Digital Jagathu: ಇದು ಬರೀ ಕಾರಲ್ಲವೋ ಅಣ್ಣಾ, ಆಧುನಿಕ ಕಾರುಗಳಿಗೆ ಟೆಕ್ ಬೆಸುಗೆ, ಕಾರಿನೊಳಗಿನ ಟೆಕ್ ತಂತ್ರಜ್ಞಾನ ತಿಳಿದುಕೊಳ್ಳೋಣ
ADAS Technology in Car: ವಾಹನೋದ್ಯಮ ಈಗ ತಂತ್ರಜ್ಞಾನಮಯವಾಗಿದೆ. ಕಾರಿನೊಳಗೆ ಈಗ ಹಲವು ಗ್ಯಾಜೆಟ್‌ಗಳು, ಸುರಕ್ಷತಾ ಸಾಧನಗಳು ಇರುತ್ತವೆ. ತಂತ್ರಜ್ಞಾನದ ಬೆಸುಗೆಯು ಕಾರು ಪ್ರಯಾಣವನ್ನು ಹೆಚ್ಚು ಸುರಕ್ಷಿತವಾಗಿಸಿದೆ. ಈ ಕುರಿತು ಒಂದಿಷ್ಟು ಮಾಹಿತಿಯನ್ನು ಡಿಜಿಟಲ್ ಜಗತ್ತು ಅಂಕಣದಲ್ಲಿ ನೀಡಲಾಗಿದೆ.
ಡಿಜಿಟಲ್ ತಂತ್ರಜ್ಞಾನ ಈಗ ಎಲ್ಲಾ ಕ್ಷೇತ್ರಗಳಲ್ಲೂ ಅನಿವಾರ್ಯವಾಗಿಬಿಟ್ಟಿದೆ. ವಾಹನೋದ್ಯಮವಂತೂ ತಂತ್ರಜ್ಞಾನವನ್ನು ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣಕ್ಕೆ ಪೂರಕವಾಗಿ ಬಳಸಿಕೊಂಡಿದೆ. ಮೊದಲೆಲ್ಲ ಕಾರು ಎಂದರೆ ಕೇವಲ ನಾಲ್ಕು ಚಕ್ರ, ಎಂಜಿನ್, ಗಿಯರ್‌ಬಾಕ್ಸ್ ಇತ್ಯಾದಿ ಬಿಡಿಭಾಗಗಳ ಜೋಡಣೆಯಾಗಿತ್ತು. ಹೆಚ್ಚೆಂದರೆ ಒಳ್ಳೆಯ ಕಂಪನಿಯ ಮ್ಯೂಸಿಕ್ ವ್ಯವಸ್ಥೆ ಇರುತ್ತಿತ್ತು. ಕ್ರಮೇಣ ಒಂದೊಂದು ಸ್ಮಾರ್ಟ್ ಸಾಧನಗಳು ಕಾರಿನೊಳಗೆ ಪ್ರವೇಶಿಸಿದವು. ಗೂಗಲ್ ಮ್ಯಾಪ್ ಅಥವಾ ಜಿಪಿಎಸ್ ವ್ಯವಸ್ಥೆ ಕಾರಿಗೆ ಪ್ರವೇಶಿಸಿ ಹಲವು ವರ್ಷಗಳು ಕಳೆದಿವೆ. ಈಗ ಕಾರಿನೊಳಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಇತ್ಯಾದಿಗಳೂ ಪ್ರವೇಶಿಸಿವೆ.
