Digital Jagathu: ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಹೆಸರು ಬದಲಾಯಿಸಿದ್ಯಾಕೆ, Xನಿಂದ ಕಲಿಯಬಹುದಾದ RISK ಪಾಠ
ಕನ್ನಡ ಸುದ್ದಿ  /  ಜೀವನಶೈಲಿ  /  Digital Jagathu: ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಹೆಸರು ಬದಲಾಯಿಸಿದ್ಯಾಕೆ, Xನಿಂದ ಕಲಿಯಬಹುದಾದ Risk ಪಾಠ

Digital Jagathu: ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಹೆಸರು ಬದಲಾಯಿಸಿದ್ಯಾಕೆ, Xನಿಂದ ಕಲಿಯಬಹುದಾದ RISK ಪಾಠ

Life Lessons from Elon Musk: ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಹೆಸರನ್ನು ಎಕ್ಸ್‌ ಎಂದು ಬದಲಾಯಿಸುವ ರಿಸ್ಕ್‌ ತೆಗೆದುಕೊಂಡಿರುವುದು ಡಿಜಿಟಲ್‌ ಜಗತ್ತಿನಲ್ಲಿ ಸಾಧನೆ ಮಾಡಲು ಬಯಸುವವರಿಗೆ ಹಲವು ಪಾಠಗಳನ್ನು ತಿಳಿಸುತ್ತದೆ. ಯೂಟ್ಯೂಬ್‌, ವೆಬ್‌ಸೈಟ್‌, ರೀಲ್ಸ್‌, ಶಾರ್ಟ್ಸ್‌ ವಿಡಿಯೋ, ಆನ್‌ಲೈನ್‌ ಬಿಸ್ನೆಸ್‌ ಮಾಡುವವರು ಎಲಾನ್‌ ಮಸ್ಕ್‌ನಿಂದ ಸ್ಪೂರ್ತಿ ಪಡೆಯಬಹುದು

Xನಿಂದ ಕಲಿಯಬಹುದಾದ RISK ಪಾಠ
Xನಿಂದ ಕಲಿಯಬಹುದಾದ RISK ಪಾಠ

ಡಿಜಿಟಲ್‌ ಜಗತ್ತಿನಲ್ಲಿ ಕಳೆದ ಕೆಲವು ದಿನದಿಂದ X ಸುದ್ದಿಯಲ್ಲಿದೆ. ಟ್ವಿಟ್ಟರ್‌ ಎಂಬ ಮುದ್ದು ಹಕ್ಕಿಯನ್ನು ಓಡಿಸಿ ಎಲಾನ್‌ ಮಸ್ಕ್‌ X ಎಂಬ ಒಂದೇ ಅಕ್ಷರದ ಹೆಸರಿಟ್ಟದ್ದು ಎಲ್ಲರನ್ನೂ ಅಚ್ಚರಿಗೆ ದೂಡಿತ್ತು. X ಎಂಬ ಹೆಸರಿಡುವುದು ತುಂಬಾ RISK ಎಂದು ಎಲಾನ್‌ ಮಸ್ಕ್‌ಗೆ ಗೊತ್ತು. ಆದರೆ, ಆತನಿಗೆ RISK ತೆಗೆದುಕೊಳ್ಳುವುದು ಒಂದು ಅಭ್ಯಾಸ. ಅದೊಂದು ಥ್ರಿಲ್‌ ಕೊಡುವ ಸಂಗತಿ. ಅದು ಅವನ ಯಶಸ್ಸಿನ ಗುಟ್ಟೂ ಹೌದು. ಡಿಜಿಟಲ್‌ ಜಗತ್ತಿನಲ್ಲಿರುವ ಅಗಾಧ ಅವಕಾಶಗಳನ್ನು ಬಳಸಿಕೊಂಡು ಯಶಸ್ಸು ಸಾಧಿಸಲು ಬಯಸುವವರಿಗೆ X ಹೆಸರು ಬದಲಾವಣೆ ಒಂದು ಪಾಠವೂ ಹೌದು.

