Digital Jagathu: ಆನ್‌ಲೈನ್ ವಿಶ್ವವಿದ್ಯಾಲಯದಲ್ಲಿ ಕಲಿತವನೇ ಜಾಣ, ಡಿಜಿಟಲ್ ಜಗತ್ತಿನಲ್ಲಿ ಕಲಿಯಲು ಬಯಸುವವರಿಗೆ ಇಲ್ಲಿದೆ ಮಾರ್ಗದರ್ಶನ
Learn online: ಡಿಜಿಟಲ್ ಜಗತ್ತು ಒಂದು ಅಮೂಲ್ಯ ಜ್ಞಾನ ಭಂಡಾರ. ಇದನ್ನು ಅರಿತವನೇ ಜಾಣ. ಆನ್‌ಲೈನ್ ಕಲಿಕೆ ಹೇಗಿರಬೇಕು, ಎಲ್ಲೆಲ್ಲಿ ಕಲಿಯಬಹುದು, ಆನ್‌ಲೈನ್ ವಿಶ್ವವಿದ್ಯಾಲಯದ ಸದುಪಯೋಗ ಹೇಗೆ ಎಂದು ಇಲ್ಲಿ ತಿಳಿಯೋಣ.
ಈಗ ನಾವು ಡಿಜಿಟಲ್ ಜಗತ್ತಿನಲ್ಲಿದ್ದೇವೆ. ಏನೇ ಸಂದೇಹ ಬಂದರೂ ಆನ್‌ಲೈನ್‌ನಲ್ಲಿ ಹುಡುಕಿ ಪರಿಹಾರ ಕಂಡುಕೊಳ್ಳುತ್ತೇವೆ. ಹೋಟೆಲ್ ಶೈಲಿಯಲ್ಲಿ ಟೊಮೆಟೊ ಸಾಂಬಾರ್ ಮಾಡುವುದು ಹೇಗೆ, ನೆಲ್ಲಿಕಾಯಿ ಚಟ್ನಿ ಮಾಡುವುದು ಹೇಗೆ? ಹೀಗೆ ಏನೇ ಸಂದೇಹ ಬಂದರೂ ಗೂಗಲ್‌ನಲ್ಲಿ ಹುಡುಕುತ್ತೇವೆ. ಮೊನ್ನೆ ಮನೆಯ ಪಕ್ಕದ ಗ್ಯಾರೇಜ್‌ಗೆ ಕಾರ್ ಸರ್ವೀಸ್‌ಗೆ ಹೋಗಿದ್ದೆ. ಆ ಗ್ಯಾರೇಜ್‌ನವ ಯೂಟ್ಯೂಬ್‌ನಲ್ಲಿ ಯಾವುದೋ ರಿಪೇರಿ ವಿಡಿಯೋವನ್ನು ತುಂಬಾ ಗಂಭೀರವಾಗಿ ನೋಡುತ್ತಿದ್ದ. ಸಾಕಷ್ಟು ವರ್ಷ ಅನುಭವ ಇರುವ ಆ ಗ್ಯಾರೇಜ್‌ನವನು ಕೂಡ ರಿಪೇರಿ ಸಂದರ್ಭದಲ್ಲಿ ಏನೇ ಸಂದೇಹ ಬಂದರೂ ಗೂಗಲ್‌ನಲ್ಲಿರುವ ಆಟೋಮೊಬೈಲ್ ರಿಪೇರಿ ವಿಡಿಯೋಗಳನ್ನು ನೋಡುತ್ತಾನೆ. "ಈಗಿನ ಕಾರುಗಳಲ್ಲಿ ಏನೆಲ್ಲ ಹೊಸ ಟೆಕ್ನಾಲಜಿ ಇದೆ ಸರ್, ಅದಕ್ಕೆ ತಕ್ಕಂತೆ ನಾವೂ ಅಪ್‌ಡೇಟ್ ಆಗಬೇಕು" ಎಂದು ಆ ಗ್ಯಾರೇಜ್‌ನವ ಹೇಳಿದ ಮಾತು ಸತ್ಯ. ಈಗಿನ ಡಿಜಿಟಲ್ ಜಗತ್ತಿನಲ್ಲಿ ನಾವು ಅಪ್‌ಡೇಟ್ ಆಗಲು ಡಿಜಿಟಲ್ ವಿಶ್ವವಿದ್ಯಾಲಯ ಅಥವಾ ಡಿಜಿಟಲ್ ಜ್ಞಾನ ಭಂಡಾರದ ನೆರವು ಪಡೆಯಬೇಕು. ಉದ್ಯೋಗ ಕ್ಷೇತ್ರದಲ್ಲಿರುವರಂತೂ ತಮ್ಮ ಸಂದೇಹಗಳನ್ನು ಆನ್‌ಲೈನ್ ಮೂಲಕವೇ ಪರಿಹರಿಸಿಕೊಳ್ಳುತ್ತಾರೆ. ಕೋಡ್ ಬರೆಯುವಾಗ ಏನಾದರೂ ಸಂದೇಹ ಬಂದರೆ, ಹಿಂದೆ ಕಲಿತದ್ದು ನೆನಪಿಗೆ ಬರದೆ ಇದ್ದರೆ ಎಚ್‌ಟಿಎಂಎಲ್ ಕಲರ್ ಕೋಡ್, ಹೌ ಟು ರೈಟ್ ಸಿಎಸ್‌ಎಸ್ ಕೋಡ್ ಎಂದೆಲ್ಲ ಬರೆದು ಆನ್‌ಲೈನ್ ಪಾಠಶಾಲೆಯಲ್ಲಿ ತಿಳಿದುಕೊಳ್ಳುತ್ತಾರೆ.
ಆನ್‌ಲೈನ್ ಕಲಿಕೆಗೆ ಸಮಯ ನೀಡಿ
ಈಗಾಗಲೇ ಶಿಕ್ಷಣ ಪಡೆಯುತ್ತಿರುವ ಕೆಲವು ವಿದ್ಯಾರ್ಥಿಗಳು ತಮ್ಮ ಸಿಲೇಬಸ್ ಹೊರತುಪಡಿಸಿ ಬೇರೆ ಕಡೆಗೆ ಗಮನ ನೀಡುವುದಿಲ್ಲ. ಆನ್‌ಲೈನ್ ಇರುವುದು ಸ್ನಾಪ್‌ಚಾಟ್‌ಗೆ, ಇನ್‌ಸ್ಟಾಗ್ರಾಮ್‌ಗೆ ಮಾತ್ರ ಎಂದು ತಿಳಿದುಕೊಳ್ಳುತ್ತಾರೆ. ಅಸೈನ್‌ಮೆಂಟ್ ಬರೆಯೋ ಸಮಯದಲ್ಲಿ ಗೂಗಲ್‌ನಲ್ಲಿ ಏನಾದರೂ ಕಾಪಿ ಮಾಡಲು ಸಿಗುತ್ತದೆಯೇ ಎಂದು ನೋಡುತ್ತಾರೆ. ಇದರ ಬದಲು ಆನ್‌ಲೈನ್‌ನಲ್ಲಿಯೇ ತಮ್ಮ ಕೋರ್ಸ್‌ಗೆ ಸಂಬಂಧಪಟ್ಟ ಹಲವು ವಿಚಾರಗಳನ್ನು ತಿಳಿಯಬಹುದು. ಈಗ ಸಿಇಟಿ, ಜೆಇಇ ಇತ್ಯಾದಿ (prepare jee online) ಹಲವು ಪರೀಕ್ಷೆಗೆ ಸಿದ್ಧತೆ ನಡೆಸುವವರಿಗೆ ಆನ್‌ಲೈನ್ ಉತ್ತಮ ವೇದಿಕೆಯಾಗಿದೆ. ಯೂಟ್ಯೂಬ್‌ನಲ್ಲಿ ಜೆಇಇ, ಸಿಇಟಿ ಕ್ರಾಕ್ ಮಾಡುವ ಕುರಿತು ಹಲವು ಉಪಯುಕ್ತ ವಿಡಿಯೋಗಳಿವೆ. ಉಡೆಮಿ ಇತ್ಯಾದಿ ಆನ್‌ಲೈನ್ ತಾಣಗಳಲ್ಲಿಯೂ ಹಲವು ಕೋರ್ಸ್‌ಗಳಿವೆ. ನೆನಪಿಡಿ, ಮೊದಲಿಗೆ ಉಚಿತ ಕೋರ್ಸ್ ಕಲಿಯಿರಿ. ಹಣವಿದ್ದರೆ ಮಾತ್ರ ಪಾವತಿ ಕೋರ್ಸ್‌ಗಳನ್ನು ಕಲಿಯಿರಿ. ಕೆಲವೊಂದು ಉಚಿತ ಕೋರ್ಸ್‌ಗಳು, ಉಚಿತ ಯೂಟ್ಯೂಬ್‌ಗಳು ಸಾಕಷ್ಟು ಮೌಲ್ಯಯುತವಾಗಿರುತ್ತವೆ. ಹಣ ನೀಡಿ ಸೇರಿದ ಕೋರ್ಸ್ ಅದ್ಭುತವಿರುತ್ತದೆ ಎಂದು ಭಾವಿಸಬೇಕಿಲ್ಲ. ನೆನಪಿಡಿ, ನಿಮಗೆ ಬೋಧನೆ ಮಾಡುವ ಶಿಕ್ಷಕರು ಕೂಡ ಈಗ ಪುಸ್ತಕ ಓದುವುದನ್ನು ಕಡಿಮೆ ಮಾಡಿರಬಹುದು, ಅವರೂ ಆನ್‌ಲೈನ್‌ನಲ್ಲಿ ಸಾಕಷ್ಟು ರಿಸರ್ಚ್ ಮಾಡಿ ಬೋಧನೆ ಮಾಡುತ್ತಾರೆ.
ಆನ್‌ಲೈನ್‌ನಲ್ಲಿ ಸಾಫ್ಟ್ ಕೌಶಲ ಕಲಿಕೆ
ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಅಥವಾ ಎಲ್ಲಾ ಆಸಕ್ತರು ಮೊದಲಿಗೆ ಸಾಫ್ಟ್ ಕೌಶಲ ಕಲಿಯಲು ಆದ್ಯತೆ ನೀಡುವುದು ಉತ್ತಮ. ನಿಮ್ಮಲ್ಲಿ ನೂರಾರು ಟೆಕ್ ಕೌಶಲಗಳಿದ್ದರೂ ಕೆಲವೊಂದು ಸಾಫ್ಟ್ ಕೌಶಲ ಇಲ್ಲದೆ ಇದ್ದರೆ ಉತ್ತಮ ಅವಕಾಶ ಪಡೆದುಕೊಳ್ಳುವುದು ಕಷ್ಟವಾಗಬಹುದು. ಆನ್‌ಲೈನ್‌ನಲ್ಲಿ ಕಲಿಯಬಹುದಾದ ಕೆಲವು ಸಾಫ್ಟ್ ಕೌಶಲಗಳು ಈ ಮುಂದಿನಂತೆ ಇವೆ.