ಭಾರತದ ರಸ್ತೆಯಲ್ಲಿ ಕೆಲವು ಎಸ್‌ಯುವಿ, ಹೈಎಂಡ್ ಕಾರುಗಳಲ್ಲಿ ಈಗಾಗಲೇ ಅತ್ಯಾಧುನಿಕ ಫೀಚರ್‌ಗಳನ್ನು ಗುರುತಿಸಬಹುದು. ಅಮೆರಿಕ ಜರ್ಮನಿ ಸೇರಿದಂತೆ ವಿವಿಧ ದೇಶಗಳಲ್ಲಿ ಇಂತಹ ಫೀಚರ್‌ಗಳು ಅಗತ್ಯ ಫೀಚರ್‌ಗಳಾಗಿವೆ. ಇಂದಿನ ಡಿಜಿಟಲ್ ಜಗತ್ತಿನಲ್ಲಿ ಕಾರಿನೊಳಗೆ ಯಾವುದೆಲ್ಲ ಹೊಸ ಬಗೆಯ ಮತ್ತು ಸುರಕ್ಷತಾ ಫೀಚರ್‌ಗಳು ಇವೆ ಎಂದು ನೋಡೋಣ. ಈಗಾಗಲೇ ಎಸ್‌ಯುವಿ, ಟಾಪ್ ಎಂಡ್ ಕಾರು ಬಳಸುವವರಿಗೆ ಇಂತಹ ಫೀಚರ್‌ಗಳ ಪರಿಚಯ ಇರಬಹುದು.
ಕಾರುಗಳಲ್ಲಿರುವ ಕೆಲವು ಟೆಕ್ ಫೀಚರ್‌ಗಳು
ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್: ಹ್ಯಾಂಡ್ ಬ್ರೇಕ್ ಹಾಕೋದು ಎಂದರೆ ಸೀಟಿನ ಪಕ್ಕ ಇರುವ ಲಿವರ್ ಎಳೆಯುವುದು ಸಾಮಾನ್ಯ. ಆದರೆ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಎಂದರೆ ಕೇವಲ ಒಂದು ಸ್ವಿಚ್ ಒತ್ತಿದರೆ ಸಾಕು.
360 ವ್ಯೂ ಕ್ಯಾಮೆರಾ: ನಿಮ್ಮ ಕಾರಿನ ಸುತ್ತಲಿನ ಸಮರ್ಪಕ ನೋಟ ನೀಡಲು ನಾಲ್ಕು ಕ್ಯಾಮೆರಾಗಳನ್ನು ಸೆಟಪ್ ಮಾಡಲಾಗಿರುತ್ತದೆ.
ಆಟೋಮ್ಯಾಟಿಕ್ ಪಾರ್ಕಿಂಗ್ ಅಸಿಸ್ಟ್: ಕಾರು ಪಾರ್ಕ್ ಮಾಡಲು ಕಷ್ಟ ಎನ್ನುವವರಿಗೆ ಈ ಫೀಚರ್ ನೆರವಾಗುತ್ತದೆ. ಸ್ಟಿಯರಿಂಗ್ ವೀಲ್ ನೀವು ನಿಯಂತ್ರಿಸುವ ಅಗತ್ಯವಿಲ್ಲ. ಆದರೆ, ಆಕ್ಸಿಲರೇಟರ್ ಮತ್ತು ಬ್ರೇಕ್ ಮೇಲೆ ನಿಮ್ಮ ಗಮನ ಇರಬೇಕು.
ನೈಟ್ ವಿಷನ್ ಅಸಿಸ್ಟ್ : ರಾತ್ರಿ ಹೊತ್ತಿನಲ್ಲಿ ಬರಿಗಣ್ಣಿಗೆ ಕಾಣದ ವಸ್ತುಗಳನ್ನು ನೈಟ್ ವಿಷನ್ ಇನ್‌ಫ್ರಾರೆಡ್ ಕ್ಯಾಮೆರಾಗಳು ಪತ್ತೆ ಹಚ್ಚಿ ಚಾಲಕರಿಗೆ ಅಲರ್ಟ್ ನೀಡುತ್ತವೆ.
ಅಡಾಪ್ಟಿವ್ ಕ್ರೂಸ್ ಕಂಟ್ರೋಲ್: ಮುಂಭಾಗದಲ್ಲಿ ನಿಧಾನಗತಿಯಲ್ಲಿ ಸಾಗುವ ವಾಹನವಿದ್ದರೆ ಈ ವ್ಯವಸ್ಥೆ ಸ್ವಯಂಚಾಲಿತವಾಗಿ ಪತ್ತೆಹಚ್ಚಿ ವಾಹನವನ್ನು ಸ್ಲೋ ಮಾಡುತ್ತದೆ.