ಎಲಾನ್‌ ಮಸ್ಕ್‌ ನಮಗೆಲ್ಲರಿಗೂ ಮುಖ್ಯವಾಗಿ ಯುವಜನತೆಗೆ Twitter ಹೆಸರನ್ನು X ಎಂದು ಬದಲಾಯಿಸಿ ಹೊಸ ಪಾಠವೊಂದನ್ನು ಹೇಳಿದ್ದಾನೆ. ಅದು, ಡಿಜಿಟಲ್‌ ಜಗತ್ತಿನಲ್ಲಿ ಹೆದರಬಾರದು. ಬದಲಾವಣೆ ತರಲು ಹಿಂಜರಿಯಬಾರದು. ಹಠವಿದ್ದರೆ ಅಲ್ಲಿ ಸಾಧನೆ ಕಷ್ಟವಲ್ಲ ಎಂದು ಸೂಚ್ಯವಾಗಿ ತಿಳಿಸಿದ್ದಾನೆ.

ಮೊದಲೆಲ್ಲ ಉದ್ಯಮ ನಿರ್ಮಿಸಲು ಅಥವಾ ಹಣ ಸಂಪಾದನೆಗೆ ಸವಾಲು ಸಾಕಷ್ಟಿತ್ತು. ಮುಖ್ಯವಾಗಿ ಬಂಡವಾಳದ ಕೊರತೆ ಇತ್ತು. ಬಡವರಿಗೆ ಸ್ವಂತ ಕಂಪನಿ, ಉದ್ಯಮ ಆರಂಭಿಸಲು ಸೂಕ್ತವಾದ ಹಣಕಾಸು ನೆರವು ಇರಲಿಲ್ಲ. ಆದರೆ, ಈಗ ಡಿಜಿಟಲ್‌ ಜಗತ್ತಿನಲ್ಲಿ ಹಣ ಸಂಪಾದನೆಗೆ ಬೇಕಿರುವುದು ಹಣಕಾಸು ಬಂಡವಾಳವಲ್ಲ. ಕಠಿಣ ಪರಿಶ್ರಮ ಮತ್ತು ದೊಡ್ಡ ಕನಸು. ಎಲ್ಲಕ್ಕಿಂತ ಮುಖ್ಯವಾಗಿ ಬೇಕಿರುವುದು ಡಿಜಿಟಲ್‌ ಜಗತ್ತಿನಲ್ಲಿ ರಿಸ್ಕ್‌ ತೆಗೆದುಕೊಳ್ಳುವ ಹುಮ್ಮಸ್ಸು. ಇದನ್ನೇ ನಾವು Xನಿಂದ ಅಂದರೆ ಎಲಾನ್‌ ಮಸ್ಕ್‌ನಿಂದ ಕಲಿಯೋಣ.

ಒಮ್ಮೆ ಯೂಟ್ಯೂಬ್‌ ಗಮನಿಸಿ. ಎಷ್ಟೊಂದು ಚಾನೆಲ್‌ಗಳಿವೆ. ಕೆಲವು ಚಾನೆಲ್‌ಗಳಿಗೆ ಲಕ್ಷಲಕ್ಷ ಸಬ್‌ಸ್ಕ್ರೈಬರ್ಸ್‌. ಕೋಟಿ ಕೋಟಿ ಹಣ ಸಂಪಾದನೆ ಮಾಡುವ ತರುಣ ತರುಣಿಯರ ಯೂಟ್ಯೂಬ್‌ ಚಾನೆಲ್‌ಗಳಿವೆ. ಅವರೆಲ್ಲರಿಗೂ ಯಶಸ್ಸು ಸುಲಭವಾಗಿ ಬಂದಿರುವುದಲ್ಲ. ಡಿಜಿಟಲ್‌ ಜಗತ್ತಿನಲ್ಲಿ ಏನು ಬೇಕಾದರೂ ಮಾಡಿದರೆ ನಡೆಯುತ್ತದೆ ಎಂದು ಅವರು ಬೇಕಾಬಿಟ್ಟಿಯಾಗಿ ಚಾನೆಲ್‌ ನಡೆಸಿದವರಲ್ಲ. ನಿರಂತರ ಪರಿಶ್ರಮ, ನೋವು, ಕಷ್ಟ ಎಲ್ಲಾ ಅನುಭವಿಸಿದ ಬಳಿಕ ಹಂತಹಂತವಾಗಿ ಮೇಲಕ್ಕೆ ಬಂದಿದ್ದಾರೆ. ಈಗಲೂ ಸಾಕಷ್ಟು ಜನರು ಯೂಟ್ಯೂಬ್‌ ಆರಂಭಿಸಿ ಹಣ ಮಾಡೋಣ ಎಂದು ಹೊರಡುತ್ತಾರೆ. ಒಂದು ಸಾವಿರ ಸಬ್‌ಸ್ಕ್ರೈಬರ್‌ ಬಿಡಿ, ನೂರು ಜನರನ್ನು ಪಡೆಯಲು ಕಷ್ಟಪಡುತ್ತಾರೆ. ಆದರೆ, ಯಾರು ಡಿಜಿಟಲ್‌ ಜಗತ್ತನ್ನು ಸೀರಿಯಸ್‌ ಆಗಿ ತೆಗೆದುಕೊಳ್ಳುತ್ತಾರೋ, ಯಾರು ದೊಡ್ಡದಾದ ಗುರಿಯನ್ನು ಇಟ್ಟುಕೊಂಡು ಡಿಜಿಟಲ್‌ ಜಗತ್ತನ್ನು ಬಳಸುತ್ತಾರೋ ಅವರು ಯಶಸ್ಸು ಪಡೆಯುತ್ತಾರೆ.

