ಗೂಗಲ್ ಮ್ಯಾಪ್ಸ್ vs ಓಲಾ ಮ್ಯಾಪ್ಸ್: ಭಾರತದ ಬಳಕೆದಾರರಿಗೆ ಯಾವ ಆ್ಯಪ್ ಉತ್ತಮ, ಏನೆಲ್ಲ ವೈಶಿಷ್ಟ್ಯಗಳಿವೆ?
ನಾವು ಯಾವುದೇ ಮೂಲೆಯಲ್ಲಿದ್ದರೂ ನಮ್ಮನ್ನು ನಾವು ಹೋಗಬೇಕಾಗಿರುವ ಸ್ಥಳಕ್ಕೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತದೆ ಮ್ಯಾಪ್ಸ್. ಗೂಗಲ್ ಮ್ಯಾಪ್ ನಮ್ಮೆಲ್ಲರ ಜೀವನಾಡಿಯಂತಾಗಿದೆ. ಇದೀಗ ಓಲಾ ಕಂಪನಿ ಕೂಡ ತನ್ನದೇ ಆದ ಓಲಾ ಮ್ಯಾಪ್ಸ್ ಆಪ್ಲಿಕೇಶನ್ ಅನ್ನು ಅಭಿವೃದ್ಧಿ ಪಡಿಸಿದೆ. ಹಾಗಾದರೆ ಭಾರತದ ಬಳಕೆದಾರರಿಗೆ ಈ ಎರಡರಲ್ಲಿ ಯಾವುದು ಉತ್ತಮ. (ಬರಹ: ವಿನಯ್ ಭಟ್)
ಆನ್‌ಲೈನ್ ಕ್ಯಾಬ್ ಸೇವಾ ಪೂರೈಕೆದಾರ ಕಂಪನಿ ಓಲಾ ಇತ್ತೀಚೆಗಷ್ಟೆ ತನ್ನದೇ ಆದ ಮ್ಯಾಪ್ಸ್ ಅನ್ನು ಬಿಡುಗಡೆ ಮಾಡಿದೆ. ಇದಕ್ಕೆ ಓಲಾ ಮ್ಯಾಪ್ಸ್ (Ola Maps) ಎಂದು ಹೆಸರಿಸಲಾಗಿದೆ. ಕಂಪನಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಈ ಹೊಸ ಮ್ಯಾಪ್ ಆ್ಯಪ್ ಬಗ್ಗೆ ಪೋಸ್ಟ್ ಮಾಡುವ ಮೂಲಕ ಮಾಹಿತಿಯನ್ನು ನೀಡಿದ್ದರು. ಈ ಮೂಲಕ ಜನರು ಇದೀಗ ಗೂಗಲ್ ಮ್ಯಾಪ್ಸ್ (Google Maps) ಮಾತ್ರವಲ್ಲದೆ ಓಲಾ ಮ್ಯಾಪ್ಸ್ (Ola Maps) ಸಹಾಯದಿಂದ ಮಾರ್ಗಗಳನ್ನು ಹುಡುಕಬಹುದು. ಆದರೆ, ಇವೆರಡರಲ್ಲಿ (Google Maps Vs Ola Maps) ಯಾವುದು ಉತ್ತಮ? ಏನು ವೈಶಿಷ್ಟ್ಯಗಳಿವೆ? ಎಂಬ ಗೊಂದಲ ಅನೇಕರಲ್ಲಿದೆ. ನಿಮ್ಮ ಗೊಂದಲಕ್ಕೆ ಇಲ್ಲಿದೆ ಪರಿಹಾರ.
ಓಲಾ ಮ್ಯಾಪ್ಸ್ ಈಗಾಗಲೇ ನೂತನ ಅಪ್ಡೇಟ್ ಕೂಡ ಪರಿಚಯಿಸಿದ್ದು, ಇದೀಗ ಹೊಸ ಮಾರ್ಗಸೂಚಿ ಮತ್ತು ಬೆಲೆಯಲ್ಲಿ ಬದಲಾವಣೆ ತಂದಿದೆ. ಡಿಜಿಟಲ್ ಸ್ವಾವಲಂಬನೆಯನ್ನು ಉತ್ತೇಜಿಸುವ ಗುರಿಯನ್ನು ಓಲಾ ಹೊಂದಿದೆ. ಭಾರತೀಯ ವಾಣಿಜ್ಯೋದ್ಯಮಿಗಳು, ವಿದ್ಯಾರ್ಥಿಗಳು ಮತ್ತು ಸಾಫ್ಟ್‌ವೇರ್ ಡೆವಲಪರ್‌ಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಜೊತೆಗೆ, ಓಲಾ ಬೆಲೆ ಕಡಿತ ಮಾಡಿದೆ. ಗೂಗಲ್ ಮ್ಯಾಪ್ಸ್ ಇಡೀ ಪ್ರಪಂಚದ ಬಗ್ಗೆ ಸಮಗ್ರವಾಗಿ ತೋರಿಸುತ್ತದೆ, ಆದರೆ ಓಲಾ ಮ್ಯಾಪ್ಸ್ ಭಾರತೀಯ ಬಳಕೆದಾರರಿಗೆ ಮುಖ್ಯವಾಗಿ ಸ್ಥಳೀಯರಿಗೆ ಅನುಕೂಲವಾಗುವಂತೆ ರಚಿಸಲಾಗಿದೆ.
