ಕನಿಷ್ಠ ಎಷ್ಟು ದಿನಗಳಿಗೊಮ್ಮೆ ಕಾರನ್ನು ಓಡಿಸಬೇಕು; ಕಾರು ಸ್ಟಾರ್ಟ್ ಮಾಡದಿದ್ದರೆ ಏನಾಗುತ್ತದೆ?
ಕನ್ನಡ ಸುದ್ದಿ  /  ಜೀವನಶೈಲಿ  /  ಕನಿಷ್ಠ ಎಷ್ಟು ದಿನಗಳಿಗೊಮ್ಮೆ ಕಾರನ್ನು ಓಡಿಸಬೇಕು; ಕಾರು ಸ್ಟಾರ್ಟ್ ಮಾಡದಿದ್ದರೆ ಏನಾಗುತ್ತದೆ?

ಕನಿಷ್ಠ ಎಷ್ಟು ದಿನಗಳಿಗೊಮ್ಮೆ ಕಾರನ್ನು ಓಡಿಸಬೇಕು; ಕಾರು ಸ್ಟಾರ್ಟ್ ಮಾಡದಿದ್ದರೆ ಏನಾಗುತ್ತದೆ?

ಭಾರತ ಸೇರಿದಂತೆ ವಿಶ್ವದಲ್ಲಿ ಕಾರು ಖರೀದಿಸುವವರ ಸಂಖ್ಯೆ ದುಪ್ಪಟ್ಟಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಾರು ಮಾರಾಟದ ಸಂಖ್ಯೆ ಅಧಿಕವಾಗಿದೆ. ಆದರೆ, ಇದನ್ನು ನಿರಂತರವಾಗಿ ಓಡಿಸುವುದು ಕೆಲವೇ ಮಂದಿ ಮಾತ್ರ. ತಿಂಗಳುಗಟ್ಟಲೆ ಕೆಲವರ ಕಾರು ಶೆಡ್​ನಲ್ಲೇ ಇರುತ್ತದೆ. ಹಾಗಾದರೆ ಕಾರನ್ನು ಸಮಯಕ್ಕೆ ಸರಿಯಾಗಿ ಓಡಿಸದಿದ್ದರೆ ಏನೆಲ್ಲ ತೊಂದರೆ ಉಂಟಾಗುತ್ತದೆ? ನೋಡೋಣ.

ಕನಿಷ್ಠ ಎಷ್ಟು ದಿನಗಳಿಗೊಮ್ಮೆ ಕಾರನ್ನು ಓಡಿಸಬೇಕು
ಕನಿಷ್ಠ ಎಷ್ಟು ದಿನಗಳಿಗೊಮ್ಮೆ ಕಾರನ್ನು ಓಡಿಸಬೇಕು (pexel)

ನಿಮ್ಮ ಬಳಿ ಕಾರಿದ್ದರೆ ಅದನ್ನು ನಿಯಮಿತವಾಗಿ ಓಡಿಸುವುದು ಅವಶ್ಯಕ. ಆಗ ಮಾತ್ರ ಅದರ ಬ್ಯಾಟರಿ, ಎಂಜಿನ್ ಮತ್ತು ಇತರ ಪ್ರಮುಖ ಭಾಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ಕಾರನ್ನು ದೀರ್ಘಕಾಲದವರೆಗೆ ಓಡಿಸದಿದ್ದರೆ, ಅದರಲ್ಲಿ ಅನೇಕ ದೋಷಗಳು ಕಾಣಿಸಿಕೊಳ್ಳುತ್ತವೆ. ನೀವು ಎಮರ್ಜೆನ್ಸಿಯಾಗಿ ಎಲ್ಲೋ ಹೋಗಬೇಕು ಎಂದಾಗ ನಡುವಿನಲ್ಲಿ ಕೈಕೊಡುವುದು ಅಥವಾ ಸ್ಟಾರ್ಟ್ ಆಗದೇ ಇರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ರೀತಿಯ ಸಮಸ್ಯೆ ಪದೇ ಪದೇ ಕಾಡಬಾರದೆಂದರೆ ಅದನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಹಾಗಂತಾ ನಿತ್ಯ ಶುಭ್ರವಾಗಿ ತೊಳೆದು ಪಾರ್ಕ್‌ ಮಾಡುವುದಲ್ಲ. ಬದಲಾಗಿ ಆಗಾಗ ಕಾರನ್ನು ಸ್ಟಾರ್ಟ್‌ ಮಾಡಿ ಓಡಿಸುತ್ತಿರಬೇಕು.

ವರ್ಷದಿಂದ ವರ್ಷಕ್ಕೆ ಕಾರು ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ ಅದನ್ನು ನಿರಂತರವಾಗಿ ಓಡಿಸುವುದು ಕೆಲವೇ ಮಂದಿ ಮಾತ್ರ. ಕೆಲವು ಜನರು ಸರಿಯಾದ ಪಾರ್ಕಿಂಗ್ ಸೌಲಭ್ಯವಿಲ್ಲ ಅಥವಾ ಹೊಸ ಕಾರು ಎಂದು ತಮ್ಮ ಕಾರನ್ನು ಕಚೇರಿ ಮತ್ತು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಹಿಂಜರಿಯುತ್ತಾರೆ. ಹೀಗಾದಾಗ ಅನೇಕ ಬಾರಿ ಕಾರು ತಿಂಗಳುಗಟ್ಟಲೆ ಶೆಡ್​ನಲ್ಲೇ ಇರುತ್ತದೆ. ಹಾಗಾದರೆ ಕಾರನ್ನು ನಿಯಮಿತವಾಗಿ ಓಡಿಸದಿದ್ದರೆ ಏನೆಲ್ಲ ತೊಂದರೆ ಉಂಟಾಗುತ್ತದೆ ಎಂಬುದನ್ನು ನೋಡೋಣ.

ಬ್ಯಾಟರಿ ಡಿಸ್ಚಾರ್ಜ್

ವಾಹನವನ್ನು ದೀರ್ಘಕಾಲದವರೆಗೆ ಓಡಿಸದಿದ್ದರೆ, ಬ್ಯಾಟರಿ ಕ್ರಮೇಣ ಡಿಸ್ಚಾರ್ಜ್ ಆಗುತ್ತದೆ. ಇದು ಬ್ಯಾಟರಿಯನ್ನು ದುರ್ಬಲಗೊಳಿಸುತ್ತದೆ. ಸರಿಯಾಗಿ ಚಾರ್ಜ್ ಆಗುವುದಿಲ್ಲ. ನಂತರ ಬ್ಯಾಟರಿಯನ್ನೇ ಬದಲಾಯಿಸುವ ಕೆಲಸ ಮಾಡಬೇಕಾಗುತ್ತದೆ. ಇದಕ್ಕೆ ಸುಖಾಸುಮ್ಮನೆ ದುಬಾರಿ ದುಡ್ಡು ತೆರಬೇಕಾಗುತ್ತದೆ.

ಟೈರ್‌ಗಳಲ್ಲಿ ಗಾಳಿ ಕಡಿಮೆ ಆಗುತ್ತದೆ

ವಾಹನವನ್ನು ಒಂದೇ ಸ್ಥಳದಲ್ಲಿ ದೀರ್ಘಕಾಲ ನಿಲ್ಲಿಸಿದಾಗ, ಟೈರ್‌ಗಳಲ್ಲಿನ ಗಾಳಿಯ ಒತ್ತಡವು ಕಡಿಮೆಯಾಗುತ್ತದೆ. ಹೀಗಾದಾಗ ಟೈರ್‌ಗಳು ಚಪ್ಪಟೆಯಾಗಲು ಕಾರಣವಾಗಬಹುದು. ಗಾಡಿ ಚಲಾಯಿಸುವಾಗ ನಿಯಂತ್ರಣ ಸಿಗದೆ ಟೈರ್ ಬದಲಾಯಿಸಬೇಕಾಗುತ್ತದೆ. ಅಲ್ಲದೆ, ಹೆಚ್ಚು ಸಮಯ ಕಾರು ಬಳಸದಿದ್ದರೆ ವಾಹನದ ಬ್ರೇಕ್ ಕೂಡ ಜಾಮ್ ಆಗುತ್ತದೆ.