- ಸಂವಹನ: ಕಮ್ಯುನಿಕೇಷನ್ ಸ್ಕಿಲ್ ಈಗ ಅತ್ಯಂತ ಅಗತ್ಯವಾದ ಸಾಫ್ಟ್ ಸ್ಕಿಲ್. ಯೂಟ್ಯೂಬ್ ವಿಡಿಯೋ ಅಥವಾ ಆನ್‌ಲೈನ್ ಕೋರ್ಸ್‌ಗಳ ಮೂಲಕ ಸಂವಹನ ಸ್ಕಿಲ್ಸ್ ಕಲಿಯಿರಿ. ಅತ್ಯುತ್ತಮವಾಗಿ ಮಾತನಾಡುವುದು ಹೇಗೆ ಎಂದು ತಿಳಿಸುವ ಹಲವು ವಿಡಿಯೋಗಳು, ಕೋರ್ಸ್‌ಗಳು ಆನ್‌ಲೈನ್‌ನಲ್ಲಿ ಇವೆ. ಮೋಟಿವೇಷನಲ್ ಸ್ಪೀಕರ್‌ಗಳು ತಮ್ಮ ಅನುಭವ, ಜ್ಞಾನವನ್ನು ಆನ್‌ಲೈನ್‌ನಲ್ಲಿ ಬಿಚ್ಚಿಟ್ಟಿದ್ದಾರೆ. ಪ್ರತಿನಿತ್ಯ ನಿಮ್ಮ ಸಮಯದಲ್ಲಿ ಇಂತಹ ವಿಡಿಯೋಗಳನ್ನು ಕೇಳಲು ಪ್ರಯತ್ನಿಸಿ. ಸುಮ್ಮನೆ ಕೇಳಿದರೆ ಸಾಲದು, ಕನ್ನಡಿ ಮುಂದೆ ನಿಂತು ಅತ್ಯುತ್ತಮವಾಗಿ ಮಾತನಾಡಲು ಕಲಿಯರಿ. ಶಾಲೆ, ಕಾಲೇಜುಗಳಲ್ಲಿ, ಉದ್ಯೋಗ ಸ್ಥಳದಲ್ಲಿ ಪ್ರತಿನಿತ್ಯ ಸಂವಹನ ಉತ್ತಮಪಡಿಸುವ ಮೂಲಕ ಪ್ರಗತಿ ಹೊಂದಿರಿ.
- ಇಂಗ್ಲಿಷ್ ಕಲಿಕೆ: ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಕಲಿತ ಸಾಕಷ್ಟು ವಿದ್ಯಾರ್ಥಿಗಳು ಈಗ ಇಂಗ್ಲಿಷ್‌ನಲ್ಲಿ ಮಾತನಾಡಲು ಭಯಪಡುವುದು ಸುಳ್ಳಲ್ಲ. ಶಾಲಾ ಕಾಲೇಜಿನಲ್ಲಿ ಎಷ್ಟೇ ಓದಿದರೂ ಇಂಗ್ಲಿಷ್‌ನಲ್ಲಿ ಮಾತನಾಡುವುದೆಂದರೆ ತಡಬಡಾಯಿಸುತ್ತಾರೆ. ಇಂಗ್ಲಿಷ್ ಮೀಡಿಯಂನಲ್ಲಿ ಓದಿದ ವಿದ್ಯಾರ್ಥಿಗಳು ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಮಾತನಾಡಬಹುದು. ಕನ್ನಡ ಮಾಧ್ಯಮದಲ್ಲಿ ಓದಿರುವ ಕೆಲವು ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ನಲ್ಲಿ ಮಾತನಾಡುವುದು ಕಷ್ಟವಾಗಬಹುದು. ನನಗೆ ಇಂಗ್ಲಿಷ್ ಇಷ್ಟೇ ಬರೋದು ಎಂದು ಸುಮ್ಮನಾಗಿ ವಾಟ್ಸಪ್, ಫೇಸ್‌ಬುಕ್‌ನಲ್ಲಿ ಕಾಲ ಕಳೆಯಬೇಡಿ. ಯೂಟ್ಯೂಬ್‌ಗೆ ಹೋಗಿ learn english in kannada ಎಂದು ಹುಡುಕಿ. ಎಷ್ಟು ಒಳ್ಳೊಳ್ಳೆಯ ಕಲಿಕಾ ವಿಡಿಯೋಗಳಿವೆ ಎಂದು ನೋಡಿ. ಪ್ರತಿನಿತ್ಯ ಇಂತಹ ವಿಡಿಯೋಗಳನ್ನು ವೀಕ್ಷಿಸಿ ಪ್ರ್ಯಾಕ್ಟೀಸ್ ಮಾಡಿ.