ಈಗ ಮತ್ತೆ Xಗೆ ಹಿಂತುರುಗೋಣ. ಎಲಾನ್‌ ಮಸ್ಕ್‌ ಏಕೆ ಟ್ವಿಟ್ಟರ್‌ ಎಂದು ಹೆಸರು ಬದಲಾಯಿಸಿದ? ಅದಕ್ಕೆ ಉತ್ತರ "ಅವನ ದೊಡ್ಡ ಕನಸು". ಆ ಕನಸು ಈಡೇರಿಕೆಗಾಗಿ X ಎಂಬ ರಿಸ್ಕ್‌ ತೆಗೆದುಕೊಂಡ. ಅವನೇ ಸಂದರ್ಶನವೊಂದರಲ್ಲಿ ಹೇಳಿಕೊಂಡಂತೆ, "140 ಅಕ್ಷರಗಳ ಮಾಹಿತಿ ಹಂಚಿಕೊಳ್ಳಲು ಸೀಮಿತವಾಗಿದ್ದಾಗ ಟ್ವಿಟ್ಟರ್‌ ಎಂಬ ಹೆಸರು ಸರಿ ಇತ್ತು. ಈಗ ಟ್ವಿಟ್ಟರ್‌ ಇಷ್ಟಕ್ಕೆ ಸೀಮಿತವಾಗಿ ಉಳಿದಿಲ್ಲ. ಮುಂದಿನ ದಿನಗಳಲ್ಲಿ ಇಷ್ಟೇ ಆಗಿ ಉಳಿಯುವುದಿಲ್ಲ. ಈಗ ನೀವು ಇದರಲ್ಲಿ ಅಕ್ಷರ ಮಿತಿ ಲೆಕ್ಕಹಾಕದೆ ಪೋಸ್ಟ್‌ ಮಾಡಬಹುದು, ಹಲವು ಗಂಟೆಗಳ ವಿಡಿಯೋ ಹಂಚಿಕೊಳ್ಳಬಹುದು. ಈಗ ಹಕ್ಕಿಯ ಚೀಂವ್‌ ಚೀಂವ್‌ ಟ್ವೀಟ್‌ ಹೆಸರು ಸೂಕ್ತವಲ್ಲ. ಎಕ್ಸ್‌ ಎನ್ನುವುದು ಈ ಕಂಪನಿಯ ಭವಿಷ್ಯದ ಹೊಸ ಆರಂಭ" ಎಂದು ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ "ಇದು ನಿಮ್ಮ ಹಣಕಾಸು ಜಗತ್ತು ಆಗಲಿದೆ" ಎಂದು ಭವಿಷ್ಯದ ಫೀಚರ್‌ ಕುರಿತು ಸುಳಿವು ನೀಡಿದ್ದಾರೆ.