ಡಿಜಿಟಲ್ ಕಾಕ್‌ಪಿಟ್: ಈಗಿನ ಆಧುನಿಕ ಕಾರುಗಳು ಸಂಪೂರ್ಣವಾಗಿ ಡಿಜಿಟಲ್ ಕಾಕ್‌ಪಿಟ್ ಹೊಂದಿರುತ್ತವೆ. ಮೊಬೈಲ್ ಫೋನ್ ಬಳಸಿದಂತೆ ಕಾರಿನ ಡಿಜಿಟಲ್ ಡಿಸ್‌ಪ್ಲೇ ಬಳಸಬಹುದು.
ಹೆಡ್ ಅಪ್ ಡಿಸ್‌ಪ್ಲೇ: ಚಾಲಕ ರಸ್ತೆಯಿತ್ತ ಗಮನ ನೀಡುತ್ತಲೇ ಪ್ರಮುಖ ಡೇಟಾಗಳನ್ನು ಈ ಎಚ್‌ಯುಡಿ ಪರದೆಯಲ್ಲಿ ನೋಡಬಹುದು.
ಬ್ಲೈಂಡ್ ಸ್ಪಾಟ್ ಮಾನಿಟರ್: ಕಾರಿನ ಚಾಲಕನಿಗೆ ಸೀಟಿನಿಂದ ಕಾಣದ ಬ್ಲೈಂಡ್ ಸ್ಪಾಟ್ ಸ್ಥಳಗಳಲ್ಲಿ ಏನಾದರೂ ಆಬ್ಜೆಕ್ಟ್‌ಗಳಿದ್ದರೆ ಚಾಲಕನಿಗೆ ಅಲರ್ಟ್ ನೀಡುತ್ತದೆ.
ಹಿಲ್ ಅಸಿಸ್ಟ್: ಎತ್ತರದ ಪ್ರದೇಶಗಳ ರಸ್ತೆಗೆ ಏರುತ್ತ ಇರುವಾಗ ಕಾರು ಹಿಂದಕ್ಕೆ ಜಾರದಂತೆ ಹಿಲ್ ಅಸಿಸ್ಟ್ ಫೀಚರ್‌ಗಳು ಈಗಿನ ಆಧುನಿಕ ಕಾರುಗಳಲ್ಲಿ ಇರುತ್ತವೆ.
ಇಎಸ್‌ಪಿ: ಕಾರಿನ ಪ್ರತಿಯೊಂದು ಚಕ್ರವನ್ನು ಪ್ರತ್ಯೇಕವಾಗಿ ನಿಯಂತ್ರಿಸಿ, ಕಾರು ಉರುಳಿ ಬೀಳದಂತೆ ಎಲೆಕ್ಟ್ರಿಕ್ ಸ್ಟೆಬಿಲಿಟಿ ಪ್ರೋಗ್ರಾಂ ನೋಡಿಕೊಳ್ಳುತ್ತದೆ.
ಟೈರ್ ಪ್ರೆಸರ್ ಮಾನಿಟರಿಂಗ್ ಸಿಸ್ಟಮ್: ಟಿಪಿಎಂಎಸ್ ವ್ಯವಸ್ಥೆಯು ಈಗ ಬಹುತೇಕ ಆಧುನಿಕ ಕಾರುಗಳಲ್ಲಿದೆ. ಕಾರಿನ ನಾಲ್ಕು ಟೈರ್‌ಗಳಲ್ಲಿ ಒತ್ತಡ ಕಡಿಮೆಯಾದರೆ ಇದು ಮಾಹಿತಿ ನೀಡುತ್ತದೆ.