ಇಲ್ಲಿ ಕಮ್ಯುನಿಕೇಷನ್ ಸ್ಕಿಲ್ ಮತ್ತು ಇಂಗ್ಲಿಷ್ ಕಲಿಕೆ ಎನ್ನುವುದು ಕೇವಲ ಉದಾಹರಣೆಯಾಗಿ ನೀಡಿದ್ದಷ್ಟೇ. ಓದಿದಾಗ ಏನೇ ಡೌಟ್ ಬಂದರೂ ಇಂಟರ್‌ನೆಟ್ ಸಹಾಯ ಪಡೆಯಿರಿ. ಕೆಲವೊಮ್ಮೆ ಕೆಲವೊಂದು ವಿಷಯಗಳು ಪಠ್ಯದಲ್ಲಿ ಕಡಿಮೆ ಇರುತ್ತದೆ. ಅದಕ್ಕಿಂತಲೂ ಹೆಚ್ಚಿನ ವಿವರವನ್ನು ಆನ್‌ಲೈನ್‌ನಲ್ಲಿ ಕಲಿಯಬಹುದು. ನಿಮ್ಮ ಕಂಪ್ಯೂಟರ್ ಕೋರ್ಸ್‌ನಲ್ಲಿ ಕೋಡಿಂಗ್ ಬೇಸಿಕ್ ಹೇಳಿರಬಹುದು. ನೀವು codecademy, w3schools ಇತ್ಯಾದಿ ವೆಬ್‌ಸೈಟ್‌ಗಳಲ್ಲಿ ಹೆಚ್ಚು ಕಲಿಯಬಹುದು. ಈಗ ಹೈಸ್ಕೂಲ್, ಪಿಯುಸಿಯಲ್ಲಿ ಬೇಸಿಕ್ ಕೋಡಿಂಗ್ ಹೇಳಿಕೊಡಲಾಗುತ್ತದೆ. ನೀವು ಆನ್‌ಲೈನ್‌ನಲ್ಲಿ ತುಸು ಹೆಚ್ಚೇ ಕಲಿತರೆ ಮುಂದೆ ನೆರವಿಗೆ ಬರಬಹುದು.
ಆನ್‌ಲೈನ್ ಕೋರ್ಸ್‌ಗೆ ಸೇರಿ
ಕಲಿಯಲು ಬಯಸುವವರಿಗೆ ಡಿಜಿಟಲ್ ಜಗತ್ತಿನಲ್ಲಿ ಹಲವು ಕೋರ್ಸ್‌ಗಳು ಕಾಯುತ್ತಿವೆ. ಇವೆಲ್ಲವನ್ನೂ ಬಳಸಿಕೊಳ್ಳಬೇಕು. ಆನ್‌ಲೈನ್‌ನಲ್ಲಿ ಹಣ ಕೇಳುತ್ತಾರೆ ಎಂದುಕೊಳ್ಳಬೇಡಿ. ಹಲವು ಕೋರ್ಸ್‌ಗಳು ಉಚಿತವಾಗಿ ದೊರಕುತ್ತವೆ. ಉಡೆಮಿಯಂತಹ ವೆಬ್‌ಸೈಟ್‌ನಲ್ಲಿ ನೂರಾರು ಉಚಿತ ಕೋರ್ಸ್‌ಗಳು ಇವೆ.
- ಗೂಗಲ್ ಉಚಿತ ಕೋರ್ಸ್ ಮತ್ತು ಸರ್ಟಿಫಿಕೇಷನ್: ಗೂಗಲ್ ಕೂಡ ಸಾಕಷ್ಟು ಉಚಿತ ಕೋರ್ಸ್‌ಗಳನ್ನು ನೀಡುತ್ತದೆ. Google Digital Garage ಎಂದು ಹುಡುಕಿ. ಇಲ್ಲಿರುವ ಅಸಂಖ್ಯಾತ ಕೋರ್ಸ್‌ಗಳನ್ನು ನೋಡಿದರೆ ಅಚ್ಚರಿಯಾಗಬಹುದು. ನೀವು ಏನು ಕಲಿಯಲು ಬಯಸುವಿರೋ ಅದಕ್ಕೆ ಸಂಬಂಧಪಟ್ಟ ಉಚಿತ ಕೋರ್ಸ್‌ಗಳು ಇವೆ. ಅಂತಿಮವಾಗಿ ಸರ್ಟಿಫಿಕೇಷನ್ ಬಯಸಿದರೆ (ರೆಸ್ಯುಮೆಯಲ್ಲಿ ನಮೂದಿಸಲು ಬೇಕಾಗುತ್ತದೆ) ಪೇಯ್ಡ್ ಕೋರ್ಸ್‌ಗೆ ಸೇರಬಹುದು. ಮೊದಲಿಗೆ ನೀವು ಕಲಿಯುವುದು ಮುಖ್ಯ, ಅದಕ್ಕಾಗಿ ಉಚಿತ ಕೋರ್ಸ್ ನೆರವು ಪಡೆಯಿರಿ. ಬಳಿಕ ಸರ್ಟಿಫಿಕೇಷನ್ ಪಡೆಯಿರಿ.