ಡಿಜಿಟಲ್‌ ಜಗತ್ತು ಒಂದು ಭ್ರಮೆಯೂ ಹೌದು, ವಾಸ್ತವವೂ ಹೌದು. ಈಗ ನಾವೆಲ್ಲರೂ ಟ್ವೀಟ್‌ ಟ್ವೀಟ್‌ ಅನ್ನಬಹುದು. ಒಂದು ವರ್ಷ ಕಳೆದ ಬಳಿಕ ನಮ್ಮ ಬಾಯಲ್ಲಿ X ಎಕ್ಸ್‌ ಎಂದು ಬರಬಹುದು. ಟ್ವಿಟ್ಟರ್‌ ಎಂಬ ಭ್ರಮೆಯನ್ನು ಕಳಚಿಕೊಂಡು ನಾವು Xಗೆ ಅಂಟಿಕೊಳ್ಳಬಹುದು. ಡಿಜಿಟಲ್‌ ಎಂಬ ಭ್ರಮಾ ಜಗತ್ತಿನಲ್ಲಿ ಅವಕಾಶಗಳು ಸಾಕಷ್ಟಿವೆ. ನಿಮಗೆ ಯಾವ ದಾರಿ ಬೇಕು ಎಂದು ಆಯ್ದುಕೊಳ್ಳಬೇಕಷ್ಟೇ. ನೆನಪಿಡಿ, ಡಿಜಿಟಲ್‌ ಜಗತ್ತು ಎನ್ನುವುದು ಭ್ರಮೆ. ನಮ್ಮ ಪ್ರತಿಭೆ ಎಂಬುದು ವಾಸ್ತವ. ಪ್ರತಿಭೆ ಎಂಬ ಬಂಡವಾಳವನ್ನು ಡಿಜಿಟಲ್‌ ಜಗತ್ತಿನಲ್ಲಿ ಸರಿಯಾಗಿ ಇನ್ವೆಸ್ಟ್‌ ಮಾಡುವುದು ಅತ್ಯಗತ್ಯ.

ಟ್ವಿಟ್ಟರ್‌ ಸ್ವಾಧೀನಪಡಿಸಿಕೊಂಡ ಬಳಿಕ ಮುಖ್ಯವಾಗಿ ಎಲಾನ್‌ ಮಸ್ಕ್‌ನ ಎರಡು ಗುಣಗಳನ್ನು ನಾವು ಗುರುತಿಸಬಹುದು. ಒಂದು ರಿಸ್ಕ್‌ ತೆಗೆದುಕೊಳ್ಳುವುದು ಮತ್ತು ಇನ್ನೊಂದು ನಿರ್ಣಯ ತೆಗೆದುಕೊಳ್ಳುವುದು. ಟ್ವಿಟ್ಟರ್‌ ವಿಷಯದಲ್ಲಿ ಇಂದಿನವರೆಗೆ ಎಲಾನ್‌ ಮಸ್ಕ್‌ ನಿಜಾರ್ಥದ ಯಶಸ್ಸು ಗಳಿಸಿಲ್ಲ. ಆದರೆ, ಅವನಿಗೆ ಗೊತ್ತು, ವೈಫಲ್ಯ ಎನ್ನುವುದು ಸೋಲಲ್ಲ, ಮುಂದಿನ ಯಶಸ್ಸಿಗೆ ಮೆಟ್ಟಿಲು ಎಂದು. ಆತ ಟೀಕೆಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಆತನಿಗೆ ಆತನ ನಿರ್ಣಯದ ಮೇಲೆ ನಂಬಿಕೆ ಇತ್ತು. ರಿಸ್ಕ್‌ ತೆಗೆದುಕೊಂಡ. ಅವನ ಹಿಂದಿನ ಸಾಧನೆಗಳನ್ನು ನೋಡಿದವರಿಗೆ X ಮೂಲಕ ಅವನು ಸಕ್ಸಸ್‌ ಪಡೆಯುತ್ತಾನೆ ಎನ್ನುವುದೂ ಗೊತ್ತು.