ಗೂಗಲ್ ನಕ್ಷೆಗಳು (Google Maps)
ಗೂಗಲ್ ಮ್ಯಾಪ್ಸ್ ಗೂಗಲ್ನಿಂದ ಮಾಡಿದ ಅಪ್ಲಿಕೇಶನ್ ಆಗಿದೆ, ಇದು ಫೋನ್‌ನಲ್ಲಿ ಡೀಫಾಲ್ಟ್ ಆಗಿ ಇರುತ್ತದೆ. ಈ ಅಪ್ಲಿಕೇಶನ್ ಪ್ರಪಂಚದಲ್ಲಿರುವ ಎಲ್ಲ ಸ್ಥಳಗಳ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ. ಬೀದಿಗಳು, ಕಟ್ಟಡಗಳು, ಸ್ಥಳಗಳು, ಅಂಗಡಿಗಳು, ರೆಸ್ಟೋರೆಂಟ್‌ಗಳು ಮತ್ತು ಹೆಚ್ಚಿನದನ್ನು ಹುಡುಕಲು ನೀವು ಇದನ್ನು ಬಳಸಬಹುದು. ಈ ಅಪ್ಲಿಕೇಶನ್‌ನ ಸಹಾಯದಿಂದ, ನೀವು ಯಾವುದೇ ಸ್ಥಳದ 360 ಡಿಗ್ರಿ ವೀಕ್ಷಣೆಯನ್ನು ಕೂಡ ನೋಡಬಹುದು.
ಇದು ನಿಮಗೆ ನೈಜ-ಸಮಯದ ಟ್ರಾಫಿಕ್ ಅಪ್ಡೇಟ್ ಅನ್ನು ಸಹ ಒದಗಿಸುತ್ತದೆ, ಆದ್ದರಿಂದ ನೀವು ವಾಹನ ದಟ್ಟಣೆಯ ಮಾರ್ಗವನ್ನು ಬದಲಾಯಿಸಬಹುದು. ಯಾವುದೇ ಸ್ಥಳದ ಹೆಸರು ಅಥವಾ ವಿಳಾಸವನ್ನು ಟೈಪ್ ಮಾಡುವ ಮೂಲಕ ನೀವು ನಿರ್ದೇಶನಗಳನ್ನು ಪಡೆಯಬಹುದು. ಕಾರು, ಬೈಕ್ ಮತ್ತು ಸಾರ್ವಜನಿಕ ಸಾರಿಗೆ ಸೇರಿದಂತೆ ವಿವಿಧ ಪ್ರಯಾಣ ವಿಧಾನಗಳಿಗೆ ಗೂಗಲ್ ನಕ್ಷೆಗಳು ಸಹಾಯ ಮಾಡುತ್ತದೆ. ಅಲ್ಲದೆ ನೀವು ನಿಮಗೆ ಬೇಕಾಗ ಸ್ಥಳದ ನಕ್ಷೆಯನ್ನು ಡೌನ್‌ಲೋಡ್ ಮಾಡಬಹುದು ಮತ್ತು ಅದನ್ನು ಆಫ್‌ಲೈನ್‌ನಲ್ಲಿ ಬಳಸಬಹುದು. ಇದು ಇಂಟರ್ನೆಟ್ ಸಂಪರ್ಕವಿಲ್ಲದಿದ್ದಾಗ ಉಪಯುಕ್ತವಾಗಿದೆ.
ಆದರೆ, ಗೂಗಲ್ ಮ್ಯಾಪ್ಸ್ನ ಕೆಲವು ವೈಶಿಷ್ಟ್ಯಗಳು ಭಾರತೀಯ ಬಳಕೆದಾರರಿಗೆ ಅನುಕೂಲವಾಗುವಂತಹ ನಿರ್ದಿಷ್ಟವಾದ ಸ್ಥಳೀಯ ಮಾಹಿತಿಯನ್ನು ಹೊಂದಿರುವುದಿಲ್ಲ. ಉದಾಹರಣೆಗೆ, ಹಳ್ಳಿಯಲ್ಲಿರುವ ಅಂಗಡಿ, ಕಟ್ಟಡವನ್ನು ತೋರಿಸುವುದಿಲ್ಲ.