- ಕೋರ್ಸ್‌ಇರಾ: ನೀವು ಕೋರ್ಸ್‌ಇರಾ ಎಂಬ ವೆಬ್‌ಸೈಟ್‌ನಲ್ಲಿಯೂ ಹಲವು ಕೋರ್ಸ್‌ಗಳನ್ನು ಕಲಿಯಬಹುದು. ಇಲ್ಲಿ ಪಾವತಿ ಮತ್ತು ಉಚಿತ ಕೋರ್ಸ್‌ಗಳು (Coursera Degrees, Certificates, & Free Online Courses ) ಲಭ್ಯ ಇವೆ. ಮೊದಲಿಗೆ ಉಚಿತ ಕೋರ್ಸ್ ಕಲಿತು, ಉಪಯುಕ್ತ ಎನಿಸಿದರೆ ಪಾವತಿ ಕೋರ್ಸ್‌ಗಳಿಗೆ ಸೇರಬಹುದು.
- ಉಡೆಮಿ ಕೋರ್ಸ್: ಉಡೆಮಿ ಎಂಬ ಆನ್‌ಲೈನ್ ತಾಣವು ಸಾಕಷ್ಟು ಉಚಿತ ಮತ್ತು ಪಾವತಿ ಕೋರ್ಸ್‌ಗಳನ್ನು ನೀಡುತ್ತವೆ. Udemy: Online Courses ಎಂದು ಹುಡುಕಿದರೆ ನಿಮಗೆ ಸಾಕಷ್ಟು ಕೋರ್ಸ್‌ಗಳನ್ನು ಕಲಿಯಲು ಲಿಂಕ್ ದೊರಕುತ್ತದೆ.
- ಸ್ಟಾನ್‌ಫೋರ್ಡ್ (Free Online Courses - Stanford Online), ಎಜುಎಕ್ಸ್ (edX | Build new skills), ಸಿಂಪ್ಲಿಲರ್ನ್ (Simplilearn Free Online Courses) ಸೇರಿದಂತೆ ಹಲವು ವೆಬ್‌ಸೈಟ್‌ಗಳಲ್ಲಿ ಉಚಿತ ಮತ್ತು ಪಾವತಿ ಕೋರ್ಸ್‌ಗಳು ಲಭ್ಯ ಇವೆ.
ಸರಕಾರದ ಆನ್‌ಲೈನ್ ಕೋರ್ಸ್‌ಗಳು
ಕೇಂದ್ರ ಸರಕಾರವು ಕಲಿಯಲು ಬಯಸುವವರಿಗೆ ಮತ್ತು ಕೌಶಲ ಅಭಿವೃದ್ಧಿಪಡಿಸಿಕೊಳ್ಳಲು ಬಯಸುವವರಿಗೆ ಹಲವು ಕೋರ್ಸ್‌ಗಳನ್ನು ನೀಡುತ್ತಿದೆ. ಇದಕ್ಕಾಗಿ ಸ್ವಯಂ ಸೆಂಟ್ರಲ್ ಪೋರ್ಟಲ್ (Swayam Central)ಗೆ ಭೇಟಿ ನೀಡಬಹುದು. ಎಐಸಿಟಿಇ, ಸಿಇಎಸ್, ಇಗ್ನೊ, ಐಐಎಂಬಿ, ಎನ್‌ಸಿಇಆರ್‌ಟಿ, ಎನ್ಐಒಎಸ್, ಎನ್‌ಐಟಿಟಿಇಆರ್, ಎನ್‌ಪಿಟಿಸಿಎಲ್, ಯುಜಿಸಿ ಕೋರ್ಸ್‌ಗಳು ಲಭ್ಯ ಇವೆ. ಒಮ್ಮೆ https://swayam.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ ಲಭ್ಯವಿರುವ ಕೋರ್ಸ್‌ಗಳನ್ನು ಕಲಿಯಿರಿ.