ಕಳೆದ ಕೆಲವು ವರ್ಷಗಳಲ್ಲಿ ಡಿಜಿಟಲ್‌ ಜಗತ್ತಿನಲ್ಲಿ ಹಲವು ಕನ್ನಡಿಗರು ಹೆಸರು ಸಾಧನೆ ಮಾಡಿದ್ದಾರೆ. ಡಿಜಿಟಲ್‌ ಜಗತ್ತಿಗೆ ತಮ್ಮ ಪ್ರತಿಭೆಯನ್ನು ಬಂಡವಾಳವಾಗಿ ಉತ್ತಮ ಬೆಳೆ ತೆಗೆಯುತ್ತಿದ್ದಾರೆ. ಆದರೆ, ಕೆಲವರು ರಿಸ್ಕ್‌ ತೆಗೆದುಕೊಳ್ಳಲು ಹಿಂಜರಿದು ಹಿಂದಕ್ಕೆ ಹೆಜ್ಜೆ ಇಡುತ್ತಾರೆ. ಯಾರೋ ಟೀಕೆ ಮಾಡುತ್ತಾರೆ, ಯಾರೋ ಏನೋ ಹೇಳುತ್ತಾರೆ ಎಂದು ವಾಪಸ್‌ ಹಳೆಯ ಕೆಲಸವನ್ನೇ ಮುಂದುವರೆಸುತ್ತಾರೆ. ಆದರೆ, ತಮ್ಮ ಪ್ರತಿಭೆಯ ಮೇಲೆ ನಂಬಿಕೆ ಇಟ್ಟವರು ಸ್ವಂತ ಇ-ಕಾಮರ್ಸ್‌, ವೆಬ್‌ಸೈಟ್‌, ಯೂಟ್ಯೂಬ್‌ ಮಾಡಿ ಯಶಸ್ಸಿಗಾಗಿ ಸದಾ ಪ್ರಯತ್ನಿಸುತ್ತಿದ್ದಾರೆ. ನೆನಪಿಡಿ, ಅವರೆಲ್ಲರನ್ನೂ ಆರಂಭದಲ್ಲಿ ಟೀಕಿಸಿದ್ದವರು ಮೊದಲು ಇದ್ದಲ್ಲಿಯೇ ಇದ್ದಾರೆ. ಆದರೆ, ಇವರು ಯಶಸ್ಸು ಪಡೆದು ತುಂಬಾ ಮುಂದಕ್ಕೆ ಸಾಗಿರುತ್ತಾರೆ.

ಡಿಜಿಟಲ್‌ ಜಗತ್ತು ಕ್ಷಿಪ್ರವಾಗಿ ವೇಷ ಬದಲಾಯಿಸುತ್ತ ವೇಗವಾಗಿ ಅಭಿವೃದ್ಧಿಕಾಣುತ್ತ ಇದೆ. ಈಗ ಎಐ ಟೆಕ್ನಾಲಜಿ ಹೆಚ್ಚು ಸದ್ದು ಮಾಡುತ್ತಿದೆ. ಇನ್ನು ಕೆಲವು ವರ್ಷ ಕಳೆದಾಗ ಡಿಜಿಟಲ್‌ ಜಗತ್ತಿನಲ್ಲಿ ಸಾಕಷ್ಟು ಬದಲಾವಣೆಯಾಗುವುದು ನಿಜ. ಡಿಜಿಟಲ್‌ ಜಗತ್ತಿನಲ್ಲಿ ಆಗುವ ಬದಲಾವಣೆಯು ನಮ್ಮ ನಿಮ್ಮೆಲ್ಲರ ವಾಸ್ತವ ಜಗತ್ತನ್ನೂ ಬದಲಾಯಿಸುವ ಶಕ್ತಿ ಹೊಂದಿದೆ. ಹೀಗಾಗಿ, ನಮ್ಮ ಸಾಫ್ಟ್‌ವೇರ್‌ ಅನ್ನು ಅಪ್ಡೇಟ್‌ ಮಾಡುತ್ತಿರೋಣ.

ಡಿಜಿಟಲ್‌ ಜಗತ್ತು ಅಂಕಣ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: praveen.chandra@htdigital.in , ht.kannada@htdigital.in

Whats_app_banner