ಇದನ್ನೂ ಓದಿ: ಸ್ಯಾಮ್‌ಸಂಗ್‌ಗೆ ಶುರುವಾಯಿತು ನಡುಕ: ವಿವೋದಿಂದ ಬರುತ್ತಿದೆ ಮೊಟ್ಟ ಮೊದಲ 200MP ಕ್ಯಾಮೆರಾ ಫೋನ್
ಓಲಾ ನಕ್ಷೆಗಳು (Ola Maps)
ಓಲಾ ಮ್ಯಾಪ್ಸ್ ಎಂಬುದು ಓಲಾ ಕ್ಯಾಬ್ಸ್ ಅಭಿವೃದ್ಧಿಪಡಿಸಿದ ಮ್ಯಾಪ್ ಸೇವೆಯಾಗಿದ್ದು, ಇದು ಭಾರತದ ಮೇಲೆ ಮಾತ್ರ ಕೇಂದ್ರೀಕೃತವಾಗಿದೆ. ಇದು ಗೂಗಲ್ ನಕ್ಷೆಗಳಂತೆಯೇ ಹಲವು ವೈಶಿಷ್ಟ್ಯಗಳನ್ನು ಒದಗಿಸುತ್ತದೆ, ಆದರೆ ಇದು ಭಾರತೀಯ ಬಳಕೆದಾರರಿಗೆ ಹೆಚ್ಚು ಉಪಯುಕ್ತವಾಗುವಂತೆ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ದೇಶದ ಎಲ್ಲಾ ಚಿಕ್ಕ ಸ್ಥಳಗಳನ್ನು ಕೂಡ ಒಳಗೊಂಡಿದೆ. ಈ ಮೂಲಕ ದೇಶಕ್ಕೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತದೆ.
ಇದರ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಸ್ಥಳೀಯ ಅಗತ್ಯಗಳು ಮತ್ತು ಆದ್ಯತೆಗಳ ಮೇಲೆ ರಚಿಸಲಾಗಿದೆ. ಈ ಮೂಲಕ ಭಾರತದೊಳಗಿನ ನಿರ್ದಿಷ್ಟ ಪ್ರದೇಶಗಳಿಗೆ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಒದಗಿಸಲು ಅನುಮತಿಸುತ್ತದೆ. ಮುಂಬರುವ ಸಮಯದಲ್ಲಿ ಇನ್ನೂ ಹಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗುವುದು ಎಂದು ಕಂಪನಿ ಹೇಳಿದೆ. ಉದಾಹರಣೆಗೆ ಸ್ಟ್ರೀಟ್ ವ್ಯೂ, 3D ನಕ್ಷೆಗಳು, ನ್ಯೂರಲ್ ರೇಡಿಯನ್ಸ್ ಫೀಲ್ಡ್ಸ್ (NERFs), ಒಳಾಂಗಣ ಚಿತ್ರಗಳು, ಡ್ರೋನ್ ನಕ್ಷೆಗಳು ಇತ್ಯಾದಿ. ಓಲಾ ನಕ್ಷೆಗಳನ್ನು ರಚಿಸಲು ಓಪನ್‌ಸ್ಟ್ರೀಟ್‌ಮ್ಯಾಪ್ ಹೆಸರಿನ ಓಪನ್ ಸೋರ್ಸ್ ಪ್ರಾಜೆಕ್ಟ್ ಅನ್ನು ಸಹ ಬಳಸಲಾಗಿದೆ. ಓಪನ್‌ಸ್ಟ್ರೀಟ್‌ಮ್ಯಾಪ್ ಜೊತೆಗೆ, ಓಲಾ ತನ್ನದೇ ಆದ ಡೇಟಾವನ್ನು ಸಹ ಬಳಸಿಕೊಂಡಿದೆ.
ಸಾಮಾನ್ಯ ಜನರು ಗೂಗಲ್ ಮ್ಯಾಪ್ಸ್ ಅನ್ನು ಉಚಿತವಾಗಿ ಬಳಸಬಹುದು. ಆದರೆ ಓಲಾ ನಂತಹ ಕಂಪನಿಗಳು ಗೂಗಲ್ ಮ್ಯಾಪ್ಸ್ ನ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (API) ಅನ್ನು ಬಳಸುತ್ತವೆ, ಇದಕ್ಕಾಗಿ ಅವರು ಪಾವತಿಸಬೇಕಾಗುತ್ತದೆ. ಓಲಾ ತನ್ನದೇ ಆದ ನಕ್ಷೆಯನ್ನು ಬಳಸುವುದರಿಂದ ತನ್ನ ವೆಚ್ಚವನ್ನು ಉಳಿಸುತ್ತದೆ. ಓಲಾ ಮ್ಯಾಪ್ಸ್ ಓಲಾದ ರೈಡ್-ಹೇಲಿಂಗ್ ಸೇವೆ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರ ಅಲ್ಲ. ಇತರ ಅಪ್ಲಿಕೇಶನ್ ತಯಾರಿಕೆ ಕಂಪನಿಗಳು ಕೂಡ ತಮ್ಮ ಅಪ್ಲಿಕೇಶನ್‌ಗಳಲ್ಲಿ ಓಲಾ ನಕ್ಷೆಗಳನ್ನು ಬಳಸಲು ಸಾಧ್ಯವಾಗುತ್ತದೆ. ಆದರೆ ಇದಕ್ಕಾಗಿ ಡೆವಲಪರ್‌ಗಳು ಓಲಾಗೆ ಹಣ ಪಾವತಿಸಬೇಕಾಗುತ್ತದೆ.
ಬರಹ: ವಿನಯ್ ಭಟ್