ಕಲಿಕೆ ನಿರಂತರವಾಗಿರಲಿ
ಈ ಡಿಜಿಟಲ್ ಜಗತ್ತಿನಲ್ಲಿ ನಮ್ಮ ಅಮೂಲ್ಯ ಸಮಯವನ್ನು ಕದಿಯಲು ಹಲವು ಆಯ್ಕೆಗಳು ಇವೆ. ಆನ್‌ಲೈನ್‌ನಲ್ಲಿ ರೀಲ್ಸ್, ವಿಡಿಯೋ, ಮನರಂಜನೆ ಇತ್ಯಾದಿಗಳಿಗೆ ಕೊಂಚ ಸಮಯ ನೀಡಿ. ಇದೇ ರೀತಿ, ಆನ್‌ಲೈನ್ ಕಲಿಕಗೆ ಹೆಚ್ಚಿನ ಸಮಯ ನೀಡಿ. ನೀವು ಟೈಮ್ ಪಾಸ್ ಆಗುತ್ತಿಲ್ಲ ಎಂದು ಯಾವುದೋ ಒಂದು ಮನರಂಜನೆ ವಿಡಿಯೋ ನೋಡಬೇಕು ಎಂದು ಬಯಸಿದ್ದೀರಿ ಎಂದಿರಲಿ. ಆ ಮೂರು ಗಂಟೆಯನ್ನು ಆನ್‌ಲೈನ್ ಕಲಿಕೆಗೆ ನೀಡಿದರೆ ನಿಮ್ಮ ಕೈಗೆ ಒಂದು ಕಲಿಕಾ ಸರ್ಟಿಫಿಕೇಟ್ ದೊರಕುತ್ತದೆ. ವರ್ಷದಲ್ಲಿ ಕನಿಷ್ಠ ಹತ್ತು ಸರ್ಟಿಫಿಕೇಟ್ ಪಡೆದರೆ ನೀವು ಶಿಕ್ಷಣ ಮುಗಿಸಿ ಹೊರಗೆ ಬಂದಾಗ ಉದ್ಯೋಗ ಪಡೆಯಲು ನಿಮಗೆ ಕಷ್ಟವಾಗದು. ಈಗಾಗಲೇ ಉದ್ಯೋಗದಲ್ಲಿರುವವರು ತಮ್ಮ ಬಿಡುವಿನ ವೇಳೆಯಲ್ಲಿ ಈ ರೀತಿ ಕಲಿತರೆ ಬಡ್ತಿ, ಇನ್ನಷ್ಟು ಉತ್ತಮ ಉದ್ಯೋಗ ದೊರಕುತ್ತದೆ. ನಿರುದ್ಯೋಗಿಯಾಗುವುದನ್ನು ತಪ್ಪಿಸಲು ಇಂತಹ ಡಿಜಿಟಲ್ ಕಲಿಕೆ ನೆರವಾಗುತ್ತದೆ. ಆನ್‌ಲೈನ್ ಕಲಿಕೆ ನಿರಂತರವಾಗಿರಲಿ ಎನ್ನುವುದೇ ಈ ಡಿಜಿಟಲ್ ಜಗತ್ತು ಕಾಲಂನ ಇಂದಿನ ಹಾರೈಕೆ.
ಡಿಜಿಟಲ್ ಜಗತ್ತು ಅಂಕಣ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: praveen.chandra@htdigital.in , ht.kannada@htdigital.in