ಎಬಿಎಸ್+ ಇಬಿಡಿ: ಟೈರ್ ಅನ್ನು ಸಂಪೂರ್ಣವಾಗಿ ಲಾಕ್ ಮಾಡುವ ಬದಲು ಎಬಿಎಸ್ ಮತ್ತು ಇಬಿಡಿಯು ಪ್ರತಿ ಟೈರ್‌ಗೆ ಅಗತ್ಯವಿರುವಷ್ಟು ಪ್ರೆಸರ್ ಹಾಕಿ ಬ್ರೇಕ್ ಹಾಕುತ್ತದೆ.
ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್: ಕಾರಿನೊಳಗಿನ ಉಷ್ಣಾಂಶ ಮತ್ತು ಏರ್ ಕಂಡಿಷನ್ ನಿರ್ವಹಣೆಗೆ ಸ್ವಯಂಚಾಲಿತ ವ್ಯವಸ್ಥೆಯಾಗಿದೆ. ಡ್ಯೂಯೆಲ್ ಝೋನ್ ಕ್ಲೈಮೆಟ್ ಕಂಟ್ರೋಲ್: ಕಾರಿನ ವಿವಿಧ ಪ್ರದೇಶಗಳಲ್ಲಿ ಬೇರೆಬೇರೆ ರೀತಿಯ ಉಷ್ಣಾಂಶಕ್ಕೆ ಸಹಕರಿಸುತ್ತದೆ.
ಆಂಟಿ ಪಿಚ್ ಪವರ್ ವಿಂಡೋಸ್, ಹೀಟೆಡ್ ಒಆರ್‌ವಿಎಂ, ಹಿಲ್ ಡಿಸೆಂಟ್ ಕಂಟ್ರೋಲ್, ಆಪಲ್ ಕಾರ್ ಪ್ಲೇ/ಆಂಡ್ರಾಯ್ಡ್ ಆಟೋ, ಹ್ಯಾಂಡ್ಸ್ ಫ್ರೀ ಟೇಲ್‌ಗೇಟ್, ಮಿಲ್ಡ್ ಹೈಬ್ರಿಡ್, ಡ್ರೈವಿಂಗ್ ಮೋಡ್ ಇತ್ಯಾದಿ ಹಲವು ಆಧುನಿಕ ಫೀಚರ್‌ಗಳು ಕಾರುಗಳಲ್ಲಿ ಇವೆ. ರಿಯಲ್ ಟೈಮ್ ವೆಹಿಕಲ್ ಟ್ರಾಕಿಂಗ್ (ಜಿಪಿಎಸ್ ಚಿಪ್ ಮೂಲಕ), ಎಂಜಿನ್ ಇಮೊಬಿಲೈಜರ್, ಎಲ್‌ಎಸ್‌ಡಿ, ಸ್ಟಿಯರಿಂಗ್ ಅಡ್ಜಸ್ಟ್‌ಮೆಂಟ್ ಟೈಪ್, ಮೈಲೇಜ್, ಟೆಕ್ನೊಮೀಟರ್, ಕ್ಸೆನನ್ ಹೆಡ್‌ಲ್ಯಾಂಪ್, ರಿಯರ್ ಸ್ಪಾಯ್ಲರ್, ವಾಯ್ಸ್ ಕಮಾಂಡ್, ಕಂಟ್ರೋಲ್ ಇತ್ಯಾದಿ ಹಲವು ಫೀಚರ್‌ಗಳು ಇವೆ.
