಕೀನೋಟ್ ಪ್ರೆಸೆಂಟೇಷನ್ ಮಾಡುವ ಸಂದರ್ಭದಲ್ಲಿ ಐಫೋನ್ 16ನ ಹೊಸ ಪ್ರಮುಖ ಫೀಚರ್ "ಕ್ಯಾಮೆರಾ ಕಂಟ್ರೋಲ್" ಕುರಿತು ಐಐಟಿ ದೆಹಲಿಯ ಪದವೀಧರ ಪಿಯೂಶ್ ಪ್ರತೀಕ್ ಮಾಹಿತಿ ನೀಡಿದ್ದರು. ಇವರು ಆಪಲ್ ಕಂಪನಿಯ ಐಫೋನ್ ವಿಭಾಗದಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಐಫೋನ್ 13 ಬಳಿಕ ಮತ್ತು 2ನೇ ತಲೆಮಾರಿನ ಐಫೋನ್ ಎಸ್‌ಇ ಸೇರಿದಂತೆ ಹಲವು ಪ್ರಾಡಕ್ಟ್‌ಗಳಿಗೆ ಪ್ರಾಡಕ್ಟ್ ಮ್ಯಾನೇಜರ್ ಆಗಿ ಇವರು ಕೆಲಸ ಮಾಡಿದ್ದಾರೆ.
ಆಪಲ್‌ಗೆ ಸೇರುವ ಮುನ್ನ ಪಿಯೂಶ್ ಎಲ್ಲಿ ಕೆಲಸ ಮಾಡಿದ್ದರು?
ಪಿಯೂಶ್ ಪ್ರತೀಕ್ ಅವರು ಆಪಲ್ ಕಂಪನಿಗೆ ಸೇರಿ 5 ವರ್ಷ ಕಳೆದಿದೆ. ಈ ಕಂಪನಿಗೆ ಸೇರುವ ಮುನ್ನ ಇನ್ನೂ ಹಲವು ಟೆಕ್ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಐಐಟಿ ದೆಹಲಿಯಲ್ಲಿ ಇವರು ಡ್ಯೂಯೆಲ್ ಪದವಿ ಪಡೆದಿದ್ದಾರೆ. ಅಂದರೆ, ಬ್ಯಾಚುಲರ್ ಆಫ್ ಟೆಕ್ನಾಲಜಿ (ಬಿಟೆಕ್) ಮತ್ತು ಮಾಸ್ಟರ್ ಆಫ್ ಟೆಕ್ನಾಳಜಿ (ಎಂಟೆಕ್) ಮತ್ತು ಬಯೋಕೆಮಿಕಲ್ ಎಂಜಿನಿಯರಿಂಗ್ ಆಂಡ್ ಬಯೋಟೆಕ್ನಾಲಜಿ ಪದವಿ ಪಡೆದಿದ್ದಾರೆ. ಇದಾದ ಬಳಿಕ ಇವರು ಬ್ರೇನ್ ಆಂಡ್ ಕಂಪನಿಯಲ್ಲಿ ಅಸೋಸಿಯೇಟ್ ಕನ್ಸಲ್ಟೆಂಟ್ ಆಗಿದ್ದರು. 2013ರಲ್ಲಿ ಇನ್‌ಮೊಬಿಯಲ್ಲಿ ಕೆಲಸ ಮಾಡಿದ್ದರು. ಈ ಕಂಪನಿಯಲ್ಲಿ ಪ್ರಾಡಕ್ಟ್ ಮಾರ್ಕೆಟಿಂಗ್ ವಿಭಾಗದಲ್ಲಿ ಜಾಗತಿಕ ಮುಖ್ಯಸ್ಥರಾಗಿದ್ದರು. ಇದಾದ ಬಳಿಕ ಇವರು ಈ ಕಂಪನಿಯ ನಿರ್ದೇಶಕರಾಗಿ ಬಡ್ತಿಪಡೆದಿದ್ದರು.
ಪಿಯೂಶ್ ಪ್ರತೀಕ್ ಅವರು 2017ರಲ್ಲಿ ಸ್ಟಾನ್‌ಫೋರ್ಡ್ ಬಿಸ್ನೆಸ್ ಸ್ಕೂಲ್‌ನಲ್ಲಿ ಎಂಬಿಎ ಪದವಿ ಪಡೆದರು. ಇವರು ರಿಲಯೆನ್ಸ್ ಧೀರುಭಾಯಿ ಸ್ಕಾಲರ್ ಆಗಿ ಆಯ್ಕೆಯಾಗಿದ್ದರು. ಶೇಕಡ 100 ಸ್ಕಾಲರ್‌ಶಿಪ್ ನೆರವಿನಿಂದ ಎಂಬಿಎ ಪದವಿ ಪಡೆದರು. ಎಂಬಿಎ ಪದವಿ ಪಡೆದ ಬಳಿಕ ಇವರು ಆಪಲ್ ಕಂಪನಿಯಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಹುದ್ದೆಗೆ ಆಯ್ಕೆಯಾದರು.
ಆಪಲ್‌ನಲ್ಲಿ ಪ್ರಾಡಕ್ಟ್ ಮ್ಯಾನೇಜರ್ ಆದ ಬಳಿಕ ಇವರು ಐಫೋನ್‌ನ ಜಾಗತಿಕ ಪ್ರಾಡಕ್ಟ್ ಮ್ಯಾನೇಜ್‌ಮೆಂಟ್ ಮತ್ತು ಪ್ರಾಡಕ್ಟ್ ಮಾರ್ಕೆಟಿಂಗ್ ಜವಾಬ್ದಾರಿ ವಹಿಸಿಒಂಡರು. ಐಫೋನ್ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಫೀಚರ್‌ಗಳ ಕುರಿತು ಇವರು ಆಪಲ್‌ನ ಹಲವು ತಂಡಗಳ ಜತೆ ಕಾರ್ಯನಿರ್ವಹಿಸಿದ್ದಾರೆ. ಎಂಜಿನಿಯರಿಂಗ್, ಇಂಡಸ್ಟ್ರಿಯಲ್ ಡಿಸೈನ್, ಆಪರೇಷನ್, ಫೈನಾನ್ಸ್, ಪಿಆರ್ ಮತ್ತು ಮಾರ್ಕೆಟಿಂಗ್ ಕಮ್ಯುನಿಕೇಷನ್ ತಂಡಗಳ ಜತೆ ಕೆಲಸ ಮಾಡಿದ್ದಾರೆ.