ಇಂಜಿನ್‌ ಆಯಿಲ್ ಫ್ರೀಜ್ ಆಗುತ್ತದೆ

ಚಳಿಗಾಲದಲ್ಲಿ ಕಾರುಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಹಲವಾರು ದಿನಗಳವರೆಗೆ ಕಾರನ್ನು ಬಳಸದಿದ್ದರೆ, ಎಂಜಿನ್ ಆಯಿಲ್ ಫ್ರೀಜ್ ಆಗುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಇಂಜಿನ್‌ನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು. ಇದಲ್ಲದೆ, ಪೆಟ್ರೋಲ್ ಅಥವಾ ಡೀಸೆಲ್ ಅನ್ನು ದೀರ್ಘಕಾಲದವರೆಗೆ ಟ್ಯಾಂಕ್‌ನಲ್ಲಿ ಉಳಿಸಿದರೆ ಹಾಳಾಗಬಹುದು.

ಎಷ್ಟು ದಿನಗಳಿಗೊಮ್ಮೆ ಕಾರನ್ನು ಓಡಿಸಬೇಕು?

ವಾಹನವನ್ನು ಎಷ್ಟು ದಿನಗಳಿಗೊಮ್ಮೆ ಓಡಿಸಬೇಕು ಎಂಬ ಪ್ರಶ್ನೆ ಅನೇಕರಲ್ಲಿದೆ. ಸಾಧ್ಯವಾದರೆ ವಾರಕ್ಕೊಮ್ಮೆಯಾದರೂ ವಾಹನ ಓಡಿಸಲೇಬೇಕು. ಆಗ ಬ್ಯಾಟರಿ ಚಾರ್ಜ್ ಆಗುತ್ತದೆ. ಎಂಜಿನ್​ಗೆ ಯಾವುದೇ ರೀತಿಯ ತೊಂದರೆ ಬರುವುದಿಲ್ಲ. ವಾರಕ್ಕೊಮ್ಮೆ ಓಡಿಸಲು ಸಾಧ್ಯವಾಗದಿದ್ದರೆ ಹದಿನೈದು ದಿನಕ್ಕೊಮ್ಮೆಯಾದರೂ ವಾಹನ ಓಡಿಸಬೇಕು ಎಂಬುದು ಅಟೋ ಪಂಡಿತರ ಅಭಿಪ್ರಾಯ.

ಸಾಮಾನ್ಯವಾಗಿ, ಹೊಸ ಕಾರುಗಳಿಗೆ ನಿಯಮಿತ ಡ್ರೈವ್‌ಗಳ ಅಗತ್ಯವಿಲ್ಲ. ಏಕೆಂದರೆ ಅವುಗಳ ಭಾಗಗಳು ಹೊಸದಾಗಿರುತ್ತವೆ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ. ಆದರೆ ಕಾರು ಹಳೆಯದಾಗುತ್ತಿದ್ದ ಹಾಗೆ, ನೀವು ಅದರ ಮೇಲೆ ಹೆಚ್ಚು ಕಾಳಜಿ ವಹಿಸಬೇಕು. ನಿಮ್ಮ ಕಾರು 2 ವರ್ಷಕ್ಕಿಂತ ಹಳೆಯದಾಗಿದ್ದರೆ, ನೀವು ವಾರಕ್ಕೆ ಒಂದು ಬಾರಿಯಾದರೂ ಸ್ಟಾರ್ಟ್ ಮಾಡಲೇಬೇಕು.

Whats_app_banner