ಸುರಕ್ಷತೆಗೆ ಎಡಿಎಎಸ್ ಫೀಚರ್
ಭಾರತದ ಕಾರುಗಳಲ್ಲಿ ಈಗ ಎಡಿಎಎಸ್ ಫೀಚರ್‌ಗಳು ಕಾಣಿಸಿಕೊಳ್ಳುತ್ತಿವೆ. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರ್, ಲೇನ್ ತಪ್ಪಿಸಿದರೆ ಎಚ್ಚರಿಕೆ ನೀಡುವ ಫೀಚರ್, ಕ್ಯಾಮೆರಾ, ಪಾರ್ಕಿಂಗ್ ಸೆನ್ಸಾರ್, ಕೊಲಿಷನ್ ತಪ್ಪಿಸುವ ವ್ಯವಸ್ಥೆ, ಡ್ರೈವರ್ ಮಾನಿಟರ್ ಸಿಸ್ಟಮ್, ಎಬಿಎಸ್, ಪಾದಚಾರಿಗಳು ಅಡ್ಡಬಂದರೆ ಗುರುತಿಸುವ ವ್ಯವಸ್ಥ, ಸ್ವಯಂಚಾಲಿತ ನೈಟ್ ವಿಷನ್ ಇತ್ಯಾದಿ ಹಲವು ಎಡಿಎಎಸ್ ಪೀಚರ್‌ಗಳನ್ನು ಕಾರುಗಳಲ್ಲಿ ಅಳವಡಿಸಲಾಗುತ್ತಿದೆ. ಇದರೊಂದಿಗ ಸ್ವಯಂಚಾಲಿತವಾಗಿ ತುರ್ತು ಬ್ರೇಕ್ ಹಾಕುವಂತಹ ವ್ಯವಸ್ಥೆ, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಇತ್ಯಾದಿ ಹಲವು ಫೀಚರ್‌ಗಳನ್ನು ಆಧುನಿಕ ಕಾರುಗಳಲ್ಲಿ ನೋಡಬಹುದು.
ವಾಹನೋದ್ಯಮದಲ್ಲಿ ಭವಿಷ್ಯದ ತಂತ್ರಜ್ಞಾನ
ಮೇಲೆ ತಿಳಿಸಿದ ಅನೇಕ ಫೀಚರ್‌ಗಳ ಬಗ್ಗೆ ನಿಮಗೆ ತಿಳಿದಿರಬಹುದು. ಭವಿಷ್ಯದ ವಾಹನಗಳು ಇನ್ನಷ್ಟು ಅತ್ಯಾಧುನಿಕವಾಗಿರಲಿವೆ. ಹಲವು ನವೀನ ಫೀಚರ್‌ಗಳನ್ನು ಹೊಂದಿರಲಿದೆ. ಕೆಲವೊಂದು ಕಾರುಗಳು ಪ್ರಾಯೋಗಿಕವಾಗಿ ಅತ್ಯಾಧುನಿಕ ಭವಿಷ್ಯದ ತಂತ್ರಜ್ಞಾನಗಳನ್ನು ತಮ್ಮ ಕಾರುಗಳಿಗೆ ಅಳವಡಿಸುವ ಪ್ರಯತ್ನವನ್ನೂ ಮಾಡಿವೆ.
ಅಗ್ಯುಮೆಂಟೆಡ್ ರಿಯಾಲ್ಟಿ: ಕಾರಿನ ಮುಂಭಾಗದ ಗಾಜಿನಲ್ಲಿ ವಿವಿಧ ವಿಷಯಗಳು ಕಾಣಲಿವೆ. ಅಂದರೆ, ರಸ್ತೆಯ ದೃಶ್ಯಗಳು ಕಾಣುವುದರ ಜತೆಗೆ ಕಾರಿನ ಸ್ಪೀಡ್, ನ್ಯಾವಿಗೇಷನ್, ಇನ್‌ಕಮಿಂಗ್ ಕಾಲ್ ಮಾಹಿತಿ ಇತ್ಯಾದಿಗಳು ಕಾರಿನ ಗಾಜಿನ ಮೇಲೆ ಕಾಣಿಸಲಿದೆ. ರಸ್ತೆಯ ಮೇಲಿನ ದೃಷ್ಟಿಯನ್ನು ತೆಗೆಯದೆ ಈ ಮಾಹಿತಿಯನ್ನು ಓದಿಕೊಳ್ಳಬಹುದು.
ಸ್ವಯಂಚಾಲಿತ ಕಾರುಗಳು: ಚಾಲಕ ಚಾಲನೆ ಮಾಡುವ ಅಗತ್ಯವಿಲ್ಲದ ಚಾಲಕರಹಿತ ಕಾರುಗಳ ಕುರಿತು ಸಾಕಷ್ಟು ಅಭಿವೃದ್ಧಿಕಾರ್ಯಗಳು ನಡೆಯುತ್ತಿವೆ. ವಿವಿಧ ದೇಶಗಳಲ್ಲಿ ಇಂತಹ ಕಾರುಗಳನ್ನು ಪ್ರಾಯೋಗಿಕವಾಗಿ ಟೆಸ್ಟ್ ಮಾಡಲಾಗುತ್ತಿದೆ.
ಆರ್ಟಿಫಿಶಿಯಲ್ ಇಂಟಲಿಜೆನ್ಸ್: ವಾಹನದೊಳಗೂ ಎಐ ಪ್ರವೇಶಿಸಿಯಾಗಿದೆ. ಭವಿಷ್ಯದ ಕಾರುಗಳಲ್ಲಿ ಎಐ ತಂತ್ರಜ್ಞಾನ ಇನ್ನಷ್ಟು ಸುಧಾರಣೆಗೊಳ್ಳಲಿದೆ. ವಾಹನದ ಇಂಧನ ದಕ್ಷತೆ ಹೆಚ್ಚಿಸಲು, ಸುರಕ್ಷತೆ ಹೆಚ್ಚಿಸಲು, ತುರ್ತು ಸಂದರ್ಭದಲ್ಲಿ ನೆರವಾಗಲು ಎಐ ಬಳಕೆಯಾಗಲಿದೆ.
ಕನೆಕ್ಟೆಡ್ ಕಾರ್ಸ್: ರಸ್ತೆಯಲ್ಲಿ ಹಲವು ಕಾರುಗಳು ಕನೆಕ್ಟೆಡ್ ಆಗಿ ಸಾಗುವುದರ ಕುರಿತು ಸಾಕಷ್ಟು ಅಭಿವೃದ್ಧಿಕಾರ್ಯಗಳು ನಡೆಯುತ್ತಿವೆ. ಆಪ್‌ಗಳು, ಇಂಟರ್‌ನೆಟ್, ಭದ್ರತೆ ಇತ್ಯಾದಿಗಳು ಕನೆಕ್ಟೆಡ್ ಆಗಿರಲಿವೆ.
ಎಲೆಕ್ಟ್ರಿಕ್ ವಾಹನ: ಈಗ ಇವಾಹನಗಳು ರಸ್ತೆಯಲ್ಲಿ ಹೆಚ್ಚುತ್ತಿವೆ. ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಪಟ್ಟಂತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಹೆಚ್ಚು ಚಾರ್ಜ್ ಉಳಿಸುವಂತಹ ಸಣ್ಣ ಬ್ಯಾಟರಿ ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುತ್ತಿದೆ.
ವಾಹನಗಳಿಗೆ ಅತ್ಯಾಧುನಿಕ ತಂತ್ರಜ್ಞಾನದ ಬೆಸುಗೆಯಿಂದ ಸಾಕಷ್ಟು ಉಪಯೋಗವಾಗಿದೆ. ವಾಹನ ಅಪಘಾತಗಳು ಕಡಿಮೆಯಾಗಲು ಇಂತಹ ತಂತ್ರಜ್ಞಾನಗಳು ನೆರವಾಗುತ್ತಿವೆ. ಜತೆಗೆ, ಪರಿಸರಕ್ಕೆ ಹೊರಸೂಸುವ ಮಾಲಿನ್ಯವೂ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ರಸ್ತೆ ಇಷ್ಟೊಂದು ಸದ್ದು ಗದ್ದಲ ಹೊಂದಿರುವುದಿಲ್ಲ. ಎಂಜಿನ್ ಸದ್ದೇ ಇಲ್ಲದೆ ಸೈಲೆಂಟ್ ಆಗಿ ವಾಹನಗಳು ಸಂಚರಿಸಲಿವೆ.
ಡಿಜಿಟಲ್ ಜಗತ್ತು ಅಂಕಣ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: praveen.chandra@htdigital.in, ht.kannada@htdigital.in
ವಿಭಾಗ